ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಮೀರಿದ ಪ್ರೇಮಕಥೆ

Last Updated 12 ನವೆಂಬರ್ 2017, 20:04 IST
ಅಕ್ಷರ ಗಾತ್ರ

ಚಿತ್ರ: ಕರೀಬ್ ಕರೀಬ್ ಸಿಂಗಲ್ (ಹಿಂದಿ)
ನಿರ್ಮಾಣ: ಶೈಲಜಾ ಕೇಜ್ರಿವಾಲ್, ಸುತಾಪಾ ಸಿಕ್ದರ್, ಅಜಯ್ ಜಿ. ರೈ
ನಿರ್ದೇಶನ: ತನುಜಾ ಚಂದ್ರ
ತಾರಾಗಣ: ಇರ್ಫಾನ್ ಖಾನ್, ಪಾರ್ವತಿ, ಬಜರಂಗ್‌ಬಲಿ ಸಿಂಗ್

ಹೃಷಿಕೇಶ್ ಮುಖರ್ಜಿ ನಿರ್ದೇಶನದ ಹಿಂದಿ ಚಿತ್ರಗಳು ಸಿದ್ಧ ಜನಪ್ರಿಯ ಮಾದರಿಯನ್ನು ತಿರಸ್ಕರಿಸಿದಂಥವು. ಆದರೆ, ಅವುಗಳಲ್ಲಿ ಮನರಂಜನೆಗೆ ಕೊರತೆ ಇರಲಿಲ್ಲ. ನವಿರು ಹಾಸ್ಯವನ್ನು ಮಾತಿನ ಜಾಣತನದಲ್ಲಿಯೇ ಹೇಳುವುದು ಅವರ ಶೈಲಿ. ನಿರ್ದೇಶಕಿ ತನುಜಾ ಚಂದ್ರ ‘ಕರೀಬ್ ಕರೀಬ್ ಸಿಂಗಲ್’ ಚಿತ್ರದ ಕೆಲವು ದೃಶ್ಯಗಳಲ್ಲಿ ಹೃಷಿಕೇಶ್ ಮುಖರ್ಜಿ ಅವರನ್ನು ನೆನಪಿಸುತ್ತಾರೆ.

ಒಂಬತ್ತು ವರ್ಷಗಳ ಸುದೀರ್ಘ ಅವಧಿಯ ನಂತರ ತನುಜಾ ಚಂದ್ರ ನಿರ್ದೇಶನಕ್ಕೆ ಮರಳಿದ್ದಾರೆ (‘ಹೋಪ್ ಅಂಡ್ ದಿ ಲಿಟ್ಲ್ ಶುಗರ್’ ಅವರು 2008ರಲ್ಲಿ ನಿರ್ದೇಶಿಸಿದ್ದ ಈ ಹಿಂದಿನ ಚಿತ್ರ). ಅವರ ಅಮ್ಮ ಕಾಮ್ನಾ ಚಂದ್ರ ಜೊತೆ ಕೂತು ಸಿದ್ಧಪಡಿಸಿರುವ ಚಿತ್ರಕಥೆ ಇದು. ಮಾಮೂಲಿ ಪ್ರೇಮಕಥೆಗಳಿಗಿಂತ ಸಂಪೂರ್ಣ ಭಿನ್ನವಾದ ಕಥನವನ್ನು ನಾಯಕ–ನಾಯಕಿಯ ವೈರುಧ್ಯ ಎನ್ನುವಂಥ ವ್ಯಕ್ತಿತ್ವಗಳಿಂದಲೇ ಕಟ್ಟಿಕೊಟ್ಟಿದ್ದಾರೆ. ಸಂಭಾಷಣೆಯಲ್ಲಿನ ನವಿರು ಹಾಸ್ಯ ಪದೇ ಪದೇ ಕಚಗುಳಿ ಇಡುತ್ತದೆ. ನಡೆಯುವ ವಿದ್ಯಮಾನ ಬದುಕಿಗೆ ತೀರಾ ಸಹಜವಾಗಿದ್ದು, ಸಿನಿಮೀಯತೆಯ ಬೆಳಕಿನಿಂದ ಹೊರತಾಗಿದೆ.
ಮೂವತ್ತೈದು ವಯಸ್ಸು ದಾಟಿದ ವಿಧವೆ ನಾಯಕಿ. ಮೂರು ಹಳೆಯ ಪ್ರೇಮಿಗಳ ಮದುವೆ ಕಂಡೂ ಭಗ್ನನಾಗದ ನಾಯಕ. ಅಳೆದೂ ತೂಗಿ ಮಾತನಾಡುವ ಸಂಕೋಚದ ಮುದ್ದೆ ಅವಳು. ‘ಮೆಲ್ಲಗೆ ಕೂಗುವುದು ಹೇಗೆ’ ಎಂದು ಕೇಳುವ ಬಿಂದಾಸ್ ವ್ಯಕ್ತಿ ಅವನು. ಇಂಥ ಅವಳ–ಅವನ ನಡುವಿನ ಸಂವಾದವನ್ನು ಪ್ರವಾಸ ಕಥನವಾಗಿಯೂ ತೋರಿಸುವ ತನುಜಾ, ಆಧುನಿಕ ಒಂಟಿಜೀವಿಗಳ ಭಾವಲೋಕಕ್ಕೂ ಕನ್ನಡಿ ಹಿಡಿದಿದ್ದಾರೆ. ಹಳೆಯ ಪ್ರೇಮಿಗಳನ್ನು ಹುಡುಕಿಕೊಂಡು ಹೋಗುವ ಕ್ರಮ ಕೂಡ ಅಪರೂಪವೇ.

ಪ್ರೇಮ ನಿವೇದನೆಯನ್ನೇ ಮಾಡದ ನಾಯಕ–ನಾಯಕಿಯ ನಡುವಿನ ಪ್ರಸಂಗಗಳು ನೈಜವೂ, ಸತ್ಯ ದರ್ಶನವೂ ಆಗಿರುವುದು ನಿರ್ದೇಶಕಿಯ ಕುಸುರಿತನಕ್ಕೆ ಸಾಕ್ಷಿ. ನಾಯಕ ಕವಿಯಾದರೂ ಅವನ ಕಾವ್ಯಕ್ಕೆ ಚಿತ್ರದಲ್ಲಿ ಹೆಚ್ಚು ಜಾಗವಿಲ್ಲ. ಅವನ ಶ್ರೀಮಂತಿಕೆಯನ್ನೂ ನಿರ್ದೇಶಕಿ ಬಲವಾಗಿ ಸಮರ್ಥಿಸಿಕೊಳ್ಳುವುದಿಲ್ಲ. ಅವರಿಗೆ ನಾಯಕಿಯ ಪಾತ್ರವೇ ಮುಖ್ಯ. ನಾಯಕ ಮನರಂಜನೆಯ ‘ರಿಲೀಫ್’ ಆಗಿ ಒದಗಿಬರಲಿ ಎನ್ನುವ ಪೂರ್ವನಿರ್ಧಾರ ಇದ್ದಂತೆ ಕಾಣುತ್ತದೆ (ಬಹುತೇಕ ಜನಪ್ರಿಯ ಚಿತ್ರಗಳಲ್ಲಿ ನಾಯಕಿ ಮನರಂಜನೆಯ ‘ರಿಲೀಫ್’ ಎಂಬ ಮಾದರಿ ಇರುತ್ತದಲ್ಲ; ಅದಕ್ಕೆ ಇದು ಸಂಪೂರ್ಣ ಅಪವಾದ). ಇದನ್ನು ಹೊಸತನ ಎಂದೂ ಕರೆಯಬಹುದು.

ಮೌನಮುಖಿಯಾದ ಇರ್ಫಾನ್ ಖಾನ್ ಈ ಚಿತ್ರದಲ್ಲಿ ವಾಚಾಳಿಯಾಗಿಯೂ ಗಮನ ಸೆಳೆಯುತ್ತಾರೆ. ಅವರ ನಿಯಂತ್ರಿತ ಭಾವಾಭಿನಯಕ್ಕೆ ಶಹಬ್ಬಾಸ್ ಹೇಳಲೇಬೇಕು. ದಕ್ಷಿಣ ಭಾರತದ ಚಿತ್ರಗಳಲ್ಲಿ ಸುಂದರಿಯಾಗಿ ವರ್ಷಗಳ ಹಿಂದೆ ಮೆರೆದಿದ್ದ ಮಲಯಾಳಂ ನಟಿ ಪಾರ್ವತಿ ಬಾಲಿವುಡ್‌ಗೆ ಈ ರೀತಿ ಪದಾರ್ಪಣೆ ಮಾಡಿರುವುದನ್ನೂ ಮೆಚ್ಚಬೇಕು. ಅಭಿನಯದಲ್ಲಿ ಅವರೂ ಇರ್ಫಾನ್ ಜೊತೆ ಪೋಟಿಗೆ ಬಿದ್ದಿದ್ದಾರೆ.
ರೋಚಕ್ ಕೊಹ್ಲಿ ಹಾಗೂ ವಿಶಾಲ್ ಮಿಶ್ರ ಸಂಗೀತ ಕೂಡ ಚಿತ್ರದ ಔಚಿತ್ಯ ಅರಿತಂತಿದೆ. ಬೋಧನೆ ಮಾಡದೆ, ಎರಡು ಭಿನ್ನ ವ್ಯಕ್ತಿತ್ವಗಳ ನಡುವಿನ ಪ್ರೇಮಾಂಕುರವನ್ನು ಪ್ರಬುದ್ಧವಾಗಿ ಹೇಳುವ ಕ್ರಮದ ದೃಷ್ಟಿಯಿಂದ ಈ ಸಿನಿಮಾ ತುಂಬಾ ಮುಖ್ಯವಾದುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT