ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಕಾಯಿಕೊರಕ ಹುಳು ಬಾಧೆ

Last Updated 10 ನವೆಂಬರ್ 2017, 6:05 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ತೊಗರಿ ಬೆಳೆಯಲ್ಲಿ ಕಾಯಿಕೊರಕ ಹುಳುವಿನ ಬಾಧೆ ಕಂಡು ಬಂದಿದೆ. ಜಿಲ್ಲೆಯಲ್ಲಿ ಕ್ಷಿಪ್ರ ಸಂಚಾರ ಸಮೀಕ್ಷೆ ನಡೆಸಿರುವ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಕಾಯಿಕೊರಕ ಹುಳುವಿನ ಬಾಧೆಯು ಆರ್ಥಿಕ ನಷ್ಟದ ರೇಖೆಯನ್ನು ದಾಟಿದೆ ಎಂದು ತಿಳಿಸಿದ್ದಾರೆ.

ರೈತರು ತಮ್ಮ ಕ್ಷೇತ್ರದಲ್ಲಿ ಕೀಟಗಳು ಇರುವುದನ್ನು ಖಚಿತಪಡಿಸಿಕೊಂಡು ತತ್ತಿನಾಶಕ ಕೀಟನಾಶಕಗಳಾದ 3 ಮಿ.ಲೀ ಪ್ರೊಪೆನೊಫಾಸ್ 50 ಇ.ಸಿ ಅಥವಾ 0.6 ಗ್ರಾಂ. ಮಿಥೋಮಿಲ್ 40 ಎಸ್.ಪಿ. ಅಥವಾ 0.6 ಗ್ರಾಂ. ಥೈಯೋಡಿಕಾರ್ಬ್ 75 ಡಬ್ಲ್ಯೂ.ಪಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ರಾಯಪಳ್ಳಿ, ಗಡಿರಾಯಪಳ್ಳಿ, ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಹಾಗೂ ಔರಾದ್ ತಾಲ್ಲೂಕಿನ ತೋರಣ ಸುತ್ತಮುತ್ತಲಿನ ಗ್ರಾಮಗಳ ಕಡಲೆ ಹೊಲಗಳಲ್ಲಿ ನೆಟೆ ರೋಗ ಬಾಧೆ ಇರುವುದು ಪತ್ತೆಯಾಗಿದೆ.

ರೋಗದಿಂದ ಎಲೆಗಳು ಹಳದಿಯಾಗಿ ಬಾಡಿ ಒಣಗಿ ಉದರದೆ ಗಿಡಕ್ಕೆ ಅಂಟಿಕೊಂಡಿರುತ್ತವೆ. ಕಾಂಡಾವನ್ನು ಉದ್ದವಾಗಿ ಸೀಳಿ ನೋಡಿದಾಗ ನೀರು ಸಾಗಾಣಿಕೆ ಅಂಗಾಂಶವು ಕಪ್ಪಾಗಿರುವುದು ಕಂಡು ಬರುತ್ತದೆ. ಈ ರೋಗದ ಬಾಧೆಯು ಆರ್ಥಿಕ ನಷ್ಟದ ರೇಖೆಯನ್ನು ದಾಟಿಲ್ಲ ಎಂದು ಹೇಳಿದ್ದಾರೆ.

ಹುಮನಾಬಾದ್, ಬೀದರ್ ತಾಲ್ಲೂಕಿನ ಕೋಳಾರ, ಬಕಚೌಡಿ, ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್ ಹಾಗೂ ಬಸವಕಲ್ಯಾಣ ತಾಲ್ಲೂಕಿನ ರಾಯಪಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ತೊಗರಿಯಲ್ಲಿ ಚುಕ್ಕೆ ಕಾಯಿಕೊರಕ ಅಥವಾ ಬಲೆಕಟ್ಟುವ ಕೀಟ ಕಂಡು ಬಂದಿದೆ. ಇದು ಬೆಳೆಯ ಮೊಗ್ಗು ಹಾಗೂ ಕಾಯಿಗಳನ್ನು ಕೂಡಿಸಿ ಬಲೆ ಹೆಣೆದು ಒಳಗಡೆ ಇದ್ದುಕೊಂಡು ಹಾನಿ ಉಂಟು ಮಾಡುತ್ತದೆ. ಕೀಟದ ನಿರ್ವಹಣೆಗಾಗಿ 2 ಮಿ.ಲೀ ಪ್ರೊಪೆನೊಫಾಸ್ 50 ಇ.ಸಿ ಹಾಗೂ 0.5 ಮಿ.ಲೀ ಡಿ.ಡಿ.ವಿ.ಪಿ 76 ಇ.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.

ಬೀದರ್, ಹುಮನಾಬಾದ್ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ತೊಗರಿಯಲ್ಲಿ ಗೊಡ್ಡು ರೋಗದ ಬಾಧೆ ಕಾಣಿಸಿದೆ. ರೋಗದಿಂದ ತೊಗರಿಯನ್ನು ಸಂರಕ್ಷಿಸಲು ರೋಗ ಬಾಧಿತ ತೊಗರಿ ಬೆಳೆಯನ್ನು ಕಿತ್ತು ನಾಶಪಡಿಸಿ, ನಂತರ ನುಸಿ ನಾಶಕಗಳಾದ ಡಿಕೋಫಾಲ್ 20 ಇ.ಸಿ. 2.5 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಹೇಳಿದ್ದಾರೆ.

ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕಡಿಮೆ ಉಷ್ಣಾಂಶ ಹಾಗೂ ಮಂಜು ಕವಿದ ವಾತಾವರಣವು ಎಲೆಚುಕ್ಕೆ ರೋಗ ವೃದ್ಧಿಗೆ ಕಾರಣವಾಗಲಿದೆ. ಈಗಾಗಲೇ ಅನೇಕ ಕಡೆ ತೊಗರಿ ಬೆಳೆಯಲ್ಲಿ ಎಲೆ ಚುಕ್ಕೆ ರೋಗದ ಬಾಧೆ ಕಂಡು ಬಂದಿದೆ. ಇದರ ನಿರ್ವಹಣೆಗಾಗಿ 1 ಗ್ರಾಂ ಕಾರ್ಬನ್‌ಡೈಜಿಮ್ 50 ಡಬ್ಲ್ಯೂ.ಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ಸಮೀಪದ ಕೃಷಿ ಅಧಿಕಾರಿ ಅಥವಾ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.

ಸಮೀಕ್ಷಾ ತಂಡದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಎನ್.ಎಂ. ಸುನೀಲಕುಮಾರ ಯರಬಾಗ್, ಡಾ. ಕೆ.ಭವಾನಿ, ಡಾ. ಆರ್.ಎಲ್. ಜಾಧವ್, ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ಡಾ. ಎಸ್. ರವಿ, ಸಹಾಯಕ ಕೃಷಿ ನಿರ್ದೇಶಕ ಎಂ.ಎ.ಕೆ. ಅನ್ಸಾರಿ, ಸಂಜೀವಕುಮಾರ ಮಾನಕರೆ, ಅಬ್ದುಲ್ ಮಜೀದ್, ಪಿ.ಎಂ. ಮಲ್ಲಿಕಾರ್ಜುನ, ಧೂಳಪ್ಪ ಹೊಸಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT