ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆಯಲ್ಲೇ ಬದುಕು ಕಟ್ಟಿಕೊಂಡ ಅಮೃತ ಪೂಜಾರಿ

Last Updated 24 ಸೆಪ್ಟೆಂಬರ್ 2017, 8:53 IST
ಅಕ್ಷರ ಗಾತ್ರ

ಕಾಳಗಿ: ತನ್ನ ಏಳನೇ ವಯಸ್ಸಿನಲ್ಲೆ ಆಡು ಮತ್ತು ಕುರಿ ಸಾಕಾಣಿಕೆಯ ಹವ್ಯಾಸ ಬೆಳೆಸಿಕೊಂಡಿರುವ ಚಿತ್ತಾಪುರ ತಾಲ್ಲೂಕಿನ ರಾಜಾಪುರ ಗ್ರಾಮದ ಅಮೃತ ಕಲ್ಲಪ್ಪ ಪೂಜಾರಿ ಅವರು ಇದೀಗ ಇತರರಿಗೆ ಮಾದರಿಯಾಗಿದ್ದಾರೆ.

ಕಡುಬಡತನದ ಕುಟುಂಬದಲ್ಲಿ ಹುಟ್ಟಿದ ಅಮೃತ ಪೂಜಾರಿ ಅವರು ಬಾಲ್ಯದಲ್ಲಿ ಇರುವಾಗಲೇ ಎರಡು ಕುರಿ ಹಾಗೂ ಒಂದು ಆಡನ್ನು ಖರೀದಿಸಿ ಅದರಿಂದ ಈಗ 150ಕ್ಕೂ ಹೆಚ್ಚು ಕುರಿ–ಆಡುಗಳನ್ನು ಹೊಂದಿ, ಸುಂದರ ಬದುಕು ಕಟ್ಟಿಕೊಂಡು ಉತ್ತಮ ರೈತ ಎನಿಸಿಕೊಂಡಿದ್ದಾರೆ.

‘ಕುರಿ ಸಾಕಾಣಿಕೆಯೆ ಕೃಷಿಗಿಂತ ಉತ್ತಮ ಉದ್ಯೋಗ. ಕುರುಬ ಜಾತಿಗೆ ಸೇರಿದ ನನಗೆ ಕುರಿ ಸಾಕುವುದು ನನ್ನ ಕುಲ ಕಸುಬಾಗಿದೆ. ಬದುಕು ನನಗೆ ಬಹಳಷ್ಟು ಕಷ್ಟ, ನೋವು ಕೊಟ್ಟಿದೆ. ಆದರೂ ಕುರಿಗಳು ನನ್ನ ಕೈ ಹಿಡಿದು ನನ್ನ ಬದುಕಿಗೆ ಆಧಾರವಾಗಿವೆ. ನಾನು ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಅಲೆಮಾರಿ ಜೀವನ ನಡೆಸಿ, ಹಲವಾರು ರಾತ್ರಿಗಳನ್ನು ಹೊಲಗಳಲ್ಲಿ ಮತ್ತು ಗುಡ್ಡಗಾಡುಗಳಲ್ಲಿ ಕಳೆದಿದ್ದೇನೆ. ಕುರಿ–ಆಡುಗಳೇ ನನ್ನ ಜೀವನ, ನನ್ನ ಆಸರೆ, ನನ್ನ ಬದುಕು. ಅವುಗಳೇ ನನಗೆ ಒಳ್ಳೆಯ ಜೀವನವನ್ನು ಕಟ್ಟಿಕೊಟ್ಟಿವೆ’ ಎಂದು ಹೇಳುತ್ತಾರೆ ಅಮೃತಪೂಜಾರಿ.

‘ಕುರಿ ಸಾಕಾಣಿಕೆಯಲ್ಲಿ ಅಧಿಕ ಲಾಭವಿದ್ದು, ಅದರಲ್ಲಿ ಶ್ರದ್ಧೆ ಹಾಗೂ ತಾಳ್ಮೆ ಬಹಳ ಮುಖ್ಯ. ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದು. ಕುರಿ–ಆಡು ಸಾಕಾಣಿಕೆಯಿಂದ ಬಂದ ಲಾಭದಿಂದ ಚಿಂಚೋಳಿ ತಾಲ್ಲೂಕಿನ ಸಾಸರಗಾಂವ ಎಂಬ ಹಳ್ಳಿಯಲ್ಲಿ ಒಂದು ಮನೆ, 15 ಎಕರೆ ಜಮೀನು ಖರೀದಿಸಿದ್ದೇನೆ. ಸ್ವಗ್ರಾಮ ರಾಜಾಪುರದಲ್ಲಿ 4 ಖಾಲಿ ನಿವೇಶನ ಖರೀದಿಸಿದ್ದು, ಒಂದು ಮನೆ ನಿರ್ಮಿಸಿಕೊಂಡಿದ್ದೇನೆ’ ಎಂದು ಖುಷಿಯಿಂದ ನುಡಿಯುತ್ತಾರೆ’ ಅಮೃತಪೂಜಾರಿ.

‘ಕುರಿ–ಆಡು ಚೆನ್ನಾಗಿ ಸಾಕಾಣಿಕೆಯು ನನಗೆ ಒಕ್ಕಲುತನ ಆರಂಭಿಸಲು ಸಹಕಾರಿಯಾಗಿದೆ. ಕುರಿಹಿಕ್ಕಿಯ ಗೊಬ್ಬರ ಹೊಲಕ್ಕೆ ಹಾಕಿ ಅಧಿಕ ಇಳುವರಿಯ 120 ರಿಂದ 130 ಚೀಲ ಧಾನ್ಯಗಳನ್ನು ಪ್ರತಿವರ್ಷ ಬೆಳೆಯುತ್ತಿದ್ದೇನೆ. ಅಲ್ಲದೆ ಮನೆಯಲ್ಲೆ ಬೋರ್‌ವೆಲ್ ಕೊರೆಸಿ ಆಡು, ಕುರಿಗಳಿಗೆ ಶುದ್ಧ ನೀರು ಕುಡಿಸುತ್ತೇನೆ’ ಎಂದು ಅಮೃತ ಪೂಜಾರಿ ತಿಳಿಸಿದರು.

‘ಕುರಿ, ಆಡುಗಳಿಗೆ ನೆಗಡಿ–ಕೆಮ್ಮು ಬರುವುದು ಸಹಜ. ಕೆಲವೊಮ್ಮೆ ಆರೋಗ್ಯದಲ್ಲಿ ಸಣ್ಣಪುಟ್ಟ ಏರಿಳಿತ ಕಾಣಿಸಿಕೊಳ್ಳುತ್ತವೆ. ಆದರೆ ತಾವು ಯಾವುದಕ್ಕೂ ಭಯಪಡಬಾರದು. ಪಶುವೈದ್ಯ ಡಾ.ಅಣ್ಣರಾವ ಪಾಟೀಲ ಅವರ ಮಾಹಿತಿ ಪಡೆಯುತ್ತೇನೆ. ಅವರು ನೀಡುವ ಸಲಹೆ, ಸೂಚನೆಗಳ ಮೇರೆಗೆ ಮನೆಯಲ್ಲೆ ಚಿಕಿತ್ಸೆ ನೀಡುತ್ತೇನೆ. ನನ್ನಂಥ ಕುರಿ, ಆಡು ಸಾಕಾಣಿಕೆಯ 38 ಜನ ರೈತರಿಗೆ ಕೃಷ್ಣಾ ಸ್ವಯಂ ಉದ್ಯೋಗ ತರಬೇತಿ ಕೇಂದ್ರದಲ್ಲಿ ತರಬೇತಿ ಕೊಡಿಸಿ ಈಗಲೂ ಸಹಕರಿಸುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು. ರೈತ ಅಮೃತ ಪೂಜಾರಿ ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ: 80881 35134.

–ಗುಂಡಪ್ಪ ಕರೆಮನೋರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT