ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳದಲ್ಲಿ ರೈತರ ದಂಡು

Last Updated 16 ನವೆಂಬರ್ 2017, 20:07 IST
ಅಕ್ಷರ ಗಾತ್ರ

ಬೆಂಗಳೂರು: ರೈತರ ಬರುವಿಕೆಗಾಗಿಯೇ ಕಾದು ಕುಳಿತಂತಿದ್ದ ಯಂತ್ರೋಪಕರಣಗಳು, ತರಹೇವಾರಿ ಪೂರಕ ಪರಿಕರಗಳು, ಹೊಸ ತಳಿಗಳ ಬಗ್ಗೆ ಮಾಹಿತಿ ನೀಡಲು ಸಿದ್ಧರಾಗಿ ನಿಂತಿದ್ದ ಅಧಿಕಾರಿಗಳು.. ಅಲ್ಲಿಗೆ ಬಂದ ರೈತರಿಗೆ ಹೊಸತರ ಹುಡುಕಾಟ, ಮಕ್ಕಳಿಗೆ ಜಾತ್ರೆಯಂತಹ ಸಂತಸ.

ಇದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೃಷಿ ಮೇಳದಲ್ಲಿ ಕಂಡ ದೃಶ್ಯಗಳು. ಮೊದಲ ದಿನ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳ ರೈತರು, ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.

ರೈತರ ಅಗತ್ಯಕ್ಕೆ ತಕ್ಕಂತೆ ಸಿದ್ಧಪಡಿಸಲಾದಂತಹ ಹತ್ತಾರು ಉಪಯುಕ್ತ ಯಂತ್ರೋಪಕರಣಗಳು ಮೇಳದಲ್ಲಿ ಕಾಣಸಿಗುತ್ತಿವೆ. ರೈತನನ್ನು ಸೆಳೆಯಲು ಕಂಪೆನಿಗಳು ನಾಮುಂದು, ತಾಮುಂದು ಎಂದು ಪೈಪೋಟಿಗೆ ಇಳಿದಿವೆ. ಇಡೀ ಮೈದಾನದಲ್ಲಿ ಎಲ್ಲ ಬಗೆಯ ಉಪಕರಣಗಳನ್ನು ಪ್ರದರ್ಶನಕ್ಕಿಟ್ಟು, ಪ್ರಾತ್ಯಕ್ಷಿಕೆ ತೋರಿಸುತ್ತಿವೆ. ಕೃಷಿಯಷ್ಟೇ ಅಲ್ಲದೆ, ಹೈನುಗಾರಿಕೆ, ಕುರಿ, ಕೋಳಿ, ಹಂದಿ ಸಾಕಾಣಿಕೆಯಂತಹ ಪೂರಕ ಕಸುಬುಗಳಿಗೂ ಅಗತ್ಯವಾದ ವಸ್ತುಗಳನ್ನು ಇಲ್ಲಿ ಕಾಣಬಹುದು.

ರಾಸಾಯನಿಕ ಬಳಸಿ ಕೃಷಿ ಮಾಡದೆ ಸಾವಯವ ಕ್ಷೇತ್ರದ ಕಡೆಗೂ ರೈತರನ್ನು ಆಕರ್ಷಿಸಲಾಗುತ್ತಿದೆ. ಸುಲಭವಾಗಿ ಸಿದ್ಧಪಡಿಸಬಹುದಾದ ಜೈವಿಕ ಅನಿಲ ಸ್ಥಾವರದ ಬಗ್ಗೆ ನಾಲ್ಕಾರು ಕಡೆ ಮಾಹಿತಿ ಸಿಗುತ್ತಿದೆ. ಮಿತವ್ಯಯದ ನೀರು ಬಳಕೆಗಾಗಿ ಹನಿ ನೀರಾವರಿ, ತುಂತುರು ನೀರಾವರಿಯಲ್ಲಿನ ಇತ್ತೀಚಿನ ಆವಿಷ್ಕಾರಗಳು, ಡ್ರೋನ್ ಸ್ಪ್ರೇಯರ್ ರೈತರ ಗಮನ ಸೆಳೆದವು. ನೀರಿನ ಸದ್ಭಳಕೆ ಕುರಿತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮಾದರಿ ಗ್ರಾಮವೊಂದನ್ನು ನಿರ್ಮಿಸಿ ರೈತರಲ್ಲಿ ಅರಿವು ಮೂಡಿಸಿತು.

ಧಾವಿಸಿದ ರೈತರು: ಮೇಳದ ಮೊದಲನೇ ದಿನ ಬೆಳಿಗ್ಗೆ ಅಷ್ಟಾಗಿ ಜನ ಕಾಣಿಸಲಿಲ್ಲ. ಆದರೆ, ಹೊತ್ತು ಏರುತ್ತಿದ್ದಂತೆ ಬೇರೆ ಬೇರೆ ಜಿಲ್ಲೆಗಳ ಸಾವಿರಾರು ರೈತರು ಮೇಳದಲ್ಲಿ ಕಾಣಿಸಿಕೊಂಡರು. ಎಲ್ಲ ಮಳಿಗೆಗಳನ್ನೂ ಒಂದು ಸುತ್ತು ಹಾಕಿ ಕೃಷಿ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳ ಬಗ್ಗೆ ಕೇಳಿ ತಿಳಿದರು. ತಮಗೆ ಅಗತ್ಯ ಎನಿಸಿದ ವಸ್ತುಗಳ ಖರೀದಿ ಮಾಡಿದರು. ಕೃಷಿ ಸಂಬಂಧಿತ ಮಾಹಿತಿಯ ಎಲ್ಲ ಕರಪತ್ರಗಳನ್ನೂ ಜೋಡಿಸಿಕೊಂಡು ಚೀಲದಲ್ಲಿ ಹಾಕಿಕೊಂಡರು.

ಕೃಷಿ ಕಾರ್ಮಿಕರ ಕೊರತೆಯನ್ನೇ ಮೂಲವಾಗಿಸಿಕೊಂಡು ಕಂಪೆನಿಗಳು ಸಾಕಷ್ಟು ಆವಿಷ್ಕಾರ ಮಾಡಿವೆ. ದೊಡ್ಡ ದೊಡ್ಡ ಯಂತ್ರಗಳ ಜೊತೆಗೆ ಅಡಿಕೆ ಕೊನೆ ಕೊಯ್ಯವುದು, ಕಾಯಿ ಕೀಳುವ ಯಂತ್ರ, ಬದು ಮಾಡುವುದಕ್ಕೆ, ಗುಂಡಿ ತೋಡುವುದಕ್ಕೆ, ಕಳೆ ಕೀಳುವ ಅಗತ್ಯವಾದಂತಹ ಸಣ್ಣಪುಟ್ಟ ಉಪಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ಕಾಣಿಸುತ್ತಿವೆ. ಇವುಗಳನ್ನು ಆಸಕ್ತಿಯಿಂದ ವೀಕ್ಷಿಸುವ ರೈತರು ತಮ್ಮ ಸಮಸ್ಯೆಗಳನ್ನು ಕಂಪೆನಿ ಪ್ರತಿನಿಧಿಗಳ ಮುಂದೆ ಹೇಳಿ ಅದಕ್ಕೆ ಪೂರಕವಾದ ಉಪಕರಣಗಳನ್ನೂ ಅಭಿವೃದ್ಧಿಪಡಿಸುವಂತೆ ಸಲಹೆ ನೀಡುತ್ತಿದ್ದರು.

ಕೃಷಿ, ತೋಟಗಾರಿಕೆ, ಅರಣ್ಯ, ಮೀನುಗಾರಿಕೆ, ಪಶು ಸಂಗೋಪನೆ ಇಲಾಖೆಗಳು ರೈತರಿಗೆ ಮಾಹಿತಿಗಳನ್ನು ಒದಗಿಸಿದವು. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಟೊಮೆಟೊ, ಈರುಳ್ಳಿ ಸೇರಿದಂತೆ ವಿವಿಧ ತರಕಾರಿಗಳು ಮತ್ತು ಹಣ್ಣುಗಳು ಹಾಗೂ ಅಣಬೆ ಬೇಸಾಯದಲ್ಲಿನ ಸುಧಾರಿತ ತಳಿಗಳನ್ನು ರೈತರಿಗೆ ಪರಿಚಯಿಸಿತು.

ಬೆಳೆ ಪ್ರಾತ್ಯಕ್ಷಿಕೆ: ಸೂರ್ಯಕಾಂತಿ, ಹೂಕೋಸು, ರಾಗಿ, ಭತ್ತ, ಸಿರಿ ಧಾನ್ಯಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದಂತಹ ಹೊಸ ತಳಿಗಳ ಬಗ್ಗೆ ಪ್ರಾಧ್ಯಾಪಕರು ರೈತರಿಗೆ ಮಾಹಿತಿ ನೀಡಿದರು. ಅಲ್ಲದೆ, ಮೇಳದ ಸುತ್ತಮುತ್ತ ಅವುಗಳನ್ನು ಪ್ರಾತ್ಯಕ್ಷಿಕೆಗಾಗಿ ಬೆಳೆದು ರೈತರಿಗೆ ಮನದಟ್ಟು ಮಾಡಿಸಲಾಯಿತು.

ಚಿಣ್ಣರಿಗೆ ಹಬ್ಬ: ನಗರದ ವಿವಿಧ ಶಾಲೆಗಳು ವಿದ್ಯಾರ್ಥಿಗಳನ್ನು ಮೇಳಕ್ಕೆ ಕರೆತಂದಿದ್ದರು. ನಿತ್ಯ ಪಾಠ, ಪ್ರವಚನದಲ್ಲಿ ಕಳೆಯುತ್ತಿದ್ದ ಮಕ್ಕಳು ಕೃಷಿ ಮೇಳದಲ್ಲಿ ಸಂಭ್ರಮಿಸಿದರು. ಪ್ರತಿಯೊಂದು ಮಳಿಗೆಗೂ ಭೇಟಿ ನೀಡಿ ‘ಅಂಕಲ್ ಏನಿದು’, ‘ಇದರಿಂದ ಏನು ಮಾಡುತ್ತಾರೆ’ ಎಂದೆಲ್ಲ ಪ್ರಶ್ನಿಸಿ ಮಾಹಿತಿ ಪಡೆದರು.

ರಾಜ್ಯದ ವಿವಿಧ ಭಾಗಗಳ ತಿನಿಸುಗಳು, ಖಾರ ಪದಾರ್ಥಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿದ್ದವು. ಗುಡಿ ಕೈಗಾರಿಕೆ ವಸ್ತುಗಳು, ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು, ಗೃಹ ಬಳಕೆ ವಸ್ತುಗಳನ್ನೂ ಮೇಳದಲ್ಲಿ ಕಾಣಬಹುದಾಗಿದೆ. ಮನೆಯಲ್ಲಿಯೇ ಬೆಳೆಯಬಹುದಾದ ನರ್ಸರಿ ಪೂರಕ ವಸ್ತುಗಳು ಮಹಿಳೆಯರಿಗೆ ಆಕರ್ಷಣೀಯವಾಗಿವೆ.

ಪ್ರತ್ಯಕ್ಷವಾಗಿ ಮಡಿಕೆ ತಯಾರಿಸುವ ಕುಂಬಾರರು ಮತ್ತು ಅಲ್ಲಲ್ಲಿ ಗುಂಪುಕಟ್ಟಿಕೊಂಡು ಹಾಡುವ ಜನಪದ ಕಲಾವಿದರು ಮೇಳದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT