ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೇಕೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ?: ಡಿ.ಎಸ್. ನಾಗಭೂಷಣ

Last Updated 31 ಅಕ್ಟೋಬರ್ 2017, 15:50 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ನೀಡಿರುವ 2017ರ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸದಿರಲು ನಿರ್ಧರಿಸಿರುವುದಾಗಿ ಡಿ.ಎಸ್. ನಾಗಭೂಷಣ ಅವರು ತಿಳಿಸಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದು, ‘ಹೃದಯಕ್ಕೆ ಹತ್ತಿರವಾದ ಒಂದು ತಾತ್ವಿಕ ಕಾರಣದಿಂದ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಿದಿರಲು ನಿರ್ಧರಿಸಿದ್ದೇನೆ’ ಎಂದಿದ್ದಾರೆ.

ರಾಜ್ಯ ಸರ್ಕಾರ ಸೋಮವಾರ ರಾಜ್ಯೋತ್ಸವ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸಾಹಿತ್ಯ ಕ್ಷೇತ್ರ ವಿಭಾಗದಲ್ಲಿ ಡಿ.ಎಸ್‌. ನಾಗಭೂಷಣ (ಶಿವಮೊಗ್ಗ) ಅವರಿಗೆ ಪ್ರಶಸ್ತಿ ನೀಡಿದೆ.

ಪ್ರಶಸ್ತಿಯನ್ನು ಸ್ವೀಕರಿಸದಿರಲು ನಾಗಭೂಷಣ ಅವರು ನೀಡಿರುವ ಕಾರಣವನ್ನು ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. ಅದರ ವಿವರಣೆ ಇಲ್ಲಿದೆ.

ನಾನೇಕೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ?

ನನ್ನ ಫೇಸ್‌ಬುಕ್ ಗೆಳೆಯ ಗೆಳತಿಯರೇ,
ಕರ್ನಾಟಕ ಸರ್ಕಾರವು ನಾನು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವುದಾಗಿ ಹೇಳಲಾಗುವ ಗಣನೀಯ ಕೆಲಸವನ್ನು ಗುರುತಿಸಿ 2017ರ ರಾಜ್ಯೋತ್ಸವ ಪ್ರಶಸ್ತಿಯನ್ನು ನನಗೆ ನೀಡಿದೆ. ಇದಕ್ಕಾಗಿ ತಾವೆಲ್ಲ ವಿವಿಧ ರೀತಿಗಳಲ್ಲಿ-ಹಲವು ಬಾರಿ ನನ್ನ ಯೋಗ್ಯತೆಯನ್ನು ಮೀರಿ-ಅಭಿನಂದಿಸಿದ್ದೀರಿ. ಇದು ನನಗೆ ಪ್ರಶಸ್ತಿಗಿಂತ ಹೆಚ್ಚಿನ ಪ್ರೀತಿ-ಗೌರವದ ಪ್ರತೀಕವಾಗಿ ಕಂಡಿದೆ. ಇದೇ ಸಂದರ್ಭದಲ್ಲಿ ನನ್ನ ಹೆಸರನ್ನು ಪ್ರಶಸ್ತಿಗೆ ಶಿಫಾರ್ಸು ಮಾಡಿದ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಹಾಗೂ ಪ್ರಶಸ್ತಿ ನೀಡಲು ಮುಂದೆ ಬಂದ ಕರ್ನಾಟಕ ಸರ್ಕಾರಕ್ಕೆ ನಾನು ವಂದನೆಗಳನ್ನು ಸಲ್ಲಿಸಬಯಸುತ್ತೇನೆ.
ಆದರೆ ನನಗೆ ಬಹು ಪ್ರಿಯವಾದ, ಹೃದಯಕ್ಕೆ ಹತ್ತಿರವಾದ ಒಂದು ತಾತ್ವಿಕ ಕಾರಣದಿಂದ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಿದಿರಲು ನಿರ್ಧರಿಸಿದ್ದೇನೆ. ಇದು ನನ್ನ ಹಲವು ಗೆಳೆಯ-ಗೆಳತಿಯರಿಗೆ ಇಷ್ಟವಾಗದ ತೀರ್ಮಾನವೆನಿಸಬಹುದು. ಅದಕ್ಕೆ ನನ್ನ ಸಾಹಿತ್ಯ ಕುರಿತ ಅವರ ಪ್ರೀತಿ-ಅಭಿಮಾನಗಳಷ್ಟೇ ಕಾರಣವೆಂದು ನಾನು ಭಾವಿಸುತ್ತೇನೆ. ಆದರೆ ಅವರೆಲ್ಲರೂ ನಾನೇಕೆ ಪ್ರಶಸ್ತಿ ಸ್ವೀಕರಿಸುತ್ತಿಲ್ಲ ಎಂಬುದನ್ನು ವಿವರಿಸುವ ಈ ಮುಂದಿನ ಪತ್ರಿಕಾ ಪ್ರಕಟಣೆಯನ್ನು ಓದಿದ ಮೇಲೆ ನನ್ನ ನಿರ್ಧಾರ ಸರಿಯಾಗಿದೆ ಎಂದು ಒಪ್ಪುವರು ಎಂಬ ನಂಬಿಕೆ ನನಗಿದೆ.

ಪತ್ರಿಕಾ ಪ್ರಕಟಣೆ
ನಾನು ನನ್ನ ಕರ್ತವ್ಯವೆಂದು ಭಾವಿಸಿ ಮಾಡಿದ ನಾಡು-ನುಡಿಗಳ ಅಲ್ಪ ಸೇವೆಯನ್ನು ಮಾನ್ಯ ಮಾಡಿ ಘನ ಕರ್ನಾಟಕ ಸರ್ಕಾರವು ನನಗೆ ಈ ವರ್ಷದ ರಾಜ್ಯೋತ್ವವ ಪ್ರಶಸ್ತಿ ನೀಡಲು ನಿರ್ಧರಿಸುವುದಕ್ಕಾಗಿ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಬಯಸುತ್ತೇನೆ. ನಾಡು-ನುಡಿಗಳಿಗೆ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿಯ ಮಾನ್ಯತೆಯನ್ನು ನೀಡುವುದು ಕೂಡ ನಾಡು-ನುಡಿಗಳಿಗೆ ಸಲ್ಲಿಸುವ ಸೇವೆಯೇ ಆಗಿದೆ. ಆದರೆ ನನಗೆ ನೀಡಲಾಗಿರುವ ಈ ಪ್ರಶಸ್ತಿಯನ್ನು ನಾನು ಸ್ವೀಕರಿಸಲು ಇಂದಿನ ಸಂದರ್ಭದಲ್ಲಿ ನನಗೆ ಮನಸ್ಸಾಗುತ್ತಿಲ್ಲವೆಂಬುದನ್ನೂ ಈ ಮೂಲಕ ತಿಳಿಸಬಯಸುವೆ.

ಇದಕ್ಕೆ ಕಾರಣಗಳು ಹೀಗಿವೆ
ರಾಜ್ಯೋತ್ಸವವೆಂಬುದು ನಮ್ಮ ಕನ್ನಡ ರಾಜ್ಯೋದಯದ ಸಂಭ್ರಮದ ಆಚರಣೆಯೇ ಆಗಿದೆ. ಈ ರಾಜ್ಯೋದಯಕ್ಕೆ ಕಾರಣವಾದ ಕರ್ನಾಟಕ ಏಕೀಕರಣ ಆಂದೋಲನದ ಕೇಂದ್ರ ಕಾಳಜಿಯಾಗಿದ್ದುದು, ಕರ್ನಾಟಕದ ಮಕ್ಕಳು ಕನ್ನಡವನ್ನು ತಮ್ಮ ಬದುಕಿನ ಭಾಷೆಯಾಗಿ ಬಳಸಿ ಬೆಳಸಬೇಕೆಂಬುದು. ಇದನ್ನು ಸಾಧ್ಯಮಾಡುವ ಏಕೈಕ ಮಾರ್ಗವೆಂದರೆ, ಕನ್ನಡವು ಶಿಕ್ಷಣದ ಮಾಧ್ಯಮವಾಗುವುದು. ಆದರೆ ಪ್ರಾಥಮಿಕ ಶಾಲಾ ಶಿಕ್ಷಣದ ಹಂತದವರೆಗಾದರೂ ಕರ್ನಾಟಕದ ಮಕ್ಕಳಿಗೆ ಶಿಕ್ಷಣ ಮಾಧ್ಯಮವು ಕನ್ನಡವಾಗಿರಬೇಕೆಂಬ ಕರ್ನಾಟಕದ ಜನತೆಯ ಪ್ರತಿನಿಧಿಯಾದ ಕರ್ನಾಟಕ ಸರ್ಕಾರದ ಸಂಕಲ್ಪ ಇನ್ನೂ ಈಡೇರಿಲ್ಲ. ಅದರ ಎರಡು ದಶಕಗಳ ನ್ಯಾಯಾಂಗ ಹೋರಾಟವೂ ವಿಫಲವಾಗಿದೆ. ಇದಕ್ಕೆ ಕಾರಣ ನಮ್ಮ ರಾಷ್ಟ್ರ ಕಲ್ಪನೆಯ ಪ್ರಣಾಳಿಕೆಯಂತಿರುವ ನಮ್ಮ ಸಂವಿಧಾನವೇ ಅದಕ್ಕೆ ವಿರೋಧವಾಗಿರುವುದು. ರಾಷ್ಟ್ರ ಕಲ್ಪನೆಯಲ್ಲಿನ ಈ ಸಾಂವಿಧಾನಿಕ ವಿರೋಧಾಭಾಸವನ್ನು ಸರಿಪಡಿಸಿ, ನಮ್ಮ ರಾಷ್ಟ್ರದ ಸಾಂಸ್ಕೃತಿಕ ಅಸ್ತಿತ್ವದ ಮೂಲಾಧಾರವಾದ ಜನಸಮುದಾಯಗಳ ಭಾಷೆಗಳ ಪ್ರಾಧಾನ್ಯತೆಯನ್ನು ರಾಷ್ಟ್ರದ ಬದುಕಿನಲ್ಲಿ ಮರುಸ್ಥಾಪಿಸಬೇಕಾದ್ದು ಜನತೆಯ ಪ್ರತಿನಿಧಿಯಾದ ಸರ್ಕಾರದ ಕರ್ತವ್ಯ.

ಆದರೆ ಕರ್ನಾಟಕ ಸರ್ಕಾರವು ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕನ್ನಡದಲ್ಲೇ ಒದಗಿಸುವ ತನ್ನ ಸಂಕಲ್ಪಕ್ಕೆ ಸಂವಿಧಾನವೇ ಅಡ್ಡಿಯಾಗಿದೆ ಎಂಬುದನ್ನು ಈ ಸಂಬಂಧದ ನಮ್ಮ ಸರ್ವೋನ್ನತ ನ್ಯಾಯಾಲಯದ ತೀರ್ಪಿನಿಂದ ಮೂರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರೂ, ಅದನ್ನು ಸರಿಪಡಿಸುವ ಯಾವ ಕ್ರಮವನ್ನೂ ಈವರೆಗೆ ಕೈಗೊಳ್ಳದಿರುವುದು ದುರದೃಷ್ಟಕರ. ಕಳೆದ ವರ್ಷದ ರಾಜ್ಯೋತ್ಸವ ಸಂದರ್ಭದ ಒಂದು ಭಾಷಣದಲ್ಲಿ ನಮ್ಮ ಮುಖ್ಯಮಂತ್ರಿಗಳು ಈ ಸಂಬಂಧವಾದ ಸಂವಿಧಾನ ತಿದ್ದುಪಡಿ ಮಾಡಬೇಕೆಂದು ಪ್ರಧಾನ ಮಂತ್ರಿಯವರನ್ನು ಆಗ್ರಹಿಸಿದ್ದನ್ನು ಬಿಟ್ಟರೆ ತಮ್ಮ ಸರ್ಕಾರದ ಕಡೆಯಿಂದ ಯಾವ ಕ್ರಮವನ್ನೂ ಕೈಗೊಂಡ ಸೂಚನೆಗಳಿಲ್ಲ. ಬದಲಿಗೆ ಸರ್ಕಾರವು ಈ ಇಡೀ ವಿಷಯವನ್ನು ಮುಗಿದ ಅಧ್ಯಾಯವೆಂದು ಕೈಚೆಲ್ಲಿ, ಈ ಸಂಬಂಧದ ಈವರೆಗಿನ ಹೋರಾಟವನ್ನು ಇತಿಹಾಸಕ್ಕೆ ಸರಿಸುವ ಪ್ರಯತ್ನ ಮಾಡುತ್ತಿರುವಂತಿದೆ. ಇದರ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಸಂಖ್ಯೆ ಒಂದೇ ಸಮನೆ ಇಳಿಮುಖವಾಗುತ್ತಿದೆ. ರಾಜ್ಯೋತ್ಸವದ ಸಂದರ್ಭದಲ್ಲಿಯಾದರೂ ಈ ದುರಂತಮಯ ಬೆಳವಣಿಗೆಯ ಅಂತಿಮ ಪರಿಣಾಮವಾದರೂ ಏನಾಗಬಹುದು ಎಂಬುದನ್ನು ಯೋಚಿಸಿ ಇದಕ್ಕೆ ಪರಿಹಾರ ಹುಡುಕುವ ಪ್ರಯತ್ನದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ.
ಶಿಕ್ಷಣ ಮಾಧ್ಯಮದ ಸಂಬಂಧವಾಗಿ ಸರ್ವೋನ್ನತ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು ಕರ್ನಾಟಕ ಸರ್ಕಾರವೇ ಆದುದರಿಂದ, ಈಗ ಅದಕ್ಕೆ ತಡೆಯಾಗಿರುವ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಬೇಕಾದುದೂ ಕರ್ನಾಟಕ ಸರ್ಕಾರದ ಹೊಣೆಯೇ ಆಗಿದೆ. ಆದರೆ ಮೂರು ವರ್ಷಗಳಾದರೂ ಇದಕ್ಕಾಗಿ ಮೀನ-ಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ಮನೋಭಾವದ ಬಗೆಗಿನ ನನ್ನ ತೀವ್ರ ಅಸಮಧಾನ ಸೂಚಿಸಲು ನಾನು ಅದು ನೀಡುತ್ತಿರುವ ಈ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸದಿರಲು ನಿರ್ಧರಿಸಿದ್ದೇನೆ.

ಈಗಲಾದರೂ ನಮ್ಮ ರಾಜ್ಯ ಸರ್ಕಾರವು, ಅಗತ್ಯ ಕಂಡುಬಂದರೆ ಸಮಾನ ಮನಸ್ಕ ಇತರ ರಾಜ್ಯ ಸರ್ಕಾರಗಳ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ, ರಾಜ್ಯಗಳ ಭಾಷೆಗಳನ್ನು ಆಯಾ ರಾಜ್ಯಗಳಲ್ಲಿನ ಪ್ರಾಥಮಿಕ ಶಿಕ್ಷಣದ ಮಾಧ್ಯಮವನ್ನಾಗಿ ಮಾಡುವುದಕ್ಕೆ ಅಡ್ಡಿಯಾಗಿರುವ ಸಂವಿಧಾನದ ವಿಧಿಗಳಿಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನಗಳನ್ನು ಆರಂಭಿಸುವಂತೆ ಕೋರುತ್ತೇನೆ. ಇದರಿಂದಾಗಿ ರಾಜ್ಯದ ಎಲ್ಲ ಪಠ್ಯಕ್ರಮಗಳ ಮತ್ತು ಎಲ್ಲ ಮಾದರಿಗಳ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕೆಂದು ಆದೇಶಿಸುವ ರಾಜ್ಯ ಸರ್ಕಾರದ ಇತ್ತೀಚಿನ ಆಜ್ಞೆಗಳಿಗೂ ಸಾಂವಿಧಾನಿಕ ಬಲ ಬಂದಂತಾಗುತ್ತದೆ. ಇಲ್ಲದೆ ಹೋದರೆ ಈ ಆಜ್ಞೆಗಳೂ ಶಿಕ್ಷಣ ಮಾಧ್ಯಮದ ಆಜ್ಞೆಯಂತೆಯೇ ನ್ಯಾಯಾಂಗದಿಂದ ಅಸಿಂಧು ಎನಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ.
-ಡಿ.ಎಸ್. ನಾಗಭೂಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT