ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡನಾಲೆಯಲ್ಲಿ ಹೂಳು: ಮುಗಿಯದ ರೈತರ ಗೋಳು

Last Updated 18 ನವೆಂಬರ್ 2017, 7:04 IST
ಅಕ್ಷರ ಗಾತ್ರ

ಹೊನ್ನಾಳಿ: ಶಿವಮೊಗ್ಗ ಜಿಲ್ಲೆಯ ಗಾಜನೂರು ತುಂಗಾ ಆಣೆಕಟ್ಟೆಯಿಂದ ಹೊನ್ನಾಳಿ ತಾಲ್ಲೂಕಿನ ಕೊನಾಯಕನಹಳ್ಳಿ, ಬಳ್ಳೇಶ್ವರದವರೆಗೆ ಅಂದರೆ ಜಲಾಶಯ ಆರಂಭದಿಂದ ಸುಮಾರು 101.5 ಕಿ.ಮೀ. ಉದ್ದದವರೆಗೆ ಹಾದು ಹೋಗಿರುವ ತುಂಗಾ ಎಡನಾಲೆಯ ಆಧುನೀಕರಣ ಕಾಮಗಾರಿ ನಡೆಯದಿರುವುದರಿಂದ ನಾಲೆಯಲ್ಲಿ ಗಿಡಗಂಟೆಗಳು ಬೆಳೆದು, ಹೂಳು ತುಂಬಿಕೊಂಡಿದೆ.

ಕಳೆದ ವರ್ಷ 0– 33 ಕಿ. ಮೀ ವರೆಗೆ ನಾಲೆಯ ಆಧುನಿಕರಣ ಕಾಮಗಾರಿ ನಡೆದಿತ್ತು. ಅಲ್ಲಿಂದ ಮುಂದಕ್ಕೆ ಆಧುನೀಕರಣ ನಡೆದಿಲ್ಲ. ಹೀಗಾಗಿ ಆಣೆಕಟ್ಟೆಯಿಂದ ಬರಬೇಕಾದ ನೀರು ಸರಾಗವಾಗಿ ಹರಿದು ಬರುತ್ತಿಲ್ಲ. ತಾಲ್ಲೂಕಿನ ಸುಮಾರು 20 ಕ್ಕೂ ಗ್ರಾಮಗಳ ಭಾಗದ ರೈತರ ಸಾವಿರಾರು ಹೆಕ್ಟೇರು ಪ್ರದೇಶಕ್ಕೆ ನೀರು ಬಾರದೇ ತೀವ್ರ ತೊಂದರೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ನೀರು ಬಳಕೆದಾರರ ಸಂಘದ ಅಧ್ಯಕ್ಷ ಎ.ಇ. ಮಲ್ಲಿಕಾರ್ಜುನ್ ಬಲಮುರಿ, ಉಪಾಧ್ಯಕ್ಷ ಬಳ್ಳೇಶ್ವರದ ದೊಡ್ಡ ರಾಮಣ್ಣ.

ನಾಲೆ ಆಧುನೀಕರಣ ಕೈಗೊಳ್ಳಬೇಕೆಂದು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಕೊನಾಯಕನ ಹಳ್ಳಿಯ ರೈತ ಮಂಜಪ್ಪ ಅಂಗಡಿ. 21,500 ಹೆಕ್ಟೇರ್ ಪ್ರದೇಶಕ್ಕೆ ನೀರು: ತುಂಗಾ ಆಣೆಕಟ್ಟೆಯಿಂದ ಶಿವಮೊಗ್ಗ ಜಿಲ್ಲೆಯ ಸುಮಾರು 13,500 ಸಾವಿರ ಹೆಕ್ಟೇರ್ ಪ್ರದೇಶ ಹಾಗೂ ಹೊನ್ನಾಳಿ ತಾಲ್ಲೂಕಿನ 8088 ಸೇರಿ ಒಟ್ಟು 21,500 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಲಿದೆ. ಈ ಪ್ರದೇಶ ಆಧುನೀಕರಣಗೊಂಡರೆ ಸಾವಿರಾರು ರೈತರು ನೆಮ್ಮದಿಯಿಂದ ಬೇಸಿಗೆ ಬೆಳೆ ಬೆಳೆಯಬಹುದಾಗಿದೆ.

ಒಂದೂವರೆ ತಿಂಗಳ ಹಿಂದೆ 36 ಕಿ.ಮೀ ನಿಂದ 101.5 ರವರೆಗೆ ತುಂಗಾ ಎಡದಂಡೆ ನಾಲೆ ಆಧುನೀಕರಣ ಕಾಮಗಾರಿಗೆ ಎರಡನೇ ಪ್ಯಾಕೇಜ್ ಟೆಂಡರ್ ಕರೆಯಲಾಗಿದ್ದು, ಟೆಂಡರ್‌ಗೆ ಅನುಮೋದನೆ ಸಿಕ್ಕ ಕೂಡಲೇ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಎಇಇ ರಾಜೇಂದ್ರ ಕುಮಾರ್ ಭರವಸೆ ನೀಡಿದ್ದಾರೆ.

‘81 ಕಿ.ಮೀ ನಿಂದ 101.5 ರವರೆಗೆ ಹೊನ್ನಾಳಿ ಉಪ ವಿಭಾಗದ ನಂ.6 ಹೊನ್ನಾಳಿ ತುಂಗಾ ಮೇಲ್ದಂಡೆ ವ್ಯಾಪ್ತಿಗೆ ಒಂದೂವರೆ ತಿಂಗಳಿನಿಂದ ಇದರ ಉಸ್ತುವಾರಿಯನ್ನು ನಮಗೆ ವಹಿಸಲಾಗಿದೆ. ಇದಕ್ಕೂ ಮುನ್ನ ಇದು ನಮಗೆ ಹಂಚಿಕೆಯಾಗಿರಲಿಲ್ಲ’ ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ನ.22ರಂದು ಸಭೆ: ತುಂಗಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿ ಟೆಂಡರ್ ಅನುಮೋದನೆ ಕುರಿತ ಸಭೆ ನ. 22 ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ನೀರಾವರಿಗೆ ಸಂಬಂಧಪಟ್ಟ ಟೆಂಡರ್‌ಗೆ ಅನುಮೋದನೆ ಸಿಗಲಿದೆ. ಬಳಿಕ ಆಧುನೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಡಿ.ಜಿ. ಶಾಂತನಗೌಡ ಅಧಿವೇಶನದ ನಡುವೆಯೇ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕಳೆದ ನಾಲ್ಕೈದು ವರ್ಷಗಳಿಂದ ಬರಗಾಲ ಕಾಡುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಲೆಯಲ್ಲಿ ಹರಿದು ಬರಬೇಕಾದ ನೀರು, ಅಲ್ಲಲ್ಲಿ ನಿಂತು ಯಾರ ಪಾಲಿಗೂ ಇಲ್ಲದಂತಾಗಿದೆ. ಇದೀಗ ಟೆಂಡರ್ ಅನುಮೋದನೆ ಸಿಗುವ ಭರವಸೆಯಲ್ಲಿ ಈ ಭಾಗದ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇನ್ನು 15 ದಿನಗಳ ಕಾಲ ನಾಲೆಯಲ್ಲಿ ಹರಿಯುವ ನೀರನ್ನು ಡಿಸೆಂಬರ್ ಆರಂಭದಲ್ಲಿ ನಿಲ್ಲಿಸುವ ಮಾತುಗಳು ಅಧಿಕಾರಿಗಳಿಂದ ಕೇಳಿ ಬಂದಿದೆ. ನಂತರ ಆಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲೇಬೇಕಾಗಿದೆ. ಇಲ್ಲದಿದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸುವ ಮಾತುಗಳು ರೈತ ವರ್ಗದಿಂದ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT