ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಕ್ಕಿಂತ ಮಾಧ್ಯಮ ಹೆಚ್ಚು ಅಪಾಯಕಾರಿ’

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂದು ಯಾವ ಮಾಧ್ಯಮವೂ ತನ್ನ ಹೊಣೆಗಾರಿಕೆ ಉಳಿಸಿಕೊಂಡಿಲ್ಲ. ನಮ್ಮನ್ನು ಆಳುತ್ತಿರುವ ಮೋದಿ ಸರ್ಕಾರಕ್ಕಿಂತ ತಮ್ಮನ್ನು ತಾವು ಮಾರಿಕೊಂಡಿರುವ ಮಾಧ್ಯಮಗಳೇ ಹೆಚ್ಚು ಆತಂಕಕಾರಿಯಾಗಿವೆ’ ಎಂದು ಮಲಯಾಳಂ ಲೇಖಕ ಪಾಲ್ ಝಕಾರಿಯಾ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ಸಾಹಿತ್ಯ ಉತ್ಸವದ ಎರಡನೇ ದಿನ 'ಮುಕ್ತ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಲೇಖಕರ ಪಾತ್ರ' ಎಂಬ ವಿಷಯದ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾನ್ಯ ಜನರ ಪರವಾಗಿ ನಿಲ್ಲಬೇಕಿದ್ದ ಮಾಧ್ಯಮಗಳನ್ನು ರಾಜಕೀಯ ಶಕ್ತಿಗಳು ಪ್ರಭಾವಿಸುತ್ತಿವೆ ಮತ್ತು ಕಾರ್ಪೋರೆಟ್ ಶಕ್ತಿಗಳು ಅವುಗಳನ್ನು ಪೊರೆಯುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಆಧಾರದ ಮೇಲೆ ಕೆಲಸ ಮಾಡುತ್ತವೆ. ಯಾವುದೇ ರಾಜಕೀಯ ಪಕ್ಷ, ಧರ್ಮ, ಕಾರ್ಪೋರೆಟ್ ಕಂಪೆನಿಗಳಿಗಿಂತ ಹಲವು ಪಟ್ಟು ವೇಗ- ವಿಸ್ತಾರವಾಗಿ ಜನರನ್ನು ತಲುಪುವ ಶಕ್ತಿ ಮಾಧ್ಯಮಗಳಿದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅವು ಪೂರ್ತಿಯಾಗಿ ಮಾರಿಕೊಂಡಿವೆ. ಜನಸಾಮಾನ್ಯರ ಧ್ವನಿಯಾಗಬೇಕಿದ್ದ, ಅವರ ಹಿತಾಸಕ್ತಿಯ ಕಾಯಲುನಾಯಿ ಆಗಬೇಕಿದ್ದ ಮಾಧ್ಯಮ ಈಗ ತನ್ನ ಹಿತಾಸಕ್ತಿಯ ರಕ್ಷಣೆಯಲ್ಲಿ ತೊಡಗಿದೆ' ಎಂದು ಟೀಕಿಸಿದರು.

‘ಮೊದಲು ಕೇರಳದಲ್ಲಿ ನಿಜವಾದ ಎಡಪಂಥೀಯ, ಕಮ್ಯುನಿಸ್ಟ್‌ ಮತ್ತು ಸಮಾಜವಾದದ ಶಕ್ತಿಗಳು ತುಂಬ ಪ್ರಭಾವಶಾಲಿಯಾಗಿದ್ದವು. ಆದರೆ ಅಲ್ಲಿನ ಪತ್ರಿಕೆಗಳು ಅವುಗಳನ್ನು ಸಂಪೂರ್ಣ ಸರ್ವನಾಶ ಮಾಡಿವೆ’ ಎಂದು ತಮ್ಮ ಮಾತಿಗೆ ಉದಾಹರಣೆಯ ಮೂಲಕ ಸಮರ್ಥನೆಯನ್ನೂ ನೀಡಿದರು.

ಬದಲಾದ ವ್ಯಾಖ್ಯಾನ

ದೇಶಭಕ್ತಿ ಅಪವಾಖ್ಯಾನಕ್ಕೆ ಒಳಗಾಗುತ್ತಿರುವುದರ ಕುರಿತು ಗಮನ ಸೆಳೆದ ಅವರು ‘ಭಾರತ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯದಲ್ಲಿ ಗೆದ್ದರೆ ಚಪ್ಪಾಳೆ ತಟ್ಟಿ ಸಂಭ್ರಮಿಸುವುದೇ ದೇಶಭಕ್ತಿ ಎನ್ನುವ ಮಟ್ಟಕ್ಕೆ ನಾವು ಇಳಿದಿದ್ದೇವೆ' ಎಂದು ವಿಷಾದಿಸಿದರು.

‘ದೇಶವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು, ದೇಶದ ಬಗ್ಗೆ ಪ್ರೀತಿ ಇರಿಸಿಕೊಳ್ಳುವುದು, ಇಲ್ಲಿನ ನಿಯಮಾವಳಿಗಳನ್ನು ಪಾಲಿಸುವುದು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸಿಕೊಳ್ಳುವುದೇ ನಿಜವಾದ ದೇಶಪ್ರೇಮ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT