ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ಮಧ್ಯಸ್ಥಿಕೆ: ಶ್ರೀ ಶ್ರೀ ಯತ್ನಕ್ಕೆ ಹಿನ್ನಡೆ

Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಂಭಲ್‌, ಉತ್ತರ ಪ್ರದೇಶ : ಅಯೋಧ್ಯೆ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವ ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್‌ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಈ ಮಧ್ಯಸ್ಥಿಕೆ ತಮಗೆ ಸಮ್ಮತವಲ್ಲ ಎಂದು ಬಿಜೆಪಿಯ ಮಾಜಿ ಸಂಸದ ರಾಮ್‌ ವಿಲಾಸ್‌ ವೇದಾಂತಿ ಹೇಳಿದ್ದಾರೆ.

ಹಾಗೆಯೇ, ವಿವಾದವನ್ನು ನ್ಯಾಯಾಲಯದಿಂದ ಹೊರಗೆ ಬಗೆಹರಿಸಿಕೊಳ್ಳಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಬಾಬರಿ ಕ್ರಿಯಾ ಸಮಿತಿಗಳೆರಡೂ ನಿರಾಕರಿಸಿವೆ.

ರಾಮ ಮಂದಿರ ಚಳವಳಿಯಲ್ಲಿ ಶ್ರೀ ಶ್ರೀ ರವಿಶಂಕರ್‌ ಅವರು ಎಂದೂ ಭಾಗಿಯಾಗಿಲ್ಲ. ಹಾಗಾಗಿ ಅವರಿಗೆ ಮಧ್ಯಸ್ಥಿಕೆ ವಹಿಸುವ ಅರ್ಹತೆಯೇ ಇಲ್ಲ ಎಂದು ವೇದಾಂತಿ ಹೇಳಿದ್ದಾರೆ. ವೇದಾಂತಿ ಅವರು ರಾಮ ಮಂದಿರ ಚಳವಳಿಯಲ್ಲಿ ಇದ್ದಾರೆ.

‘ಚಳವಳಿಯಲ್ಲಿ ಯಾವತ್ತೂ ಭಾಗಿಯಾಗದವರು, ಎಂದೂ ರಾಮಲಲ್ಲಾನ ದರ್ಶನ ಪಡೆಯದವರು ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದು ಹೇಗೆ? ಮಂದಿರಕ್ಕಾಗಿ ನಾವು ಜೈಲಿಗೆ ಹೋಗಿದ್ದೇವೆ, ಗೃಹ ಬಂಧನಕ್ಕೆ ಒಳಗಾಗಿದ್ದೇವೆ ಮತ್ತು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದೇವೆ’ ಎಂದು ವೇದಾಂತಿ ಹೇಳಿದ್ದಾರೆ.

‘ಮುಸ್ಲಿಂ ಧಾರ್ಮಿಕ ಮುಖಂಡರು ಮುಂದೆ ಬರಲಿ. ನಾವು ಜತೆಗೆ ಕುಳಿತು ವಿವಾದದ ಬಗ್ಗೆ ಚರ್ಚೆ ನಡೆಸುತ್ತೇವೆ. ಹಿಂದೂ ಮತ್ತು ಮುಸ್ಲಿಮರು ಜತೆಯಾಗಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವುದನ್ನು ನಾವು ಬಯಸುತ್ತೇವೆ. ಒಮ್ಮತದ ಮೂಲಕವೇ ಮಂದಿರ ನಿರ್ಮಾಣ ಆಗಲಿ’ ಎಂಬುದು ಅವರ ವಾದವಾಗಿದೆ.

ರಾಮ ಜನ್ಮಭೂಮಿ ನ್ಯಾಸ ಮತ್ತು ವಿಶ್ವ ಹಿಂದೂ ಪರಿಷತ್‌ ಜತೆಯಾಗಿ ರಾಮಮಂದಿರ ಚಳವಳಿ ನಡೆಸಿವೆ. ಮಾತುಕತೆಯ ಅವಕಾಶ ಈ ಎರಡು ಸಂಘಟನೆಗಳಿಗೆ ದೊರೆಯಬೇಕು ಎಂದು ಅವರು ಅಭಿ‍ಪ್ರಾಯಪಟ್ಟಿದ್ದಾರೆ.

ಶ್ರೀ ಶ್ರೀ ರವಿಶಂಕರ್‌ ಅವರು ಹಲವು ಇಮಾಮರು ಮತ್ತು ಸ್ವಾಮಿಗಳ ಜತೆ ಸಂಪರ್ಕದಲ್ಲಿದ್ದಾರೆ. ಅಯೋಧ್ಯೆ ವಿವಾದಕ್ಕೆ ನ್ಯಾಯಾಲಯದ ಹೊರಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ನಿರ್ಮೋಹಿ ಅಖಾಡದ ಆಚಾರ್ಯ ರಾಮದಾಸ್‌ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಆರ್ಟ್‌ ಆಫ್‌ ಲಿವಿಂಗ್‌ ಪ್ರತಿಷ್ಠಾನ ಕಳೆದ ವಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT