ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಪಂಥೀಯರಿಗೆ ದೇಶದ್ರೋಹಿಗಳ ಪಟ್ಟ ಖಂಡನೀಯ

ಹೆಗ್ಗೋಡು: ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಸಮೀಕ್‌ ಬಂದೋಪಾಧ್ಯಾಯ
Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಾಗರ: ಭಾರತದ ಸಾಂಸ್ಕೃತಿಕ ಕ್ಷೇತ್ರ ಜನಮುಖಿಯಾಗುವಲ್ಲಿ ಎಡಪಂಥೀಯರ ಪಾತ್ರ ಪ್ರಮುಖವಾಗಿದೆ. ಆದಾಗ್ಯೂ ಅವರನ್ನು ದೇಶದ್ರೋಹಿಗಳೆಂದು ಬಿಂಬಿಸುವುದು ಖಂಡನೀಯ ಎಂದು ಕೋಲ್ಕತ್ತದ ಲೇಖಕ ಸಮೀಕ್‌ ಬಂದೋಪಾಧ್ಯಾಯ ಅಭಿಪ್ರಾಯಪಟ್ಟರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಮಂಗಳವಾರ ನಡೆದ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

1942ರಲ್ಲಿ ಭಾರತದಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿ ನಡೆಯುತ್ತಿರುವ ಹೊತ್ತಿನಲ್ಲಿ ಇಡೀ ಜಗತ್ತು ಫ್ಯಾಸಿಸಂ ವಿರುದ್ಧ ಹೋರಾಟಕ್ಕೆ ಇಳಿದ ಕಾರಣ ಎಡಪಂಥೀಯರು ಇಲ್ಲಿನ ಚಳವಳಿಯಲ್ಲಿ ಭಾಗವಹಿಸಲಾಗಲಿಲ್ಲ. ಅಂದ ಮಾತ್ರಕ್ಕೆ ಅವರನ್ನು ದೇಶದ್ರೋಹಿಗಳೆಂದು ಅರ್ಥೈಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

‘ಫ್ಯಾಸಿಸಂ ಪ್ರಪಂಚದ ಯಾವುದೇ ಒಂದು ದೇಶದಲ್ಲಿದ್ದರೂ ಅದರ ಪ್ರಭಾವ ಇತರ ದೇಶಗಳ ಮೇಲೂ ಆಗುತ್ತದೆ ಎಂದು ಎಡಪಂಥೀಯರು ಭಾವಿಸಿದ್ದರು. ಹೀಗಾಗಿಯೆ ಅವರು ಮನುಷ್ಯನ ಘನತೆಯನ್ನು ದಮನ ಮಾಡುವ ಫ್ಯಾಸಿಸಂ ವಿರುದ್ಧದ ಹೋರಾಟಕ್ಕೆ ಒತ್ತು ನೀಡಿದ್ದರು ಎಂದು ಸಮೀಕ್‌ ವಿಶ್ಲೇಷಿಸಿದರು.

ಸಮಾನತೆಯ ಆಧಾರದ ಮೇಲೆ ಭಾರತದ ನಿರ್ಮಾಣ ಆಗಬೇಕು ಎನ್ನುವುದು ಎಡಪಂಥೀಯರ ಆಶಯವಾಗಿತ್ತು. ಇದೇ ಆಶಯದ ಮೇಲೆ ನಿರ್ಮಾಣವಾದ ಪ್ರಪಂಚದ ಇತರ ದೇಶಗಳ ಮಾದರಿ ಅವರ ಕಣ್ಣೆದುರು ಇತ್ತು ಎನ್ನುವುದನ್ನು ನಾವು ಮರೆಯಬಾರದು’ ಎಂದರು.

ಸಾಮಾನ್ಯ ಜನರ ಭಾವನೆ, ಅಭಿವ್ಯಕ್ತಿಗಳ ನಡುವೆ ರಂಗಭೂಮಿ ಬೆಳೆಯಬೇಕು ಎಂದು ಎಡಪಂಥೀಯರು ಆಶಿಸಿದ ಪರಿಣಾಮವೇ ಇಪ್ಟಾದಂತಹ ಪ್ರಭಾವಿ ಸಂಘಟನೆಗಳ ಹುಟ್ಟಿಗೆ ಕಾರಣವಾಯಿತು. ಈ ಸಂಘಟನೆ ದೇಶದ ಇತರ ರಾಜ್ಯಗಳ ಸಾಂಸ್ಕೃತಿಕ ಲೋಕದ ಮೇಲೂ ಪ್ರಭಾವ ಬೀರಿದ್ದು ಉಲ್ಲೇಖನಾರ್ಹ ಎಂದರು.

ರಂಗಭೂಮಿಯಲ್ಲಿ ಒಬ್ಬ ನಟ, ಸಂಗೀತಗಾರ ವಿಜೃಂಭಿಸುವ ಬದಲು ಅದೊಂದು ಸಾಮುದಾಯಿಕ ಚಟುವಟಿಕೆಯಾಗಬೇಕು ಎಂದು ಚಿಂತಿಸಿದ್ದು ಮತ್ತು ಅದನ್ನು ಕಾರ್ಯರೂಪಕ್ಕೆ ತಂದಿದ್ದು ಎಡಪಂಥೀಯರ ಹೆಗ್ಗಳಿಕೆಯಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯಾನಂತರ ಅಕಾಡೆಮಿಯಂತಹ ಸಂಸ್ಥೆಗಳ ಸ್ಥಾಪನೆಯಿಂದ ಭಾರತದಲ್ಲಿ ಸಂಸ್ಕೃತಿ ಎನ್ನುವುದು ಸಾಂಸ್ಥೀಕರಣಗೊಂಡಿದೆ. ಆದರೆ ಜಾಗತೀಕರಣದ ನಂತರ ಸಂಸ್ಕೃತಿ ಮಾರಾಟದ ಸರಕು ಹಾಗೂ ಪ್ರವಾಸೋದ್ಯಮದ ಭಾಗವಾಗಿದೆ. ಹೀಗೆ ನಮ್ಮ ಸಂಸ್ಕೃತಿ ಮಾರಾಟದ ಸರಕು ಆಗದೆ ಇರುವುದು ಹೇಗೆ ಎನ್ನುವ ಸವಾಲು ನಮ್ಮ ಎದುರು ಇದೆ ಎಂದರು.

ಲೇಖಕಿ ದೀಪಾ ಗಣೇಶ್‌ ಗೋಷ್ಠಿ ನಿರ್ವಹಿಸಿದರು. ಮಧ್ಯಾಹ್ನ ಸವಿತಾ ರಾಣಿ ಅವರಿಂದ ‘ರಿಪ್’ ಕಿರು ನಾಟಕ ಪ್ರದರ್ಶನಗೊಂಡಿತು. ಸಂಜೆ ನೀನಾಸಂ ಬಳಗದಿಂದ ‘ತಾಟಕೀ ಮರ್ಧನ’ (ನಿರ್ದೇಶನ: ಮಂಜುನಾಥ ಎಲ್‌.ಬಡಿಗೇರ) ನಾಟಕ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT