ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಎಷ್ಟೇ ಅಡ್ಡಿ ಬಂದರೂ ಮಾತುಕತೆ ಕೈಬಿಡಬೇಡಿ

Last Updated 31 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಜಮ್ಮು–ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲರ ಜತೆ ಮಾತನಾಡಲು ಕೇಂದ್ರ ಸರ್ಕಾರವು ವಿಶೇಷ ಪ್ರತಿನಿಧಿಯೊಬ್ಬರನ್ನು ನೇಮಿಸಿರುವುದು ತಡವಾದ ಕ್ರಮವಾದರೂ ಸ್ವಾಗತಾರ್ಹವಾದದ್ದು. ವಿಶೇಷ ಪ್ರತಿನಿಧಿಯಾಗಿ ನೇಮಕಗೊಂಡಿರುವ ದಿನೇಶ್ವರ್‌ ಶರ್ಮಾ, ಕೇಂದ್ರ ಸರ್ಕಾರದ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದವರು. ಈ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಸಹಿತ ಎಲ್ಲ ಗುಂಪುಗಳ ಜತೆಗೆ ಮಾತನಾಡಬಹುದಾದಷ್ಟು ಸಂಪರ್ಕಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ‘ಶರ್ಮಾ ಅವರಿಗೆ, ಸಮಸ್ಯೆಯ ಪರಿಹಾರಕ್ಕೆ ಆವಶ್ಯಕವೆನ್ನಿಸುವ ಯಾವುದೇ ಗುಂಪಿನ ಜತೆ ಮಾತನಾಡುವ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ’ ಎಂದು ಸ್ವತಃ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಪ್ರತ್ಯೇಕತಾವಾದಿಗಳಿಂದ ಉತ್ಸಾಹದ ಪ್ರತಿಕ್ರಿಯೆಯೇನೂ ಬಂದಿಲ್ಲ. ‘ಇದೊಂದು ಕಾಲಯಾಪನೆಯ ಕ್ರಮ. ಅಂತರರಾಷ್ಟ್ರೀಯ ಒತ್ತಡ ಮತ್ತು ಪ್ರಾದೇಶಿಕ ಅನಿವಾರ್ಯತೆಯ ಕಾರಣ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆಯಷ್ಟೆ. ಕಾಶ್ಮೀರ ಸಮಸ್ಯೆಯ ಪರಿಹಾರದ ನಿಟ್ಟಿನಲ್ಲಿ ಇದೊಂದು ವ್ಯರ್ಥ ಪ್ರಯತ್ನ’ ಎಂದು ಪ್ರತ್ಯೇಕತಾವಾದಿ ನಾಯಕರಿಂದ ಜಂಟಿ ಹೇಳಿಕೆ ಹೊರಬಿದ್ದಿದೆ. ಈ ಜಂಟಿ ಹೇಳಿಕೆಗೆ ತೀವ್ರವಾದಿ ಗುಂಪಿನ ಮುಖಂಡ ಸೈಯದ್‌ ಅಲಿ ಷಾ ಗಿಲಾನಿ, ಸೌಮ್ಯವಾದಿ ಬಣದ ನಾಯಕ ಮೀರ್‌ವೈಜ್‌ ಉಮರ್‌ ಫಾರೂಕ್‌ ಮತ್ತು ಜೆಕೆಎಲ್‌ಎಫ್‌ ಮುಖಂಡ ಯಾಸೀನ್‌ ಮಲಿಕ್‌ ಈ ಮೂವರೂ ಸಹಿ ಹಾಕಿರುವುದು ಮಾತುಕತೆಗೆ ಪ್ರತಿಕೂಲ ವಾತಾವರಣ ಸೃಷ್ಟಿಸಿದಂತಾಗಿದೆ. ಹಾಗೆಂದು ಕೇಂದ್ರ ಸರ್ಕಾರ ಈಗ ಇಟ್ಟಿರುವ ಸಂಧಾನದ ಹೆಜ್ಜೆಯಿಂದ ಹಿಂದೆ ಸರಿಯಬೇಕಿಲ್ಲ. ಕಾಶ್ಮೀರದಲ್ಲಿ ಉಂಟಾಗಿರುವ ಅಶಾಂತಿಯನ್ನು ಶಮನ ಮಾಡುವ ನಿಟ್ಟಿನಲ್ಲಿ ಅಂತಿಮ ಪರಿಹಾರ ಲಭಿಸುವವರೆಗೂ ಕೇಂದ್ರ ಸರ್ಕಾರ ಮಾತುಕತೆಯನ್ನು ಮುಂದುವರಿಸಬೇಕು.

ಕೇಂದ್ರದಲ್ಲಿ ಸಂಪೂರ್ಣ ಬಹುಮತ ಹೊಂದಿದ್ದು, ಜಮ್ಮು–ಕಾಶ್ಮೀರದಲ್ಲೂ ತಮ್ಮದೇ ಪಕ್ಷದ ಮೈತ್ರಿ ಸರ್ಕಾರ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಸಮಸ್ಯೆಯನ್ನು ಬಗೆಹರಿಸಲು ಈಗ ಉತ್ತಮ ಅವಕಾಶವಿದೆ. ಆದರೆ ಮೂರು ವರ್ಷಗಳಿಂದ ಪ್ರತ್ಯೇಕತಾವಾದಿಗಳ ವಿರುದ್ಧ ಸಂಘರ್ಷದ ಹಾದಿಯನ್ನೇ ತುಳಿಯುವುದರ ಮೂಲಕ ಕೇಂದ್ರ ಸರ್ಕಾರ ಅಲ್ಲಿನ ವಾತಾವರಣವನ್ನು ಇನ್ನಷ್ಟು ಕೆಡಿಸಿದೆ ಎನ್ನುವುದೂ ನಿಜ. ಪ್ರತಿಭಟನೆಕಾರರನ್ನು ಚದುರಿಸಲು ಪೊಲೀಸರು ಪೆಲೆಟ್‌ ಮತ್ತು ರಬ್ಬರ್ ಗುಂಡುಗಳನ್ನು ಬಳಸಿ, ಅನೇಕರು ಕಣ್ಣು ಕಳೆದುಕೊಳ್ಳುವಂತೆ ಮಾಡಿದ್ದೂ ಪರಿಸ್ಥಿತಿ ಇನ್ನಷ್ಟು ಹದಗೆಡಲು ಕಾರಣವಾಯಿತು. ಅಲ್‌ ಕೈದಾಗೆ ನಿಷ್ಠವಾಗಿರುವ ಅನ್ಸಾರ್ ಗೌಜತುಲ್‌ ಹಿಂದ್‌ ಎನ್ನುವ ಹೊಸ ಉಗ್ರಗಾಮಿ ಸಂಘಟನೆಯೂ ಅಲ್ಲಿ ಸಕ್ರಿಯವಾಗಿದೆ ಎನ್ನುವ ಆತಂಕದ ವರದಿಗಳು ಇತ್ತೀಚೆಗೆ ಬಂದಿವೆ. ಮಾತುಕತೆಗೆ ವಿಘ್ನ ಒಡ್ಡಲು ಇಂತಹ ಅನೇಕ ಗುಂಪುಗಳು ಯತ್ನಿಸುವುದು ಖಂಡಿತ. ಆದರೆ ಈಗಲೂ ಕಾಲ ಮಿಂಚಿಲ್ಲ. ಕಾಶ್ಮೀರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಸಾಕಷ್ಟು ಅನುಭವ ಹೊಂದಿರುವ ಕಾಂಗ್ರೆಸ್‌ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕರ ಸಹಿತ ಕಾಶ್ಮೀರದ ಎಲ್ಲ ಮುಖಂಡರನ್ನೂ ಈ ನಿಟ್ಟಿನಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಕೇಂದ್ರ ಸರ್ಕಾರ ಮುಂದುವರಿಯಬೇಕು. ರಾಷ್ಟ್ರದ ಸಾರ್ವಭೌಮತ್ವದ ಜತೆಗೆ ರಾಜಿ ಮಾಡಿಕೊಳ್ಳದೆ, ಸಂವಿಧಾನದ ಚೌಕಟ್ಟಿನೊಳಗೇ ಕಾಶ್ಮೀರದ ಸ್ವಾಯತ್ತೆಯನ್ನು ರಕ್ಷಿಸಲು ಸಾಧ್ಯವಿದೆ. ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಸರ್ಕಾರ ನಿಜಕ್ಕೂ  ಪ್ರಾಮಾಣಿಕವಾಗಿದೆ ಎನ್ನುವುದನ್ನು ಪ್ರತ್ಯೇಕತಾವಾದಿಗಳಿಗೆ ಮನವರಿಕೆ ಮಾಡಿಕೊಡಬೇಕು. ಮಾತುಕತೆಯ ಹೊರತಾಗಿ ಅನ್ಯದಾರಿಯಿಲ್ಲ ಎನ್ನುವುದು ಪ್ರತ್ಯೇಕತಾವಾದಿಗಳಿಗೂ ಮನವರಿಕೆಯಾಗುವಂತೆ ಸರ್ಕಾರ ನಡೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT