ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ಅಂದಕ್ಕೆ ಬಾಟಲಿ ಕಲಾಕೃತಿ

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರತಿಯೊಂದು ಮನೆಯಲ್ಲೂ ಉಪಯೋಗಿಸದೆ ಮೂಲೆಗಿಟ್ಟ ವಿವಿಧ ವಿನ್ಯಾಸದ ಪ್ಲಾಸ್ಟಿಕ್‌ ಹಾಗೂ ಗಾಜಿನ ಬಾಟಲಿಗಳು ಇದ್ದೇ ಇರುತ್ತವೆ. ತಂಪು ಪಾನೀಯ ಕುಡಿದ ನಂತರ ಆ ಪ್ಲಾಸ್ಟಿಕ್ ಬಾಟಲಿಗಳನ್ನು ಅನೇಕರು ಬಿಸಾಡುತ್ತಾರೆ. ಆದರೆ, ಅವುಗಳನ್ನು ಬಿಸಾಡುವ ಬದಲು ಸ್ವಲ್ಪ ಕ್ರಿಯಾತ್ಮಕವಾಗಿ ಯೋಚಿಸಿದರೆ ಅಂತಹ ಬಾಟಲಿಗಳಿಂದ ಅಂದದ ಕಲಾಕೃತಿಗಳನ್ನು ತಯಾರಿಸಿ ಮನೆಯ ಅಂದ ಹೆಚ್ಚಿಸಲು ಸಾಧ್ಯ.

ಪೆನ್ ಸ್ಟ್ಯಾಂಡ್‌
ಮನೆಯಲ್ಲಿ ಪೆನ್ನು, ಪೆನ್ಸಿಲ್‌ಗಳನ್ನು ಅಲ್ಲಲ್ಲಿ ಇಡುವುದಕ್ಕಿಂತ ಒಂದೇ ಕಡೆಗಳಲ್ಲಿ ಇಡುವುದು ಒಳ್ಳೆಯದು. ಅದಕ್ಕಾಗಿ ನಾವು ಪೆನ್ ಸ್ಟ್ಯಾಂಡ್‌ಗಳನ್ನು ಅಂಗಡಿಯಿಂದ ಖರೀದಿಸಿ ತರುತ್ತೇವೆ. ದುಡ್ಡು ಕೊಟ್ಟು ತರುವ ಬದಲು ಮನೆಯಲ್ಲಿಯೇ ಇರುವ ಅನುಪಯೋಗಿ ಪ್ಲಾಸ್ಟಿಕ್‌ ಬಾಟಲಿಗಳಿಂದ ಪೆನ್ ಸ್ಟ್ಯಾಂಡ್‌ ಅನ್ನು ತಯಾರಿಸಬಹುದು.

ಪ್ಲಾಸ್ಟಿಕ್‌ ಬಾಟಲಿಗಳಿಂದ ತಯಾರಿಸುವ ಪೆನ್ ಸ್ಟ್ಯಾಂಡ್‌ಗಳು ಮಕ್ಕಳಿಗೆ ವಿವಿಧ ರೀತಿಯಲ್ಲಿ ಉಪಯೋಗಕ್ಕೆ ಬರುತ್ತವೆ. ಆಕರ್ಷಕ ವಿನ್ಯಾಸದ ಪೆನ್ ಸ್ಟ್ಯಾಂಡ್‌ಗಳನ್ನು ತಯಾರಿಸಿ ಮಕ್ಕಳಿಗೆ ಕೊಟ್ಟರೆ ಅವರು ಬರೆಯಲು ಉಪಯೋಗಿಸುವ ಪೆನ್ನು, ಪೆನ್ಸಿಲ್‌ಗಳು ಹಾಗೂ ಸಣ್ಣ ಪುಟ್ಟ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಲು ಇವು ನೆರವಾಗುತ್ತವೆ. ತಂಪು ಪಾನಿಯಗಳನ್ನು ಕುಡಿದ ನಂತರ ಬಾಟಲಿಗಳನ್ನು ಬಿಸಾಡುವ ಬದಲು ಅದರಲ್ಲಿ ಸುಂದರ ಆಕೃತಿಗಳನ್ನು ತಯಾರಿಸಿ ಮನೆಯ ಅಲಂಕಾರಕ್ಕೆ ಬಳಸಬಹುದು. ಮಾತ್ರವಲ್ಲದೆ ಅವುಗಳ ಮುಚ್ಚಳಗಳಿಂದಲೂ ಅದ್ಭುತವಾದ ವಿನ್ಯಾಸಗಳನ್ನು ಮಾಡಬಹುದು.

ಫ್ಲವರ್‌ ವಾಜ್
ಮನೆಯ ಅಲಂಕಾರಕ್ಕೂ ಅನುಪಯೋಗಿ ಗಾಜಿನ ಬಾಟಲಿಗಳನ್ನು ಉಪಯೋಗಿಸಬಹುದು. ಪ್ಲಾಸ್ಟಿಕ್ ಬಾಟೆಲ್‌ಗಳಂತೆಯೇ ಗಾಜಿನ ಬಾಟಲಿಗಳನ್ನು ಬಳಸಿಯೂ ಅನೇಕ ರೀತಿಯ ಕಲಾಕೃತಿಯನ್ನು ತಯಾರಿಸಬಹುದಾಗಿದೆ.

ಗಾಜಿನ ಬಾಟಲಿಗಳಿಗೆ ಪೇಂಟಿಂಗ್‌ಗಳನ್ನು ಮಾಡಬಹುದು ಅಥವಾ ವಿವಿಧ ಬಣ್ಣದ ಉಣ್ಣೆಯ ದಾರದಿಂದ ಪೂರ್ತಿ ಬಾಟಲಿಯನ್ನು ಸುತ್ತಿ ಅದಕ್ಕೆ ಬಣ್ಣದ ಕಾಗದದಿಂದ ಮಾಡಿದ ಕೆಲವು ಆಕೃತಿಗಳನ್ನು ಅಂಟಿಸಿದರೆ ಅಂದದ ಮನೆಗೆ ಸುಂದರವಾದ ಫ್ಲವರ್‌ ವಾಜ್ ತಯಾರಾಗುತ್ತದೆ.

ಕೈಬಳೆ
ಪ್ಲಾಸ್ಟಿಕ್ ಬಾಟಲಿಯನ್ನು ಕೇವಲ ಮನೆಯ ಅಲಂಕಾರಕ್ಕೆ ಬಳಸದೆ, ಹೆಣ್ಣಿನ ಅಲಂಕಾರಿಕ ವಸ್ತುವಾಗಿಯೂ ಬಳಸಲಾಗುತ್ತದೆ. ಪ್ಲಾಸ್ಟಿಕ್ ಬಾಟಲಿಯನ್ನು ಬಳೆಯಾಕಾರಕ್ಕೆ ಕತ್ತರಿಸಿ ಅದಕ್ಕೆ ಸಿಲ್ಕ್ ಥ್ರೆಡ್‌ನಿಂದ ಅಚ್ಚುಕಟ್ಟಾಗಿ ಸುತ್ತಿ ಅದರ ಮೇಲೆ ಸ್ಟೋನ್ ಲೇಸ್ ಅಥವಾ ಮಣಿಗಳನ್ನು ಅಂಟಿಸಿದರೆ ಪ್ಲಾಸ್ಟಿಕ್ ಬಳೆಗಳು ಸಿದ್ಧವಾಗುತ್ತವೆ. ಇದರ ಜೊತೆಗೆ ವಿವಿಧ ವಿನ್ಯಾಸದ ಕಿವಿ ಓಲೆ, ಬ್ರೆಸ್‌ಲೆಟ್‌, ಸರ, ಗೆಜ್ಜೆ ಹಾಗೂ ಸರಗಳಿಗೆ ಪದಕಗಳನ್ನು ತಯಾರಿಸಬಹುದು.

ಮಕ್ಕಳ ಆಟಿಕೆ
ಬಾಟಲಿಗಳಿಂದ ಮಕ್ಕಳ ಆಟಿಕೆಗಳನ್ನೂ ತಯಾರಿಸಬಹುದು. ಇಂತಹ ಆಟಿಕೆಗಳನ್ನು ತಯಾರಿಸುವುದರಿಂದ ಮಕ್ಕಳು ಬಿಡುವಿನ ಸಮಯವನ್ನು ಹಾಳು ಮಾಡಿಕೊಳ್ಳುವುದರ ಬದಲು ಮನೆಯಲ್ಲಿಯೇ ತಮಗೆ ಬೇಕಾದ ರೀತಿಯಲ್ಲಿ ಆಟಿಕೆಗಳನ್ನು ತಯಾರಿಸಿಕೊಳ್ಳಬಹುದು. ಸಮಯದ ಸದುಪಯೋಗದ ಜೊತೆಗೆ ಅವುಗಳನ್ನು ತಾವೇ ತಯಾರಿಸಿದೆವು ಎಂಬ ಸಂತೋಷವೂ ಅವರಿಗೆ ದೊರೆಯುತ್ತದೆ.

ಉಪಯೋಗಿಸಿದೆ ಉಳಿಸಿದ ಪ್ಲಾಸ್ಟಿಕ್‌ ಹಾಗೂ ಗಾಜಿನ ಬಾಟಲಿಯಿಂದ ತಯಾರಿಸುವ ಕಲಾಕೃತಿಗಳು ಕಸದಿಂದ ರಸ ಎನ್ನುವ ಮಾತಿಗೆ ಒಪ್ಪುವಂತಿವೆ. ನಮ್ಮ ಸುತ್ತಮುತ್ತ ಇರುವ ಅನೇಕ ಅನುಪಯೋಗಿ ವಸ್ತುಗಳಿಂದ ಸುಂದರವಾದ ಕಲಾಕೃತಿಯನ್ನು ತಯಾರಿಸಬಹುದು. ಈ ರೀತಿಯ ಕಲಾಕೃತಿಗಳಿಂದ ಬೇಡದ ವಸ್ತುಗಳನ್ನು ಮರುಬಳಕೆ ಮಾಡುವ ಅವಕಾಶವೂ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT