ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿ ನಿರ್ಮಾಣ ನಿರ್ಣಯಕ್ಕೆ ವಿರೋಧ

Last Updated 14 ನವೆಂಬರ್ 2017, 4:44 IST
ಅಕ್ಷರ ಗಾತ್ರ

ಬಾಗಲಕೋಟೆ: ‘ನವನಗರದ ಖಾಸಗಿ ಮಾಲೀಕತ್ವದ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ಅನುಮತಿ ನೀಡುವ ಮೂಲಕ ವಿವಾದಾತ್ಮಕ ನಿರ್ಣಯ ಕೈಗೊಂಡಿದೆ' ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಸದಸ್ಯರು ಸೋಮವಾರ ಇಲ್ಲಿನ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ನವನಗರದ ಹಳೇ ಆರ್‌ಟಿಒ ಕಚೇರಿಯಿಂದ ಪ್ರತಿಭಟನೆ ಆರಂಭಿಸಿದ ವೇದಿಕೆಯ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಬಿಟಿಡಿಎ ಅಧ್ಯಕ್ಷ ಎ.ಡಿ.ಮೊಕಾಶಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಯುಕೆಪಿಯ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ವಿಭಾಗದ ಮಹಾ ವ್ಯವಸ್ಥಾಪಕ ನಳಿನಿ ಅತುಲ್ ಅವರಿಗೆ ಮನವಿ ಸಲ್ಲಿಸಿದರು.

ವೇದಿಕೆಯ ಪ್ರಾಂತ ಕಾರ್ಯದರ್ಶಿ ಅಶೋಕ ಮುತ್ತಿನಮಠ ಮಾತನಾಡಿ, ನವನಗರಕ್ಕೆ ಸಮಾನ ಸೌಲಭ್ಯ ಒದಗಿಸುವ ಜವಾಬ್ದಾರಿ ಹೊತ್ತಿರುವ ಬಿಟಿಡಿಎ ಒಂದೇ ಕೋಮಿಗೆ ಸೌಲಭ್ಯ ನೀಡಲು ಮುಂದಾಗಿರುವುದು ಸರಿಯಲ್ಲ. ಮುಳುಗಡೆ ಸಮಯದಲ್ಲಿ ಮಸೀದಿಗಳಿಗೆ ಸ್ಥಾನ ಹಂಚಿಕೆ ಮಾಡಲಾಗಿದೆ. ನವನಗರದಲ್ಲಿ ಈಗಾಗಲೇ ಸಾಕಷ್ಟು ಮಸೀದಿಗಳಿವೆ. ಬಿಟಿಡಿಎ ತನ್ನ 129ನೇ ಸಭೆಯಲ್ಲಿ ಕೈಗೊಂಡಿರುವ ನಿರ್ಣಯ ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಸಾಮರಸ್ಯಕ್ಕೆ ದಕ್ಕೆ ತರುವಂತಹ ನಿರ್ಣಯ ಕೈಗೊಂಡಿರುವ ಬಿಟಿಡಿಎ ಅಧ್ಯಕ್ಷ ಎ.ಡಿ.ಮೊಕಾಶಿ ಅವರನ್ನು ಕೂಡಲೇ ವಜಾಗೊಳಿಸಬೇಕು. ಅವರ ಸ್ಥಾನಕ್ಕೆ ಬೇರೆ ಅಧಿಕಾರಿಯನ್ನು ನೇಮಿಸಿ, ಸರಿಯಾದ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಿವಾನಂದ ಬಡಿಗೇರ ಮಾತನಾಡಿ, ನವನಗರದಲ್ಲಿ ಸಾಕಷ್ಟು ಮಸೀದಿಗಳಿವೆ. ಆದರೂ ಕೂಡಾ ನಮಾಜ್ ಮಾಡಲು ಮಸೀದಿಗಳಿಲ್ಲ ಎಂದು ತಪ್ಪು ಮಾಹಿತಿ ನೀಡಿ, ದಿಕ್ಕು ತಪ್ಪಿಸುವ ಹುನ್ನಾರ ನಡೆಸಲಾಗುತ್ತಿದೆ. ಸಂತ್ರಸ್ತರಿಗೆ ಸೂಕ್ತ ಸೌಲಭ್ಯ ನೀಡಬೇಕಾದ ಬಿಟಿಡಿಎ ಕೇವಲ ಒಂದು ಕೋಮಿಗೆ ಮಾತ್ರ ಸೌಲಭ್ಯ ಒದಗಿಸಲು ಮುಂದಾಗಿರುವುದು ಖಂಡನಾರ್ಹ ಎಂದು ದೂರಿದರು.

ನಗರದ ಕೋಮು ಸಾಮರಸ್ಯಕ್ಕೆ ಧಕ್ಕೆ ತರಲು ಕೈಗೊಂಡಿರುವ ಈ ನಿರ್ಣಯಕ್ಕೆ ಆಕ್ಷೇಪಣೆ ಇದ್ದು, ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ಅನುಮತಿ ನೀಡಿದ್ದಲ್ಲಿ ಕೂಡಲೇ ಅದನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ವೇದಿಕೆ ವತಿಯಿಂದ ಉಗ್ರ ಹೋರಾಟ ಕೈಗೊಂಡು ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ರಾಜು ನಾಯ್ಕರ್, ಆನಂದ ಮುತ್ತಗಿ, ಬಸವರಾಜ ಯಂಕಂಜಿ, ಶಂಕರಗೌಡ ಪಾಟೀಲ, ನಾಗೇಶ ಅಂಬಿಗೇರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT