ಕನಸುಗಳ ಕಾಮನಬಿಲ್ಲು

ಮೊದಲ ‘ಚಿನ್ನ’ದ ಸಂಭ್ರಮ...

ಹೋದ ವಾರ ದೆಹಲಿಯಲ್ಲಿ ನಡೆದ ಏಷ್ಯಾ ಕಪ್‌ ಸೈಕ್ಲಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದ ಬಾಗಲಕೋಟೆ ಜಿಲ್ಲೆಯ ರಾಜುಬಾಟಿ ಭವಿಷ್ಯದಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಅವರ ಬದುಕಿನ ಏರಿಳಿತಗಳ ಬಗ್ಗೆ ಪ್ರಮೋದ ಜಿ.ಕೆ. ಬರೆದಿದ್ದಾರೆ.

ರಾಜು

ಓದು ತಲೆಗೆ ಹತ್ತುತ್ತಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಓದುವುದೇ ಇಷ್ಟವಿಲ್ಲ. ಏನಾದರೂ ಸಾಧನೆ ಮಾಡಬೇಕು ಎನ್ನುವ ಆಸೆ ಆ ಹುಡುಗನದು. ಆದರೆ ಏನು ಸಾಧನೆ ಮಾಡಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ಹೀಗೆ ಅನೇಕ ತೊಳಲಾಟ, ಗೊಂದಲಗಳ ನಡುವೆ ಕಷ್ಟದಲ್ಲಿ ಬದುಕಿನ ಬಂಡಿ ಸಾಗಿಸುತ್ತಿದ್ದ ಸೈಕ್ಲಿಸ್ಟ್‌ ರಾಜುಬಾಟಿ ಈಗ ಚಿನ್ನದ ಸಾಧಕ. ಈಗ ಆತನ ಬದುಕಿಗೊಂದು ಸ್ಪಷ್ಟ ಗುರಿ ಸಿಕ್ಕಿದೆ. ಭವಿಷ್ಯದಲ್ಲಿ ದೊಡ್ಡ ಸಾಧನೆಯ ಕನಸುಗಳ ಕಾಮನಬಿಲ್ಲು ಅರಳಿದೆ.

ಹೋದ ವಾರ ನವದೆಹಲಿಯಲ್ಲಿ ನಡೆದ ಟ್ರ್ಯಾಕ್‌ ಏಷ್ಯಾಕಪ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ರಾಜು ಅವರು ಪರ್ಸುಟ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. 18 ವರ್ಷದ ಒಳಗಿನವರ ಮೂರು ಕಿ.ಮೀ. ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ರಾಜು ಜಯಿಸಿದ ಮೊದಲ ಚಿನ್ನ ಇದಾದ ಕಾರಣ ಈ ಪದಕಕ್ಕೆ ಚಿನ್ನದಷ್ಟೇ ಬೆಲೆ.

ಕಳೆದ ವರ್ಷ ದೆಹಲಿಯಲ್ಲಿ ನಡೆದಿದ್ದ 18 ವರ್ಷದ ಒಳಗಿವನರ ಏಷ್ಯಾಕಪ್‌ನಲ್ಲಿ ಭಾರತ ತಂಡ ಕಂಚಿನ ಪದಕ ಜಯಿಸಿತ್ತು. ಆಗ ರಾಜು ಕೂಡ ತಂಡದಲ್ಲಿದ್ದರು. ವೈಯಕ್ತಿಕ ವಿಭಾಗದಲ್ಲಿ ಅವರಿಗೆ ಪದಕ ಬಂದಿದ್ದು ಇದೇ ಮೊದಲು.

ರಾಜು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಟಕ್ಕಳಕಿ ಗ್ರಾಮದವರು. ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲಿ ಎಂಟು ಪದಕಗಳನ್ನು ಜಯಿಸಿದ್ದಾರೆ. 2014ರಲ್ಲಿ ಜಮಖಂಡಿಯಲ್ಲಿ (10 ಕಿ.ಮೀ. ವಿಭಾಗ), 2016ರಲ್ಲಿ ದೆಹಲಿಯಲ್ಲಿ (4 ಕಿ.ಮೀ. ವಿಭಾಗ) ಮತ್ತು 2017ರಲ್ಲಿ ಅಲಿಘಡದಲ್ಲಿ (20 ಕಿ.ಮೀ) ಸ್ಪರ್ಧೆಗಳಲ್ಲಿಯೂ ಕಂಚಿನ ಪದಕ ಪಡೆದಿದ್ದರು.

ಆರಂಭದಲ್ಲಿ ಬಾಗಲಕೋಟೆ ವಸತಿ ನಿಲಯದಲ್ಲಿ ತರಬೇತಿ ಪಡೆದ ರಾಜು ಅವರಿಗೆ ಬದುಕಿನ ದಾರಿ ತೋರಿದ್ದು ಬೀಳಗಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಶ್ರೀಶೈಲ ರೇಷ್ಮೆ. ಸೈಕ್ಲಿಂಗ್‌ನಲ್ಲಿ ಯಶಸ್ಸು ಕಾಣಲು ಅಗತ್ಯವಿರುವ ವೇಗ, ಚುರುಕುತನ, ತಾಂತ್ರಿಕತೆಗೆ ಒತ್ತು ಹೀಗೆ ಹಲವು ಕೌಶಲಗಳನ್ನು ಹೇಳಿಕೊಟ್ಟಿದ್ದು ರೈಲ್ವೆ ತಂಡದ ಕೋಚ್‌ ವಿಜಯಸಿಂಗ್‌ ರಜಪೂತ್‌, ಅನಿತಾ ನಿಂಬರಗಿ ಹಾಗೂ ನಿಜಪ್ಪ ಎಂಟೆದೆ. ಇದರಿಂದ ರಾಜು ಬೇಗನೆ ಕೌಶಲಗಳನ್ನು ಕಲಿತರು.

ಟ್ರಯಲ್ಸ್‌ನಲ್ಲಿ ಉತ್ತಮ ವೇಗ
ಏಷ್ಯಾ ಕಪ್‌ ಚಾಂಪಿಯನ್‌ಷಿಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲು ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಟ್ರಯಲ್ಸ್‌ ನಡೆದಿತ್ತು. ಆಗ ರಾಜು ಮೂರು ಕಿ.ಮೀ. ಗುರಿಯನ್ನು ಮೂರು ನಿಮಿಷ 21 ಸೆಕೆಂಡುಗಳಲ್ಲಿ ತಲುಪಿದ್ದರು. ಇದರಿಂದ ದೇಶವನ್ನು ಪ್ರತಿನಿಧಿಸುವ ಅವಕಾಶವೂ ಲಭಿಸಿತು. ಏಷ್ಯಾ ಕಪ್‌ನಲ್ಲಿ ಮೂರು ನಿಮಿಷ 34 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.

ಮುಂಬರುವ ದಿನಗಳಲ್ಲಿ ಇನ್ನಷ್ಟು ಮಹತ್ವದ ಚಾಂಪಿಯನ್‌ಷಿಪ್‌ಗಳು ಇರುವ ಕಾರಣ ರಾಜು ಪೆಡಲ್‌ ತುಳಿಯುವ ವೇಗ ಹೆಚ್ಚಿಸಿಕೊಳ್ಳಬೇಕಿದೆ. ಇದೇ ತಿಂಗಳು 28ರಿಂದ ಜಮಖಂಡಿಯಲ್ಲಿ ರಾಷ್ಟ್ರೀಯ ಸೈಕ್ಲಿಂಗ್‌ ನಡೆಯಲಿದೆ. ಮುಂದಿನ ವರ್ಷ ಏಷ್ಯನ್‌ ಕ್ರೀಡಾಕೂಟವಿದೆ.

ಕಠಿಣ ಶ್ರಮದಿಂದ ಸಾಧನೆ
ಏಷ್ಯಾ ಕಪ್‌ಗೆ ಭಾರತ ತಂಡಕ್ಕೆ ಕಠಿಣ ತರಬೇತಿ ನೀಡಲಾಗಿತ್ತು. ಪಂಜಾಬ್‌ನ ಪಟಿಯಾಲದಲ್ಲಿ ಮೂರು ತಿಂಗಳು ನಡೆದ ಶಿಬಿರದಲ್ಲಿ ಸೈಕ್ಲಿಸ್ಟ್‌ಗಳು ನಿತ್ಯ ಬೆಳಿಗ್ಗೆ 5 ಗಂಟೆಗೆ ಅಭ್ಯಾಸ ಆರಂಭಿಸಬೇಕಿತ್ತು. ದಿನಕ್ಕೆ ಕನಿಷ್ಠ 80 ಕಿ.ಮೀ. ಸೈಕಲ್‌ ತುಳಿಯಬೇಕಿತ್ತು. ಸಂಜೆ ಫಿಟ್‌ನೆಸ್‌ ತರಬೇತಿ ಹಾಗೂ ಟ್ರ್ಯಾಕ್‌ನಲ್ಲಿ ಓಟದ ಕಸರತ್ತು ಮಾಡಬೇಕಿತ್ತು.

‘ಸತತ ಮೂರು ತಿಂಗಳು ಕಠಿಣ ಅಭ್ಯಾಸ ಮಾಡಿದ್ದರಿಂದ ಪದಕದ ಸಾಧನೆ ಮಾಡಲು ಸಾಧ್ಯವಾಯಿತು. ಏರ್‌ಫೋರ್ಸ್‌ನಲ್ಲಿರುವ ಕರ್ನಾಟಕದ ಚೆರಿನ್‌ ಅವರು ಶಿಬಿರದಲ್ಲಿ ತರಬೇತಿ ನೀಡುತ್ತಿದ್ದರು. ಏಷ್ಯಾ ಕಪ್‌ ಆರಂಭವಾಗುವ ಮೊದಲು ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಅಭ್ಯಾಸ ಶಿಬಿರ ನಡೆದಿತ್ತು. ತರಬೇತಿಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ಪದಕ ಗೆಲ್ಲಲು ಸಾಧ್ಯವಾಯಿತು. ಶಿಬಿರದಲ್ಲಿ ಕಠಿಣ ಸವಾಲು ಎದುರಿಸಿದ್ದರಿಂದ ಅನುಕೂಲವಾಯಿತು’ ಎಂದು ರಾಜು ಹೇಳಿದರು.

‘ಓದಿನಲ್ಲಿ ಆಸಕ್ತಿ ಇಲ್ಲದ ಕಾರಣ ಅಮ್ಮನಿಗೆ ನನ್ನ ಭವಿಷ್ಯದ್ದೇ ಚಿಂತೆಯಾಗಿತ್ತು. ಪದಕ ಗೆದ್ದ ಬಳಿಕ ಅಮ್ಮನ ಜೊತೆ ಮಾತನಾಡಿದೆ. ಅವರು ಭಾವುಕರಾಗಿ ಕಣ್ಣೀರಾದರು. ಇನ್ನಷ್ಟು ಸಾಧನೆ ಮಾಡು ಎಂದು ಹರಿಸಿದರು. ಪದಕ ಗೆದ್ದ ಸಾಧನೆಗಿಂತ ಅಮ್ಮನನ್ನು ಖುಷಿ ಪಡೆಸಿದ್ದಿರಿಂದ ಹೆಮ್ಮೆ ಎನಿಸುತ್ತಿದೆ’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಹದಿನಾರರ ಪೋರಿಯ ಚಿನ್ನದ ಬೇಟೆ

ಶೂಟಿಂಗ್‌
ಹದಿನಾರರ ಪೋರಿಯ ಚಿನ್ನದ ಬೇಟೆ

12 Mar, 2018
ಕರ್ನಾಟಕದ ಕೀರ್ತಿ

ರೋಯಿಂಗ್‌
ಕರ್ನಾಟಕದ ಕೀರ್ತಿ

12 Mar, 2018
ಚಿನ್ನದ ಕನಸಿನಲ್ಲಿ...

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌
ಚಿನ್ನದ ಕನಸಿನಲ್ಲಿ...

12 Mar, 2018
ಆಟ ಮುನ್ನೋಟ

ಆಟ-ಅಂಕ
ಆಟ ಮುನ್ನೋಟ

12 Mar, 2018
ಜಾವೆಲಿನ್‌: ಭರವಸೆಯ ಮಿಂಚು

ಆಟ-ಅಂಕ
ಜಾವೆಲಿನ್‌: ಭರವಸೆಯ ಮಿಂಚು

12 Mar, 2018