ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರ ಜೀವಿಗಳಲ್ಲಿ ಪ್ಲಾಸ್ಟಿಕ್‌ ಪತ್ತೆ

ಬ್ರಿಟನ್‌ನ ನ್ಯೂಕ್ಯಾಸೆಲ್‌ ವಿಶ್ವವಿದ್ಯಾಲಯದ ತಂಡದಿಂದ 90ಪ್ರಾಣಿಗಳ ಪರೀಕ್ಷೆ
Last Updated 16 ನವೆಂಬರ್ 2017, 19:54 IST
ಅಕ್ಷರ ಗಾತ್ರ

ಲಂಡನ್‌: ಸಮುದ್ರದಲ್ಲಿ ಹತ್ತು ಕಿಲೋ ಮೀಟರ್‌ಗಿಂತಲೂ ಹೆಚ್ಚಿನ ಆಳದಲ್ಲಿ ಜೀವಿಸುತ್ತಿರುವ ಪ್ರಾಣಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಇರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಬ್ರಿಟನ್‌ನ ನ್ಯೂಕ್ಯಾಸೆಲ್‌ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಬಗ್ಗೆ ಅಧ್ಯಯನ ನಡೆಸಿದೆ.

ಪ್ಲಾಸ್ಟಿಕ್‌ ಈಗ ಸಾಗರದ ಅತ್ಯಂತ ಆಳಕ್ಕೂ ತಲುಪಿರುವುದು ಮಾತ್ರವಲ್ಲದೇ, ಅದು ಅಲ್ಲಿ ಜೀವಿಸುತ್ತಿರುವ ಪ್ರಾಣಿಗಳ ಹೊಟ್ಟೆ ಸೇರಿರುವುದನ್ನು ಸಂಶೋಧಕರು ಸಾಬೀತು ಪಡಿಸಿದ್ದಾರೆ.

‘ಮರಿಯಾನ, ಜಪಾನ್‌, ಇಝು–ಬೊನಿನ್‌, ಪೆರು–ಚಿಲಿ, ನ್ಯೂ ಹೆಬ್ರೈಡ್ಸ್‌ ಮತ್ತು ಕೆರ್ಮಡೆಕ್‌ನ ಆಳವಾದ ಕಂದಕ ಸೇರಿದಂತೆ ಪೆಸಿಫಿಕ್‌ ಮಹಾಸಾಗರದಲ್ಲಿ ಕಂಡು ಬರುವ ಚಿಪ್ಪುಜೀವಿಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಅಲಾನ್‌ ಜೇಮಿಸನ್‌ ತಿಳಿಸಿದ್ದಾರೆ.

‘ಈ ಪ್ರದೇಶಗಳಲ್ಲಿ ಸಾಗರವು 7 ಕಿಲೋ ಮೀಟರ್‌ನಿಂದ 10 ಕಿಲೋಮೀಟರ್‌ಗಳಷ್ಟು ಆಳಹೊಂದಿದೆ. ಮರಿಯಾನದಲ್ಲಿರುವ ಚ್ಯಾಲೆಂಜರ್‌ ಡೀಪ್‌, ಅತೀ ಹೆಚ್ಚು ಅಂದರೆ 10,890 ಮೀಟರ್‌ಗಳಷ್ಟು ಆಳವಿದೆ. ವಿಜ್ಞಾನಿಗಳು ಒಟ್ಟು 90 ಪ್ರಾಣಿಗಳ ಪರೀಕ್ಷೆ ಕೈಗೊಂಡಿದ್ದರು. ಈ ಪ್ರಾಣಿಗಳು ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಸೇವಿಸಿರುವುದು ಪತ್ತೆಯಾಗಿದೆ’ ಎಂದು ತಿಳಿಸಿದ್ದಾರೆ.

ನೈಲಾನ್‌, ಪಾಲಿಎಥಿಲೀನ್‌, ಪಿವಿಸಿ ಮುಂತಾದ ಉತ್ಪನ್ನಗಳಲ್ಲಿ ಬಳಸುವ ಮೈಕ್ರೊಫೈಬರ್‌ಗಳಾದ ರೇಯಾನ್‌, ಲಿಯೊಸೆಲ್‌ ಮತ್ತು ರ‍್ಯಾಮಿಯಂತಹ ಅರೆ ಸಂಶ್ಲೇಷಿತ ಸೆಲ್ಯುಲೋಸ್‌ ತಂತುಗಳು  (ಸೆಮಿ–ಸಿಂಥೆಟಿಕ್‌ ಸೆಲ್ಯುಲಾಸಿಕ್‌ ಫೈಬರ್ಸ್‌) ಪ್ರಾಣಿಗಳ ಹೊಟ್ಟೆಯಲ್ಲಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ.

ಸಮುದ್ರವು ಈಗ ಪ್ಲಾಸ್ಟಿಕ್‌ನಿಂದ ಮಾಲಿನ್ಯಗೊಂಡಿದೆ. ಇದು ಅಲ್ಲಿ ವಾಸಿಸುತ್ತಿರುವ ಜೀವಿಗಳ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಿದೆ. ಸಮುದ್ರಕ್ಕೆ ಸುಮಾರು 30 ಕೋಟಿ ಟನ್‌ ಪ್ಲಾಸ್ಟಿಕ್‌ ಎಸೆಯಲಾಗುತ್ತಿದೆ. ಇದರಲ್ಲಿ 2.5 ಲಕ್ಷ ಟನ್‌ ಪ್ಲಾಸ್ಟಿಕ್‌ ತುಣುಕುಗಳು ಸಮುದ್ರದ ಮೇಲೆ ತೇಲಾಡುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

**

30 ಕೋಟಿ ಟನ್‌: ಸಾಗರ ಸೇರಿರುವ ಪ್ಲಾಸ್ಟಿಕ್‌ ಪ್ರಮಾಣ

5 ಲಕ್ಷ ಕೋಟಿ: ಸಾಗರಗಳಲ್ಲಿ ತೇಲುತ್ತಿರುವ ಪ್ಲಾಸ್ಟಿಕ್‌ ತುಣುಕುಗಳು

2.5 ಲಕ್ಷ ಟನ್‌: ಪ್ಲಾಸ್ಟಿಕ್‌ ತುಣುಕುಗಳ ತೂಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT