ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಪ್ಕೊ ವಹಿವಾಟಿಗೆ ರಾಜಕಾರಣದ ಕರಿನೆರಳು

Last Updated 9 ನವೆಂಬರ್ 2017, 9:42 IST
ಅಕ್ಷರ ಗಾತ್ರ

ಸಾಗರ: ಈ ಪ್ರಾಂತ್ಯದಲ್ಲಿ ಅಡಿಕೆಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಎದುರಾದಾಗ ಅದರಲ್ಲಿ ಪಕ್ಷ ರಾಜಕಾರಣ ನುಸುಳುವುದು ಮಾಮೂಲು ಎನ್ನುವಂತಾಗಿದೆ. ಇತ್ತೀಚೆಗೆ ಕ್ಯಾಂಪ್ಕೊ ಸಂಸ್ಥೆಯ ಅಡಿಕೆಯ ನೇರ ಖರೀದಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಎದ್ದಿರುವ ವಿವಾದದಲ್ಲೂ ನಿಜವಾದ ಸಮಸ್ಯೆಗಿಂತ ಪಕ್ಷ ರಾಜಕಾರಣ ಮುನ್ನೆಲೆಗೆ ಬಂದಿದೆ.

ಅಡಿಕೆಯ ವಹಿವಾಟು ನಡೆಸುವ ಈ ಭಾಗದ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ಕ್ಯಾಂಪ್ಕೊ ಕೂಡ ಒಂದು. ಕ್ಯಾಂಪ್ಕೊನಲ್ಲಿ ಟೆಂಡರ್‌ ಮೂಲಕ ಅಡಿಕೆ ಖರೀದಿಸುವ ಬದಲು ನೇರವಾಗಿ ಬೆಳೆಗಾರರಿಂದ ಅಡಿಕೆಯನ್ನು ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕೆಲವು ದಿನಗಳಿಂದ ಈ ವ್ಯವಸ್ಥೆಯ ಪರ ಹಾಗೂ ವಿರುದ್ಧದ ಧ್ವನಿಗಳು ಕೇಳಿಬರುತ್ತಿವೆ.

ಕ್ಯಾಂಪ್ಕೊದ ನೇರ ಖರೀದಿ ವಹಿವಾಟನ್ನು ಬಿಜೆಪಿಯ ಮುಖಂಡರು ಸ್ವಾಗತಿಸುತ್ತಿದ್ದರೆ, ಕಾಂಗ್ರೆಸ್ ಮುಖಂಡರು ಇದನ್ನು ವಿರೋಧಿಸುತ್ತಿದ್ದಾರೆ. ಇದರಿಂದಾಗಿ ನೇರ ಖರೀದಿ ವಹಿವಾಟಿನ ವಿವಾದ ಬಿಜೆಪಿ ಹಾಗೂ ಕಾಂಗ್ರೆಸ್ ಎಂಬ ಎರಡು ವಿಭಾಗಗಳನ್ನು ಹೊಂದಿದಂತಾಗಿದೆ.

ಈಚೆಗೆ ನಡೆದ ತಾಲ್ಲೂಕು ಪಂಚಾಯ್ತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಹಕ್ರೆ, ಸಹಕಾರಿ ಧುರೀಣ ಪಿ.ಎನ್.ಸುಬ್ಬರಾವ್ ಅವರು ಕ್ಯಾಂಪ್ಕೊದಲ್ಲಿ ಚಾಲ್ತಿಯಲ್ಲಿರುವ ನೇರ ಖರೀದಿ ವ್ಯವಸ್ಥೆ ಕೊನೆಯಾಗಬೇಕು ಎಂದು ಪ್ರತಿಪಾದಿಸಿದರು. ಇದಕ್ಕೆ ಪೂರಕವಾಗಿ ಸಚಿವ ಕಾಗೋಡು ತಿಮ್ಮಪ್ಪ ಅವರು ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಈ ಸಭೆಯ ನಂತರ ಬಿಜೆಪಿ ಮುಖಂಡರೂ ಆಗಿರುವ ಮ್ಯಾಮ್ಕೋಸ್ ನಿರ್ದೇಶಕ ಬಿ.ಎಚ್.ರಾಘವೇಂದ್ರ ಪತ್ರಿಕಾ ಹೇಳಿಕೆಯೊಂದನ್ನು ನೀಡಿ, ಕ್ಯಾಂಪ್ಕೊದ ನೇರ
ಖರೀದಿ ವ್ಯವಸ್ಥೆ ವಿರುದ್ಧ ಮಾತನಾಡುತ್ತಿರುವುದರ ಹಿಂದೆ ಷಡ್ಯಂತ್ರವಿದೆ ಎಂದಿದ್ದರು.

ನಂತರ ಸ್ಥಳೀಯ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ಕರೆದು, ಕ್ಯಾಂಪ್ಕೊ ಸಂಸ್ಥೆಯ ನೇರ ಖರೀದಿ ವಹಿವಾಟಿನ ಪರವಾಗಿ ಮಾತನಾಡಿದರು. ‘ಕ್ಯಾಂಪ್ಕೊ ಸಂಸ್ಥೆಯನ್ನು ದುರ್ಬಲಗೊಳಿಸುವ ಕಾರಣಕ್ಕೆ ನೇರ ಖರೀದಿ ವ್ಯವಸ್ಥೆಯ ವಿರುದ್ಧ ಮಾತನಾಡಲಾಗುತ್ತಿದೆ, ಸಣ್ಣ ಬೆಳೆಗಾರರಿಗೆ ಇದರಿಂದ ಅನುಕೂಲವೇ ಆಗಿದೆ’ ಎಂದು ಬಿಜೆಪಿ ಮುಖಂಡರು ಪ್ರತಿಪಾದಿಸಿದ್ದರು.

ಇಲ್ಲಿನ ಅಡಿಕೆ ಬೆಳೆಗಾರರು ಮಾತ್ರ ಪಕ್ಷ ರಾಜಕಾರಣದ ವ್ಯಾಪ್ತಿಯ ಹೊರಗೆ ಈ ವಿಷಯ ತೀರ್ಮಾನವಾಗಬೇಕು ಎಂದು ಬಯಸುತ್ತಿದ್ದಾರೆ. 1989ನೇ ಸಾಲಿನಲ್ಲೇ ನೇರ ಖರೀದಿ ವಹಿವಾಟಿಗೆ ಕ್ಯಾಂಪ್ಕೊ ಸಂಸ್ಥೆ ಸರ್ಕಾರದಿಂದ ಅನುಮತಿ ಪಡೆದಿದ್ದರೂ 2014ನೇ ಸಾಲಿನಲ್ಲಿ ಎಲ್ಲಾ ಸಹಕಾರಿ ಸಂಘಗಳು ಟೆಂಡರ್ ಮೂಲಕವೇ ಅಡಿಕೆ ಖರೀದಿ ಮಾಡಬೇಕು ಎಂದು ಆದೇಶ ಹೊರಡಿಸಿರುವುದರಿಂದ ಈ ನಿಯಮ ಕ್ಯಾಂಪ್ಕೊಗೂ ಅನ್ವಯವಾಗುತ್ತದೆ ಎನ್ನುವ ಬೆಳೆಗಾರರಿದ್ದಾರೆ.

ಪ್ರತಿದಿನ ಬೆಳಗಿನ ಅವಧಿಯಲ್ಲಿ ಕ್ಯಾಂಪ್ಕೊ ನೇರ ಖರೀದಿ ವಹಿವಾಟಿನಲ್ಲಿ ಅಡಿಕೆಗೆ ಒಂದು ದರವನ್ನು ನಿಗದಿಪಡಿಸಿದರೆ, ಟೆಂಡರ್ ಮೂಲಕ ಅಡಿಕೆ ಖರೀದಿಸುವವರು ಈ ಬೆಲೆಯ ಸುತ್ತಮುತ್ತಲೇ ತಿರುಗುತ್ತಾರೆ. ಹೀಗಾಗಿ ಬೆಳೆಗಾರರಿಗೆ ಯೋಗ್ಯ ಬೆಲೆ ದೊರಕದೆ ಅನ್ಯಾಯವಾಗುತ್ತಿದೆ ಎನ್ನುವ ಮಾತು ಕೆಲವು ಬೆಳೆಗಾರರಿಂದ ಕೇಳಿಬರುತ್ತಿದೆ.

ಕ್ಯಾಂಪ್ಕೊದ ನೇರ ಖರೀದಿ ವಹಿವಾಟಿನಿಂದ ಸಣ್ಣ ಪ್ರಮಾಣದಲ್ಲಿ ಅಡಿಕೆಯನ್ನು ಮಾರಾಟಕ್ಕೆ ತರುವ ಬೆಳೆಗಾರರಿಗೆ ತಕ್ಷಣ ಹಣ ಸಿಗುವ ಅನುಕೂಲವಿದೆ. ಅಲ್ಲದೆ ತೆರಿಗೆ ತಪ್ಪಿಸಿ ನಡೆಯುವ ವಹಿವಾಟಿಗೆ ಇದರಿಂದ ತಡೆ ಉಂಟಾಗಿದೆ ಎನ್ನುವುದು ನಿಜ. ಆದರೂ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಬೆಲೆಯ ವಿಷಯದಲ್ಲಿ ಅನ್ಯಾಯವಾಗದೆ ಇರಲು ಟೆಂಡರ್ ಮೂಲಕ ಅಡಿಕೆ ಖರೀದಿಸುವ ವ್ಯವಸ್ಥೆಯೇ ಸೂಕ್ತ ಎಂಬ ಅಭಿಪ್ರಾಯ ಇನ್ನು ಕೆಲವು ಬೆಳೆಗಾರರಲ್ಲಿದೆ.

ಯಾವುದೇ ಒಂದು ಸಹಕಾರಿ ಸಂಸ್ಥೆಗೆ ಬೆಳೆಗಾರರ ಹಿತವೇ ಆದ್ಯತೆ ಆಗಬೇಕಾಗಿರುವ ಹಿನ್ನೆಲೆಯಲ್ಲಿ ರಾಜಕಾರಣವನ್ನು ಬದಿಗಿಟ್ಟು, ಬೇಕು–ಬೇಡಗಳ ಕುರಿತು ತೀರ್ಮಾನವಾಗಲಿ ಎಂಬ ಒತ್ತಾಯ ಇಲ್ಲಿನ ಬೆಳೆಗಾರದ್ದು.

ಎಂ.ರಾಘವೇಂದ್ರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT