ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸಿಗೆ ಆಗ್ರಹ

Last Updated 14 ನವೆಂಬರ್ 2017, 6:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಕೂಡಲೇ ಶಿಫಾರಸು ಮಾಡಬೇಕು ಎಂದು ಇಲ್ಲಿನ ಮಡಿವಾಳ ಸಂಘದವರು ಸೋಮವಾರ ಪ್ರತಿಭಟನೆ ನಡೆಸಿದರು.

ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಸಮುದಾಯದವರು, ತಮ್ಮ ಬೇಡಿಕೆ ಈಡೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಸುಮಾರು 18 ಲಕ್ಷ ಜನಸಂಖ್ಯೆಯುಳ್ಳ ಮಡಿವಾಳ (ಅಗಸ, ರಜಕ, ಪರಿಟ) ಸಮುದಾಯದವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಅತ್ಯಂತ ಕೆಳಸ್ತರದಲ್ಲಿದ್ದಾರೆ. ಶೋಷಣೆಗೊಳಪಟ್ಟ ಸಮುದಾಯವಾಗಿದೆ ಎಂದು ಅಳಲು ತೋಡಿಕೊಂಡರು.

‘ಹಿಂದುಳಿದ ನಮ್ಮ ಸಮುದಾಯವನ್ನು ದೇಶದ ಇತರೆ ರಾಜ್ಯಗಳ ಶಿಫಾರಸಿನಂತೆ ಕೇಂದ್ರ ಸರ್ಕಾರವು 18 ರಾಜ್ಯಗಳಲ್ಲಿ ಮತ್ತು 5 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ (ದೋಬಿ, ರಜಕ, ಪರಿಟ) ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಸೌಲಭ್ಯಗಳಿಗೆ ಸಾಂವಿಧಾನಿಕವಾಗಿ ಅವಕಾಶ ಒದಗಿಸಿಕೊಡಲಾಗಿದೆ. ಅದೇ ರೀತಿ ಇಲ್ಲಿನ ರಾಜ್ಯ ಸರ್ಕಾರವೂ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದರು.

‘ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು 1978ರಿಂದ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಸಂಘದವರು ಅನೇಕ ಕಡೆಗಳಲ್ಲಿ ಪ್ರತಿಭಟನೆ, ಸಭೆ, ಸಮಾವೇಶ ನಡೆಸಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇವೆ. ಆದರೆ, ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಬಸವ ಮಾಚಿದೇವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ, ಅಖಿಲ ಭಾರತೀಯ ರಜಕ (ದೋಬಿ) ಮಹಾಸಭಾದ ಅಧ್ಯಕ್ಷ
ಜೆ.ಹೆಂಜೇರಪ್ಪ ಮಡಿವಾಳ, ಸಂಘದ ಜಿಲ್ಲಾಧ್ಯಕ್ಷ ಟಿ.ರಮೇಶ್, ಪ್ರಧಾನ ಕಾರ್ಯದರ್ಶಿ ಟಿ.ಚಿದಾನಂದಪ್ಪ, ಗೌರವಾಧ್ಯಕ್ಷ ಎಂ.ಹನುಮಂತಪ್ಪ, ಉಪಾಧ್ಯಕ್ಷರಾದ ಎಸ್.ಸೋಮಶೇಖರ್, ಕೆ.ತಿಪ್ಪೇಸ್ವಾಮಿ, ಸಹ ಕಾರ್ಯದರ್ಶಿ ಎಸ್.ಗಂಗಾಧರ, ಖಜಾಂಚಿ ದಶರಥಯ್ಯ, ನಿರ್ದೇಶಕರಾದ ಪಾತಪ್ಪ, ವಿ.ಎಲ್.ಪ್ರಶಾಂತ್, ಎಸ್.ಮಂಜುನಾಥ, ಬಿ.ಹನುಮಂತಪ್ಪ, ಪುರುಷೋತ್ತಮ, ನಗರಸಭೆ ಸದಸ್ಯ ಬಿ.ಕಾಂತರಾಜ್ ಹಾಗೂ ಮಡಿವಾಳ ಸಮುದಾಯದ ನೂರಾರು ಮಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT