ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಗುತಿ ಮಿಂಚು

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಭಾರತೀಯರು ಆಭರಣ ಪ್ರಿಯರು. ಹೊಸ ಆಭರಣಗಳನ್ನು ಸಂಶೋಧಿಸುವುದರಲ್ಲೂ ನಿಷ್ಣಾತರು. ಹೀಗಾಗಿ, ತಲೆಯಿಂದ ಕಾಲಿನವರೆಗೂ ಥರಥರದ ಆಭರಣ ಭಂಡಾರವೇ ಕಂಡು ಬರುತ್ತದೆ. ಅದೂ ವಿವಿಧ ಪ್ರದೇಶಗಳಿಗೆ ಹೋದಂತೆ ವಿನ್ಯಾಸಗಳು ಭಿನ್ನವಾಗುತ್ತ ಹೋಗುತ್ತದೆ.

ಇಂಥ ಆಭರಣಗಳ ಭಂಡಾರದಲ್ಲಿ ಮೂಗುತಿ ಗಾತ್ರದಲ್ಲಿ ಕಿರಿದು. ಆದರೆ, ಪಾತ್ರ ಮಾತ್ರ ಹಿರಿದು. ಬಂಗಾರ ಅಥವಾ ಬೆಳ್ಳಿಯಲ್ಲಿ ಮಾಡಿದಂಥ ಸಣ್ಣ ಹರಳಿನದ್ದು, ಚಿಕ್ಕ ಹೂ ಇರುವಂಥದ್ದನ್ನು ದಿನನಿತ್ಯ ಧರಿಸಲು ಬಳಸಲಾಗುತ್ತಿದೆ. ಸಣ್ಣ ರಿಂಗ್ ಮಾದರಿಯದ್ದೂ ಕೆಲ ಕಾಲ ಹೆಸರು ಮಾಡಿತು. ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಂದಾಗಿ ಇದು ಹೊಸ ಫ್ಯಾಷನ್ ಸಹ ಆಯಿತು.

ಭಾರತೀಯರು ಸಾಮಾನ್ಯವಾಗಿ ಬೆಳ್ಳಿ, ಬಂಗಾರ, ಟೈಟಾನಿಯಂ, ಸ್ಟೇನ್‌ಲೆಸ್ ಸ್ಟೀಲ್ ಗಳ ಮೂಗುತಿ ಧರಿಸುವುದನ್ನು ಕಾಣುತ್ತೇವೆ. ಈ ಲೋಹಗಳು ಮಾನವನ ದೇಹದ ಮೇಲೆ ರಾಸಾಯನಿಕ ಪ್ರತಿಕ್ರಿಯೆ ಉಂಟು ಮಾಡದಿರುವ ಕಾರಣ ಇವುಗಳನ್ನೇ ಬಳಸಲಾಗುತ್ತದೆ.

ಮೂಗಿನ ಹೊಳ್ಳೆಗೆ ಅಥವಾ ಎರಡೂ ಹೊಳ್ಳೆಗಳ ಮಧ್ಯದಲ್ಲಿ ಧರಿಸುವ ವಿಧಾನಗಳು ಇವೆ. ಹೊಳ್ಳೆಗಳ ಮಧ್ಯ ಧರಿಸುವ ಪದ್ಧತಿ ದಕ್ಷಿಣ ಭಾರತದಲ್ಲಿ ಕಾಣಬಹುದು.

ಭಾರತೀಯ ಸಂಸ್ಕೃತಿಯ ಬಿಂಬಗಳನ್ನು ಕಾಣಬಹುದಾದ ಬಾಲಿವುಡ್‌ನಲ್ಲಂತೂ ಮೂಗುತಿಯ ಬಳಕೆ ಹಾಸುಹೊಕ್ಕಾಗಿದೆ. ಹಲವು ಚಲನಚಿತ್ರಗಳಲ್ಲಿ ನಾಯಕಿಯರು ಧರಿಸಿದ ನತ್ತುಗಳು, ಮರೆತು ಹೋದ ಹಳೆಯ ಸಂಪ್ರದಾಯಗಳಿಗೆ ಮರುಹುಟ್ಟು ನೀಡಿವೆ.

ದಬಂಗ್2 ನಲ್ಲಿ ಸೋನಾಕ್ಷಿ ಸಿನ್ಹಾ ಧರಿಸಿದ್ದ ಮೂಗಿನ ರಿಂಗ್ ಟ್ರೆಂಡ್ ಸೆಟ್ಟರ್ ಆಯಿತು. ವೀರ್ ಝಾರಾದಲ್ಲಿ ಪ್ರೀತಿ ಝಿಂಟಾಳ ಮೂಗಿನಲ್ಲಿ ಶೋಭಿ ಸಿದ ಮೂಗು ಬಟ್ಟು, ಏಜೆಂಟ್ ವಿನೋದ್ ನಲ್ಲಿ ಕರೀನಾ ಕಪೂರ್ ಧರಿಸಿದ ಮೂಗಿನ ಆಭರಣವೂ ಹೆಸರು ಮಾಡಿತು. ರಾಮಲೀಲಾದಲ್ಲಿ ಐಟಮ್ ನೃತ್ಯ ಮಾಡಿದ ಪ್ರಿಯಾಂಕಾ ಛೋಪ್ರಾಗೆ ಗ್ಲಾಮರ್ ಲುಕ್ ನೀಡಿದ್ದು ಪುಟ್ಟ ಮೂಗುತಿಯೇ.

ಮಹಾರಾಷ್ಟ್ರದಲ್ಲಿ ನತ್ತು ಧರಿಸುವುದು ಈಗಲೂ ಜನಪ್ರಿಯ ಅಲಂಕಾರ. ಮುತ್ತಿನ ಮೂಗುತಿಯಿಲ್ಲದೇ ಅಲ್ಲಿಯ ಸಾಂಪ್ರದಾಯಿಕ ಅಲಂಕಾರ ಪೂರ್ಣಗೊಳ್ಳುವುದೇ ಇಲ್ಲ. ವಿವಾಹ, ಪೂಜೆ ಸಮಾರಂಭಗಳಲ್ಲಿ ಅಲ್ಲಿ ಮಹಿಳೆಯರ ಮೂಗಿಗೆ ಥರಥರದ ನತ್ತುಗಳು ರಾರಾಜಿಸುತ್ತವೆ. ಬಾಜಿರಾವ್ ಮಸ್ತಾನಿಯಲ್ಲಿ ಪ್ರಿಯಾಂಕಾ ಛೋಪ್ರಾ ಧರಿಸಿದ್ದೂ ಇದೇ ಥರದ್ದು.

ನಟಿ ವಿದ್ಯಾ ಬಾಲನ್ ಹಾಗೂ ಸೋನಂ ಕಪೂರ್ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲೂ ಮೂಗುತಿ ಧರಿಸಿ ನೋಡುಗರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು. ಜೋಧಾ ಅಕ್ಬರ್‌ ಚಿತ್ರದಲ್ಲಿ ಐಶ್ವರ್ಯಾ ರೈ ಹಾಗೂ ಬಾಜಿರಾವ್ ಮಸ್ತಾನಿಯಲ್ಲಿ ದೀಪಿಕಾ ಧರಿಸಿದ ಬಳೆಯಂಥ ಮೂಗಿನ ರಿಂಗ್‌ ಬಹಳ ಹೆಸರು ಮಾಡಿತು. ಈಗಲೂ ಹಲವು ಬಾಲಿವುಡ್ ನಟಿಯರು ಮೂಗುತಿಗಳ ಫ್ಯಾಷನ್ ಲೋಕವನ್ನೇ ಸಿನಿಮಾದಲ್ಲಿ ತೆರೆದಿಡುತ್ತಿದ್ದಾರೆ.

ಇದನ್ನು ನೋಡಿ ಆಧುನಿಕ ಮನೋಭಾವದವರೂ ಮೂಗು ಚುಚ್ಚಿಸಿಕೊಳ್ಳಲು ಮುಂದಾಗದೇ ಇರುವರೇ? ಆದರೆ, ನೀವೂ ಮೂಗು ಚುಚ್ಚಿಸಿಕೊಳ್ಳಲು ಹೊರಟಿರೆಂದರೆ ಚಿನ್ನದ ಆಭರಣ ಕೆಲಸ ಮಾಡುವ ಅನುಭವಸ್ಥರು, ಅಥವಾ ಅನುಭವಸ್ಥ ಬಾಡಿ ಆರ್ಟಿಸ್ಟ್‌ಗಳ ಬಳಿಯೇ ಹೋಗುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT