ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ನಿಧನ

Last Updated 3 ಅಕ್ಟೋಬರ್ 2017, 18:11 IST
ಅಕ್ಷರ ಗಾತ್ರ

ಹೊನ್ನಾವರ: ಪ್ರಸಿದ್ಧ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ(84) ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅವರು ಪತ್ನಿ ಸುಶೀಲಾ, ಪುತ್ರರಾದ ಸುಬ್ರಹ್ಮಣ್ಯ ಹೆಗಡೆ, ನಾರಾಯಣ ಹೆಗಡೆ, ನರಸಿಂಹ ಹೆಗಡೆ ಹಾಗೂ ಪುತ್ರಿ ಲಲಿತಾ ಅವರನ್ನು ಅಗಲಿದ್ದಾರೆ.
ತೀರ ಇತ್ತೀಚಿನವರೆಗೂ ಗೆಜ್ಜೆ ಕಟ್ಟಿ ರಂಗದಲ್ಲಿ ಅಭಿನಯಿಸುತ್ತಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆ ನ್ಯುಮೋನಿಯಾಗೆ ತುತ್ತಾಗಿ ಆಸ್ಪತ್ರೆಗೆ 29ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ಪಾರ್ಶ್ವವಾಯುವಿಗೂ ಒಳಗಾಗಿದ್ದ ಅವರು ಕಳೆದ 3 ದಿನಗಳಿಂದ ಕೋಮಾಕ್ಕೆ ಜಾರಿ  ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

‘ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ 9.30ಕ್ಕೆ ಚಿಟ್ಟಾಣಿ ಕೊನೆಯುಸಿರೆಳೆದರು. ಅವರು ಬಯಸಿದಂತೆ ಅವರ ನೇತ್ರವನ್ನು ದಾನ ಮಾಡಲಾಗುತ್ತಿದೆ. ಪಾರ್ಥಿವ ಶರೀರವನ್ನು ಅಳ್ಳಂಕಿಯ ಅವರ ಮನೆಗೆ ಕೊಂಡೊಯ್ಯಲಾಗುವುದು’ ಎಂದು ಚಿಟ್ಟಾಣಿಯವರ ಮಗ ನಾರಾಯಣ ಹೆಗಡೆ 'ಪ್ರಜಾವಾಣಿ'ಗೆ ತಿಳಿಸಿದರು.

ಬಡಗುತಿಟ್ಟು ಶೈಲಿಯ ಕಲಾವಿದರಾಗಿದ್ದ ಅವರು ಕೌರವ, ದುಷ್ಟಬುದ್ದಿ, ಭಸ್ಮಾಸುರ, ರುದ್ರಕೋಪ, ಕೀಚಕ, ಕರ್ಣ, ಕಂಸ ಪಾತ್ರಗಳಲ್ಲಿ ನಟಿಸಿದ್ದರು.

ಕಿರು ಪರಿಚಯ:
ಜನವರಿ ೧, ೧೯೩೩ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ಜನಿಸಿದ್ದ ಅವರು ೨ನೇ ತರಗತಿಗೆ ಶಾಲೆ ಬಿಟ್ಟಿದ್ದರು. ೭ನೇ ವರ್ಷದಲ್ಲಿಯೇ ಯಕ್ಷಗಾನ ರಂಗ ಪ್ರವೇಶಿಸಿದ್ದ ಅವರು ಬಡಗುತಿಟ್ಟಿನ ಶೈಲಿಯ ಪಾತ್ರಗಳನ್ನು ಹೆಚ್ಚಾಗಿ ನಿರ್ವಹಿಸುತ್ತಿದ್ದರು. ೧೪ ವರ್ಷಕ್ಕೆ ಯಕ್ಷಗಾನದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಹಿರಿಮೆ ಅವರದು. ಕೌರವ, ದುಷ್ಟಬುದ್ಧಿ, ಭಸ್ಮಾಸುರ ಸೇರಿದಂತೆ ವಿವಿಧ ಪ್ರಮುಖ ಪಾತ್ರಗಳಲ್ಲಿ, ಅದರಲ್ಲಿಯೂ ಖಳನಾಯಕನ ಪಾತ್ರದಲ್ಲಿ ಅವರು ಎತ್ತಿದ ಕೈ. ಆರಂಭದಲ್ಲಿ ಒಂದೆರಡು ವರ್ಷ ಸಾಮಾನ್ಯ ಕಲಾವಿದರಂತೆ ಸಣ್ಣ ಪುಟ್ಟ ವೇಷಗಳನ್ನು ಮಾಡಿಕೊಂಡಿದ್ದು ಬಳಿಕ ತಮ್ಮದೇ ಆದ ವಿಶಿಷ್ಟ ನರ್ತನ, ಲಯಗಾರಿಕೆ, ಅಭಿನಯ ಕೌಶಲಗಳಿಂದ ಅಭಿಮಾನಿಗಳ ಮನಗೆದ್ದರು.
ಬಾಳೆಗದ್ದೆ ರಾಮಕೃಷ್ಣ ಭಟ್ಟರ ಶಿಷ್ಯರಾಗಿದ್ದ ಇವರು, ಭಟ್ಟರ ನಿರ್ದೇಶನದಲ್ಲಿ 'ಕೃಷ್ಣಪಾರಿಜಾತ' ಪ್ರಸಂಗಕ್ಕೆ ಅಗ್ನಿಪಾತ್ರ ಮಾಡಿದ ಬಳಿಕ ಯಕ್ಷಗಾನದ ಐಕಾನ್‌ ಆಗಿ ಮಿಂಚಿದವರು. ಯಕ್ಷಗಾನಕ್ಕೆ ಮೊದಲ ಪದ್ಮ ಪ್ರಶಸ್ತಿ ದಕ್ಕಿಸಿಕೊಂಡ ಕೀರ್ತಿಯೂ ಇವರಿಗೆ ಸಲ್ಲುತ್ತದೆ. 
೮೫ರ ವಯಸ್ಸಿನಲ್ಲಿಯೂ ಅಳುಕದೆ ಬಣ್ಣ ಹಚ್ಚಿ ಪಾತ್ರ ನಿಭಾಯಿಸುತ್ತಿದ್ದ ಅವರಿಗೆ ಸಾಟಿ ಇನ್ನೊಬ್ಬರಿಲ್ಲ. ಆದರೀಗ ಅವರ ಅಗಲಿಕೆಯಿಂದ ಅಭಿಮಾನಿಗಳಿಗೆ ಹಾಗೂ ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

ಪ್ರಶಸ್ತಿ-ಪುರಸ್ಕಾರಗಳು:
2009 – ಶಿವರಾಮ ಕಾರಂತ ಪ್ರಶಸ್ತಿ
2012 – ಪದ್ಮಶ್ರೀ
2004 – ಜನಪದಶ್ರೀ
2013 – ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ
1991 – ರಾಜ್ಯೋತ್ಸವ ಪ್ರಶಸ್ತಿ
2009 – ಕಾರ್ಕಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ
2012 – ಆಳ್ವಾಸ್ ನುಡಿಸಿರಿ

ಚಿಟ್ಟಾಣಿ ಅರಸಿ ಬಂದ ಹತ್ತು ಹಲವು ಪ್ರಶಸ್ತಿಗಳು

ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಯ ಬೆನ್ನು ಹತ್ತಿದ ಕಲಾವಿದರಲ್ಲ. ‘ಅಭಿಮಾನಿಗಳೇ ದೇವರು; ಅವರೇ ನನಗೆ ಶ್ರೀರಕ್ಷೆ’ ಎಂದು ಹೋದೆಡೆಯಲ್ಲೆಲ್ಲ
ಹೇಳುತ್ತಿದ್ದ ಅವರನ್ನು ಯಕ್ಷ ಪ್ರೇಮಿಗಳು ಪ್ರೀತಿಯಿಂದ ಬೆಳೆಸಿದ್ದಾರೆ.ದೇಶ–ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಚಿಟ್ಟಾಣಿ
ಪಾತ್ರವಿದ್ದರೆ ಪ್ರೇಕ್ಷಕ ವರ್ಗ  ಯಕ್ಷಗಾನ ಟೆಂಟುಗಳ ಮುಂದೆ ಟಿಕೆಟ್ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದ ದಿನಗಳಿದ್ದವು.
ಚಿಟ್ಟಾಣಿ ಅಂದರೆ ’ಕಲೆಕ್ಷನ್ ಕಲಾವಿದ’ ಎಂಬ ಹೆಗ್ಗಳಿಕೆ ಇದ್ದುದರಿಂದ ಕೆಲವು ದಶಕಗಳ ಹಿಂದೆ ಯಕ್ಷಗಾನದ ಮೇಳಗಳ ಯಜಮಾನರು ಅವರನ್ನು ತಮ್ಮ ಮೆಳಗಳಿಗೆ ಸೇರಿಸಿಕೊಳ್ಳಲು ತಾ ಮುಂದು ತಾಮುಂದು ಎಂದು ಪೈಪೋಟಿ ನಡೆಸುತ್ತಿದ್ದರು.
2012ರಲ್ಲಿ ಯಕ್ಷಗಾನಕ್ಕೆ ಮೊದಲ ಪದ್ಮಶ್ರೀ ಪ್ರಶಸ್ತಿ ದೊರಕಿಸಿಕೊಟ್ಟ ಹೆಗ್ಗಳಿಕೆಯ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, ಕರ್ಕಿ ವೆಂಕಟ್ರಮಣ ಶಾಸ್ತ್ರಿ ಪ್ರಶಸ್ತಿ, ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ.

ಯಕ್ಷಗಾನಕ್ಕೆ ಮೊದಲ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟ ಅಪ್ರತಿಮ ಕಲಾವಿದ ಚಿಟ್ಟಾಣಿ
ಹೊನ್ನಾವರ: ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಗಾನಕ್ಕೆ ಮೊದಲ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟ ಮೇರು ಕಲಾವಿದ. ಹೊನ್ನಾವರ ತಾಲ್ಲೂಕಿನ ಹೊಸಾಕುಳಿ ಗ್ರಾಮದ ಚಿಟ್ಟಾಣಿ ಎಂಬ ಪುಟ್ಟ ಹಳ್ಳಿಯಲ್ಲಿ ಸುಬ್ರಾಯ ಹೆಗಡೆ ಹಾಗೂ ಗಣಪಿ ಹೆಗಡೆ ದಂಪತಿಯ ಮಗನಾಗಿ 1933, ಜನವರಿ 1ರಂದು ಜನಿಸಿದ ರಾಮಚಂದ್ರ ತಮ್ಮ ಎಳೆಯ ವಯಸ್ಸಿನಲ್ಲೇ ಯಕ್ಷಗಾನದತ್ತ ಒಲವು ತೋರಿ ಅದನ್ನು ತಮ್ಮ ವೃತ್ತಿಯಾಗಿ ಆಯ್ದುಕೊಂಡರು.
ಗುಂಡಬಾಳ, ಅಮೃತೇಶ್ವರಿ, ಬಚ್ಚಗಾರು ಹೀಗೆ ವಿವಿಧ ಮೇಳಗಳಲ್ಲಿ ವೃತ್ತಿ ಕಲಾವಿದರಾಗಿ ಮೆರೆದಿದ್ದ ಚಿಟ್ಟಾಣಿ ಬಡಗುತಿಟ್ಟಿನ ಯಕ್ಷಗಾನದಲ್ಲಿ ಚಿಟ್ಟಾಣಿ ಗರಾಣೆಯನ್ನು ಹುಟ್ಟುಹಾಕಿದ್ದರು.
ಅಪ್ರತಿಮ ಅಭಿನಯ ಚಾತುರ್ಯ ಹೊಂದಿದ್ದ ಚಿಟ್ಟಾಣಿ ಅವರ ಗದಾಪರ್ವದ ಕೌರವ, ಕೀಚಕವಧೆಯ ಕೀಚಕ, ಭಸ್ಮಾಸುರ, ಕಲಾಧರ ಮೊದಲಾದ ಪಾತ್ರಗಳು ಅವರಿಗೆ ಅತ್ಯಂತ ಜನಪ್ರಿಯತೆಯನ್ನು ತಂದುಕೊಟ್ಟಿವೆ. ಶಿಕ್ಷಣ ಪಡೆದಿದ್ದು ಕಡಿಮೆಯಾಗಿದ್ದರೂ ಯಕ್ಷಗಾನದಶಿಕ್ಷಣ ಸಾಲೆಯಲ್ಲಿ ಅಪಾರ ಅನುಭವ ಹೊಂದಿದ್ದ ರಾಮಚಂದ್ರ ಹೆಗಡೆ ಯಾವುದೇ ಪಾತ್ರ ಮಾಡಿದರೂ ಅದಕ್ಕೆ ಸಮರ್ಥವಾಗಿ ಜೀವ ತುಂಬಬಲ್ಲವರಾಗಿದ್ದರು. ಲಯದ ಮೇಲಿನ ಹಿಡಿತ, ಅಭಿನಯ ಚಾತುರ್ಯ ಹಾಗೂ ನೃತ್ಯದಲ್ಲಿ ಅಪ್ರತಿಮ ಪ್ರತಿಭಾನ್ವಿತರಾಗಿದ್ದ ಅವರು ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಪಿ.ವಿ.ಹಾಸ್ಯಗಾರ ಸೇರಿದಂತೆ ಹಲವಾರು ಬಡಗು ಹಾಗೂ ತೆಂಕು ತಿಟ್ಟಿನ ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT