ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಕಣ್ಣಿಗೆ ನೂರಾರು ಗಾಯ!

Last Updated 4 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಒಮ್ಮೆ ಮೈಸೂರಿನ ಹೋಮಿಯೊಪಥಿ ವೈದ್ಯ ಡಾ.ಖಾದರ್ ಅವರು ರಾಯಚೂರಿಗೆ ಉಪನ್ಯಾಸ ನೀಡಲು ಬಂದಿದ್ದರು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಅಂತೇನೋ ಆ ವಿಶೇಷ ಉಪನ್ಯಾಸಕ್ಕೆ ಹೆಸರಿಡಲಾಗಿತ್ತು. ಕಿಕ್ಕಿರಿದು ತುಂಬಿದ್ದ ಪಂ. ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಧ್ಯವಯಸ್ಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಖಾದರ್ ತಮ್ಮ ಎಂದಿನ ನಿರುದ್ವಿಗ್ನ ಶೈಲಿಯಲ್ಲಿ ‘ನಮ್ಮ ಆರೋಗ್ಯ ನಮ್ಮ ಕೈಯೊಳಗೇ ಇದೆ. ಅದಕ್ಕಾಗಿ ಜನರಿಗೆ ಮೊದಲು ಸರಿಯಾಗಿ ಕಕ್ಕ ಮಾಡೋದನ್ನ ಕಲಿಸಬೇಕಾಗಿದೆ. ಅದಕ್ಕೆ ಪೂರಕವಾಗಿ ಅವರ ಆಹಾರ ಪದ್ಧತಿ ಬದಲಾಯಿಸಬೇಕಾಗಿದೆ. ಏಕೆಂದರೆ ನಮ್ಮ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಮಲಬದ್ಧತೆಯೇ ಮೂಲಕಾರಣ’ ಎಂದರು. ಜನ ಮುಖ ಮುಖ ನೋಡಿಕೊಂಡರು. ಸರಿಯಾಗಿ ಕಕ್ಕ ಮಾಡೋದು ಅಂದರೇನು, ಅದನ್ನು ಕಲಿಸೋದು ಅಂದರೇನು... ಅಂತ ಸಹಜವಾಗಿ ನಾನೂ ಗಲಿಬಿಲಿಗೊಳಗಾದೆ.

ನಮ್ಮೆಲ್ಲರ ದಿನಗಳು ಪ್ರಾರಂಭವಾಗುವುದೇ ಶೌಚ ವಿಸರ್ಜನೆಯಿಂದ ಎಂಬುದನ್ನು ನೀವೆಲ್ಲ ಒಪ್ಪುತ್ತೀರಿ. ದಿನಬೆಳಗಾದರೆ ಇದಕ್ಕಾಗಿ ನಡೆಯುವ ಹಲವು ಬಗೆಯ ಕಸರತ್ತುಗಳು ನಮಗೆ ಗೊತ್ತಿಲ್ಲದೇ ಏನಿಲ್ಲ. ಇದೊಂದು ಥರ ‘ಒಂದು ಮರ ನೂರು ಸ್ವರ’ ಅಂದ ಹಾಗೆ. ಒಂದೇ ಕ್ರಿಯೆ. ಎಷ್ಟು ನಮೂನೆ, ಎಷ್ಟು ಕಷ್ಟ, ಎಷ್ಟೊಂದು ಫಜೀತಿ ಮತ್ತು ಎಷ್ಟೆಲ್ಲ ಪೀಕಲಾಟಗಳು!

ಒಬ್ಬರಿಗೆ ಚಹಾ ಕುಡಿದ ನಂತರ ಹೊಟ್ಟೆಯೊಳಗೆ ಸಣ್ಣಗೆ ಗುಳುಗುಳು ಶುರುವಾದರೆ, ಮತ್ತೊಬ್ಬರಿಗೆ ಸಿಗರೇಟು ಸೇದುತ್ತಿದ್ದಂತೆ ಒಳಗೆ ಹಬೆಯಾಡತೊಡಗುತ್ತದೆ. ಇನ್ನು ಕೆಲವರಿಗೆ ಒಂದು ಗ್ಲಾಸು ಸುಖೋಷ್ಣವಾದ ಬಿಸಿನೀರಿಗೆ ಅರ್ಧ ಚಮಚ ಜೇನುತುಪ್ಪ ಬೆರೆಸಬೇಕಾಗಿ ಬಂದರೆ ಮತ್ತೂ ಕೆಲವರಿಗೆ ಅರ್ಧಹೋಳು ನಿಂಬೆಯ ರಸ ಬೆರೆಸಬೇಕು. ಕೆಲವರಿಗೆ ಇವೆರಡನ್ನೂ ಬೆರೆಸಿಕೊಡಬೇಕು. ದೈನಿಕದಲ್ಲಿ ಕೊಂಚ ಏರುಪೇರಾಗಿ ಇವರಿಗೆ ಈ ವೇಗವರ್ಧಕಗಳು (ರಸಾಯನ ವಿಜ್ಞಾನದಲ್ಲಿ ಒಂದು ರಾಸಾಯನಿಕ ಕ್ರಿಯೆಯ ವೇಗ ಹೆಚ್ಚಿಸಲು ಬೆರೆಸುವ ಬೆರಕೆಗಳನ್ನು ಕೆಟಲಿಸ್ಟ್/ ವೇಗವರ್ಧಕ ಎನ್ನುವರು) ಸಮಯಕ್ಕೆ ಸರಿಯಾಗಿ ಸಿಗದೆ ಹೋದ ಪಕ್ಷದಲ್ಲಿ ಅವರ ದಿನದ ಚೆಲುವು ಮತ್ತು ಮುಖದ ನಗುವು ಎರಡೂ ರಾಮನಾಮ ಜಪಿಸುವಂತಾಗುತ್ತದೆ.

ಈ ಸಾಂಪ್ರದಾಯಿಕ ವೇಗವರ್ಧಕಗಳ ಸಾಲಿಗೆ ಕೆಲವು ವಿಚಿತ್ರ ರೂಢಿಗಳೂ ಸೇರಿರುವುದನ್ನು ನಿಮಗೆ ಹೇಳಬೇಕು. ಅವು ಕೇಳಿದಾಗ ನನಗೆ ನಿಜಕ್ಕೂ ಸಖೇದಾಶ್ಚರ್ಯವಾಗಿತ್ತು. ಒಬ್ಬ ಮಿತ್ರರಿಗೆ ಬ್ರಷ್‌ಗೆ ಪೇಸ್ಟ್ ಹಚ್ಚುವುದನ್ನು ನೋಡುತ್ತಿದ್ದಂತೆ ಸೆನ್ಸೇಷನ್ ಶುರುವಾದರೆ, ಮತ್ತೊಬ್ಬರಿಗೆ ಬೆಳಿಗ್ಗೆ ನಿದ್ದೆಯಿಂದ ಎಚ್ಚರವಾಗಿ ಕಣ್ತೆರೆಯುತ್ತಿದ್ದಂತೆಯೇ ಸಮಾನಾಂತರವಾಗಿ ಅವರ ಮೂರನೆಯ ಕಣ್ಣೂ ತೆರೆದುಕೊಳ್ಳುವುದಂತೆ! ಹಾಗಾಗಿ, ಅವರಿಗೆ ಬಸ್ ಜರ್ನಿ ಎಂದರೆ ಭಯ. ಟ್ರೇನ್ ಆದರೆ ಟಾಯ್ಲೆಟ್ ರೆಡಿಯಿರುತ್ತವೆ. ಬಸ್ ಹಾಗಲ್ಲ. ನಿಮಗೆ ಬಂದ ಕಾಲಕ್ಕೆ ಅದೃಷ್ಟವಶಾತ್ ಆ ಬಸ್ಸಿನ ಡ್ರೈವರ್ಗೂ ಬಂದಿದ್ದರೆ ಮಾತ್ರ ನಿಮಗೆ ಬಿಡುಗಡೆಯ ಭಾಗ್ಯ ದೊರೆಯುತ್ತದೆ. ಇಲ್ಲದಿದ್ದರೆ ನಿಮ್ಮ ಫಜೀತಿ ದೇವರಿಗೇ ಪ್ರೀತಿ. ಅವನ ಮರ್ಜಿ ಕಾಯುತ್ತ ಕೈ ಮುಗಿದುಕೊಂಡು ನಿಲ್ಲಬೇಕಾಗುತ್ತದೆ.

ನನ್ನ ಇನ್ನೊಬ್ಬ ಗಜಲ್‌ಕಾರ ಮಿತ್ರರಿಗೆ ಬಿಸಿಲು ಸೋಕಿದರೆ ಮಾತ್ರ ತಳ ಗುಳುಗುಳಿಸುವುದಂತೆ! ತೀವ್ರ ಚಳಿಗಾಲವಿದ್ದಾಗ ದಿನಗಟ್ಟಲೆ ಆಗದೆ ಉಳಿದ ಪ್ರಸಂಗಗಳೂ ಇವೆ ಎಂದವರು ಅಲವತ್ತುಕೊಂಡರು. ಪುಣ್ಯಕ್ಕೆ ಅವರಿರುವುದು ದೇಶಕ್ಕೇ ಹಂಚಿದರೂ ಉಳಿಯುವಷ್ಟು ಬಿಸಿಲಿರುವ, ಬಿರುಬಿಸಿಲೇ ನಮ್ಮ ಪಾಲಿಗೆ ಹೂಬಿಸಿಲಾಗಿರುವ ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ. ಮಲೆನಾಡೋ ಮಡಿಕೇರಿಯೋ ಆಗಿದ್ದರೆ ಅವರ ಗತಿಯೇನಾಗುತ್ತಿತ್ತೋ?

ಟಿಸಿಎಚ್ ಓದುವಾಗ ನನ್ನ ಗೆಳೆಯನೊಬ್ಬನಿದ್ದ. ಅವನಿಗೆ ನೀರಿನ ಸವಲತ್ತಿರುವ ನಿರ್ಜನ ಬಯಲು ಪ್ರದೇಶ ಕಂಡರೆ ಸಾಕು ಟೆಂಪ್ಟೇಷನ್ ಶುರುವಾಗುತ್ತಿತ್ತು. ಆ ಮನುಷ್ಯನ ಸೈಕಾಲಜಿಯೇ ವಿಚಿತ್ರ. ಬೆಳಿಗ್ಗೆ ಅವನು ಹೋಗಿ ಬಂದಿದ್ದರೂ, ಪ್ರಸ್ತುತ ಅವನು ಹಗುರವಾಗಿಯೇ ಇದ್ದರೂ ಒಂದು ನಿರ್ದಿಷ್ಟ ಬಗೆಯ ಬಾಹ್ಯ ಪರಿಸರ ಅವನನ್ನು ಪುನಃ ಆ ಪವಿತ್ರ ಕಾರ್ಯಕ್ಕೆ ಪ್ರೇರೇಪಿಸುತ್ತಿದ್ದ ಬಗೆಯೇ ನಮಗೆ ಮಜಾ ಅನಿಸುತ್ತಿತ್ತು. ಪವಿತ್ರ ಅಂತ ಯಾಕಂದೆ ಎಂದರೆ ಅವನು ಮೈಮೇಲಿನ ಅಷ್ಟೂ ಬಟ್ಟೆಗಳನ್ನು ಕಳಚಿ ಆರಾಮಾಗಿ ಪ್ರಕೃತಿಯಲ್ಲಿ ಒಂದಾಗುತ್ತಿದ್ದುದನ್ನು ನೋಡಿದರೆ ಪಾಂಗಿತ ಮೈಥುನವೊಂದಕ್ಕೆ ಅಣಿಯಾಗುತ್ತಿರುವ ನುರಿತ ವಿಟಪುರುಷನನ್ನೋ ಅಥವಾ ಪೂಜೆಗೆ ಸಿದ್ಧಪಡಿಸಿಕೊಳ್ಳುತ್ತಿರುವ ಉಗ್ರಭಕ್ತನನ್ನೋ ನೋಡಿದಂತಾಗಿ ನಗೆಯುಕ್ಕುತ್ತಿತ್ತು. ಅವನಿಗೆ ನಾವು ಪ್ರೀತಿಯಿಂದ ‘ಸಾಪಡ್ ಬಾಬಾ' ಎನ್ನುತ್ತಿದ್ದೆವು.

ಸಾಪಡ್ ಎಂದರೆ ತಮಿಳಿನಲ್ಲಿ ಊಟ ಎಂದರ್ಥ. ಊಟಕ್ಕೂ ಅವನು ಅಷ್ಟೇ ಶ್ರದ್ಧೆಯಿಂದ ಅಣಿಯಾಗುತ್ತಿದ್ದ. ಬೌದ್ಧ ಧರ್ಮ ಅನುಯಾಯಿಯಾಗಿದ್ದ ಅವನು ನಾಗಾರ್ಜುನನ ಆಹ್ವಾನ ಮತ್ತು ವಿಸರ್ಜನೆಯ ಪರಿಕಲ್ಪನೆಯನ್ನು ಹೀಗೇನಾದರೂ ಹೀನಾರ್ಥದಲ್ಲಿ ಭಾವಿಸಿಕೊಂಡಿರುವನೇ ಎಂದು ನನಗೆ ಅನುಮಾನವಾಗುತ್ತಿತ್ತು. ಕೆಲವರ ಸ್ಥಿತಿ ಇನ್ನೂ ಗಂಭೀರ! ಅವರಿಗೆ ಮೃದು ವಿರೇಚನವೇ ಆಗಬೇಕು. ಅಲೋಪಥಿಯಲ್ಲಿದಕ್ಕೆ ಎನಿಮಾ ಎನ್ನುವರು. ಇದೊಂದು ರೀತಿಯ ಪಿಚಕಾರಿ ಚಿಕಿತ್ಸೆ. ಚಿಕ್ಕಮಕ್ಕಳಿಗೆ ಎರಡ್ಮೂರು ದಿನ ಆಗದೆ ಅವು ಒದ್ದಾಡುತ್ತ ಆ ಕಿರಿಕಿರಿಗೆ ರಂಪಾಟ ಮಾಡುತ್ತಿದ್ದಾಗ ಹಳ್ಳಿಯಲ್ಲಿ ಅಜ್ಜಿಯಂದಿರು ಮಲದ್ವಾರದಲ್ಲಿ ಒಂದು ಸೋಪಿನ ತುಣುಕನ್ನೋ ಅಥವಾ ಹುಣಿಸೆ ಬೋಟನ್ನೋ ಇಟ್ಟು ಕೆಲಸ ಪೂರೈಸುತ್ತಿದ್ದರಲ್ಲ, ಅದೇ ಇದು. ಹಿರಿಯರಿಗಾದರೆ ಒಂದು ಚಮಚೆ ಹರಳೆಣ್ಣೆಯಿಂದಲೂ ಕೆಲಸ ಬಗೆಹರಿಯುವುದುಂಟು.

ಅವರಿವರನ್ನು ಆಡಿಕೊಳ್ಳೋದೇನು ನನ್ನ ಕಥೆಯೇನು ಬೇರೆಯೇ? ನಾನಾದರೆ ಬೆಳಿಗ್ಗೆ ಎದ್ದವನೇ ಹಂಡೆಗಟ್ಟಲೆ ನೀರು ಕುಡಿಯಬೇಕು. ಎರಡು ತಂಬಿಗೆಯಷ್ಟು ನೀರು ಒಳಸೇರಿ ನಡೆದಾಡಿದಂತೆಲ್ಲ ಅವು ಒಳಗೆ ಟುಳುಕ್ ಟುಳುಕ್ ಅಂತ ಕುಲುಕಾಡುವ ಶಬ್ದ ಕೇಳಿಸಿದಾಗ ಗುಳುಗುಳು ಗುಳುಗುಳು ಅಂತ ದೊಡ್ಡ ಕರುಳಿನಲ್ಲಿ ಸಣ್ಣಮಟ್ಟದ ಸಂಚಲನ ಶುರುವಾಗುತ್ತದೆ. ನನ್ನ ಹೆಂಡತಿಗೆ ಇದನ್ನು ಆಯುರ್ವೇದದಲ್ಲಿ ಹೇಳಿರುವ ಉಷಃಪಾನದ ಪ್ರಾಕ್ಟೀಸು ಎಂದೇ ಬೂಸಿ ಬಿಟ್ಟು ತುಂಬಾ ದಿವಸಗಳವರೆಗೆ ಹವಾ ಮೆಂಟೇನ್ ಮಾಡಿದ್ದೆ.

ನಾನು ಚಹಾ, ಕಾಫಿ ಹಾಗೂ ತಂಪುಪಾನೀಯ ಸೇವಿಸುವುದಿಲ್ಲವೆಂದು ಗೊತ್ತಿದ್ದ ಆಕೆ ಇದ್ದರೂ ಇರಬಹುದೆಂದುಕೊಂಡಿದ್ದಳು. ನಾನು ‘ಚಾ, ಕಾಫಿ ಏನೂ ಕುಡಿಯಲ್ಲ’ ಅಂತ ಎದೆಯುಬ್ಬಿಸಿ ಹೇಳಿಕೊಳ್ಳುವ ಪ್ರಸಂಗ ಬಂದಾಗಲೆಲ್ಲ ಹಿರಿಯ ಶಾಂತಿನಿಕೇತನ ಕಲಾವಿದರಾದ ಬೆಟ್ಟದೂರು ಶಂಕರಗೌಡರು ತಕ್ಷಣ ಮಧ್ಯಪ್ರವೇಶಿಸಿ ‘ಆದ್ರೆ ಇವರಿಗೆ ಮುಂಜಾನೆ ಎದ್ದೇಳಣ ಬಾಟ್ಲಿ ಬಾಟ್ಲಿ ಕುಡ್ಯಾಕ ಬೇಕು’ ಅಂದು ಸ್ವಲ್ಪ ತಡೆದು ನಂತರ ‘ನೀರು’ ಅಂದು ಪನ್ ಮಾಡುತ್ತಿದ್ದರು. ಎಂಬತ್ತನೇ ವಯಸ್ಸಿನಲ್ಲೂ ಯುವಕರು ನಾಚುವಂಥ ಆರೋಗ್ಯ ಹೊಂದಿದ್ದ ಮತ್ತು ಸ್ವತಃ ದೊಡ್ಡ ಆಯುರ್ವೇದ ಪಂಡಿತರಾಗಿದ್ದ ಅವರತ್ತಲೇ ಬೊಟ್ಟು ಮಾಡಿ ‘ಅದು ಇವರೇ ಹೇಳಿಕೊಟ್ಟಿರೋ ವಾಟರ್ ಥೆರಪಿ! ಅದೇ ಅವರ ಆರೋಗ್ಯದ ಗುಟ್ಟು’ ಅಂತ ತಿರುಗುಬಾಣ ಬಿಡ್ತಿದ್ದೆ.

ನಾನು ಮೊದಲ ಸಲ ಮಲಬದ್ಧತೆ ಎಂಬ ಪದ ಕೇಳಿದಾಗ ಬದ್ಧತೆ ಎಂಬುದು ಧನಾತ್ಮಕ ಅರ್ಥ ನೀಡುವ ಪದವಾದ್ದರಿಂದ ಇದೂ ಕೂಡ ಹಾಗೆಯೇ ಒಳ್ಳೆಯ ಅರ್ಥ ಧ್ವನಿಸುವ ಶಬ್ದವಾಗಿರಬಹುದು ಎಂದು ಭಾವಿಸಿಕೊಂಡಿದ್ದೆ. ಈ ಭಾವನೆ ನನ್ನೊಳಗೆ ತುಂಬಾ ದಿನಗಳವರೆಗೆ ಹಾಗೇ ಉಳಿದುಬಿಟ್ಟಿತ್ತು. ಮಲಬದ್ಧತೆಯಿರುವವರಿಗೆ ಎಂದಾದರೊಮ್ಮೆ ಸರಾಗ ವಿಸರ್ಜನೆಯಾಗುವುದೆಂದೂ, ಅಂದು ಅವರಿಗೆ ಸ್ವರ್ಗಸುಖವನ್ನನುಭವಿಸಿದಷ್ಟು ಆನಂದ ಉಂಟಾಗುವುದೆಂದು ಪಂಡಿತ ಶಿವಕುಮಾರ ಸ್ವಾಮೀಜಿ ಬರೆದ ‘ಆರೋಗ್ಯ ದರ್ಪಣ’ದಲ್ಲಿನ ವಿವರಣೆ ಓದಿದ ನಂತರವಷ್ಟೇ ನನಗೆ ಜ್ಞಾನೋದಯವಾಯಿತು.

ಚಹಾ, ಸಿಗರೇಟು ಬಿಟ್ಟು ನಿಯಮಿತವಾದ ಊಟ ಮತ್ತು ನಿದ್ದೆಯ ದಿನಚರಿ ರೂಢಿಸಿಕೊಂಡು ಹೊಸ ಬೆಳಕು ಕಾಣಲು ಆ ಕೃತಿ ನನಗೆ ದಾರಿ ಮಾಡಿಕೊಟ್ಟಿತು. ಅದೇ ಕೃತಿಯಲ್ಲಿಯೇ ‘ಮಲ–ಮೂತ್ರಗಳ ವೇಗ ತಡೆಯುವುದು ಹೆಡೆಯನ್ನೆತ್ತಿಕೊಂಡು ಓಡುತ್ತಿರುವ ಸರ್ಪದ ವೇಗ ತಡೆಯುವುದರಿಂದ ಯಾವ ಪರಿಣಾಮವುಂಟಾಗುವುದೋ ಅದಕ್ಕಿಂತಲೂ ಹೆಚ್ಚಾದ ಭಯಂಕರ ಪರಿಸ್ಥಿತಿ ಉಂಟು ಮಾಡುವುದಾಗಿದೆ’ ಎಂದು ಬರೆಯಲಾಗಿದೆ.

ಮುಂದುವರೆದು ‘ನಮ್ಮೀ ಭಾರತ ದೇಶವಾಸಿಗಳಲ್ಲಿ ನೂರಕ್ಕೆ ತೊಂಬತ್ತು ಜನ ಆಲಸ್ಯದಿಂದಲೋ, ಇತರೆ ಕಾರ್ಯಗಳ ಗದ್ದಲದಲ್ಲಿ ತೊಡಗುವುದರಿಂದಲೋ, ನಾಚಿಕೆಯಿಂದಲೋ, ಉಚಿತ ಸ್ಥಾನದ ಅಭಾವದಿಂದಲೋ ಸ್ವಾಭಾವಿಕವಾಗಿ ತೋರಿಬರುವ ಮಲ–ಮೂತ್ರಾದಿಗಳ ವೇಗವನ್ನು ತಡೆಯುತ್ತ, ಈ ವೇಗಗಳ ತಡೆಯಿಂದ ಉದಯಿಸುವ ಸಕಲ ರೋಗಗಳ ಜನ್ಮಸ್ಥಾನವಾಗಿರುವ ಮಲಬದ್ಧತೆಯೆಂಬ ಮಹಾವ್ಯಾಧಿಗೊಳಗಾಗಿ ನರಳುತ್ತಿರುವುದನ್ನು ಕಾಣುವುದಾಗಿದೆ’ ಎಂದೂ ಬರೆಯಲಾಗಿದೆ. ಅಕಾಲ ಭೋಜನ, ವಿರುದ್ಧ ಆಹಾರ ಸೇವನೆ, ಅಪರಿಪಕ್ವ ಆಹಾರ, ಜಿಹ್ವಾಚಾಪಲ್ಯಗಳು ಇದಕ್ಕೆ ಕಾರಣವೆಂದು ತಿಳಿಸಲಾಗಿದೆ.

ಶೌಚಕ್ಕೆ ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ದೊಡ್ಡಿಗೆ ಹೋಗೋದು, ಹೊರಕಡೆಗೆ ಹೋಗೋದು, ಕೆರೆ ಕಡೆ ಹೋಗೋದು, ಬೈಲ ಕಡೀಗೆ ಹೋಗೋದು, ತೆಂತೆಂಡಿಗೆ ಹೋಗೋದು, ನೀರು ಮುಟ್ಟಿ ಬರೋದು ಇತ್ಯಾದಿ ಇತ್ಯಾದಿ. ಅವು ಅಲ್ಲಲ್ಲಿಯ ಸಂಸ್ಕೃತಿಯಿಂದ ಪ್ರಭಾವಗೊಂಡು ರೂಪು ತಳೆದ ಪದಗಳು ಎಂಬ ಸಂಗತಿ ನನಗೆ ನಂತರ ತಿಳಿಯಿತು.

ಕುಡಿಯೋದಕ್ಕೇ ನೀರಿಲ್ಲದಿರುವ ಬಯಲುಸೀಮೆಯಲ್ಲಿ ಬೈಲ ಕಡೆ ಹೋಗುವ, ನೀರು ಮುಟ್ಟಿ ಬರುವ, ತೆಂತೆಂಡಿಗೆ ಹೋಗುವ (ತಂಬಿಗಿ ತಗೊಂಡು ಹೋಗುವ ಎಂಬುದರ ಅಪಭ್ರಂಶ ರೂಪವಿದು) ಎಂಬ ಪದಪುಂಜಗಳು ಸೃಷ್ಟಿಯಾದರೆ, ಕೆರೆ– ಕುಂಟೆಗಳು ದಂಡಿಯಾಗಿರುವ ಹಳೆ ಮೈಸೂರು ಪ್ರಾಂತ್ಯದಲ್ಲಿ ಕೆರೆ ಕಡೆ ಹೋಗುವ ಪದಪುಂಜ ಸೃಷ್ಟಿಯಾಗಿರಬಹುದು. ಅಲ್ಲಿನವರು ಎದ್ದವರೇ ಬರಿಗೈ ಬೀಸುತ್ತ ಕೆರೆ ಕಡೆ ಹೊರಟುಬಿಡುವರು. ಒಮ್ಮೆ ನಾನು ಮತ್ತು ಗುಲ್ಬರ್ಗದ ಸ್ನೇಹಿತ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕಿನ ಬೂಕಿನಕೆರೆಗೆ ಹೋಗಿದ್ದಾಗ ಬೆಳಿಗ್ಗೆ ನಮ್ಮನ್ನೆಬ್ಬಿಸಿಕೊಂಡು ಅತಿಥೇಯರು ಕೆರೆ ಕಡೆ ಪ್ರಭಾತಫೇರಿ ಹೊರಡಿಸಿಕೊಂಡು ನಡೆದರು.

ತಂಬಿಗಿ ಕಲ್ಚರ್‌ನವರಾದ ನಾವು ಸಹಜವಾಗಿ ತಂಬಿಗಿ ಕೇಳಿದೆವು. ‘ಅಲ್ರೀ ಏನು ಗಲೀಜು ಜನಾರೀ ನೀವು ಒಂದೇ ತಂಬಿಗಿ ಹೆಂಗ್ರೀ ಸಾಲುತ್ತೆ’ ಅಂತ ನಮ್ಮನ್ನು ಆಡಿಕೊಂಡು ಬಿದ್ದೂ ಬಿದ್ದೂ ನಕ್ಕರು. ‘ಎಲ್ಲರೂ ಹೀಗೆ ಜಲಮೂಲಗಳಿಗೇ ತಮ್ಮ ತಳಬಾಗಿನ ಅರ್ಪಿಸಿ ಅಷ್ಟೂ ನೀರನ್ನು ಮಲಿನಗೊಳಿಸುವ ಬದಲು ಅವರವರ ಪಾಲಿನ ಒಂದು ತಂಬಿಗೆಯಲ್ಲೇ ಮಟ್ಟಸ ಮಾಡಿಕೊಂಡರೆ ಆ ಜಲಾಗಾರಗಳ ಆರೋಗ್ಯವಾದರೂ ಪಸಂದಾಗಿ ಉಳಿಯುವುದಿಲ್ಲವೆ?’ ಅಂತ ನಾವು ವಾದಿಸಿದೆವು. ಬರಿಗೈಯಲ್ಲಿ ಎದುರು ಬರುತ್ತಿರುವವರಲ್ಲಿ ಯಾರು ವಾಕಿಂಗ್ ಹೋಗಿ ವಾಪಸ್ ಬರುತ್ತಿರುವವರು, ಯಾರು ಅನ್‌ಲೋಡಿಂಗ್ ಮುಗಿಸಿ ಬರುತ್ತಿರುವವರು ಎಂದು ತಿಳಿಯದೆ ಗಲಿಬಿಲಿಗೊಳಗಾಗಿ ಪರಿಚಯಿಸಿದವರ ಕೈ ಕುಲುಕುವುದೋ ಬೇಡವೋ ತಿಳಿಯದೆ ಕುಲುಕುಲು ನಗತೊಡಗಿದವು.

‘ಕಾಮಾತುರಾಣಾಂ ನ ಭಯಂ ನ ಲಜ್ಜಾ’ ಅನ್ನುತ್ತೆ ಒಂದು ಶ್ಲೋಕ. ‘ಶೌಚಾತುರಾಣಾಂ...‘ ಸ್ಥಿತಿಗೂ ಇದನ್ನು ಅನಾಯಾಸವಾಗಿ ಅನ್ವಯಿಸಬಹುದು. ‘ಸಾಲಗಾರ ನಿಂತ್ರೂ ಹೇಲಗಾರ ನಿಲ್ಲಲ್ಲ’ ಅಂತ ನಮ್ಮ ಕಡೆ ಒಂದು ಗಾದೆ ಮಾತಿದೆ. ‘ಇಪ್ಪತ್ತಕ್ಕೆ ಹಿರೇತನ ಬರಬಾರದು; ಎಪ್ಪತ್ತಕ್ಕ ಹೇಲಾಟ ಹತ್ತಬಾರದು’ ಅಂತಲೂ ಒಂದಿದೆ. ಎಪ್ಪತ್ತಕ್ಕೆ ಹೇಲಾಟ ಹತ್ತಬಾರದು ಅನ್ನುವುದು ವಯಸ್ಸಾದವರಿಗೆ ವಿಸರ್ಜನೆಯ ಮೇಲೆ ನಿಯಂತ್ರಣವಿರಲ್ಲ ಅಂತಲೂ; ವಿಸರ್ಜನೆ ಒಂದು ಬಗೆಯ ಆಟ ಅಂತಲೂ ಸೂಚಿಸ್ತಾ ಇದೆ. ಭೇದಿ ಹತ್ತುವಿಕೆ ಎಂಬ ಆರೋಗ್ಯದ ಏರುಪೇರನ್ನು ಆಟದೊಂದಿಗೆ ತಳುಕು ಹಾಕಿರುವ ಬಗೆಯೇ ಕುತೂಹಲಕಾರಿಯಾಗಿದೆ. ಅಂದರೆ ಕನಿಷ್ಠ ಪಕ್ಷ ಈ ಗಾದೆ ಮಾತು ಹುಟ್ಟುವ ಕಾಲಘಟ್ಟದಲ್ಲಿಯಾದರೂ ವಿಸರ್ಜನೆ ಒಂದು ಆಟದಷ್ಟು ಸಂತಸಕಾರಿಯಾದ ಅನುಭವವಾಗಿತ್ತು ಎಂದು ಊಹಿಸಲು ಅವಕಾಶವಿದೆ.

ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’ ನಾಟಕದಲ್ಲಿರಬೇಕು ಒಂದು ಸ್ತ್ರೀಪಾತ್ರ ‘ಹಡಿಯೂದು ಅಂದ್ರೇನವ, ಹೂಸು ಬಿಟ್ಟಷ್ಟು ಹಗೂರ’ ಅಂತ ಮಾತಾಡ್ತದೆ. ಆದರೆ, ಇವತ್ತು ಆ ಹಗೂರ ಕ್ರಿಯೆಗೇ ಹೆದರಿದ ಆಧುನಿಕ ಮಹಿಳೆಯರು ಇಷ್ಟಪಟ್ಟು ಸಿಸೇರಿಯನ್‌ಗೆ ಮೊರೆಹೋಗುತ್ತಿದ್ದಾರೆಂಬ ಸಂಗತಿಯನ್ನು ದೀಪ್ತಿ ಭದ್ರಾವತಿ ಅವರ ‘ಸ್ಫೋಟ’ ಕಥೆ ಹೇಳುತ್ತದೆ. ಅದರಂತೆಯೇ ಇವತ್ತು ಒಂದು ಕಾಲಕ್ಕೆ ಆಟವೆನ್ನಿಸಿಕೊಂಡಿದ್ದ ಶೌಚವು ಇಂದು ಗೋಳಾಟವಾಗಿದೆ. ಕಾಲವಿಪರ್ಯಯ ಅಂದರೆ ಇದೇ ಇರಬೇಕು.

‘ನನ್ನ ಹೆಸರು ಕೇಳಿದ್ರೆ ಅವನು ಹೇತಗಂತಾನೆ’ ಅನ್ನುವ, ‘ಅವನಿಗೆ ಹೇತಗಳಂಗ ಹೊಡದ್ರು’ ಅನ್ನುವ ಮಾತುಗಳು ಹಳ್ಳಿಗಳಲ್ಲಿ ಮಾಮೂಲು. ಅಂದರೆ ಭಯದ ತುರೀಯಾವಸ್ಥೆಯೇ ವಿಸರ್ಜನೆ ಎನ್ನುವುದನ್ನು ಇವು ಸೂಚಿಸುತ್ತಿವೆ ಅಂತಾಯ್ತು. ಕೆಲವರಿಗೆ ಟೆನ್‌ಷನ್ ಜಾಸ್ತಿಯಾದ್ರೆ ವಿಸರ್ಜನೆಗೆ ಅವಸರವಾಗಿಬಿಡುವುದುಂಟು. ಸಂತಸಕಾರಿ, ಸಂಕಟಕಾರಿ, ಭಯಸೂಚಕ ಮತ್ತು ಉದ್ವೇಗ ನಿವಾರಕವಾಗಿರುವ ಇದು ಯೂರಿನ್, ಕಫ, ರಕ್ತಗಳಂತೆ ರೋಗನೈದಾನಿಕ ಪರೀಕ್ಷೆಯಲ್ಲಿಯೂ ಪ್ರಮುಖ ಪಾತ್ರ ವಹಿಸುವುದನ್ನು ನಾವು ಕಾಣಬಹುದು.

ವೈದ್ಯರು ಪೇಶಂಟು ಹೆಂಗಸಾಗಿದ್ದರೆ ಮುಟ್ಟು ಸರಿಯಾಗಿ ಆಗುತ್ತದೆಯೋ ಇಲ್ಲವೋ ಎಂದೂ, ಗಂಡಸಾಗಿದ್ದರೆ ಸಂಡಾಸ್ ಕರೆಕ್ಟಾಗಿ ಆಗುತ್ತೋ ಇಲ್ಲೋ ಎಂದೂ ಕೇಳುತ್ತಾರೆ. ಕೆಲವು ಡಾಕ್ಟರುಗಳು ಅತಿಸಾರದ ಪೇಶಂಟುಗಳಿಗೆ ಅದರ ಬಣ್ಣ, ವಾಸನೆ, ಸ್ವರೂಪ ಇತ್ಯಾದಿ ಬಗ್ಗೆ ಕೇಳಿ ಮುಜುಗರ ಮೂಡಿಸುವ ಸಂದರ್ಭಗಳೂ ಇಲ್ಲದಿಲ್ಲ. ಹೊಳೆ ದಂಡೆಯಲ್ಲಿ ಬೆಳೆಯುವ ಕರಬೂಜ ಹಣ್ಣಿನ ತಿರುಳು ಮರಳುಮರಳಾಗುವಂತೆ ಮಾಡಲು ಮಾನವ ವಿಸರ್ಜನೆಯನ್ನು ಪ್ರಮುಖ ಗೊಬ್ಬರವಾಗಿ ಬಳಸುತ್ತಾರೆಂದು ಎಲ್ಲೋ ಓದಿದ ಮೇಲಾಯ್ತು ಕರಬೂಜ ಎಂದರೇನೇ ಬೇಡ ಎನ್ನುವಂತಾದುದು ನೆನಪಾದರೆ ಈಗಲೂ ನಗು ಬರುತ್ತದೆ.

ಪಶು–ಪಕ್ಷಿಗಳ ಕೆಲವು ವಿಸರ್ಜನಾ ಹವ್ಯಾಸಗಳಂತೂ ವಿಚಿವಿಚಿತ್ರವಾಗಿವೆ. ಬೆಕ್ಕಿನ ವಿಸರ್ಜನೆ ಗಬ್ಬಾನುಗಬ್ಬು ವಾಸನೆಯಿದ್ದುದಕ್ಕಾಗೇ ಇರಬೇಕು ಅದು ವಿಸರ್ಜಿಸಿದ ತಕ್ಷಣ ನೆಲದಲ್ಲಿ ತಗ್ಗು ತೋಡಿ ಮುಚ್ಚಿಬಿಡುತ್ತೆ. ಆದರೆ, ಅದೇ ಬೆಕ್ಕಿನ ಜಾತಿಗೆ ಸೇರಿದ ಪುನುಗುಬೆಕ್ಕಿನ ಹಿಕ್ಕೆ ಸುಗಂಧ ದ್ರವ್ಯಕ್ಕೆ ಮೂಲವಸ್ತುವನ್ನು ಒದಗಿಸುತ್ತದೆ. ಬೆಕ್ಕು ಮತ್ತು ವಿಸರ್ಜನೆಗೆ ಸಂಬಂಧಿಸಿದಂತೆ ಗೆಳೆಯ ರಘುನಾಥ ಚ.ಹ. ಹೇಳಿದ ಮತ್ತೊಂದು ಇಂಟರೆಸ್ಟಿಂಗ್ ಸಂಗತಿಯನ್ನಿಲ್ಲಿ ನಿಮಗೆ ನಾನು ಹೇಳಲೇಬೇಕು.

ಇಂಡೋನೇಷ್ಯಾದ ಬಾಲಿಯಲ್ಲಿ ಲುವೊಕ್ ಕಾಫಿ ಅಂತೊಂದು ಪರಮ ದುಬಾರಿ ಕಾಫಿ ಸಿಗುತ್ತಂತೆ. ಲುವೊಕ್ ಎಂಬುದು ನಮ್ಮ ಬೆಕ್ಕಿನ ಜಾತಿಗೆ ಸೇರಿದ ಒಂದು ಪ್ರಾಣಿಯಾಗಿದ್ದು ಅದಕ್ಕೆ ಕಾಫಿ ಹಣ್ಣುಗಳನ್ನು ತಿನ್ನಿಸಲಾಗುತ್ತದಂತೆ. ಮುಂಜಾನೆ ಅವುಗಳ ಲದ್ದಿಯಿಂದ ಕಾಫಿ ಬೀಜಗಳನ್ನು ಸಂಗ್ರಹಿಸಿ, ಪುಡಿ ಮಾಡಿ ಅದರಿಂದ ಕಾಫಿ ತಯಾರಿಸಿ ಮಾರುತ್ತಾರಂತೆ. ಲುವೊಕ್‌ಗಳ ಕರುಳಸಂಬಂಧದಿಂದಾಗಿ ಆ ಕಾಫಿಗೆ ವಿಶೇಷ ರುಚಿ ಬರುತ್ತದೆಂದು ಅಲ್ಲಿನವರ ಬಲವಾದ ನಂಬಿಕೆಯಂತೆ! ಬೆಕ್ಕಿಗೆ ತನ್ನ ವಿಸರ್ಜನೆಗಿರುವ ಈ ರೀತಿಯ ಡಿಮ್ಯಾಂಡ್ ಗೊತ್ತಾಗಿಯೇ ಅದು ಅದನ್ನು ತಕ್ಷಣ ತಗ್ಗು ತೋಡಿ ಮುಚ್ಚಿಬಿಡುತ್ತಿರಬಹುದೆಂದು ನನಗೆ ಅನುಮಾನ! ಆಡು, ಕುರಿಗಳು ಎಲೆಯನ್ನು ತಿಂದು ಫಳ ಫಳ ಅಂತ ಹಿಕ್ಕೆಯನ್ನುದುರಿಸಿದರೆ, ದನಗಳು ಬಹೂಪಯೋಗಿ ಸಗಣಿಯನ್ನು ಥಪ್ ಥಪ್ ಅಂತ ತೊಪ್ಪೆ ಹಾಕುತ್ತವೆ.

ಪುರಂದರದಾಸರು ‘ನಿಂದಕರಿರಬೇಕು ಹಂದಿಗಳಿದ್ದಂತೆ. ಅಂದಂದೇ ಮಾಡಿದ ಪಾಪವೆಂಬ ಮಲವ ತಿಂದು ಹೋಗಲು ನಿಂದಕರಿರಬೇಕು’ ಎಂದು ಹಂದಿಗೂ ಅಧ್ಯಾತ್ಮಕ್ಕೂ ಲಿಂಕ್ ಮಾಡಿದ್ದಾರೆ. ಮನುಷ್ಯರ ಮಲ ತಿನ್ನುವ ಹಂದಿಯ ಮಲವು ಹೊಲಕ್ಕೆ ಶ್ರೇಷ್ಠ ಗೊಬ್ಬರವಾಗಿದ್ದು ಅತೀವ ಬೇಡಿಕೆಗೆ ಪಾತ್ರವಾಗಿದೆ. ಪ್ರತ್ಯೇಕ ವಿಸರ್ಜನಾಂಗ ಹೊಂದಿರದ ಏಕೈಕ ಸಸ್ತನಿಯಾದ ಬಾವಲಿಯು ಆಹಾರ ಮತ್ತು ವಿಸರ್ಜನೆ ಎರಡಕ್ಕೂ ಬಾಯಿಯನ್ನೇ ಬಳಸುತ್ತದೆ ಎಂದು ನಮ್ಮ ವಿಜ್ಞಾನ ಮೇಷ್ಟರು ಹೇಳಿದ್ದು ಇಂದಿಗೂ ಬಾವಲಿಗಳನ್ನು ನೋಡಿದಾಗಲೆಲ್ಲ ನೆನಪಾಗಿ ಆಶ್ಚರ್ಯವುಂಟು ಮಾಡುತ್ತದೆ.

‘ತೋಲ್ ಕೆ ಖಾನಾ; ಕೀಲ್ ಕೆ ಹಗ್‌ನಾ’ ಅಂತ ಹಿಂದಿಯಲ್ಲಿಯೂ ಒಂದು ಮಾತಿದೆ. ‘ತೂಕ ಮಾಡಿ ಉಣ್ಣು; ತಿಣುಕ್ಯಾಡಿ ವಿಸರ್ಜಿಸು’ ಅಂತ ಅದರ ಅರ್ಥ. ನಮ್ಮ ಇಷ್ಟದ ಆಹಾರ ಉಣ್ಣುವುದಕ್ಕೆ ಮಾತ್ರ ನಮಗೆ ಎರಡು ಬಾಯಿ. ವಿಸರ್ಜನೆಗಾದರೋ ಪುರುಸೊತ್ತೇ ಇಲ್ಲ. ಖಾಲಿ ಮಾಡದೆಯೂ ಮತ್ತೆ ತುಂಬಲು ಬರುವ ಪಾತ್ರೆ ಅಂತ ಒಂದಿದ್ದರೆ ಅದು ಮನುಷ್ಯನ ಹೊಟ್ಟೆಯೇ ಇರಬಹುದು. ಆದರೆ, ಹಾಗೆ ತುಂಬದಿರುವುದೇ ನಿಸರ್ಗ ನಿಯಮ. ಅತಿ ಆಸೆಯೇ ಸಹಜ ಮನೋಧರ್ಮವಾಗಿರುವ ಈ ವಿಚಿತ್ರ ಕಾಲದಲ್ಲಿ ಬಟ್ಟೆ, ಚಪ್ಪಲಿ, ಹಣ, ಸಾಮಾನು ಎಷ್ಟು ಸಂಗ್ರಹಿಸಿದರೂ ಸಮಾಧಾನವಿಲ್ಲ. ಸಂತೃಪ್ತಿಯಿಲ್ಲ. ಆದರೆ, ಊಟಕ್ಕೂ ಬಂತಲ್ಲ ಈ ಮಾತು! ಅದೇ ದುರಂತ. ಈ ಪಾತ್ರೆ ತುಂಬಲು ಇದನ್ನು ಆಗಾಗ ಖಾಲಿ ಮಾಡಬೇಕು. ತಿಂಗಳಿಗೋ ಆರು ತಿಂಗಳಿಗೋ ಸ್ವಚ್ಛ ತೊಳೆಯಬೇಕು. ಇದನ್ನೇ ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆ ಅನ್ನೋದು. ಯುನಾನಿಯಲ್ಲಿ ಜುಲಾಬ್ ಅನ್ನೋದು.

ಒಮ್ಮೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಗೆಳೆಯ ರಾಮಕೃಷ್ಣ ಕಟ್ಕಾವಲಿ ಒಂದು ಆಯುರ್ವೇದದ ಅಂಗಡಿಗೆ ಕರೆದೊಯ್ದು ಅಲ್ಲಿರುವ ಇಚ್ಛಾ ಭೇದಿ ಎಂಬ ಮಾತ್ರೆಯ ಕಡೆ ನನ್ನ ಗಮನ ಸೆಳೆದ. ಇಚ್ಛಾಮರಣ ಇದ್ದ ಹಾಗೆ ಈ ಇಚ್ಛಾಭೇದಿಯು ಬಯಸಿದಾಗ ಭೇದಿ ಬರುವಂತೆ ಮಾಡುವ ಗುಣವಿಶೇಷ ಹೊಂದಿರಬೇಕೆಂದು ಬಗೆದ ನಾನು ಆನಂದತುಂದಿಲನಾದೆ.

ನನ್ನಂಥ ಹಂಡೆ ನೀರಿನ ವಾಟರ್ ಥೆರಪಿ ಮಂದಿಗೆ ಮತ್ತು ವಿಸರ್ಜನೆ ಸುಸೂತ್ರವಾಗಲೆಂದು ಕುಡಿದ ನೀರು, ಗ್ಯಾಸ್ ಉತ್ಪತ್ತಿ ಮಾಡಿ ಮತ್ತೊಂದು ಬಗೆಯ ಸಮಸ್ಯೆಯಿಂದ ನರಳುವ ‘ವಾಯುದೇವರ ಪ್ರೇಮದ ಸುತ’ರಾದ ಗ್ಯಾಸ್ಟ್ರಿಕ್ ಪೇಶಂಟ್‌ಗಳಿಗೆ ಇದೊಂದು ವರದಾನವೇ ಸರಿ ಎಂದು ಅದರ ಬಗೆಗಿನ ನನ್ನ ಗ್ರಹಿಕೆಯನ್ನು ಅಂಗಡಿಯವರಿಗೆ ಹೇಳಿದೆ. ನನ್ನ ಆನಂದವನ್ನು ಅರೆಕ್ಷಣದಲ್ಲಿಯೇ ಮಕಾಡೆ ಮಲಗಿಸಿ ನಿಕಾಲಿ ಮಾಡಿಹಾಕಿದ ಅವರು ‘ಇದು ಬೇಕಾದಾಗ ಬರುವಂಗ ಮಾಡದಲ್ರೀ. ಬ್ಯಾಡಂದ್ರೂನೂ ನಿಂದರಲಾರದಂಗ ಬರಸೋದಿದು. ಲೆಟ್ರಿನ್ ರೂಮ್ ಖಾಲಿ ಇಟ್ಕಂಡೇ ಈ ಗುಳಿಗಿ ತಗಬೇಕು ನೀವು. ಒಳಗಿನ ಕಳ್ಳು ಕಿತ್ತಿ ಬರಂಗ ಕಿತ್ತತಾದಿದು’ ಅಂದರು. ‘ಅಮ್ಮೋ!’ ನಾನು ರಾಮಕೃಷ್ಣಗೆ ಹೇಳಿದೆ- ‘ಆರ‍್ಕೆ ಇದರ ಹೆಸ್ರು ಬದಲಿ ಮಾಡ್ಬೇಕೋ. ಇದು ಇಚ್ಛಾಭೇದಿ ಅಲ್ಲ ಸ್ವಚ್ಛಾಭೇದಿ’!

ಅಪ್ಪನ ಗೆಳೆಯ ಅತ್ತನೂರಿನ ಬಯಲಾಟದ ಮಾಸ್ತರ ರಾಮಣ್ಣ ಮಳ್ಳಿ ಪಕ್ಕಾ ಜನಪದ ಮನುಷ್ಯ. ನಿರಕ್ಷರಿಯಾದ ಆತ ರಾಮಾಯಣ, ಮಹಾಭಾರತ, ಪುರಾಣ, ಪುಣ್ಯಕಥೆಗಳ ವಿಷಯದಲ್ಲಿ ಮಹಾಪ್ರವೀಣ. ಪುಸ್ತಕದ ಹುಳು ಮಾತ್ರವಾಗಿದ್ದ ನನಗೆ ಆತ ಒಮ್ಮೆ ಹೀಗೇ ಸರ್‌ಪ್ರೈಸ್ ಟೆಸ್ಟ್ ತಗೊಂಡ. ‘ಈ ಭೂಮಿ ಮ್ಯಾಲೆ ನಾನಂಬ ಗಣಮಗ ಹೊತಕಳಕಾಗಲಾರದಂಥ ಒಜ್ಜೆ ಯಾವುದಪ?’ ಅಂದ. ನಾನು ಈ ಔಟ್ ಆಫ್ ಸಿಲಬಸ್ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿ ಪ್ಯಾಲಿ ಮುಖ ಮಾಡಿ ಸುಮ್ಮನೆ ನಿಂತುಕೊಂಡೆ. ಅಪ್ಪ ‘ಸಂಸಾರ!’ ಅಂದ. ಅದಕ್ಕೆ ರಾಮಣ್ಣ ‘ಇಸ್ಸಿನೋ ಮಾರಾಯ! ಇಸ್ಸಿಯಂಥ ಒಜ್ಜೆ ವಿಸ್ವದಾಗೇ ಇಲ್ಲ. ಅದನ್ನ ಹೊತಕಂಡೇ ಇರ‍್ತೀನಂಬ ಗಣಮಗ ಈ ಭೂಮಿ ಮ್ಯಾಲೇ ಹುಟ್ಟಿಲ್ಲ’ ಅಂದ. ಆಹಾ ಎಂಥಾ ಉಪಮೆ! ನಿಜವಾಗಿಯೂ ಅದನ್ನು ಇಳಸಾತನಕ ನೆಮ್ಮದಿಯಿಲ್ಲ. ಇಳಿಸಿದ ಮ್ಯಾಲಿನಷ್ಟು ನೆಮ್ಮದಿ ಮತ್ತೊಂದಿಲ್ಲ. ಆ ಇಳಿಸಿದ ನಂತರದ ನಿರಾಳ ಸುಖ ಅನುಭವಿಸುವ ಸಲುವಾಗಿಯಾದರೂ ಸ್ವಲ್ಪ ಹೊತ್ತು ಹೆಚ್ಚಿಗೆ ಹೊತ್ತುಕೊಂಡಿರುವ ರಿಸ್ಕ್ ತಗೊಂಡು ನೋಡಬೇಕು! ಮಧ್ಯರಾತ್ರಿ ಒತ್ತಿಕೊಂಡು ಬಂದ ಶೌಚವನ್ನು ಪೂರೈಸಿದ ನಂತರ ಬರುವ ನಿದ್ದೆಯು ಪಾಂಗಿತ ಮಿಲನದ ನಂತರದ ನಿದ್ದೆಯಂತೆಯೇ ಸಂಪನ್ನವಾಗಿ ಬರುವುದನ್ನು ಇದಕ್ಕೆ ಸಮೀಕರಿಸಬಹುದೇನೋ!

ಆಯುರ್ವೇದವು ಮನುಷ್ಯ ಪ್ರಾಣಿಗೆ ದಿನಕ್ಕೆ ಎರಡು ಮಲ, ಆರು ಮೂತ್ರಗಳೆಂದು ಹೇಳಿದೆ. ಭಾರತ ಮೂಲದ ಆಯುರ್ವೇದವು ಭಾರತೀಯರಿಗೆ ತಕ್ಕುದಾದ ಆಹಾರ ಮತ್ತು ವಿಸರ್ಜನಾ ಅಭ್ಯಾಸಗಳನ್ನು ಸರಿಯಾಗಿಯೇ ಗುರುತಿಸಿದೆ. ನಾರು ಪದಾರ್ಥಗಳು ಯಥೇಚ್ಛವಾಗಿರುವ (ಸೊಪ್ಪು, ಕಾಳು, ತರಕಾರಿ), ದ್ರವಾಹಾರಕ್ಕೆ ಹೆಚ್ಚಿನ ಪ್ರಾಧಾನ್ಯವಿರುವ(ಸಾಂಬಾರು, ರಸಂ, ಮಜ್ಜಿಗೆ, ಬೇಳೆ), ವೈವಿಧ್ಯಮಯ ಆಹಾರ ಪದ್ಧತಿಯ ನಮಗೆ ಎರಡು ಮಲವೆಂಬುದು ಸಹಜ ವಿದ್ಯಮಾನವೇ ಆಗಿತ್ತು.

ನಮ್ಮದಲ್ಲದ ಏಕರೂಪ ಆಹಾರ ಪದ್ಧತಿಗೆ ನಾವು ಜೋತುಬಿದ್ದ ಪರಿಣಾಮ ಇಂದು ನಮಗೆ ಒಂದು ಸಲವೂ ಸರಿಯಾಗಿ ಆಗುತ್ತಿಲ್ಲ. ಅದೇ ಇವತ್ತಿನ ಕಾಲದ ಜನರ ಪ್ರಮಖ ಆರೋಗ್ಯ ಸಮಸ್ಯೆಯಾಗಿದೆ. ವಿಸರ್ಜನಾ ಹವ್ಯಾಸಕ್ಕೂ ಆಹ್ವಾನದ ಹವ್ಯಾಸಕ್ಕೂ ನಡುವೆ ಸಮತೋಲ ತಪ್ಪಿರುವುದೇ ಇದಕ್ಕೆಲ್ಲ ಮೂಲಕಾರಣ. ಶೌಚಾಲಯ ಮತ್ತು ಬಯಲು ಶೌಚಾಲಯಗಳ ಪದ್ಧತಿಯೂ ಅಲ್ಲಲ್ಲಿಯ ಆಹಾರ ಪದ್ಧತಿಯೊಂದಿಗೆ ತಳುಕು ಹಾಕಿಕೊಂಡಿದೆ ಎನಿಸುತ್ತೆ. ನಮ್ಮ ಆಹಾರ ಪದ್ಧತಿಯ ಕಾರಣಕ್ಕಾಗೇ ನಮ್ಮ ಶೌಚವು ನಿಮಿಷಗಳ ಲೆಕ್ಕದಲ್ಲಿ ನಡೆಯುವ ಒಂದು ಹ್ರಸ್ವಾವಧಿ ಕ್ರಿಯೆಯಾಗಿತ್ತು. ಭೂಮಿಯನ್ನು ಹೊತ್ತು ನಿಂತು ಇಳಿಸಲಾಗದೆ ತಿಣುಕುತ್ತಿರುವ ಅಟ್ಲಾಸ್ ದೇವತೆಯಂತೆ ನಮ್ಮ ಪೂರ್ವಿಕರು ತಮ್ಮ ನವರಂಧ್ರಗಳನ್ನೂ ಬಿಗಿಹಿಡಿದುಕೊಂಡು ಓಡುನಡಿಗೆಯಲ್ಲಿ ಧಾವಿಸುತ್ತಿದ್ದರು.

ಕಚ್ಚೆ ಕಳಚುತ್ತಿದ್ದರೋ ಇಲ್ಲವೋ, ತೂಬಿನ ಕದ ತೆರೆದ ಜಲಾಶಯದಂತೆ ಪ್ರವಾಹವು ಭೋರ್ಗರೆದು ಚಿಮ್ಮಿ, ತುಂಬಿ ನಿಂತಿದ್ದ ಹೊಟ್ಟೆಯು ಹೆರಿಗೆಯಾದ ಹೆಣ್ಣಿನ ಹೊಟ್ಟೆಯಂತೆ ಸಪೂರವಾಗಿ, ಬಿಗಿದುಕೊಂಡಿದ್ದ ಮುಖದ ನರಗಳು ಸಡಿಲಾಗಿ ತಂಬಿಗೆ ನೀರನ್ನು ಖಾಲಿ ಮಾಡಿ ಗೆಲುವಿನಿಂದ ಬರುತ್ತಿದ್ದರು. ಎಷ್ಟೋ ಮಕ್ಕಳು ತಮ್ಮ ಗಮ್ಯ ಸ್ಥಾನ ಹತ್ತಿರವಾದಷ್ಟೂ ದೂರವಾಗುತ್ತಿರುವಂತೆ ವೇದನೆಯನುಭವಿಸುತ್ತ ನಡುದಾರಿಯಲ್ಲೇ ಕದನವಿರಾಮ ಘೋಷಿಸಿ ಸಂಗಡಿಗರ ನಗೆಪಾಟಲಿಗೆ ಗುರಿಯಾಗುತ್ತಿದ್ದರು.

ಶಾಲೆಗಳಲ್ಲಿ ಕನಿಷ್ಠ ದಿನಕ್ಕೊಬ್ಬರಾದರೂ ಚೆಡ್ಡಿಯಲ್ಲೇ ಡೈನಾಮೈಟ್ ಸಿಡಿಸಿಕೊಳ್ಳುತ್ತಿದ್ದರು. ಹಳ್ಳಿಮನೆಗಳು ಜಾತ್ರೆಗೆ ಮೊದಲು ತಮ್ಮ ಮಾಳಿಗೆಯ ಕುಂಬಿಗುಂಟ ಇಳಿಬಿಡಿಸಿಕೊಂಡಿರುತ್ತಿದ್ದ ಸುಣ್ಣ ಮತ್ತು ಜಾಜಿನ ಕೆಂಪು-ಬಿಳಿಪಟ್ಟಿಗಳ ಹಾಗೆ ಅವರ ಪುಕುಳಿಯ ವೃತ್ತಕೇಂದ್ರದಿಂದ ಪಾದವೆಂಬ ಪರಿಧಿಯವರೆಗೆ ಹಲನಮೂನೆಯ ತ್ರಿಜ್ಯಗಳನ್ನು ಇಳಿಬಿಟ್ಟುಕೊಂಡು, ರಣಾಂಗಣ ಮಧ್ಯದಲ್ಲಿ ಗಾಯಗೊಂಡು ನಿಂತಿರುವ ನಿರಾಯುಧ ಯೋಧನಂತೆ ಅಸಹಾಯಶೂರರಾಗಿ ಸುತ್ತಲಿನವರನ್ನು ಕಣ್ಣಲ್ಲೇ ಅಂಗಲಾಚುತ್ತಿದ್ದರು. ಇಂಥ ಸುಯೋಧನ ಪ್ರಸಂಗಗಳು ಕನಿಷ್ಠವೆಂದರೂ ದಿನಕ್ಕೊಂದು ಇದ್ದೇ ಇರುತ್ತಿದ್ದವು- ನಮ್ಮ ಬಾಲ್ಯಕಾಲದ ಸುವರ್ಣಯುಗದಲ್ಲಿ.

ಆಗೆಲ್ಲ ರಾಜಮಾತೆಗೆ ಬುಲಾವು ಹೋಗುತ್ತಿತ್ತು. ಮಾಡುತ್ತಿದ್ದ ಮನೆಕೆಲಸವನ್ನ ಅರ್ಧಕ್ಕೆ ಬಿಟ್ಟುಬಂದ ಸಿಟ್ಟಿನಲ್ಲಿ ಆಕೆ ಅವನನ್ನು ದರದರನೆ ರಟ್ಟೆ ಹಿಡಿದೆಳೆದುಕೊಂಡು ಹೋಗುತ್ತಿದ್ದರೆ ಹಾದಿಯುದ್ದಕ್ಕೂ ಅವನ ಪರಾಕ್ರಮವನ್ನು ಲೋಕಕ್ಕೇ ಲೀಕು ಮಾಡುವಂತೆ ನಾತಬಿಂದುಗಳು ಭೂಸ್ಪರ್ಶ ಮಾಡುತ್ತಿದ್ದವು. ರಜಾ ದಿನಗಳಲ್ಲಿ ಅಡವಿ ಅಲೆಯಲು ಹೋದಾಗ, ಬಾವಿಗಳಿಗೆ ಈಜಲು ಹೋದಾಗ ಮಾರ್ಗಮಧ್ಯೆ ವಿಸರ್ಜನಾ ಪ್ರಸಂಗಗಳು ಅನಿರೀಕ್ಷಿತವಾಗಿ ನಮ್ಮ ಮೇಲೆ ಬಂದೆರಗಿದಾಗ ನೀರಿಲ್ಲದ ಆ ಬಯಲಲ್ಲಿ ಆಪದ್ಬಾಂಧವರಂತೆ ನಮಗೊದಗಿ ಬರುತ್ತಿದ್ದುದೇ ಕಲ್ಲುಗಳು ಮತ್ತು ಎಲೆಗಳು! ಇಂಥ ವಾತಾವರಣದ ನಮಗೆ ಶೌಚಕ್ಕೆ ಅಂತ ಸೆಪರೇಟು ರೂಮಿನ ಅಗತ್ಯ ಕಂಡಿರದಿದ್ದುದು ಸಹಜವೇ ಆಗಿದೆ.

ಪಾಶ್ಚಾತ್ಯರ ಪರಿಸ್ಥಿತಿ ಹಾಗಲ್ಲ. ಮೈದಾ ಹಿಟ್ಟೇ ಕೇಂದ್ರವಾಗಿರುವ ಬ್ರೆಡ್ಡು, ಬಿಸ್ಕತ್ತು, ಕೇಕು, ಟೋಸ್ಟು, ಬರ್ಗರ್, ಪಿಜ್ಜಾ ಇತ್ಯಾದಿ ಇತ್ಯಾದಿಗಳಿಂದಾಗಿ ಅವರ ದೊಡ್ಡ ಕರುಳೊಳಗೆಲ್ಲ ಪೇಸ್ಟಿನಂತೆ ಒಂದು ಪದರ ಪೇರಿಕೊಂಡು, ಆ ಕೊಳವೆಯ ಒಳಗಾತ್ರ ಚಿಕ್ಕದಾಗಿ ವಿಪರೀತ ಒತ್ತಡವುಂಟಾಗುತ್ತಿರುತ್ತದೆ. ಇದು ಒಂದೆಡೆಯಾದರೆ, ಅದನ್ನು ತಳ್ಳಿಕೊಂಡೋ ಇಲ್ಲ ಕೈಹಿಡಿದೆಳೆದುಕೊಂಡೋ ಮುಂದಕ್ಕೆ ಸಾಗಿಸುವ ನಾರು ಪದಾರ್ಥಗಳ ಕೊರತೆ ಮತ್ತೊಂದು ಕಡೆ. ಹಾಗಾಗಿ, ಒಂದು ಸಲದ ವಿಸರ್ಜನೆಗೇ ಅವರು ಹರಸಾಹಸಪಡಬೇಕು. ಅದಕ್ಕಾಗಿ ಸಹನೆಯಿಂದ ಗಂಟೆಗಟ್ಟಲೆ ಕಾಯಬೇಕು. ದೀನರಾಗಿ ಮೊರೆಯಿಡಬೇಕು. ಹಾಗೆ ಗಂಟೆಗಟ್ಟಲೆ ಕೂರಲು ಅನುಕೂಲವಾಗಲೆಂದೇ ಆಸನರೀತಿ ವ್ಯವಸ್ಥೆಯನ್ನವರು ಕಂಡುಕೊಂಡಿದ್ದು ಮತ್ತು ಶೌಚಗೃಹಗಳು ಶಯನಗೃಹದಷ್ಟೇ ಸ್ವಚ್ಛವಾಗಿರಬೇಕೆಂದು ಬಯಸುವುದು.

ಅಲ್ಲೇ ಹಲವರು ಇಡೀ ಪೇಪರ್ ಓದುವುದು. ನಾರೇ ಇಲ್ಲದ, ದ್ರವಾಂಶವೇ ಇಲ್ಲದ ಆಹಾರದಿಂದಾಗಿಯೇ ಅವರಿಗೆ ಟಿಶ್ಶೂ ಪೇಪರ್ ಎಂಬ ಹೇಲರಬಿ ಮಾತ್ರವೆ ಒರೆಸಿ ಬಿಸಾಡಲು ಸಾಕಾಗುವುದು. ನಮ್ಮಲ್ಲಿ ಹಾಸಿಗೆ ಬಿಟ್ಟೇಳದ ಹಸುಗೂಸುಗಳು ಮತ್ತು ಹಾಸಿಗೆ ಹಿಡಿದ ಹಣ್ಣುಹಣ್ಣು ಮುದುಕರಿಗೆ ಮಾತ್ರವೇ ಹೇಲರಬಿ ಬಳಸುತ್ತಿದ್ದರು. ಕಾಲ ಬದಲಾಯ್ತು. ನಮ್ಮ ಶ್ರಮ ಸಂಸ್ಕೃತಿ ಹಿಂದೆ ಸರಿಯಿತು. ವಸ್ತುವಿನಿಮಯ ಪದ್ಧತಿ ಅಳಿದು ಎಲ್ಲವನ್ನೂ ದುಡ್ಡಿನಲ್ಲಿ ಅಳೆವ ಅರ್ಥಸಂಸ್ಕೃತಿಯ ಪರಿಣಾಮವಾಗಿ ದುಡ್ಡೇ ದೊಡ್ಡಪ್ಪನಾಯಿತು. ದುಡ್ಡು ಬಂದಂತೆಲ್ಲ ನಮ್ಮ ಜೀವನವನ್ನು ಆಧುನಿಕತೆಯ ಸೋಗಿನಲ್ಲಿ ಪಾಶ್ಚಾತ್ಯ ಜೀವನಶೈಲಿಯು ಆವರಿಸಿಕೊಳ್ಳತೊಡಗಿತು.

ನಮ್ಮ ಆಹಾರ ಪದ್ಧತಿ ಹಿನ್ನೆಲೆಗೆ ಸರಿದು ವಿಸರ್ಜನಾ ಪದ್ಧತಿ ಮೇಲೆ ನೇರ ಹೊಡೆತ ಬಿದ್ದಿತು. ಅರ್ಧನಿಮಿಷದ ಬಯಲಿನ ಕೆಲಸಕ್ಕೆ ಅರ್ಧಗಂಟೆ ಬೇಕಾಗಿ ಆಲಯದೊಳಗೆ ಶೌಚಾಲಯ ಬಂತು. ಬರಲಿಬಿಡು ಅಂದುಕೊಳ್ಳೋ ಹೊತ್ತಿಗೆ ಪ್ರತಿ ಮನೆಯಲ್ಲೂ ಈಗ ವೆಸ್ಟರ್ನ್ ಕಮೋಡೇ ಅನಿವಾರ್ಯವಾಗಿರುವ ಪರಿಸ್ಥಿತಿ ಬಂದೊದಗಿದೆ. ಅದಕ್ಕೆಲ್ಲ ಮಂಡಿನೋವು ಕಾರಣ ಏನು ಮಾಡೋಕಾಗುತ್ತೆ ಅಂದರು ಜನ. ಬದಲಾದ ಜೀವನಶೈಲಿ, ಬದಲಾದ ಆಹಾರಪದ್ಧತಿಗಳಿಂದಾಗಿ ಇಂದು ನಮ್ಮ ದೇಶದ ಅರ್ಧಕ್ಕಿಂತ ಹೆಚ್ಚು ಜನರನ್ನು ಕಾಡುತ್ತಿರುವುದು ಮಲಬದ್ಧತೆಯ ಸಮಸ್ಯೆ. ಅಲ್ಲಿಂದ ಮೂಲವ್ಯಾಧಿ. ಅದು ಕಾರಣವಾಗಿ ಮಂಡಿನೋವು ಮತ್ತು ನಿಶ್ಶಕ್ತಿ. ಮಲಬದ್ಧತೆಯೆಂಬುದು ನಮ್ಮ ಕಾಲವನ್ನು ವ್ಯಾಪಿಸಿಕೊಂಡಿರುವ ತೀವ್ರತೆಯ ಪರಿಣಾಮವನ್ನು ತಿಳಿಯಬೇಕಾದರೆ ನಮ್ಮ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುವ ಜಾಹೀರಾತುಗಳನ್ನೊಮ್ಮೆ ನಾವು ಗಮನಿಸಬೇಕು.

ಸಾಫಿ, ಪೇಟ್ ಸಫಾ, ಸಿಡ್‌ಪೈಲ್ಸ್, ಅರ್ಶಹರ್, ಕಾಯಂ ಚೂರ್ಣ ಎಷ್ಟೊಂದು ಬಗೆಯ ಔಷಧಿಗಳು ಮಲಬದ್ಧತೆ ನಿವಾರಣೆಗಾಗಿ. ಶೌಚ ಸರಿಯಾಗುತ್ತಿಲ್ಲವೇ, ದಿನವಿಡೀ ನಿಶ್ಶಕ್ತಿ ಬಳಲಿಕೆಯೇ ನಮ್ಮ ಕಂಪನಿಯ ಇಂತಿಂಥ ಗುಳಿಗೆ ಯಾ ಟಾನಿಕ್ ಬಳಸಿ ದಿನವಿಡೀ ಉಲ್ಲಸಿತರಾಗಿರಿ, ಪೇಟ್ ಸಫಾ ತೊ ಹರ್ ರೋಗ್ ದಫಾ ಎಷ್ಟೊಂದು ಆಕರ್ಷಕ ಜಾಹೀರಾತುಗಳು! ಕೋಟ್ಯಂತರ ರೂಪಾಯಿಯ ವ್ಯವಹಾರ. ನೂರೆಂಟು ಕಡೆ ಹಳೆ ಆಹಾರ ಪದ್ಧತಿಗೆ ಮರಳಿ ಅಂತ ಉಪನ್ಯಾಸಗಳು, ಆಹಾರ ಮತ್ತು ಪೌಷ್ಟಿಕಾಂಶ ತಜ್ಞರ ಅಂಕಣಗಳು, ಸಿರಿಧಾನ್ಯ ಮೇಳಗಳು. ಶೂಜಿತ್ ಸರ್ಕಾರ್ ಅವರು ಈ ಸಮಸ್ಯೆ ಬಗ್ಗೆ ಒಂದು ಸಿನಿಮಾವನ್ನೇ ಮಾಡಿದರಲ್ಲದೆ ಅದು ಹಿಟ್ ಕೂಡ ಆಯಿತಲ್ಲ?! ಇದೇ ಪೀಕು ಚಿತ್ರವನ್ನು ಹತ್ತು ವರ್ಷದ ಹಿಂದೆ ಮಾಡಲು ಸಾಧ್ಯವಿತ್ತೆ? ಮಾಡಿದ್ದರೆ ಜನ ಈಗಿನಂತೆ ಸ್ವೀಕರಿಸುತ್ತಿದ್ದರೆ? ಅಮಿತಾಭ್ ನಟಿಸುತ್ತಿದ್ದರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನಮ್ಮ ಸಮಾಜದ ಬದಲಾಗಿರುವ ಆಹಾರ ಮತ್ತು ಶೌಚಾಭ್ಯಾಸಗಳಲ್ಲಿದೆ ಎಂದರೆ ನೀವು ಒಪ್ಪುತ್ತೀರಲ್ಲವೆ?

ಒಮ್ಮೆ ಹೀಗೇ ಮಾತಾಡುತ್ತ ನಮ್ಮ ಕಪಗಲ್ಲಿನ ಶಾಮಣ್ಣ ಹೇಳಿದ ಒಂದು ಮಾತು ನನ್ನನ್ನು ಕಲಕಿತು. ನಾವು ನಮ್ಮ ಹೇಸಿಗೆಯನ್ನು ನೋಡಿ ಹೇಸಿಗೆಪಟ್ಟುಕೊಳ್ಳುತ್ತೇವೆ. ಆದರೆ, ಅದು ಬಂದಿದ್ದೇ ನಮ್ಮೊಳಗಿಂದ ಎಂಬುದನ್ನು ಮರೀತೇವೆ. ಅದನ್ನು ಬಳಿಯುವುದಕ್ಕಾಗಿ ನಮ್ಮ ಸಹಜೀವಿಗಳನ್ನು ಬಳಸಿಕೊಳ್ಳುವ ವ್ಯವಸ್ಥೆಯನ್ನು ಪೋಷಿಸುವ ರೋಗಗ್ರಸ್ತ ಮನಃಸ್ಥಿತಿಗೆ ತಲುಪಿಬಿಡುತ್ತೇವೆ. ಗಾಂಧೀಜಿ ಅವರಂತೂ ನಮ್ಮ ಮಲ ನಾವೇ ಬಳಿಯಬೇಕು ಎನ್ನುವುದನ್ನು ಪ್ರತಿಪಾದಿಸಿದವರು ಮತ್ತು ಹಾಗೆಯೇ ಬದುಕಿದವರು.

ದೇವನೂರ ಮಹಾದೇವ ಅವರು ಕೂಡ ಒಮ್ಮೆ ಕಟ್ಟಿಕೊಂಡ ಕಕ್ಕಸುಗುಂಡಿಯನ್ನು ‘ಇದು ನಮ್ಮ ಮಕ್ಕಳದೇ ಅಲ್ಲವೆ ಎಂಬ ಮಾತೃಭಾವ ಮೂಡಿಸಿಕೊಂಡಾಗ ಯಾವುದೇ ಅಹಂಭಾವವಿಲ್ಲದೆ ಸ್ವಚ್ಛಗೊಳಿಸಲು ಸಾಧ್ಯವಾಯ್ತು’ ಅಂತ ಎದೆಗೆ ಬಿದ್ದ ಅಕ್ಷರ ಕೃತಿಯ ಅಧ್ಯಾಯವೊಂದರಲ್ಲಿ ಬರೆದುಕೊಂಡಿದ್ದಾರೆ. ಸಣ್ಣವೆನಿಸುವ ಇಂಥ ಸಂಗತಿಗಳೇ ದೊಡ್ಡವರ ದೊಡ್ಡಸ್ತಿಕೆಯ ದ್ಯೋತಕಗಳಾಗಿವೆ. ಆ ಭಾವವೇ ಬದುಕಿನ ನಿಜವಾದ ನೈತಿಕತೆಯಾಗಿದೆ ಎಂಬುದನ್ನು ನಾವು ತಿಳಿಯಬೇಕಾಗಿದೆ. ಮಾತೃಭಾವ ಇಲ್ಲದ ಯಾವ ಗಂಡಸಿಗೂ ತನ್ನನ್ನು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿಕ್ಕಾಗುವುದೇ ಇಲ್ಲ. ಬಿ.ಎಂ. ಗಿರಿರಾಜ್ ನಿರ್ದೇಶಿಸಿದ ‘ಅಮರಾವತಿ’ ಚಿತ್ರದಲ್ಲಿ ಮಿತ್ರ ಅಚ್ಯುತ್‌ಕುಮಾರ್ ಜೀವಿಸಿರುವ ಶಿವಪ್ಪನ ಪಾತ್ರವನ್ನು ಈ ನೆಲೆಯಿಂದ ನೋಡಲು ಸಾಧ್ಯವಾದಾಗಲೇ ಅವರ ಬದುಕಿನ ಬವಣೆಗಳು ನಮಗೆ ಸರಿಯಾಗಿ ಅರ್ಥವಾಗುತ್ತವೆ. ಅದನ್ನೇ ಮೈಮೇಲೆ ಸುರಿದುಕೊಂಡು ಪ್ರತಿಭಟಿಸಬೇಕಾದ ಅವರ ಅನಿವಾರ್ಯ ಸಂಕಟ ಒಳಗಿಳಿಯುತ್ತದೆ. ಒಳಗಿದ್ದರೆ, ಮುಚ್ಚಿಕೊಂಡರೆ ಹೊಲಸಲ್ಲ; ಹೊರಬಂತೋ, ಬಿಚ್ಚಿಟ್ಟೆಯೋ ಅದು ಹೊಲಸು ಎಂಬುದೇ ಮನುಷ್ಯನ ನೀಚಗುಣ.

ಇರಲಿ, ಅಭ್ಯಾಸದ ಮಾತು ಆರೋಗ್ಯದ ಕಡೆ ತಿರುಗಿ ಎಲ್ಲೆಲ್ಲೋ ಹಾದು ಕಡೆಗೆ ಅಧ್ಯಾತ್ಮಕ್ಕೆ ಬಂದಂತಾಯಿತು. ಈಗ ಮತ್ತೆ ಟ್ರ್ಯಾಕಿಗೆ ಮರಳೋಣ. ಮೊನ್ನೆಮೊನ್ನೆ ಕವಿ ಆರೀಫ್‌ರಾಜಾ ಫೋನ್ ಮಾಡಿ ಆನಂದಾತಿಶಯದ ದನಿಯಲ್ಲಿ ತಾನು ಬಹುದಿನಗಳಿಂದ ಕಾಣಲು ಹಂಬಲಿಸುತ್ತಿದ್ದ ದೃಶ್ಯವನ್ನು ನೋಡಿಯೇಬಿಟ್ಟೆನೆಂದ. ಅವರ ಶಾಲೆಯ ಹುಡುಗನೊಬ್ಬ ಚೆಡ್ಡಿಯಲ್ಲೇ ಡೈನಾಮೈಟ್ ಸಿಡಿಸಿಕೊಂಡು ಕಾಲಿನುದ್ದಕ್ಕೂ ಸುಣ್ಣ- ಜಾಜಿನ ಗೆರೆಗಳ ಬಣ್ಣದ ಚಿತ್ತಾರ ಬಿಡಿಸಿಕೊಂಡು ನೇತ್ರಾನಂದ ಕಲ್ಪಿಸಿದ್ದನ್ನು ವರ್ಣಿಸಿದ. ಇಂಥವರ ಸಂತತಿ ಸಾವಿರವಾಗಲಿ. ಹಳ್ಳಿಯಿಂದ ದಿಲ್ಲಿಯವರೆಗೆ ನಿಧಾನವಾಗಿಯಾದರೂ, ಹೊಳಿದಂಡೀಲಿರುವ ಕರಕೀಯ ಕುಡಿ ಹಂಗ ಇವರ ರಸಬಳ್ಳಿ ಹಬ್ಬಲಿ! ಎಂದು ನಾನು ಮನಸಲ್ಲೇ ಕಾಣದ ದೇವರಿಗೆ ಕೈಮುಗಿದು ಬೇಡಿಕೊಂಡೆ.

ಏಕೆಂದರೆ ಪಂಡಿತ ಶಿವಕುಮಾರ ಸ್ವಾಮಿಗಳು ಹೇಳಿರುವಂತೆ ‘ವಿವೇಕಮತಿಗಳು ಮಲಬದ್ಧತೆಯೊಂದಿಗಿನ ಈ ಯುದ್ಧವನ್ನು ನಿತ್ಯದ ಆಹಾರ ವಿಹಾರಗಳಿಂದಲೇ ನಿವಾರಿಸಿಕೊಳ್ಳುವುದು ಯುಕ್ತವಾಗಿದೆ. ಶಿವನು ತನ್ನ ಮೂರನೇ ಕಣ್ಣನ್ನು ತೆಗೆದರೆ ಎದುರಿನವನು ಸುಟ್ಟು ಭಸ್ಮವಾಗುವನೆಂದು ಪುರಾಣಗಳು ಹೇಳಿವೆ. ನಮಗೂ ಒಂದು ಮೂರನೇ ಕಣ್ಣು ಅಂತ ಇದ್ದರೆ ಅದು ನಮ್ಮ ಹೊರದ್ವಾರವೇ ಆಗಿದ್ದು, ಒಂದೇ ವ್ಯತ್ಯಾಸವೆಂದರೆ ಈ ಕಣ್ಣು ಸಕಾಲಕ್ಕೆ, ಸರಿಯಾಗಿ ಮತ್ತು ಸರಾಗವಾಗಿ ತೆರೆದುಕೊಳ್ಳದೇ ಇದ್ದರೇನೇ ನಾವು ಸುಟ್ಟುಬೂದಿಯಾಗುವುದು ಎಂದು ವ್ಯಾಖ್ಯಾನಿಸಬಹುದೆನಿಸುತ್ತೆ’. ಈಗ ನನಗನಿಸುತ್ತೆ  ಖಾದರ್ ಅವರು ಅಂದು ಹೇಳಿದ್ದು ನಿಜಕ್ಕೂ ನಮ್ಮೆಲ್ಲರ ‘ಕಣ್ಣು’ ತೆರೆಸುವಂಥ ಮಾತುಗಳನ್ನೇ ಎಂದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT