ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ

Last Updated 8 ನವೆಂಬರ್ 2017, 6:13 IST
ಅಕ್ಷರ ಗಾತ್ರ

ಹನೂರು: ಸ್ವಾಧೀನಪಡಿಸಿಕೊಂಡಿರುವ ರೈತರ ಜಮೀನುಗಳಿಗೆ ಪರಿಹಾರ ನೀಡದಿದ್ದರೂ ಬೇರೊಂದು ಕಂಪೆನಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಮಂಗಳವಾರ ಪಟ್ಟಣ ಸಮೀಪದ ದೊಡ್ಡಿಂದುವಾಡಿ ಗ್ರಾಮದ ಬಳಿಯ ಅಂದಾನಿ ಸೋಲಾರ್ ಪ್ಲಾಟ್ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು.

ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಉದ್ದೇಶದಿಂದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಐಡಿಬಿ) ಇಲಾಖೆಯು 2009ರಲ್ಲಿ ದೊಡ್ಡಿಂದುವಾಡಿ, ಸಿಂಗನಲ್ಲೂರು, ಮೋಡಳ್ಳಿ ಹಾಗೂ ಕಾಮಗೆರೆ ಗ್ರಾಮದ ನೂರಕ್ಕೂ ಹೆಚ್ಚು ರೈತರಿಂದ 413 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು.

ಪ್ರತಿ ರೈತರ ಮನೆಯ ಒಬ್ಬರಿಗೆ ಉದ್ಯೋಗ ಹಾಗೂ ಜಮೀನಿಗೆ ಸೂಕ್ತ ಪರಿಹಾರ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ, ಇದುವರೆಗೂ ಉದ್ಯೋಗವೂ ಇಲ್ಲ, ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರವನ್ನೂ ನೀಡಿಲ್ಲ ಎಂದು ದೂರಿದರು.

ಭೂಮಿ ಕಳೆದುಕೊಂಡ ರೈತರೊಬ್ಬರು ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಡ ನಡೆದಿದೆ. ಕೆಲವು ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ರೈತರಿಗೆ ಸೂಕ್ತ ಪರಿಹಾರ ಜತೆಗೆ, ನ್ಯಾಯಾಲಯ ಶುಲ್ಕ ಹಾಗೂ ಶೇ 15ರಷ್ಟು ಬಡ್ಡಿ ಹಣವನ್ನು ನೀಡುವಂತೆ ಆದೇಶ ಹೊರಡಿಸಿತ್ತು.

ಆದರೆ ಕೆಐಡಿಬಿ ಇಲಾಖೆ ಅಧಿಕಾರಿಗಳು ರೈತರಿಗೆ ಪರಿಹಾರ ನೀಡದೆ ರೈತರಿಂದ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಮತ್ತೊಂದು ಕಂಪೆನಿಗೆ ಮಾರಾಟ ಮಾಡುವ ಮೂಲಕ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಪ್ರತಿ ಎಕರೆಗೆ ₹ 25 ಲಕ್ಷ ಮಾರುಕಟ್ಟೆ ಬೆಲೆ ಇದೆ. ಈ ಬೆಲೆಯನ್ನೇ ನಿಗದಿಪಡಿಸಿ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.
ಭೂಮಿ ಕಳೆದುಕೊಂಡಿರುವ ರೈತರ ಪೈಕಿ 80 ದಲಿತರಿದ್ದಾರೆ. ಅವರು ಜಮೀನು ಇಲ್ಲದೆ, ಇತ್ತ ಪರಿಹಾರವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಕೂಡಲೇ, ರೈತರಿಗೆ ಮತ್ತೆ ಅವರ ಭೂಮಿಯನ್ನು ಹಿಂದಿರುಗಿಸಬೇಕು. ಇಲ್ಲವೇ ನ್ಯಾಯಾಲಯದ ನಿರ್ದೇಶನದಂತೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಭೂಸ್ವಾಧೀನ ಇಲಾಖೆಯ ವಿಶೇಷ ಅಧಿಕಾರಿ ಅರುಳ್‌ಕುಮಾರ್ ರೈತರೊಂದಿಗೆ ಮಾತನಾಡಿ, ಜಮೀನು ಕಳೆದುಕೊಂಡ ರೈತರಿಗೆ ಶೀಘ್ರದಲ್ಲಿ ಪರಿಹಾರ ಕೊಡಿಸಲಾಗುವುದು ಮತ್ತು ಉದ್ಯೋಗ ಅವಕಾಶ ಕಲ್ಪಿಸುವುದರ ಬಗ್ಗೆ ಮುಖ್ಯ ಕಚೇರಿಯ ಅಧಿಕಾರಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು. ಬಳಿಕ, ರೈತರು ಪ್ರತಿಭಟನೆ ಕೈಬಿಟ್ಟರು. ಕೃಷ್ಣಶೆಟ್ಟಿ, ಚಿಕ್ಕಲಿಂಗಯ್ಯ, ಶಂಭೇಗೌಡ, ನಾಗರಾಜು, ಸಿದ್ದರಾಜು, ಶಿವಮಲ್ಲು, ನಾಗರಾಜಪ್ಪ, ಬಸಪ್ಪದೇವರು, ರಾಚಣ್ಣ, ಅಂಥೋಣಿ, ಶಿವರಾಮೇಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT