ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಎಲ್‍ಇಡಿ ಕ್ರಾಂತಿ ಮತ್ತು ಪೈಪೋಟಿ

Last Updated 1 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಯಾವುದೇ ಪತ್ರಿಕೆ ತೆರೆದರೂ ಹಬ್ಬದ ವಿಶೇಷ ಕೊಡುಗೆಯಾಗಿ ಒಎಲ್‍ಇಡಿ ಟಿ.ವಿಗಳ ಮೇಲೆ ವಿಶೇಷ ರಿಯಾಯಿತಿ, ಉಡುಗೊರೆ ಅಥವಾ ಬಂಪರ್ ಬಹುಮಾನಗಳದ್ದೇ ಜಾಹೀರಾತು. ಸ್ಲಿಮ್, ಎಚ್‌ಡಿ, 4ಕೆ ಎಲ್‍ಇಡಿ ಎಂದು ದೊಡ್ಡ ಪ್ರಚಾರ ನೀಡುತ್ತಿದ್ದ ಎಲೆಕ್ಟ್ರಾನಿಕ್ ಉತ್ಪನ್ನ ಕಂಪನಿಗಳು ಒಎಲ್‍ಇಡಿ ತಂತ್ರಜ್ಞಾನವನ್ನು ಮುಂದಿಟ್ಟು ಮಾರಾಟ ಹೆಚ್ಚಿಸಿಕೊಳ್ಳಲು ಮುಂದಾಗಿವೆ. ಇತ್ತೀಚೆಗೆ ಬಿಡುಗಡೆಯಾದ ಆಪಲ್‌ನ ‘ಐಫೋನ್ 10’ ಮೊಬೈಲ್ ಫೋನ್ ಬೆಲೆ ಸಾವಿರ ಡಾಲರ್ ದಾಟಲೂ ಒಎಲ್‍ಇಡಿ ಕಾರಣ ಎನ್ನಲಾಗಿದೆ.

ಒಎಲ್‍ಇಡಿ-ಆರ್ಗ್ಯಾನಿಕ್ ಲೈಟ್ ಎಮಿಟಿಂಗ್ ಡಿಯೋಡ್; ಆರ್ಗ್ಯಾನಿಕ್ ಎಂದ ಕೂಡಲೇ ಸಾವಯವ ಆಹಾರ ಅಥವಾ ಕೃಷಿಗೂ ಇದಕ್ಕೂ ಸಂಬಂಧವಿಲ್ಲ. ಕಾರ್ಬನ್ ಇರುವಂಥ ರಾಸಾಯನಿಕಗಳನ್ನು ಬಳಸಿ ಸಿದ್ಧಪಡಿಸಲಾಗಿರುವ ಅರೆವಾಹಕ ಪದರಗಳಿವು. ಪಾದರಸದಂತಹ ಅಪಾಯಕಾರಿ ಲೋಹದ ಅಂಶಗಳನ್ನು ಒಳಗೊಂಡಿರದ ಕಾರಣ ಪರಿಸರಸ್ನೇಹಿ ತಂತ್ರಜ್ಞಾನವೆಂದು ಹೀಗೆ ಬಿಂಬಿತವಾಗಿದೆ.

ಕಾರ್ಬನ್‌ನಿಂದ ರೂಪುಗೊಂಡ ರಾಸಾಯನಿಕ ಮಿಶ್ರಣವನ್ನು ತೆಳು ಹಾಳೆಗಳ ಮೇಲೆ ಹರಡಿ, ಇಂಥ ಪದರಗಳನ್ನು ಪೇರಿಸಲಾಗುತ್ತದೆ. ಹಗಲಲ್ಲಿ ಪಾರದರ್ಶಕವೂ ಆಗಬಲ್ಲ, ಬೇಕಾದ ರೀತಿಯಲ್ಲಿ ಹರಡಬಹುದಾದ ಬಾಗಿಸಬಹುದಾದ ಹಾಳೆಯಂತಹ ಇವು ಹೆಚ್ಚು ಸಾಮರ್ಥ್ಯ ಹೊಂದಿರುವ ಪರದೆಗಳಾಗಿವೆ. ಅರೆವಾಹಕ ಡಿಯೋಡ್‌ಗಳ ಮೂಲಕ ವಿದ್ಯುತ್ ಹರಿಸಿ ಬೆಳಕನ್ನು ಬೀರುವ ತಂತ್ರಜ್ಞಾನದ ಅಳವಡಿಕೆ ಇಲ್ಲಿದೆ. ಇಂಥ ತಂತ್ರಜ್ಞಾನ ದುಬಾರಿಯಾಗಿರುವ ಕಾರಣದಿಂದಲೇ ಐಫೋನ್‌ನ ಹೊಸ ಮಾದರಿ ‘10’ನ ಮಾರಾಟ ಬೆಲೆ (₹65 ಸಾವಿರಕ್ಕೂ ಅಧಿಕ) ಹೆಚ್ಚಳವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

2009ರಲ್ಲಿ ಸ್ಯಾಮ್‍ಸಂಗ್ ಪ್ರದರ್ಶಿಸಿದ್ದ ಒಎಲ್‍ಇಡಿ ಪರದೆಯ ಮಡಚುವ ಸ್ಮಾರ್ಟ್‌ಫೋನ್ 2018ಕ್ಕೆ ಬಿಡುಗಡೆಯಾಗಲಿದೆ ಎಂದು ಅಧಿಕೃತ ಪ್ರಕಟಣೆಗಳಿಂದ ತಿಳಿದು ಬಂದಿದೆ. ಇಂಥದ್ದೇ ಮಡಚುವ ಪರದೆ ತಂತ್ರಜ್ಞಾನ ಅಭಿವೃದ್ಧಿಗಾಗಿ ಆಪಲ್ ಸಂಸ್ಥೆ, ಎಲ್‌ಜಿಯೊಂದಿಗೆ ಸೇರಿ ಸಂಶೋಧನೆ ನಡೆಸುತ್ತಿದೆ.

ಐಫೋನ್‌ಗೆ ಸ್ಯಾಮ್‍ಸಂಗ್ ಪರದೆ!
ವಿಶೇಷವೆಂದರೆ, ಐಫೋನ್ 10 ಮೊಬೈಲ್‌ನಲ್ಲಿ ಉಪಯೋಗಿಸಿರುವ ಒಎಲ್‍ಇಡಿ ಪರದೆಯನ್ನು ತಯಾರಿಸಿಕೊಡುತ್ತಿರುವುದು ಆಪಲ್‌ನೊಂದಿಗೆ ಮೊಬೈಲ್ ಕ್ಷೇತ್ರದಲ್ಲಿ ಪೈಪೋಟಿ ನಡೆಸುತ್ತಿರುವ ಸ್ಯಾಮ್‍ಸಂಗ್. ಪ್ರತಿ ಐಫೋನ್ 10ನ ಒಎಲ್‍ಇಡಿ ಪರದೆಗಾಗಿ ಸ್ಯಾಮ್‍ಸಂಗ್ ಅಂದಾಜು 110 ಡಾಲರ್ (7000 ರೂಪಾಯಿ) ಪಡೆಯಲಿದ್ದು, ಇದು ಮೊಬೈಲ್ ಮಾರಾಟ ಬೆಲೆಯ ಶೇ 10ರಷ್ಟಾಗಿದೆ.

ಎರಡು ವರ್ಷಗಳಲ್ಲಿ 13 ಕೋಟಿ ಐಫೋನ್ 10 ಮಾರಾಟದ ಗುರಿ ಹೊಂದಿರುವ ಆಪಲ್‌ನಿಂದ ಸ್ಯಾಮ್‍ಸಂಗ್ ಅಂದಾಜು 14 ಬಿಲಿಯನ್ ಡಾಲರ್ (₹ 900 ಶತಕೋಟಿ) ಪಡೆಯಲಿದೆ. ಇದು ಸ್ವತಃ ಸ್ಯಾಮ್‍ಸಂಗ್‌ನ ಗ್ಯಾಲಕ್ಸಿ 8 ಮಾರಾಟದಿಂದ ಗಳಿಸುವ ಲಾಭಕ್ಕಿಂತಲೂ ಹೆಚ್ಚು. ಗ್ಯಾಲಕ್ಸಿ 8 ಮೊಬೈಲ್ ಮಾರಾಟದಿಂದ 10 ಬಿಲಿಯನ್ ಡಾಲರ್ (₹650 ಶತಕೋಟಿ) ಲಾಭ ಅಂದಾಜಿಸಲಾಗಿದೆ. ಎಲ್‌ಜಿ ಕೂಡ ಒಎಲ್‍ಇಡಿ ಪರದೆ ತಂತ್ರಜ್ಞಾನದಲ್ಲಿ ಉನ್ನತ ಸಂಶೋಧನೆ ನಡೆಸಿದ್ದರೂ ಐಫೋನ್‌ಗೆ ಅಗತ್ಯವಿರುವಷ್ಟು ಪರದೆಗಳನ್ನು ನಿಗದಿತ ಸಮಯದಲ್ಲಿ ಪೂರೈಸುವ ಮಾನವ ಸಂಪನ್ಮೂಲ ಹಾಗೂ ತಂತ್ರಜ್ಞಾನವನ್ನು ಸ್ಯಾಮ್‍ಸಂಗ್ ಮಾತ್ರ ಹೊಂದಿದೆ.

ಎಲ್ಲೆಲ್ಲ ಬಳಕೆ: ಮೊಬೈಲ್ ಫೋನ್, ಡಿಜಿಟಲ್ ಕ್ಯಾಮೆರಾ, ವರ್ಚುಯಲ್ ರಿಯಾಲಿಟಿ (ಗೇಮಿಂಗ್‌ನಲ್ಲಿ ಬಳಕೆ) ಹೆಡ್‌ಸೆಟ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಹಾಗೂ ಟಿ.ವಿಗಳಲ್ಲಿ ಒಎಲ್‍ಇಡಿ ಪರದೆಗಳ ಬಳಕೆ ಹೆಚ್ಚಿದೆ. ಮೊಬೈಲ್ ಫೋನ್‌ಗಳ ತನ್ನ ಬಹುತೇಕ ಎಲ್ಲ ಮಾದರಿಗಳಲ್ಲಿ ಸ್ಯಾಮ್‍ಸಂಗ್ ಇದೇ ಪರದೆಯನ್ನು ಬಳಸುವ ಮೂಲಕ ಒಎಲ್‍ಇಡಿ ದಿಗ್ಗಜನಾಗಿ ಗುರುತಿಸಿಕೊಂಡಿದೆ.

2013ರಲ್ಲಿ ಎಲ್‌ಜಿ ಕಂಪನಿ ಮೊದಲ ಪೂರ್ಣ ಪ್ರಮಾಣದ ಒಎಲ್‍ಇಡಿ ಟಿ.ವಿ ಸಿದ್ಧಪಡಿಸಿ ಬಿಡುಗಡೆ ಮಾಡಿತು. ಈ ಟಿ.ವಿ ಪರದೆಯ ದಪ್ಪ ಕೇವಲ 4 ಮಿಲಿ ಮೀಟರ್ ಹಾಗೂ 3.5 ಕೆ.ಜಿ. ತೂಕವಿತ್ತು. 3ಡಿ ಚಿತ್ರ ವೀಕ್ಷಣೆಗೂ ಈ ತಂತ್ರಜ್ಞಾನದ ಪರದೆ ಸಹಕಾರಿಯಾಗಿದೆ. ಆದರೆ, ಇದರ ಬಳಕೆಯ ಅವಧಿಯ ಕುರಿತು ಸ್ಪಷ್ಟ ಮಾಹಿತಿ ಇಲ್ಲ.

ತಂತ್ರಜ್ಞಾನ ಅರಿಯೋಣ
ಭಾರತೀಯ ಮಾರುಕಟ್ಟೆಯಲ್ಲಿ ಪ್ರಾರಂಭದಲ್ಲಿ ಬಿಡುಗಡೆಯಾದ ನೋಕಿಯಾ ಅಥವಾ ಮೋಟೊರೋಲಾ ಮೊಬೈಲ್ ಬಳಸಿರುವವರು ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೇ (ಎಲ್‌ಸಿಡಿ) ಪರದೆಯನ್ನು ಹತ್ತಿರದಿಂದ ಗಮನಿಸಿರಬಹುದು. ಪರದೆಯಲ್ಲಿ ಯಾವುದೇ ಸಂಖ್ಯೆ, ಅಕ್ಷರ ಇಲ್ಲವೇ ಚಿತ್ರಗಳು ಕಾಣುವುದಕ್ಕೂ ಮುನ್ನ ಪರದೆಯ ಸುತ್ತಲೂ ದೀಪಗಳು ಬೆಳಗುವುದನ್ನು ನೋಡಿರಬಹುದು. ಯಾವುದೇ ಎಲ್‌ಸಿಡಿ ಪರದೆಯಲ್ಲಿ ಚಿತ್ರ ಮೂಡಲು ಹಿನ್ನೆಲೆಯ ಬೆಳಕು ಅತ್ಯಗತ್ಯವಾಗಿತ್ತು.

ಇಲ್ಲಿ ಎರಡು ವಾಹಕಗಳ (ವಿದ್ಯುತ್ ಪ್ರವಹಿಸುವ) ನಡುವಿನ ಅರೆವಾಹಕ (ಸೆಮಿಕಂಡಕ್ಟರ್) ಪದರವಾಗಿ ಲಿಕ್ವಿಡ್ ಕ್ರಿಸ್ಟಲ್ ಬಳಸಿ, ಇದರ ಹಿಂಬದಿಯಲ್ಲಿ ಸಿಎಫ್‍ಎಲ್ ದೀಪಗಳಿಂದ ಬೆಳಕು ಹರಿಸಲಾಗುತ್ತದೆ. ಈಗ ಮನೆಗಳಲ್ಲಿ ಹೆಚ್ಚು ಉಪಯೋಗಿಸುತ್ತಿರುವ ಸಿಎಫ್‍ಎಲ್ ಬಲ್ಬ್‌ಗಳಂತೆಯೇ ಪರದೆ ಬೆಳಗಲು ಪುಟ್ಟದಾದ ದೀಪಗಳ ಬಳಕೆಯಾಗಿತ್ತು. ಇದೇ ಕಾರಣದಿಂದಾಗಿ ಪರದೆಯಲ್ಲಿ ಮೂಡುತ್ತಿದ್ದ ಕಪ್ಪು ಬಣ್ಣ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ.

ಎಲ್‌ಸಿಡಿಯ ನ್ಯೂನತೆಗಳನ್ನು ಸರಿಪಡಿಸುವ ಜತೆಗೆ ಪರದೆಯಲ್ಲಿ ಗೋಚರಿಸುವ ಚಿತ್ರಗಳ ಗುಣಮಟ್ಟವನ್ನೂ ಹೆಚ್ಚಿಸಿದ್ದು ಲೈಟ್ ಎಮಿಟಿಂಗ್ ಡಿಯೋಡ್ (ಎಲ್‍ಇಡಿ) ತಂತ್ರಜ್ಞಾನ. ಲಿಕ್ವಿಡ್ ಕ್ರಿಸ್ಟಲ್ ಹಿಂಬದಿಯಲ್ಲಿ ಬೆಳಕು ಮೂಡಿಸಲು ಎಲ್‍ಇಡಿ ದೀಪಗಳನ್ನು ಬಳಸಲಾಯಿತು. ಗಾತ್ರದಲ್ಲಿ ಚಿಕ್ಕದು ಹಾಗೂ ಅವಶ್ಯಕತೆಗೆ ತಕ್ಕಂತೆ ಏರಿಳಿತ ಮಾಡಬಹುದಾದ ಈ ದೀಪಗಳು ಚಿತ್ರದ ಗುಣಮಟ್ಟ, ಸ್ಪಷ್ಟತೆಯನ್ನು ಹೆಚ್ಚಿಸಿದವು.

ಇದಾಗಿ ಒಂದೇ ವರ್ಷದಲ್ಲಿ ಒಎಲ್‍ಇಡಿ ಸುದ್ದಿಯಾಯಿತು. ಅತಿ ಕಡಿಮೆ ವಿದ್ಯುತ್ ಬಳಕೆ, ಹೆಚ್ಚು ಪ್ರಕಾಶಮಾನ, ಬಣ್ಣಗಳು ಸ್ಪಷ್ಟವಾಗಿ ಗೋಚರಿಸುವುದು, ತೆಳುವಾದ ಹಾಗೂ ಬಾಗುವ ಗುಣವನ್ನೂ ಹೊಂದಿರುವುದು ಒಎಲ್‍ಇಡಿ ವಿಶೇಷ. ಪ್ರತಿ ಪಿಕ್ಸೆಲ್‌ಗೆ ಬೆಳಕು ಪೂರೈಕೆಯಾಗುವುದರಿಂದ ಅತ್ಯಂತ ಗುಣಮಟ್ಟದ ಚಿತ್ರಗಳನ್ನು ಈ ಪರದೆಗಳಲ್ಲಿ ಕಾಣಬಹುದಾಗಿದೆ.

ಈಸ್ಟ್‌ಮನ್ ಕೊಡಾಕ್ ಕಂಪನಿಯ ಚಿಂಗ್ ಡಬ್ಲ್ಯು ತಾಂಗ್ ಹಾಗೂ ಸ್ಟೀವನ್ ವಾನ್ ಸ್ಲೈಕ್ ಸಂಶೋಧಕರು 1987ರಲ್ಲಿ ಒಎಲ್‍ಇಡಿ ತಂತ್ರಜ್ಞಾನ ಕಂಡುಕೊಂಡರು. 2003ರಲ್ಲಿ ಕೊಡಾಕ್ ಒಎಲ್‍ಇಡಿ ಪರದೆ ಹೊಂದಿರುವ ಡಿಜಿಟಲ್ ಕ್ಯಾಮೆರಾ ಬಿಡುಗಡೆ ಮಾಡಿತು. ಬಳಿಕ ಅದರ ಬಾಗುವ ಗುಣವನ್ನು ಉತ್ಪನ್ನಗಳಲ್ಲಿ ಬಳಕೆಗೆ ತರುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಹಲವು ಪ್ರಯೋಗಾಲಯಗಳಲ್ಲಿ ಸಂಶೋಧನೆ ನಡೆಸಲಾಯಿತು ಹಾಗೂ ಇನ್ನೂ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT