ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಕಾಶಪ್ಪನವರಿಂದ ದ್ವೇಷದ ರಾಜಕಾರಣ

‘ಕುರುಬರ ನಡಿಗೆ ಹುಲ್ಲಳ್ಳಿ ಕಡೆಗೆ’ ಪಾದಯಾತ್ರೆ ಮುಕ್ತಾಯ: ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪ
Last Updated 16 ನವೆಂಬರ್ 2017, 6:43 IST
ಅಕ್ಷರ ಗಾತ್ರ

ಕೂಡಲಸಂಗಮ: ‘ಯಾವುದೇ ಗ್ರಾಮಗಳಲ್ಲಿ ಸಮಸ್ಯೆಗಳು ಕಂಡು ಬಂದಾಗ ಪರಸ್ಪರರೊಂದಿಗೆ ಚರ್ಚಿಸಿ ಅದಕ್ಕೆ ಪರಿಹಾರ ಕಲ್ಪಿಸುವುದು ಜನಪ್ರತಿನಿಧಿಯಾದವರ ಕರ್ತವ್ಯ. ಆದರೆ, ಹುಲ್ಲಳ್ಳಿ ವಿಷಯದಲ್ಲಿ ಶಾಸಕ ವಿಜಯನಂದ ಕಾಶಪ್ಪನವರ ಅವರು ಆ ಕಾರ್ಯ ಮಾಡದೆ ಗ್ರಾಮಸ್ಥರಲ್ಲಿ ದ್ವೇಷದ ಮನೋಭಾವ ತುಂಬುವ ಕೆಲಸ ಮಾಡಿದ್ದಾರೆ’ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.

ಹುಲ್ಲಳ್ಳಿ ಗ್ರಾಮ ಸ್ಮಶಾನ ಜಾಗ ಸ್ಥಳಾಂತರಕ್ಕೆ ಒತ್ತಾಯಿಸಿ ಕುರುಬರ ಸಂಘ ಹುಲ್ಲಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಭ್ರಷ್ಟಾಚಾರ ಮತ್ತು ದ್ವೇಷ ರಾಜಕಾರಣ ಕಾಶಪ್ಪನವರ ಕುಟುಂಬಕ್ಕೆ ಬಳುವಳಿಯಾಗಿ ಬಂದಿದೆ. ಇದರ ಪರಿಣಾಮ ಇವರ ನಾಲ್ಕುವರೆ ವರ್ಷಗಳ ಅಧಿಕಾರವಧಿಯಲ್ಲಿ ವಾತಾವರಣ ಸಂಪೂರ್ಣ ಕಲುಷಿತಗೊಂಡಿದೆ. ಇದಕ್ಕೆ ಇತಿಶ್ರೀ ಹಾಡುವ ಕಾಲವೂ ಈಗ ಕೂಡಿ ಬಂದಿದೆ ಎಂದರು.

‘ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಮರೋಳ ಏತನೀರಾವರಿ ಯೋಜನೆಯ 2ನೇ ಹಂತದ ಹನಿ ನೀರಾವರಿ ಯೋಜನೆ ಸೇರಿದಂತೆ ಇತರ ಮಹತ್ವದ ಯೋಜನೆಗಳು ಈಗಿನ ಶಾಸಕರ ಭ್ರಷ್ಟಾಚಾರದಿಂದಾಗಿ ಹಳ್ಳ ಹಿಡಿದಿವೆ. ಕಲ್ಲು, ಮಣ್ಣು, ಮರಳು ಲೂಟಿ ಮಾಡುವುದೇ ಇವರ ನಿತ್ಯದ ಕಾಯಕವಾಗಿದೆ. ಸಮಾಜ ಸಮಾಜಗಳ ಮಧ್ಯೆ ದ್ವೇಷ ಹಚ್ಚುವ ಕಾರ್ಯದಲ್ಲಿ ತಲ್ಲಿನರಾಗಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದ್ನೂರ, ‘ಶಾಸಕ ಕಾಶಪ್ಪನವರ ನಾಲ್ಕೂವರೆ ವರ್ಷಗಳ ಅಧಿಕಾರವಧಿಯಲ್ಲಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ದ್ವೇಷದ ರಾಜಕಾರಣ ಮಿತಿಮೀರಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಸಿದರು.

ವಕೀಲ ಎನ್.ಜೆ. ರಾಮವಾಡಗಿ, ಜಿಲ್ಲಾ ಪಂಚಾಯತ ಸದಸ್ಯ ವಿರೇಶ ಉಂಡೋಡಿ, ಶಶಿಕಾಂತ ಪಾಟೀಲ,ಸಹನಾ ಅಂಗಡಿ, ಬೆಳಗಲ್ಲ ಗ್ರಾಪಂ. ಅಧ್ಯಕ್ಷ ಮಹಾಂತೇಶ ಉಂಡೊಡಿ, ಮಹಾಂತಗೌಡ ಪಾಟೀಲ ಇತರರು ಮಾತನಾಡಿದರು.

ಈರಣ್ಣ ಹಳೆಗೌಡ್ರ, ಬಸವರಾಜ ಅಂಟರದಾನಿ, ನಾಗೇಶ ಗಂಜಿಹಾಳ, ಹನಮಂತ ಘಂಟಿ, ವಿಠಲ ತಿಮ್ಮಾಪೂರ, ಚಂದ್ರು ಭರಮಗೌಡ್ರ, ಸಂಗಮೇಶ ನಾರಗಲ್ಲ, ಮಲ್ಲಿಕಾರ್ಜುನ ಚೂರಿ, ಅಪ್ಪು ಆಲೂರ, ಚಂದ್ರಶೇಖರ ಸನ್ನಿ, ಬಸನಗೌಡ ಗೌಡರ, ಸುಭಾಷ ಮುಕ್ಕಣ್ಣವರ ಇದ್ದರು.

ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮುಕ್ಕಣ್ಣ ಮುಕ್ಕಣ್ಣವರ ನೇತೃತ್ವದಲ್ಲಿ ಮಂಗಳವಾರ ಕೂಡಲಸಂಗಮದಿಂದ ಆರಂಭಗೊಂಡ ಪಾದಯಾತ್ರೆ ಖಜಗಲ್ಲ, ಕೆಂಗಲ್ಲ, ವರಗೋಡದಿನ್ನಿ, ಹೂವನೂರ, ಸಂಗಮ ಕ್ರಾಸ್, ಬೆಳಗಲ್ಲ, ಬಿಸನಾಳಕೊಪ್ಪ, ಇದ್ದಲಗಿ, ಕಮದತ್ತ ಮಾರ್ಗವಾಗಿ ಅಡವಿಹಾಳ ತಲುಪಿ, ಅಲ್ಲಿ ವಾಸ್ತವ್ಯ ಮಾಡಲಾಯಿತು. ಬುಧವಾರ ಬೆಳಿಗ್ಗೆ ಅಡವಿಹಾಳದಿಂದ ಎಮ್ಮಟ್ಟಿ, ಧನ್ನೂರ ಗ್ರಾಮದ ಮಾರ್ಗವಾಗಿ ಮಧ್ಯಾಹ್ನ ಹುಲ್ಲಳ್ಳಿ ತಲುಪಿತು. ನಂತರ ಶಾಸಕ ವಿಜಯಾನಂದ ಕಾಶಪ್ಪನವರ ಪತಿಕೃತಿ ದಹನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT