ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ತುವಾರಿಗೆ ದೂರು ಹೇಳಿದ ನಾರಾಯಣಸ್ವಾಮಿ?

Last Updated 11 ನವೆಂಬರ್ 2017, 5:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಉತ್ಸುಕರಾಗಿ, ಟಿಕೇಟ್‌ ಆಕಾಂಕ್ಷಿ ಕೂಡ ಆಗಿರುವ ಕಾಂಗ್ರೆಸ್ ಮುಖಂಡ ಗಂಗರೇಕಾಲುವೆ ನಾರಾಯಣಸ್ವಾಮಿ ಅವರು ನಾಲ್ಕು ದಿನಗಳ ಹಿಂದೆ ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೇ ನಗರದಲ್ಲಿ ನಡೆದ ಕನಕ ಜಯಂತಿ ಸಂದರ್ಭದಲ್ಲಿ ಜಿಲ್ಲಾಡಳಿತ ತೋರಿದ ಧೋರಣೆ ಮತ್ತು ಆ ಸಂದರ್ಭದಲ್ಲಿ ಶಾಸಕ ಡಾ.ಕೆ.ಸುಧಾಕರ್ ಸೇರಿದಂತೆ ಸ್ವಪಕ್ಷದವರು ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ನಾರಾಯಣಸ್ವಾಮಿ ಅವರು ಈ ಭೇಟಿಯ ವೇಳೆ ‘ಹೈಕಮಾಂಡ್‌’ಗೆ ದೂರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಹೈಕಮಾಂಡ್‌ ಈ ಬಾರಿ ತಮಗೆ ಟಿಕೇಟ್ ಆಶ್ವಾಸನೆ ನೀಡಿದೆ ಎಂದು ಹೇಳಿಕೊಂಡಿದ್ದ ನಾರಾಯಣಸ್ವಾಮಿ ಅವರು ಇದೀಗ ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿರುವುದು ಚುನಾವಣಾ ಪೂರ್ವದಲ್ಲಿ ತೆರೆಮರೆಯಲ್ಲಿ ನಡೆಯುತ್ತಿರುವ ‘ಕದನ’ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಜಿಲ್ಲೆಯ ‘ಹಸ್ತ’ ಪಾಳೆಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅನೇಕ ವಿದ್ಯಮಾನಗಳು ಜಿಲ್ಲಾ ಪಂಚಾಯಿತಿಯ ಅಂಗಳದಲ್ಲಿ ಈ ಹಿಂದೆ ನಡೆದಿವೆ. ಇಂತಹ ಸನ್ನಿವೇಶದಲ್ಲಿ ನೇಪಥ್ಯದಲ್ಲಿ ಕಾಂಗ್ರೆಸ್‌ ಟಿಕೇಟ್‌ಗಾಗಿ ಸ್ವಪಕ್ಷೀಯರಲ್ಲೇ ಪೈಪೋಟಿ ಹೆಚ್ಚಿರುವುದು ಆ ಪಕ್ಷದ ಕಾರ್ಯಕರ್ತರಲ್ಲಿ ಗುಸುಗುಸು ಮಾತುಗಳಿಗೆ ಕಾರಣವಾಗುತ್ತಿದೆ.

ವೇಣುಗೋಪಾಲ್ ಅವರು ನಾರಾಯಣಸ್ವಾಮಿ ಅವರಿಗೆ ರಾಜ್ಯದ ಉಸ್ತುವಾರಿಯಾಗಿ ನೇಮಕಗೊಳ್ಳುವುದಕ್ಕಿಂತ ಮೊದಲಿನಿಂದಲೂ ಪರಿಚಿತರು. ಉದ್ಯಮವೊಂದರಲ್ಲಿ ಇಬ್ಬರ ಪಾಲುದಾರಿಕೆ ಇದೆ. ಹೀಗಾಗಿ ಅವರ ಸಹಜವಾಗಿಯೇ ನಾರಾಯಣಸ್ವಾಮಿ ಅವರ ಸ್ಪರ್ಧೆಯ ವಿಚಾರದಲ್ಲಿ ಒಲುವು ತೋರಿದ್ದಾರೆ. ಈ ವಿಚಾರವಾಗಿ ಶೀಘ್ರದಲ್ಲಿಯೇ ಎಐಸಿಸಿ ಉಪಾಧ್ಯಕ್ಷ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ‘ಪ್ರಜಾವಾಣಿ’ಗೆ ಮೂಲಗಳು ತಿಳಿಸಿವೆ.

ಈ ಭೇಟಿಯ ಬಗ್ಗೆ ನಾರಾಯಣಸ್ವಾಮಿ ಅವರನ್ನು ಪ್ರಶ್ನಿಸಿದರೆ, ‘ವೇಣುಗೋಪಾಲ್ ಅವರನ್ನು ಭೇಟಿ ಆಗಿದ್ದು ನಿಜ. ಆದರೆ ರಾಜಕೀಯದ ಬಗ್ಗೆ ಚರ್ಚಿಸಿಲ್ಲ. ಕೇರಳದಲ್ಲಿರುವ ನನ್ನ ಸ್ನೇಹಿತರ ಪೈಕಿ ಅವರು ಸಹ ಒಬ್ಬರು. ನಮ್ಮದು ಸೌಜನ್ಯದ ಭೇಟಿಯಾಗಿತ್ತು’ ಎನ್ನುತ್ತಾರೆ. ‘ಇತ್ತೀಚಿನ ಬೆಳವಣಿಗೆ ಬಗ್ಗೆ ದೂರು ಹೇಳಿಕೊಂಡಿರಾ’ ಎಂದರೆ, ‘ಅವರಿಗೆ ಈಗಾಗಲೇ ಆ ಬಗ್ಗೆ ಮಾಹಿತಿ ಹೋಗಿದೆ’ ಎಂದಷ್ಟೇ ಚುಟುಕಾಗಿ ತಿಳಿಸಿದರು.

ಅವಿಭಜಿತ ಕೋಲಾರ ಜಿಲ್ಲೆ ಇದ್ದಾಗ 2000 ಇಸ್ವಿಯಲ್ಲಿ ಮಂಡಿಕಲ್‌ ಕ್ಷೇತ್ರದಿಂದ 5,000 ಮತಗಳ ಅಂತರದಿಂದ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದ ನಾರಾಯಣಸ್ವಾಮಿ ಅವರು ಅಧ್ಯಕ್ಷರಾಗಿ ಕೂಡ ಅಧಿಕಾರದ ‘ರುಚಿ’ ಸವಿದರು. ಅದೇ ಸಂದರ್ಭದಲ್ಲಿ ಆ ಕ್ಷೇತ್ರದಲ್ಲಿ ಶಾಸಕ ಸುಧಾಕರ್ ಅವರ ತಂದೆ, ಸದ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ಆಗಿರುವ ಪಿ.ಎನ್.ಕೇಶವರೆಡ್ಡಿ ಅವರು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ನಾರಾಯಣಸ್ವಾಮಿ ಅವರ ಎದುರು ಸೋಲು ಅನುಭವಿಸಿದ್ದರು.

‘ಮಂಚೇನಹಳ್ಳಿ, ಕಸಬಾ, ಮಂಡಿಕಲ್‌ ಹೋಬಳಿಗಳಲ್ಲಿ ಇವತ್ತಿಗೂ ನಾನು ಅದೇ ವಿಶ್ವಾಸ ಕಾಪಾಡಿಕೊಂಡು ಬಂದಿರುವೆ. ನಾನು ಯಾವತ್ತೂ ಜಾತಿ ರಾಜಕೀಯ ಮಾಡಿದವನಲ್ಲ. ಹೀಗಾಗಿ ಎಲ್ಲ ಸಮುದಾಯದವರು ನನ್ನ ಬೆನ್ನಿಗಿದ್ದಾರೆ. ದುಡ್ಡಿಗಾಗಿ ಮತ ಮಾರಿಕೊಳ್ಳುವವರು ತುಂಬಾ ಕಡಿಮೆ. ಜನರಿಗೆ ದುಡ್ಡೇ ಮುಖ್ಯವಲ್ಲ. ವ್ಯಕ್ತಿತ್ವ ಮುಖ್ಯ’ ಎನ್ನುತ್ತಾರೆ ನಾರಾಯಣಸ್ವಾಮಿ.

ಕಳೆದ 11 ವರ್ಷಗಳಿಂದ ಸಾಮೂಹಿಕ ಮದುವೆ, ಓಂಶಕ್ತಿ ಪ್ರವಾಸ ಸೇರಿದಂತೆ ಅನೇಕ ಬಗೆಯ ‘ಸಮಾಜ ಸೇವೆ’ಯ ಮೂಲಕ ತಮ್ಮ ಅಸ್ತಿತ್ವ ಕಾಪಾಡಿಕೊಂಡು ಬರುತ್ತಿರುವ ನಾರಾಯಣಸ್ವಾಮಿ ಅವರು ‘ನಾನು ಪಕ್ಕಾ ರಾಜಕಾರಣಿಯಲ್ಲ. ಆದರೆ ಈ ತಾಲ್ಲೂಕಿಗೆ ಒಳ್ಳೆಯದು ಮಾಡಬೇಕು ಮಾಡಬೇಕು ಎನ್ನುವ ಉದ್ದೇಶದಿಂದ ರಾಜಕೀಯಕ್ಕೆ ಧುಮ್ಮಕುತ್ತಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.

‘ತಾಲ್ಲೂಕಿನಲ್ಲಿರುವ ಎಲ್ಲಾ ಕೆರೆಗಳನ್ನು ಒತ್ತುವರಿ ತೆರವುಗೊಳಿಸಿ, ಹೂಳೆತ್ತಿ ನೀರು ತುಂಬುವುದು. ಜತೆಗೆ ಈ ಭಾಗದಲ್ಲಿ ಕೈಗಾರಿಕೆಗಳನ್ನು ತಂದು ನಿರುದ್ಯೋಗಿ ಯುವ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು ನನ್ನ ಮುಖ್ಯ ಉದ್ದೇಶ. ಅದಕಷ್ಟೇ ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲೇ ಬೇಕು ಎಂದು ಪಣ ತೊಟ್ಟಿರುವೆ. ಒಂದೊಮ್ಮೆ ಗೆದ್ದು ಬಂದರೆ ಖಂಡಿತ ಮಾತು ನಡೆಸಿಕೊಡುತ್ತೇನೆ’ ಎಂದು ಹೇಳುತ್ತಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಒಂದು ಬಾರಿ ಶಾಸಕರಾಗಿ ಆಯ್ಕೆಯಾದವರು ಎರಡನೇ ಬಾರಿ ಆಯ್ಕೆಯಾದ ಉದಾಹರಣೆಗಳಿಲ್ಲ ಎನ್ನುವ ಮಾತು ಜನಜನಿತವಾಗಿದೆ. ಅದನ್ನು ಈ ಬಾರಿ ಶಾಸಕ ಸುಧಾಕರ್ ಸುಳ್ಳು ಮಾಡುತ್ತಾರಾ? ಆ ನಿಟ್ಟಿನಲ್ಲಿ ಅವರು ಸದ್ಯ ಯಾವೆಲ್ಲ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎನ್ನುವುದು ಸದ್ಯದ ಕುತೂಹಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT