ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ಸಂಭ್ರಮ; ಸಾಹಿತಿಗಳ ಸಂಗಮ

ಸಪ್ನ ಸುವರ್ಣ ಮಹೋತ್ಸವದಲ್ಲಿ 50 ಸಾಹಿತಿಗಳ ಪುಸ್ತಕ ಲೋಕಾರ್ಪಣೆ
Last Updated 1 ನವೆಂಬರ್ 2017, 20:33 IST
ಅಕ್ಷರ ಗಾತ್ರ

ಬೆಂಗಳೂರು: ಇದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವೋ ಅಥವಾ ಸಾಹಿತ್ಯ ಸಮ್ಮೇಳನವೋ ಎಂದು ಬೆರಗು ಹುಟ್ಟಿಸುವಷ್ಟು ಸಂಖ್ಯೆಯಲ್ಲಿ ಸಾಹಿತಿಗಳು ಇಲ್ಲಿ ಸೇರಿದ್ದರು. ಸಾರಸ್ವತ ಲೋಕದ ದಿಗ್ಗಜರ ಈ ಸಮಾಗಮ ಕನ್ನಡದ ಅಪೂರ್ವ ವಾತಾವರಣವನ್ನು ಸೃಷ್ಟಿಸಿತ್ತು. –ಇದು ಕಂಡುಬಂದದ್ದು, ಸಪ್ನ ಬುಕ್‌ ಹೌಸ್‌ ಗಾಂಧಿಭವನದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಪ್ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ.

ಪ್ರತಿ ವರ್ಷವೂ ವಿಭಿನ್ನ ರೀತಿಯಲ್ಲಿ ರಾಜ್ಯೋತ್ಸವ ಆಚರಿಸುವ ಸಪ್ನ ಬುಕ್‌ ಹೌಸ್‌ ಈ ಬಾರಿ ನಿಘಂಟು ತಜ್ಞ, ಶತಾಯುಷಿ ಪ್ರೊ. ಜಿ.ವೆಂಕಟಸುಬ್ಬಯ್ಯ, ಎಂ.ಚಿದಾನಂದಮೂರ್ತಿ, ಚಂದ್ರಶೇಖರ ಪಾಟೀಲ, ದೊಡ್ಡರಂಗೇಗೌಡ, ಸಿ.ಎನ್‌.ರಾಮಚಂದ್ರನ್‌, ಕಮಲಾ ಹಂಪನಾ, ಹಂಪ ನಾಗರಾಜಯ್ಯ, ಗಿರಡ್ಡಿ ಗೋವಿಂದರಾಜ, ಕುಂ.ವೀರಭದ್ರಪ್ಪ, ಚಂದ್ರಶೇಖರ ಕಂಬಾರ, ಬಿ.ಆರ್‌. ಲಕ್ಷ್ಮಣರಾವ್‌, ಎಚ್‌.ಎಸ್‌.ವೆಂಕಟೇಶಮೂರ್ತಿ, ಪಿ.ವಿ.ನಾರಾಯಣ... ಹೀಗೆ ಕನ್ನಡದ ಪ್ರಮುಖ 50 ಸಾಹಿತಿಗಳ ಪುಸ್ತಕಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಈ ಸಡಗರವನ್ನು ಅವಿಸ್ಮರಣೀಯಗೊಳಿಸಿತು. ಲೋಕಾರ್ಪಣೆಗೊಂಡ ಪುಸ್ತಕಗಳಲ್ಲಿ ಕಲೆ, ನಾಟಕ, ವೈದ್ಯಕೀಯ... ಹೀಗೆ ವಿವಿಧ ಪ್ರಕಾರಗಳ ಪುಸ್ತಕಗಳು ಸೇರಿವೆ.

‘ಎಲ್ಲಾ ಸಾಹಿತಿಗಳನ್ನು ಒಂದೇ ಸೂರಿನಡಿ ಭೇಟಿ ಮಾಡುವ ಸಂದರ್ಭವನ್ನು ಸಪ್ನ ಬುಕ್‌ಹೌಸ್‌ ಸೃಷ್ಟಿಸಿದೆ. ಇದೊಂದು ಪುಟ್ಟ ಸಾಹಿತ್ಯ ಸಮ್ಮೇಳನದಂತೆ ಭಾಸವಾಗುತ್ತಿದೆ. ಸಾಕಷ್ಟು ಸಾಹಿತಿಗಳನ್ನು ಪ್ರತಿ ವರ್ಷ ಈ ಕಾರ್ಯಕ್ರಮದಲ್ಲಿಯೇ ಭೇಟಿ ಮಾಡುತ್ತೇನೆ’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ಧಪ್ಪ ಸಂತಸ ವ್ಯಕ್ತಪಡಿಸಿದರು.

‘ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಸಾಹಿತಿಗಳು ರಾಜ್ಯೋತ್ಸವದಂದು ನಗರಕ್ಕೆ ಬರುತ್ತಾರೆ. ರಾಜಧಾನಿಯಲ್ಲೊಂದು ಸಂಭ್ರಮ ಮನೆಮಾಡುತ್ತದೆ’ ಎಂದು ಸಿ.ಎನ್‌.ರಾಮಚಂದ್ರನ್‌ ಅಭಿಪ್ರಾಯಪಟ್ಟರು.

‘ಮೂರು ತಲೆಮಾರುಗಳ ಸಾಹಿತಿಗಳನ್ನು ಇಲ್ಲಿ ಕಾಣುತ್ತಿದ್ದೇನೆ. ಇದೊಂದು ಅಪೂರ್ವ ಸಂಗಮ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ಧರಾಮಯ್ಯ ವಿಶ್ಲೇಷಿಸಿದರು.

‘ಕನ್ನಡ ಉಳಿವಿಗೆ ಸರ್ಕಾರ ಪ್ರಯತ್ನಿಸುತ್ತಿಲ್ಲ’
‘ಕನ್ನಡ ಭಾಷೆ ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಭಾಷೆ ಉಳಿವಿಗಾಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಬೇಸರ ವ್ಯಕ್ತಪಡಿಸಿದರು.

‘ಎಲ್ಲಿಯವರೆಗೆ 1ರಿಂದ 10ರವರೆಗಿನ ಶಿಕ್ಷಣವನ್ನು ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಒದಗಿಸಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಭಾರತೀಯ ಭಾಷೆಗಳ ಉದ್ಧಾರ ಆಗದು’ ಎಂದು ಅವರು ಅಭಿಪ್ರಾಯಪಟ್ಟರು.

ಹಿಂದಿ ಹೇರಿಕೆಗೆ ಖಂಡನೆ
‘ಮೂರ್ನಾಲ್ಕು ವರ್ಷಗಳಿಂದ ಪ್ರಾದೇಶಿಕ ಭಾಷೆಗಳ ಮೇಲೆ ಹೆಚ್ಚಿನ ಪ್ರಹಾರ ನಡೆಯುತ್ತಿದೆ. ಇಂಗ್ಲಿಷ್‌ ಭಾಷೆಯ ಹೊಡೆತದಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುವಾಗಲೇ ಕೇಂದ್ರ ಸರ್ಕಾರ ಹಿಂದಿಯನ್ನು ಹೇರುತ್ತಿದೆ. ಕೇಂದ್ರೀಯ ಶಾಲೆಗಳ ವಿದ್ಯಾರ್ಥಿಗಳು ದ್ವಿತೀಯ ಭಾಷೆಯಾಗಿ ಹಿಂದಿ ಕಲಿಯುವುದನ್ನು ಕಡ್ಡಾಯ ಮಾಡಿದ್ದಾರೆ. ಇದರಿಂದ ಈ ಶಾಲೆಗಳಲ್ಲಿ ಕನ್ನಡ ಕಲಿಕೆ ಮೂಲೆಗುಂಪಾಗಿದೆ’ ಎಂದು ಎಸ್‌.ಜಿ.ಸಿದ್ಧರಾಮಯ್ಯ ಟೀಕಿಸಿದರು.

ರಿಯಾಯಿತಿ ದರದಲ್ಲಿ ಕನ್ನಡ ಪುಸ್ತಕ ಮಾರಾಟ
ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಸಪ್ನ ಬುಕ್‌ ಹೌಸ್‌ ಆಯೋಜಿಸಿದೆ. ನವೆಂಬರ್‌ 30ರವರೆಗೆ ನಡೆಯಲಿರುವ ಈ ಮೇಳದಲ್ಲಿ ಕನ್ನಡ ಪುಸ್ತಕಗಳಿಗೆ ಶೇ 10ರಿಂದ 15ರಷ್ಟು ರಿಯಾಯಿತಿ ಸಿಗಲಿದೆ. ₹200 ಮೇಲ್ಪಟ್ಟ ಕನ್ನಡ ಪುಸ್ತಕಗಳ ನಿವ್ವಳ ಖರೀದಿಗೆ ಸದಸ್ಯತ್ವ ಸಿಗಲಿದೆ.

ಪುಸ್ತಕ ಖರೀದಿಯಲ್ಲಿ ಅವರು ವರ್ಷಪೂರ್ತಿ ಶೇ 10ರಷ್ಟು ರಿಯಾಯಿತಿ ಪಡೆಯಬಹುದು. ₹500 ಮೇಲ್ಪಟ್ಟ ಕನ್ನಡ ಪುಸ್ತಕ ಖರೀದಿಸಿದವರಿಗೆ ಗಿಫ್ಟ್‌ ವೋಚರ್‌ ಹಾಗೂ ಸದಸ್ಯತ್ವಗಳೆರಡೂ ಸಿಗಲಿವೆ.

*
ಸಪ್ನ ಬುಕ್‌ ಹೌಸ್‌ ಹೆಸರನ್ನು ಸಪ್ನ ಪುಸ್ತಕ ಭಂಡಾರ ಎಂದು ಕನ್ನಡದಲ್ಲೂ ಪ್ರಕಟಿಸಿದರೆ, ಕನ್ನಡ ಓದುಗರಿಗೆ ಖುಷಿಯಾಗುತ್ತದೆ.
–ವೀರೇಶಾನಂದ ಸ್ವಾಮೀಜಿ, ತುಮಕೂರಿನ ರಾಮಕೃಷ್ಣ– ವಿವೇಕಾನಂದ ಆಶ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT