ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನೋಬ ನಗರದಲ್ಲಿ ಮೂಲಸೌಕರ್ಯ ಮರೀಚಿಕೆ

Last Updated 13 ನವೆಂಬರ್ 2017, 9:10 IST
ಅಕ್ಷರ ಗಾತ್ರ

ಕೋಲಾರ: ಹನಿ ಹನಿ ನೀರಿಗೂ ತತ್ವಾರ.. ಕಣ್ಣು ಹಾಯಿಸಿದಲ್ಲೆಲ್ಲ ಕಸದ ರಾಶಿ.. ಚರಂಡಿ ತುಂಬಿ ರಸ್ತೆಗೆ ಹರಿಯುತ್ತಿರುವ ಕೊಳಚೆ ನೀರು.. ವಿಲೇವಾರಿಯಾಗದೆ ದುರ್ನಾತ ಬೀರುತ್ತಿರುವ ತ್ಯಾಜ್ಯ.. ಇದು ಯಾವುದೋ ಕುಗ್ರಾಮದ ಚಿತ್ರಣವಲ್ಲ. ಬದಲಿಗೆ ಜಿಲ್ಲಾ ಕೇಂದ್ರದ ವಿನೋಬ ನಗರ ಬಡಾವಣೆಯ ದುಸ್ಥಿತಿ. ನಗರದ ಹಳೆ ಬಡಾವಣೆಗಳಲ್ಲಿ ಒಂದಾದ ವಿನೋಬ ನಗರದಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದ್ದು, ಇಲ್ಲ ಇಲ್ಲಗಳ ನಡುವೆ ಬದುಕು ಸಾಗಿಸುತ್ತಿರುವ ಸ್ಥಳೀಯರ ಗೋಳು ಹೇಳತೀರದು.

ಬಂಗಾರಪೇಟೆ ರಸ್ತೆಗೆ ಹೊಂದಿಕೊಂಡಂತಿರುವ ಬಡಾವಣೆಯ ಸುತ್ತಮುತ್ತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳಿವೆ. ಆರನೇ ವಾರ್ಡ್‌ ವ್ಯಾಪ್ತಿಯ ಈ ಬಡಾವಣೆಯಲ್ಲಿ ಸುಮಾರು 400 ಮನೆಗಳಿವೆ. ಜನಸಂಖ್ಯೆ ಸಾವಿರದ ಗಡಿ ದಾಟಿದ್ದು, ದಿನದಿಂದ ದಿನಕ್ಕೆ ಬಡಾವಣೆಯ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಬಡಾವಣೆಯು ನಗರಸಭೆ ವ್ಯಾಪ್ತಿಗೆ ಸೇರಿ ಒಂದೂವರೆ ದಶಕ ಕಳೆದರೂ ಸ್ಥಳೀಯರಿಗೆ ಮೂಲಸೌಕರ್ಯ ಕಲ್ಪಿಸಿಲ್ಲ.

ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಯಾವುದೇ ರಾಜಕೀಯ ಪಕ್ಷಗಳು ಬಡಾವಣೆಯ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ. ಇಡೀ ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ (ಯುಜಿಡಿ) ಇಲ್ಲ. ಹೀಗಾಗಿ ಮನೆಗಳ ಶೌಚಾಲಯಗಳನ್ನು ಚರಂಡಿಗೆ ಸಂಪರ್ಕಿಸಲಾಗಿದೆ.

ಶೌಚಾಲಯಗಳಿಂದ ಬರುವ ಮಲಮೂತ್ರ ಚರಂಡಿಯಲ್ಲೇ ಸಾಗಬೇಕಿದೆ. ಆದರೆ, ಹಲವು ತಿಂಗಳುಗಳಿಂದ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಇದರಿಂದ ಚರಂಡಿ ಗಳು ಕಟ್ಟಿಕೊಂಡು ಹಲವೆಡೆ ಮಲಮೂತ್ರ ರಸ್ತೆ ಮೇಲೆ ಹರಿದು ನಿಂತಿದೆ. ಸುತ್ತಲ ಪ್ರದೇಶದಲ್ಲಿ ದುರ್ನಾತ ಹೆಚ್ಚಿದ್ದು, ಇಡೀ ಬಡಾವಣೆ ಕೊಳೆಗೇರಿಯಂತಾಗಿದೆ.

ರೋಗ ಭೀತಿ: ಚರಂಡಿಯಲ್ಲಿನ ಮಲಮೂತ್ರ ಹಾಗೂ ಕೊಳಚೆ ನೀರಿನಿಂದ ಸೊಳ್ಳೆ, ನೊಣ ಮತ್ತು ಹಂದಿಗಳ ಕಾಟ ಹೆಚ್ಚಿದೆ. ನೈರ್ಮಲ್ಯ ಸಮಸ್ಯೆಯಿಂದ ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದ್ದು, ಈಗಾಗಲೇ ಹಲವರು ಡೆಂಗಿ, ಚಿಕೂನ್‌ ಗುನ್ಯ ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಸ್ಥಳೀಯರು ದುಡಿಮೆಯ ಹಣವನ್ನೆಲ್ಲಾ ಆಸ್ಪತ್ರೆಗೆ ತೆರುವಂತಾಗಿದೆ.

ಬಯಲು ಬಹಿರ್ದೆಸೆ: ಶೌಚಾಲಯ ವ್ಯವಸ್ಥೆ ಇಲ್ಲದೆ ಸ್ಥಳೀಯರು ಸಮೀಪದ ರೈಲು ಹಳಿ ಬಳಿಯ ತೋಪುಗಳಲ್ಲಿ ಬಹಿರ್ದೆಸೆಗೆ ಹೋಗುವಂತಾಗಿದೆ. ಮಹಿಳೆಯರು ಬಯಲಿನಲ್ಲೇ ಬಹಿರ್ದೆಸೆಗೆ ಹೋಗಬೇಕಿದ್ದು, ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಮತ್ತೊಂದೆಡೆ ಪೌರ ಕಾರ್ಮಿಕರು ಪ್ರತಿನಿತ್ಯ ಮನೆಗಳ ಬಳಿ ಬಂದು ತ್ಯಾಜ್ಯ ಸಂಗ್ರಹಿಸುತ್ತಿಲ್ಲ ಮತ್ತು ಬಡಾವಣೆಯಲ್ಲಿ ಕಸ ಸಂಗ್ರಹಣಾ ತೊಟ್ಟಿಗಳನ್ನು ನಿರ್ಮಿಸಿಲ್ಲ. ಹೀಗಾಗಿ ಸ್ಥಳೀಯರು ರೈಲು ಹಳಿಯ ಬಳಿ, ಖಾಲಿ ನಿವೇಶನ, ರಸ್ತೆಗಳ ಅಕ್ಕಪಕ್ಕ ಕಸ ಸುರಿಯುತ್ತಿದ್ದಾರೆ.

ಆಮೆಗತಿಯ ಕಾಮಗಾರಿ: ನಗರಸಭೆ ವತಿಯಿಂದ ಬಡಾವಣೆಯಲ್ಲಿ ಕೈಗೆತ್ತಿಕೊಂಡಿರುವ ಯುಜಿಡಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದ್ದು, ಸ್ವಲ್ಪ ಮಳೆ ಬಂದರೂ ರಸ್ತೆಗಳು ಕೆಸರು ಗದ್ದೆಯಂತಾಗುತ್ತಿವೆ. ಕಾಮಗಾರಿಗಾಗಿ ಬಹುಪಾಲು ರಸ್ತೆ ಬಂದ್‌ ಮಾಡಲಾಗಿದ್ದು, ವಾಹನಗಳ ಓಡಾ‌ಟಕ್ಕೆ ಸಮಸ್ಯೆಯಾಗಿದೆ. ಕಾಮ ಗಾರಿಯ ಮಣ್ಣು ಚರಂಡಿಗಳಲ್ಲಿ ತುಂಬಿಕೊಂಡಿದ್ದು, ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ.

ನೀರಿನ ಬವಣೆ: ಯುಜಿಡಿ ಕಾಮಗಾರಿ ವೇಳೆ ನೀರು ಸರಬರಾಜಿನ ಪೈಪ್‌ಗಳು ಜಖಂಗೊಂಡಿದ್ದು, ಬಡಾವಣೆಗೆ ಮೂರ್ನಾಲ್ಕು ತಿಂಗಳಿನಿಂದ ನೀರು ಪೂರೈಕೆಯಾಗುತ್ತಿಲ್ಲ. ಮತ್ತೊಂದೆಡೆ ನಗರಸಭೆಯ ಟ್ಯಾಂಕರ್‌ಗಳಿಂದಲೂ ನೀರು ಸರಬರಾಜು ಮಾಡುತ್ತಿಲ್ಲ.

ಹೀಗಾಗಿ ಸ್ಥಳೀಯರು ಹಣ ಕೊಟ್ಟು ಖಾಸಗಿ ಟ್ಯಾಂಕರ್‌ ಮಾಲೀಕರಿಂದ ನೀರು ಖರೀದಿಸುವಂತಾಗಿದೆ. ಕುಡಿಯುವ ನೀರಿಗೆ ಪ್ರತಿ ಬಿಂದಿಗೆಗೆ ₹ 10 ಹಾಗೂ ಗೃಹ ಬಳಕೆ ಉದ್ದೇಶದ ನೀರಿಗೆ ಟ್ಯಾಂಕರ್‌ ಲೋಡ್‌ಗೆ ₹ 700 ಇದೆ. ನಗರದಲ್ಲಿ ಇತ್ತೀಚೆಗೆ ಧಾರಾಕಾರ ಮಳೆಯಾಗಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದ್ದರೂ ವಿನೋಭ ನಗರ ನಿವಾಸಿಗಳಿಗೆ ನೀರಿನ ಬವಣೆ ತಪ್ಪಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT