ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ದಿನವಾಗಿ ಟಿಪ್ಪು ಜಯಂತಿ

Last Updated 13 ನವೆಂಬರ್ 2017, 9:36 IST
ಅಕ್ಷರ ಗಾತ್ರ

ರಾಮನಗರ: ‘ಭಾರತದ ರಾಜಕೀಯ ಅತಂತ್ರವಾಗಿದ್ದ ಸಮಯದಲ್ಲೂ ಧಾರ್ಮಿಕ ಸಾಮರಸ್ಯಕ್ಕೆ ಶ್ರಮಿಸಿದ ಮೇಧಾವಿ ಟಿಪ್ಪು ಸುಲ್ತಾನ್‌. ಅವರ ಜನ್ಮ ದಿನವನ್ನು ಸಾಂಸ್ಕೃತಿಕ, ಸೌಹಾರ್ದ ದಿನವವಾಗಿ ಆಚರಿಸಬೇಕು’ ಎಂದು ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ. ನಾಗೇಶ್‌ ಹೇಳಿದರು.

ಇಲ್ಲಿನ ರೈಲ್ವೆ ವೃತ್ತದ ಬಳಿ ಇರುವ ಬಿಎಸ್‌ಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆದ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಟಿಪ್ಪು ಅವರ ವ್ಯಕ್ತಿತ್ವ ಹಾಗೂ ಆಡಳಿತಾತ್ಮಕ ದೂರದೃಷ್ಟಿ, ಸಾಂಸ್ಕೃತಿಕ ನೆಲೆಗಟ್ಟು ಪರಿಗಣಿಸಿ ಟಿಪ್ಪು ಜನ್ಮ ದಿನ ವನ್ನು ರಾಜ್ಯದ ಸಾಂಸ್ಕೃತಿಕ, ಸೌಹಾರ್ದ ದಿನವಾಗಿ ಆಚರಿಸಬೇಕು’ ಎಂದು ಸಲಹೆ ನೀಡಿದರು.

‘ಟಿಪ್ಪು ತನ್ನ ಆಡಳಿತದ ಅವಧಿಯಲ್ಲಿ ಎಲ್ಲಾ ಜಾತಿ, ವರ್ಗ, ಧರ್ಮಗಳಿಗೂ ಪ್ರಾಶಸ್ತ್ಯ ನೀಡಿದ್ದರು. ಧರ್ಮಗಳ ನಡುವೆ ಸಮನ್ವಯತೆ ತರಲು ಹಲವು ಪ್ರಮುಖ ಕಾರ್ಯಕ್ರಮ ಆಯೋಜಿಸಿದ್ದರು. ಬ್ರಿಟಿಷರ ವಿರುದ್ಧ ಪ್ರಬಲ ಶಕ್ತಿಯಾಗಿ ರೂಪುಗೊಂಡಿದ್ದರು. ಬ್ರಿಟಿಷರ ತೆರಿಗೆ ನೀತಿ ವಿರುದ್ಧ, ಸ್ತ್ರೀಪರ ಧ್ವನಿ ಎತ್ತಿದ್ದರು. ಕ್ಷಿಪಣಿ ತಂತ್ರಜ್ಞಾನ ಅಳವಡಿಸಿಕೊಂಡ ಹಿರಿಮೆ ಅವರದಾಗಿತ್ತು’ ಎಂದು ತಿಳಿಸಿದರು.

ಬಹುಜನ ವಿದ್ಯಾರ್ಥಿ ಸಂಘದ ಸಲಹೆಗಾರ ಹರೀಶ್‌ ಮಾತನಾಡಿ ‘ಟಿಪ್ಪು ಸುಲ್ತಾನ್ ರಾಜವನ್ನು ರಕ್ಷಿಸಲು ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಟ್ಟಿದ್ದರು. ಅಂತಹ ಮಹನೀಯ ರಾಜನನ್ನು ಬಿಜೆಪಿ ದ್ರೋಹಿ ಎನ್ನುತ್ತಿದೆ’ ಎಂದು ದೂರಿದರು.

‘ಇತಿಹಾಸದ ಪುಟಗಳಿಂದ ಎಲ್ಲರೂ ಒಳ್ಳೆಯ ಪಾಠ ಕಲಿಯಬೇಕು. ಬ್ರಿಟಿಷರ ವಿರುದ್ಧ ಹೋರಾಟ ನಡೆಸುತ್ತಲೇ ಪ್ರಾಣ ತೆತ್ತ ಮಹಾನ್‌ ವೀರ ಟಿಪ್ಪು ಸ್ಮರಣೆ ಅಗತ್ಯ. ದೇಶಕ್ಕಾಗಿ ಕೊಡುಗೆ ನೀಡಿದ ಮಹಾನ್‌ ವ್ಯಕ್ತಿಗಳನ್ನು ಗೌರವಿಸೋಣ, ಅವಮಾನಿಸುವುದು ಬೇಡ’ ಎಂದು ಹೇಳಿದರು.

ಬಿಎಸ್‌ಪಿ ತಾಲ್ಲೂಕು ಘಟಕದ ಅಧ್ಯಕ್ಷ ವಿ. ಸ್ವಾಮಿ ಮಾತನಾಡಿ ‘ಮಹಾನ್‌ ನಾಯಕರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ದೇಶದ ರಕ್ಷಣೆಗಾಗಿ ಹೋರಾಡಿದ ಟಿಪ್ಪು ಸುಲ್ತಾನ್‌ ಮುಸ್ಲಿಂ ಎನ್ನುವ ಬದಲು ಭಾರತೀಯ ಎಂದು ಕರೆಯಬೇಕು’ ಎಂದು ತಿಳಿಸಿದರು.

ಬಿಎಸ್‌ಪಿ ಜಿಲ್ಲಾ ಸಂಯೋಜಕ ಸೈಯ್ಯದ್ ಬಾಬು, ನಗರ ಘಟಕದ ಅಧ್ಯಕ್ಷ ಮುರುಗೇಶ್‌, ಉಪಾಧ್ಯಕ್ಷ ನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಪದಾಧಿಕಾರಿಗಳಾದ ಶ್ರೀನಿವಾಸರಾವ್‌, ಸೈಯ್ಯದ್‌ ಮತೀನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT