ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜವಾದಿಗಳು ನಾಯಕತ್ವ ವಹಿಸಿಕೊಳ್ಳಲಿ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಸಲಹೆ
Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶ ಇಂದು ಸಂದಿಗ್ಧ ಸ್ಥಿತಿಯಲ್ಲಿದೆ. ದೇಶವನ್ನು ಗಂಡಾಂತರದಿಂದ ಪಾರುಮಾಡಲು ಸಮಾಜವಾದಿಗಳು ನಾಯಕತ್ವ ವಹಿಸಿಕೊಳ್ಳಬೇಕು’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.

‘ಸಮುದಾಯ’ ಸಂಘಟನೆ ರಾಜ್ಯ ಸಮಿತಿಯು ಸಮಾಜವಾದಿ ಕ್ರಾಂತಿ ಶತಮಾನೋತ್ಸವದ ಪ್ರಯುಕ್ತ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾಜವಾದ ಮತ್ತು ಕನ್ನಡ ಸಾಹಿತ್ಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಗತಿ ಚಳವಳಿಗಳು, ವಿಚಾರಗಳು, ಸಿದ್ಧಾಂತಗಳು ಹಾಗೂ ಗುಂಪುಗಳ ನಡುವೆ ಹೊಂದಾಣಿಕೆ ಮೂಡಿಸಿ, ಒಗ್ಗೂಡಿಸುವ ಗುರುತರ ಜವಾಬ್ದಾರಿಯನ್ನು ಸಮಾಜವಾದಿಗಳು ವಹಿಸಿಕೊಳ್ಳಬೇಕು. ಆಗ ಮಾತ್ರ ದೇಶಕ್ಕೆ ಇಂದು ಎದುರಾಗಿರುವ ಗಂಡಾಂತರದಿಂದ ಪಾರಾಗಬಹುದು’ ಎಂದರು.

‘ನಮ್ಮ ದಾರಿಗಳು ಬೇರೆ ಇದ್ದರೂ, ಮುಂದಿರುವ ಗುರಿ ಫ್ಯಾಸಿಸ್ಟ್‌ ಶಕ್ತಿಗಳನ್ನು, ಕೋಮುವಾದಿ ಶಕ್ತಿಗಳನ್ನು ಪ್ರಜಾಪ್ರಭುತ್ವ ತತ್ವಕ್ಕೆ ಅನುಸಾರವಾಗಿ ಸೋಲಿಸುವುದೇ ಆಗಿದೆ. ಈ ಗುರಿ ಈಡೇರಬೇಕಾದರೆ ಯಾವುದೇ ಒಂದು ಸಿದ್ಧಾಂತ, ಒಂದು ಪಕ್ಷದಿಂದ ಅದು ಸಾಧ್ಯವಿಲ್ಲ. ಸರ್ವಾಧಿಕಾರ ಮತ್ತು ಕೋಮುವಾದ ವಿರೋಧಿಸುವ ಎಲ್ಲ ಪ್ರಗತಿಪರ ಶಕ್ತಿಗಳು ಒಟ್ಟುಗೂಡಬೇಕು’ ಎಂದರು.

ಉತ್ತರ ಪ್ರದೇಶ ಸಿ.ಎಂ ವಿರುದ್ಧ ಟೀಕೆ: ‘ಪ್ರಪಂಚಕ್ಕೆ ಹೊಸ ಭರವಸೆ ಕೊಟ್ಟ ಕೆಂಬಾವುಟವನ್ನು ಕೇರಳದಲ್ಲಿ ಇತ್ತೀಚೆಗೆ ನೆಲದ ಮೇಲೆ ಹಾಕಿ ಬೆಂಕಿ ಹಚ್ಚಿ, ಕಾಲಿನಲ್ಲಿ ಹೊಸಕಿದ ಘಟನೆ ನಡೆಯಿತು. ಒಂದು ಪ್ರಮುಖ ರಾಜ್ಯದ ಖಾವಿಧಾರಿ ಮುಖ್ಯಮಂತ್ರಿ ಆ ಘಟನೆಯನ್ನು ನೋಡುತ್ತಾ ನಿಂತಿದ್ದರು' ಎಂದು ಮರುಳಸಿದ್ದಪ್ಪ ಅವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೆಸರು ಉಲ್ಲೇಖಿಸದೇ ಟೀಕಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ‘ವಿಚಾರವಾದಿಗಳ ಹತ್ಯೆಗಳು ಸರಣಿಯಾಗಿ ನಡೆಯುತ್ತಿದ್ದರೂ, ಕೊಲೆಯ ಹಿಂದಿರುವ ಶಕ್ತಿ ಬೆಳಕಿಗೆ ಬರುತ್ತಿಲ್ಲ. ಈಗ ಗಾಂಧಿ ಹತ್ಯೆಯ ಬಗ್ಗೆ ಹೊಸ ತಗಾದೆ ಹುಟ್ಟುಹಾಕುತ್ತಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ. ಕೋಮುವಾದ, ಫ್ಯಾಸಿಸ್ಟ್‌ ಶಕ್ತಿಗಳ ವಿರುದ್ಧ ಬಹುದೊಡ್ಡ ಚಳವಳಿಗೆ ಎಲ್ಲರೂ ಒಗ್ಗೂಡಬೇಕಾದ ಅನಿವಾರ್ಯ ಎದುರಾಗಿದೆ ಎಂದರು.

ಕೆ.ಪ್ರಕಾಶ್, ‘ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲವನ್ನು ಕೆಲವೇ ಕೆಲವು ಬಂಡವಾಳಶಾಹಿಗಳು ತಮ್ಮ ಹಿಡಿತ ಹಾಗೂ ಒಡೆತನದಲ್ಲಿ ಇಟ್ಟುಕೊಳ್ಳಲು ಪೂರಕ ವಾತಾವರಣವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಲ್ಪಿಸುತ್ತಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT