ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೈಲ್ಡ್‌ಸೀಟ್ ಬೇಕೆ? ಏಕೆ?

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕಾರುಗಳ ಮುಂಬದಿಯ ಸನ್‌ಶೇಡ್‌ಗಳಲ್ಲಿ ಹಲವು ಸೂಚನೆಗಳಿರುವುದನ್ನು ಬಹುತೇಕರು ಗಮನಿಸಿರಬಹುದು. ಸಾಮಾನ್ಯವಾಗಿ ಸನ್‌ಶೇಡ್‌ಗಳಲ್ಲಿ ಏರ್‌ಬ್ಯಾಗ್ ಡಿಆ್ಯಕ್ಟಿವೇಟ್ ಮಾಡುವ, ಸೀಟ್‌ಬೆಲ್ಟ್ ಧರಿಸುವ ಮತ್ತು ಚೈಲ್ಡ್‌ಸೀಟ್‌ ಇರಿಸಬಾರದ ಬಗ್ಗೆ ಚಿತ್ರ ಸಹಿತ ಸೂಚನೆಗಳಿರುತ್ತವೆ.

ಈ ಮೂರು ಸೂಚನೆಗಳಲ್ಲಿ ಸೀಟ್‌ಬೆಲ್ಟ್ ಧರಿಸುವುದನ್ನು ಉಳಿದು ಇನ್ನೆರಡನ್ನು ಬಹುತೇಕರು ಕಡೆಗಣಿಸುತ್ತಾರೆ ಎಂದು ವಿಮಾ ಕಂಪನಿಯ ಅಧ್ಯಯನವೊಂದು ಹೇಳುತ್ತದೆ. ಕಾರಿನಲ್ಲಿ ಪ್ರಯಾಣಿಸುವಾಗ ದೊಡ್ಡವರು ಸೀಟ್‌ಬೆಲ್ಟ್ ಧರಿಸುವಷ್ಟೇ ಮಕ್ಕಳೂ ಚೈಲ್ಡ್‌ಸೀಟ್‌ಗಳಲ್ಲಿ ಬಂದಿಯಾಗಿರುವುದು ಅತ್ಯಂತ ಅವಶ್ಯಕ.

2015ರ ಜೂನ್‌ನಲ್ಲಿ ಜೈಪುರ-ಆಗ್ರಾ ಹೆದ್ದಾರಿಯಲ್ಲಿ ನಟಿ-ರಾಜಕಾರಣಿ ಹೇಮಾಮಾಲಿನಿ ಅವರ ಕಾರು ಮತ್ತು ಇನ್ನೊಂದು ಕಾರಿನ ಮಧ್ಯೆ ಅಪಘಾತ ಸಂಭವಿಸಿತ್ತು. ಆ ಅಪಘಾತದಲ್ಲಿ ಮತ್ತೊಂದು ಕಾರಿನಲ್ಲಿದ್ದ ಎರಡು ವರ್ಷದ ಕಂದಮ್ಮ ಮೃತಪಟ್ಟಿತ್ತು.

‘ಮೃತ ಮಗುವಿನ ತಂದೆ ಸಂಚಾರ ನಿಯಮವನ್ನು ಪಾಲಿಸಿದ್ದಿದ್ದರೆ ಮಗು ಬದುಕುಳಿಯುತ್ತಿತ್ತು’ ಎಂದು ಹೇಮಾ ಅಪಘಾತದ ಬಗ್ಗೆ ಟ್ವೀಟ್‌ ಮಾಡಿದ್ದರು. ಆದರೆ ಈ ಟ್ವೀಟ್‌ಗೆ ಭಾರಿ ಟೀಕೆ ವ್ಯಕ್ತವಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಹೇಮಾ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಟ್ವೀಟ್ ಅನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದರು.

‘ಮಗುವಿನ ತಾಯಿ ಕಾರಿನ ಮುಂಬದಿಯ ಸೀಟ್‌ನಲ್ಲಿ ಕುಳಿತಿದ್ದರು ಮತ್ತು ತಮ್ಮ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದರು. ಮಗುವನ್ನು ಹಿಂಬದಿಯ ಸೀಟ್‌ನಲ್ಲಿ ಕೂರಿಸಿಕೊಂಡಿದ್ದರೆ ಅಪಘಾತದಲ್ಲಿ ಮಗು ಸಾಯುತ್ತಿರಲಿಲ್ಲ’ ಎಂದು ಅವರು ಹೇಳಿದ್ದರು.

ಮೃತ ಮಗುವಿನ ತಂದೆ ಸಹ ‘ನನ್ನ ಹೆಂಡತಿ ತನ್ನ ತೊಡೆ ಮೇಲೆ ಮಗುವನ್ನು ಕೂರಿಸಿಕೊಂಡಿದ್ದರು. ಕಾರು ಡಿಕ್ಕಿಯಾದಾಗ ಮಗು ಗಾಜನ್ನು ತೂರಿಕೊಂಡು ಹೊರಗೆ ಹಾರಿಬಿತ್ತು’ ಎಂದು ಹೇಳಿದ್ದರು. ಬಹುಶಃ ಮಗುವನ್ನು ಚೈಲ್ಡ್‌ಸೀಟ್‌ನಲ್ಲಿ ಕೂರಿಸಿ, ಸೀಟ್‌ಬೆಲ್ಟ್‌ ಹಾಕಿದಿದ್ದರೆ ಅಪಘಾತ ನಡೆದಾಗ ಮಗು ಗಾಜನ್ನು ತೂರಿಕೊಂಡು ಹಾರಿ ಬೀಳಲು ಅವಕಾಶವಿರುತ್ತಿರಲಿಲ್ಲ. ಇಲ್ಲಿ ಯಾರದ್ದು ತಪ್ಪು ಎಂದು ತೀರ್ಪು ನೀಡುವ ಉದ್ದೇಶ ಈ ಬರಹದ್ದಲ್ಲ. ಬದಲಿಗೆ ಚೈಲ್ಡ್‌ಸೀಟ್‌ನ ಅವಶ್ಯಕತೆಯನ್ನು ವಿವರಿಸುವುದಷ್ಟೇ ಇಲ್ಲಿ ಮುಖ್ಯ.

ಇಷ್ಟಕ್ಕೂ ಚೈಲ್ಡ್‌ಸೀಟ್ ಮತ್ತು ಎರಡು ವರ್ಷದ ಹಿಂದಿನ ಅಪಘಾತದ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳಲೂ ಒಂದು ಬಹುಮುಖ್ಯ ಕಾರಣ ಇದೆ. ಈ ಅಕ್ಟೋಬರ್‌ ನಂತರ ಭಾರತದಲ್ಲಿ ಮಾರಾಟವಾಗುವ ಪ್ರತಿ ಕಾರ್‌ನಲ್ಲೂ ಚಾಲಕನ ಏರ್‌ಬ್ಯಾಗ್ ಇರಬೇಕು ಎಂದು ಕಳೆದ ವರ್ಷವೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕಾರ್‌ನಲ್ಲಿ ಏರ್‌ಬ್ಯಾಗ್ ಇದ್ದರೆ ಅಪಘಾತದ ಸಂದರ್ಭಗಳಲ್ಲಿ (ಸೀಟ್‌ಬೆಲ್ಟ್ ಧರಿಸಿದ್ದರೆ ಮಾತ್ರ) ವಯಸ್ಕ ಪ್ರಯಾಣಿಕರು ಪ್ರಾಣಾಪಾಯ ಮತ್ತು ಗಾಯಗಳಾಗುವುದರಿಂದ ಪಾರಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಸೀಟ್‌ಬೆಲ್ಟ್‌ ರಿಮೈಂಡರ್‌ ಕಡ್ಡಾಯವಾಗಿ ಇರಬೇಕು ಎಂದೂ ಸರ್ಕಾರದ ಅಧಿಸೂಚನೆ ಹೇಳಿದೆ. ಆದರೆ ಚೈಲ್ಡ್‌ಸೀಟ್‌ ಬಗ್ಗೆ ಈ ಅಧಿಸೂಚನೆಯಲ್ಲಿ ಯಾವುದೇ ಉಲ್ಲೇಖ ಇಲ್ಲ. ಈ ನಿಯಮಗಳನ್ನು ರೂಪಿಸಿದವರಿಗೆ ಚೈಲ್ಡ್‌ಸೀಟ್‌ನ ಅಗತ್ಯತೆ ಬಗ್ಗೆ ಮಾಹಿತಿ ಇಲ್ಲದೇ ಇರುವುದನ್ನು ಇದು ಸೂಚಿಸುತ್ತದೆ.

‘ಮಕ್ಕಳನ್ನು ನಾವು ಭದ್ರವಾಗಿ ಹಿಡಿದುಕೊಂಡಿರುತ್ತೇವಲ್ಲ’ ಎಂದು ಹಲವರು ವಾದ ಮುಂದಿಡುತ್ತಾರೆ. ಹಿರಿಯರು ಮುಂಬದಿಯ ಸೀಟ್‌ನಲ್ಲಿ ಕುಳಿತು ಮಕ್ಕಳನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡಿರುತ್ತಾರೆ ಎಂದಿಟ್ಟುಕೊಳ್ಳೋಣ. ದಿಢೀರ್‌ ಬ್ರೇಕಿಂಗ್ ಮತ್ತು ಡಿಕ್ಕಿಯಾದಾಗ ಮುಂಬದಿಯ ಸೀಟ್‌ನಲ್ಲಿರುವ ಹಿರಿಯ ಪ್ರಯಾಣಿಕರು (ಸೀಟ್‌ಬೆಲ್ಟ್‌ ಧರಿಸಿದ್ದರೂ) ಮುಂದಕ್ಕೆ ಜಗ್ಗುತ್ತಾರೆ/ ಅಥವಾ ಸೀಟ್‌ನಿಂದ ಚಿಮ್ಮಿ ಗಾಜಿಗೆ ಡಿಕ್ಕಿ ಹೊಡೆದುಕೊಳ್ಳುತ್ತಾರೆ.

ಸೀಟ್‌ಬೆಲ್ಟ್ ಧರಿಸಿ, ಕಾರ್‌ನಲ್ಲಿ ಏರ್‌ಬ್ಯಾಗ್‌ ಇದ್ದರೂ ಪ್ರಯಾಣಿಕರು ಮತ್ತು ಏರ್‌ಬ್ಯಾಗ್‌ನ ನಡುವಣ ಅಂತರ ಕೆಲವೇ ಮಿಲಿಮೀಟರ್‌ನಷ್ಟಿರುತ್ತದೆ (ಅಪಘಾತದ ಕ್ಷಣದಲ್ಲಿ) ಈ ಮೂರು ಸನ್ನಿವೇಶಗಳಲ್ಲಿ ಒಂದು ಮಗು ಆ ಹಿರಿಯ ಪ್ರಯಾಣಿಕರ ತೊಡೆಯ ಮೇಲೆ ಇರುತ್ತದೆ ಎಂಬುದನ್ನು ಊಹಿಸಿಕೊಳ್ಳಿ.

ಡ್ಯಾಶ್‌ಬೋರ್ಡ್-ಪ್ರಯಾಣಿಕ/ ಪ್ರಯಾಣಿಕ-ಮುಂಬದಿಯ ಗಾಜು/ಪ್ರಯಾಣಿಕ-ಏರ್‌ಬ್ಯಾಗ್ ಮಧ್ಯೆ ಮಗು ಸಿಲುಕಿ ಅಪ್ಪಚ್ಚಿಯಾಗುತ್ತದೆ. ತೀರಾ ವೇಗದಲ್ಲಿ ಅಪಘಾತ ಸಂಭವಿಸಿದ್ದರೆ ಪ್ರಯಾಣಿಕರ ಸಮೇತ ಮಗುವೂ ಸೀಟಿನಿಂದ ಚಿಮ್ಮಿ ಗಾಜಿಗೆ ಅಪ್ಪಳಿಸುವ/ಹೊರಗೆ ಹಾರಿಬೀಳುವ ಅಪಾಯವಿರುತ್ತದೆ.

ಹಿಂಬದಿಯ ಸೀಟ್‌ನಲ್ಲಿ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಕೂರುವುದೂ ಅಪಾಯಕಾರಿಯೇ. ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕ ಮತ್ತು ಮುಂಬದಿಯ ಸೀಟಿನ ಮಧ್ಯೆ ಮಗು ಸಿಲುಕುವ ಅಪಾಯವಿರುತ್ತದೆ. ಹೀಗಾಗಿ ಕಾರಿನ ಪಯಣದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಇರಿಸುವ ಏಕೈಕ ಮಾರ್ಗ ಚೈಲ್ಡ್‌ಸೀಟ್ ಮಾತ್ರ. ಆದರೆ ಸರ್ಕಾರ ಮಾತ್ರ ಚೈಲ್ಡ್‌ಸೀಟ್ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿರುವುದು ವಿಪರ್ಯಾಸವೇ ಸರಿ. ಆದರೆ ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕದಲ್ಲಿ 12ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಮುಂಬದಿಯ ಸೀಟ್‌ನಲ್ಲಿ ಕೂರಿಸುವುದಕ್ಕೆ ಮತ್ತು ಚೈಲ್ಡ್‌ಸೀಟ್‌ಗಳನ್ನು ಮುಂಬದಿಯ ಸೀಟ್‌ನಲ್ಲಿ ಅಳವಡಿಸುವುದಕ್ಕೆ ನಿರ್ಬಂಧಗಳಿವೆ.

ಇನ್ನು ಚೈಲ್ಡ್‌ಸೀಟ್‌ಗಳನ್ನು ಮುಂಬದಿಯ ಸೀಟ್‌ಗಳಲ್ಲಿ ಅಳವಡಿಸುವುದು ನಿಷಿದ್ಧ. ಕಾರ್‌ನಲ್ಲಿ ಏರ್‌ಬ್ಯಾಗ್‌ ಇದ್ದರೆ ಅಪಘಾತದ ಸಂದರ್ಭದಲ್ಲಿ ಅದು ಸಿಡಿಯುತ್ತದೆ. ಏರ್‌ಬ್ಯಾಗ್‌ಗಳು ಅಕ್ಷರಃ ಸೂಕ್ಷ್ಮ ಬಾಂಬ್‌ಗಳು. ಅದು ಸಿಡಿದಾಗ ಬಿಡುಗಡೆಯಾಗುವ ರಾಸಾಯನಿಕಗಳು ಮಗುವಿಗೆ ವಿಷಕಾರಿಯಾಗಿ ಪರಿಣಮಿಸುವ ಅಪಾಯವಿರುತ್ತದೆ. ಜತೆಗೆ ಏರ್‌ಬ್ಯಾಗ್ ಸಿಡಿಯುವಾಗ ಚೈಲ್ಡ್‌ಸೀಟ್‌ ಅನ್ನು ಕಿತ್ತೊಗೆಯುವ ಅಪಾಯವೂ ಇರುತ್ತದೆ. ಹೀಗಾಗಿ ಎರಡನೇ ಮತ್ತು ಮೂರನೇ ಸಾಲಿನ ಸೀಟ್‌ಗಳಲ್ಲಿ ಚೈಲ್ಡ್‌ಸೀಟ್‌ಗಳನ್ನು ಅಳವಡಿಸುವಂತೆ ಅವನ್ನು ವಿನ್ಯಾಸ ಮಾಡಲಾಗಿರುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಅಗತ್ಯವಿದ್ದಾಗ ಮಾತ್ರ ಚೈಲ್ಡ್‌ಸೀಟ್‌ಗಳನ್ನು ಅಳವಡಿಸಿಕೊಂಡು ಬೇಡದ ಸನ್ನಿವೇಶದಲ್ಲಿ ಬಿಚ್ಚಿಡಬಹುದು. ಅಳವಡಿಸಲು ಮತ್ತು ತೆಗೆಯಲು ಹೆಚ್ಚೆಂದರೆ ಐದು ನಿಮಿಷ ಬೇಕಾಗಬಹುದು. ಚೈಲ್ಡ್‌ಸೀಟ್‌ಗಳನ್ನು ಅಳವಡಿಸಲು ಹಲವು ಕಾರುಗಳಲ್ಲಿ ಐಸೊಫಿಕ್ಸ್ ಮೌಂಟ್‌ಗಳನ್ನು ನೀಡಲಾಗಿರುತ್ತದೆ. ಅವು ಇಲ್ಲದಿದ್ದಲ್ಲಿ ಸಾಮಾನ್ಯ ಸೀಟ್‌ಬೆಲ್ಟ್‌ಗೇ ಅವನ್ನು ಅಳವಡಿಸಬಹುದು.

ಚೈಲ್ಡ್‌ಸೀಟ್‌ ಬಗೆಗಳು
ಮೂರು ಬಗೆಯ ಚೈಲ್ಡ್‌ಸೀಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮೊದಲನೆಯದ್ದು ಹಿಂಬದಿಗೆ ಮುಖಮಾಡಿದ ಚೈಲ್ಡ್‌ಸೀಟ್. ಈ ಸೀಟ್‌ಗಳನ್ನು ಏಳೆಂಟು ತಿಂಗಳ ಮಗುವಿನಿಂದ 20-22 ತಿಂಗಳ ಮಗುವಿನವರೆಗೂ ಬಳಸಬಹುದು. ಈ ಸೀಟ್‌ಗಳಲ್ಲಿ ಮಗು ಬಹುತೇಕ ಮಲಗಿದ ಸ್ಥಿತಿಯಲ್ಲಿ ಇರುತ್ತದೆ. ಹೀಗಾಗಿ ಅದಕ್ಕೆ ಆಗುವ ಕುಲುಕಾಟದ ಅನುಭವ ತೀರಾ ಕಡಿಮೆ. ಜತೆಗೆ ದಿಢೀರ್‌ ಬ್ರೇಕಿಂಗ್‌ ಮತ್ತು ಅಪಘಾತದ ಸಂದರ್ಭದಲ್ಲಿ ಮಗು ಜಗ್ಗುವ ಸಾಧ್ಯತೆ ಕಡಿಮೆ. ಈ ವಯಸ್ಸಿನ ಮಕ್ಕಳಲ್ಲಿ ಬೆನ್ನುಹುರಿ ಇನ್ನೂ ಗಟ್ಟಿಯಾಗಿರುವುದಿಲ್ಲದ ಕಾರಣ ಸಣ್ಣ ಜಗ್ಗುವಿಕೆಯೂ ಮಗುವಿಗೆ ಅಪಾಯವಾಗುವ ಸಾಧ್ಯತೆ ಇರುತ್ತದೆ.

ಎರಡನೆಯ ಬಗೆಯದ್ದು ಮುಂಬದಿಗೆ ಮುಖಮಾಡಿದ ಚೈಲ್ಡ್‌ಸೀಟ್. ಹೆಸರೇ ಹೇಳುವಂತೆ ಇದು ಮುಂಬದಿಗೆ ಮುಖ ಮಾಡಿರುತ್ತದೆ. ಇದರಲ್ಲಿ ಮಗುವನ್ನು ಕೂರಿಸಿ ಸೀಟ್‌ಬೆಲ್ಟ್ ಹಾಕಲು ಅವಕಾಶವಿರುತ್ತದೆ. ಇದನ್ನು 20 ತಿಂಗಳ ಮಗುವಿನಿಂದ 4 ವರ್ಷದ ಮಗುವಿನವರೆಗೂ ಬಳಸಬಹುದು.

ಇನ್ನು ಮೂರನೆಯದ್ದು ಬೂಸ್ಟರ್ ಸೀಟ್‌. ಇದನ್ನು 4 ವರ್ಷದಿಂದ 12 ವರ್ಷದ ಮಗುವಿನವರೆಗೂ ಬಳಸಬಹುದು. ಬಹುತೇಕ ಬೂಸ್ಟರ್‌ ಸೀಟ್‌ಗಳಲ್ಲಿ ಹೆಡ್‌ರೆಸ್ಟ್‌ಗಳು ಇರುವುದಿಲ್ಲ. ಇವು ಸೀಟ್‌ನ ಎತ್ತರವನ್ನು ಹೆಚ್ಚಿಸುತ್ತವೆ ಅಷ್ಟೆ. ಕಾರಿನ ಸೀಟ್‌ಬೆಲ್ಟ್‌ನ ಎತ್ತರಕ್ಕೆ ಇದು ಮಗು ಕೂರುವ ಭಂಗಿಯನ್ನು ಹೊಂದಿಸುತ್ತದೆ.

ಈ ಮೂರು ಬಗೆಯ ಸೀಟ್‌ಗಳು ಪ್ರತ್ಯೇಕವಾಗಿ ದೊರೆಯುತ್ತವೆ. ಅಲ್ಲದೆ, ಒಂದನ್ನೇ ಮೂರೂ ರೀತಿಯಲ್ಲಿ ಬಳಸಲು ಅವಕಾಶವಿರುವ ಚೈಲ್ಡ್‌ಸೀಟ್‌ಗಳೂ ಲಭ್ಯವಿವೆ. ಇವುಗಳ ಬೆಲೆ 5 ಸಾವಿರದಿಂದ ಆರಂಭವಾಗಿ 10 ಸಾವಿರದವರೆಗೂ ಇದೆ. ಆದರೆ ಈ ಸೀಟ್‌ಗಳು ಕೇರ್ ಸೆಂಟರ್‌ಗಳಲ್ಲಿ ದೊರೆಯುತ್ತವೆ. ಕಾರ್‌ ಕೇರ್‌ ಸೆಂಟರ್‌ಗಳಲ್ಲಿ ಇವು ದೊರೆಯುವುದು ಅತ್ಯಪರೂಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT