ಕಟಕಟೆ

ದಿವಂಗತರ ಮಾನ ಹಾನಿ ತಂದ ಕುತ್ತು

ಶಾಂತಮುನಿ ಮಾತೆ ಗ್ರಾಮದ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಗೌರವಾನ್ವಿತರಾಗಿದ್ದರು. ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತಾ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾಯಿತರಾಗಿ, ಅಧ್ಯಕ್ಷರೂ ಆಗಿದ್ದರು. ಪೂರ್ವಿಕರಿಂದ ಸಾಕಷ್ಟು ಆಸ್ತಿ, ಹಣ ಬಂದಿದ್ದು, ಅಕ್ಕನ ಮಗ ಮರಟಯ್ಯನಿಗೂ ಬೇಕಾದಷ್ಟು ಆಸ್ತಿ ಸಂಪಾದನೆ ಮಾಡಿಕೊಟ್ಟರು.

ದಿವಂಗತರ ಮಾನ ಹಾನಿ ತಂದ ಕುತ್ತು

ಕೆಲವರ ನಡೆಯೇ ವಿಚಿತ್ರ. ಅವರು ಹೋಗುವುದೇ ವಿರುದ್ಧ ದಿಕ್ಕಿಗೆ. ಹಾಗೆ ಹೋಗುತ್ತಾ ನಾವು ಅಂದುಕೊಳ್ಳುವ ಜಾಗವನ್ನೇ ಸೇರುತ್ತಾರೆ. ಅವರು ಮಾಡುವ ಕೆಲಸಗಳ ಅಡ್ಡಪರಿಣಾಮ ಇತರರ ಮೇಲೂ ಆಗುತ್ತದೆ ಎಂಬ ಅರಿವು ಅವರಿಗೆ ಇರುವುದಿಲ್ಲ. ಅವು ಅವರಿಗಷ್ಟೇ ಅನ್ವಯವಾಗುತ್ತವೆ ಎಂದು ಭ್ರಮಿಸಿ ಇತರರಿಗೆ ಅಡ್ಡಿಯಾಗುವಂತೆ ಏನೇನೋ ಮಾಡುತ್ತಾರೆ.

ಇಂತಹವರ ಪೈಕಿ ಮರಟಯ್ಯನೂ ಒಬ್ಬ. ಇವನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾತೆ ಗ್ರಾಮದ ಶಾಂತಮುನಿಯ ಅಕ್ಕನ ಮಗ. ಇವನು ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿ ತೀರಿಕೊಂಡಳು. ತಂದೆ ಮತ್ತು ಅವನ ಮನೆಯವರಿಂದ ಮರಟಯ್ಯನಿಗೆ ತಕ್ಕ ಆರೈಕೆ ಸಿಗದೆ, ಶಾಂತಮುನಿ ಮತ್ತು ಅವನ ಹೆಂಡತಿ ಕಲ್ಯಾಣಮ್ಮ ಅವನನ್ನು ತಮ್ಮ ಮನೆಗೆ ಸಾಕಲು ತಂದರು. ತಮ್ಮ ಮಗ ಜೀಯಪ್ಪನೊಂದಿಗೆ ಮರಟಯ್ಯನೂ ಬೆಳೆಯತೊಡಗಿದ.

ಶಾಂತಮುನಿ ಮಾತೆ ಗ್ರಾಮದ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಗೌರವಾನ್ವಿತರಾಗಿದ್ದರು. ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತಾ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾಯಿತರಾಗಿ, ಅಧ್ಯಕ್ಷರೂ ಆಗಿದ್ದರು. ಪೂರ್ವಿಕರಿಂದ ಸಾಕಷ್ಟು ಆಸ್ತಿ, ಹಣ ಬಂದಿದ್ದು, ಅಕ್ಕನ ಮಗ ಮರಟಯ್ಯನಿಗೂ ಬೇಕಾದಷ್ಟು ಆಸ್ತಿ ಸಂಪಾದನೆ ಮಾಡಿಕೊಟ್ಟರು. ಅವರ ಅಪಾರ ಆಸ್ತಿ-ಪಾಸ್ತಿಗಳ ನಿರ್ವಹಣೆ ಮಗ ಜೀಯಪ್ಪನದಾಗಿತ್ತು. ಮರಟಯ್ಯನನ್ನು ಶಾಂತಮುನಿಯು ತಮ್ಮ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಜೊತೆಯಲ್ಲಿರಿಸಿಕೊಳ್ಳುತ್ತಿದ್ದರು. ಇದರಿಂದ ಮರಟಯ್ಯ ಎಲ್ಲ ಬಗೆಯ ವ್ಯವಹಾರ ಜ್ಞಾನ ಪಡೆದ. ಹೋಲಿಕೆಯಲ್ಲಿ ಎಲ್ಲ ವಿಧದಲ್ಲೂ ಜೀಯಪ್ಪನಿಗಿಂತ ಮುಂದಾದ.

ಶಾಂತಮುನಿ ತಮ್ಮ 82ನೇ ವಯಸ್ಸಿನಲ್ಲಿ ತೀರಿಕೊಂಡರು. ಅವರ ಸಾವಿನ ನಂತರ ಮರಟಯ್ಯ, ತನ್ನ ತಂದೆಯ ವಿರುದ್ಧ ತಾತನ ಸ್ಥಿರಾಸ್ತಿಯಲ್ಲಿ ಪಾಲಿಗಾಗಿ ಸಿವಿಲ್ ದಾವಾ ಹೂಡಿದ. ಸಿವಿಲ್ ನ್ಯಾಯಾಲಯ ತೀರ್ಪು ಕೊಟ್ಟಾಗ ಬೆಲೆ ಬಾಳುವ ಹತ್ತಾರು ಎಕರೆ ಸ್ಥಿರಾಸ್ತಿಯನ್ನು ಪಡೆದುಕೊಂಡ. ಶಾಂತಮುನಿಯು ಹಾಗೆ ಮಾಡಬಾರದೆಂದು ಮರಟಯ್ಯನಿಂದ ಮಾತುಪಡೆದಿದ್ದರಾದರೂ ಅದನ್ನು ಮುರಿದ. ಕಲ್ಯಾಣಮ್ಮನವರಿಗೆ ಮರಟಯ್ಯನ ನಡೆಯಿಂದ ಬೇಸರವಾದರೂ ಅದನ್ನು ಕಷ್ಟದಿಂದ ನುಂಗಿಕೊಂಡು, ತನ್ನ ಗಂಡನ ಸಾವಿನ ನಂತರ ಮರಟಯ್ಯನಲ್ಲಾಗುತ್ತಿದ್ದ ಋಣಾತ್ಮಕ ಬದಲಾವಣೆಗಳಿಂದ ಕುಗ್ಗುತ್ತಿದ್ದರು.

ಮರಟಯ್ಯ ತನ್ನ ಪಾಲಿಗೆ ಬಂದ ತಾತನ ಆಸ್ತಿಯನ್ನು ಕೋಟ್ಯಂತರ ರೂಪಾಯಿಗೆ ಮಾರಿ ಅಹೋರಾತ್ರಿ ನವಶ್ರೀಮಂತನಾದ. ಐಷಾರಾಮಿ ಕಾರು ಕೊಂಡ. ಬಾಟಲೊಂದಕ್ಕೆ ಹದಿನೈದು ಲಕ್ಷ ರೂಪಾಯಿ ಬೆಲೆ ಇರುವ, ಐವತ್ತು ವರ್ಷ ಹಳೆಯದಾದ ಗ್ಲೆನ್ ಶೆಡ್ಡಿಶ್ ವಿಸ್ಕಿಯನ್ನೇ ಕುಡಿಯಲು ಶುರುವಿಟ್ಟುಕೊಂಡು ಉದ್ಧಟ ಶ್ರೀಮಂತನೆನಿಸಿಕೊಂಡ. ಇವನ ದುಡ್ಡಿನ ಡೋಂಗಿ ಆಡಂಬರ ಪ್ರದರ್ಶನಕ್ಕೆ ಕಡಿವಾಣವೇ ಇಲ್ಲವಾಯಿತು, ಸಾಮಾಜಿಕ ಆತ್ಮಶಕ್ತಿ ಸತ್ತು ಹೋಯಿತು. ಈ ಹಂತದಲ್ಲಿ ಅವನ ಗಮನ ರಾಜಕಾರಣದತ್ತ ಹರಿಯಿತು. ಅದೇ ಸಮಯದಲ್ಲಿ ಬಂದ ಜಿಲ್ಲಾ ಪಂಚಾಯಿತಿ ಚುನಾವಣೆಗೆ ತನ್ನ ಪಟಾಲಂ ಅನ್ನು ಕಟ್ಟಿಕೊಂಡು ಸ್ಪರ್ಧಿಸಲು ಸಿದ್ಧನಾದ.

ಶಾಂತಮುನಿ ಅಪಾರ ಸಂಖ್ಯೆಯಲ್ಲಿ ಬಿಟ್ಟು ಹೋಗಿದ್ದ ಬೆಂಬಲಿಗರು ಕಲ್ಯಾಣಮ್ಮನನ್ನು ಕಂಡು, ಜೀಯಪ್ಪನನ್ನು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಣಕ್ಕಿಳಿಸಲು ಒತ್ತಾಯಿಸಿದರು. ಒಲ್ಲದ ಮನಸ್ಸಿನಿಂದ ಒಪ್ಪಿದ ಕಲ್ಯಾಣಮ್ಮ, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜೀಯಪ್ಪನ ಮನವೊಲಿಸಿದಳು.

ಚುನಾವಣೆಯ ಸಂದರ್ಭದಲ್ಲಿ ಮರಟಯ್ಯ, ಹಪಾಹಪಿ ಮನುಷ್ಯನ ಸ್ವಭಾವ ಪ್ರದರ್ಶಿಸಲು ಸಿದ್ಧನಾದ. ಹೇಗಾದರೂ ಸರಿ, ಎಷ್ಟಾದರೂ ಸರಿ ಪಡೆದುಕೊಳ್ಳಲೇ ಬೇಕು ಎಂಬ ಹಠಕ್ಕೆ ಬಿದ್ದು, ಅದಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುವ ಮನಸ್ಸು ಮಾಡಿದ.

ಜೀಯಪ್ಪನ ವಿರುದ್ಧ ನೇರವಾಗಿ ಸುಳ್ಳು ಆರೋಪ ಮಾಡಿದರೆ, ಕಳಂಕಪೀಡಿತನನ್ನಾಗಿಸಿದರೆ ಚುನಾವಣಾ ಅಧಿಕಾರಿಗಳು ತನಗೆ ಗತಿ ಕಾಣಿಸುವರೆಂದು ಅಂಜಿದ. ಜೀಯಪ್ಪನ ವಿರುದ್ಧದ ನಿಲುವನ್ನು ಬದಲಾಯಿಸಿ ತನ್ನ ತೇಪೆಗಾರ ಗೆಳೆಯರ ಮಾತಿನಂತೆ ಅವನ ತಂದೆ ದಿವಂಗತ ಶಾಂತಮುನಿಯ ವಿರುದ್ಧ ಅಪಪ್ರಚಾರ ಮಾಡಿ ಅದರ ಕರಿನೆರಳಿಗೆ ಜೀಯಪ್ಪನನ್ನು ತಳ್ಳಿ ಜೀಯಪ್ಪನ ಚುನಾವಣಾ ಭರವಸೆಗಳಿಗೆ ಧಕ್ಕೆ ಬರುವಂತೆ ಮಾಡಲು ಮುಂದಾದ. ಈ ದಿಕ್ಕಿನಲ್ಲಿ ಅವನು ಮಾಡಿದ ಯೋಚನೆಗಳು ಹತ್ತಾರು.

ತನ್ನ ಚುನಾವಣಾ ಪ್ರಚಾರ ಭಾಷಣಗಳಲ್ಲಿ ದಿವಂಗತ ಶಾಂತಮುನಿ ಮತ್ತು ಅವರ ಶ್ರೀಮತಿಯನ್ನು, ‘ಕರಟಕ– ದಮನಕರಂತಿದ್ದವರು; ಬಾತು ನಡಿಗೆಯ ಶಾಂತಮುನಿ ಪರಮ ತಿರುಬೋಕಿ. ಅಲ್ಲದೇ, ದೇಶಾವರಿ ನಗೆಯಿಂದಲೇ ಕಾಲ ಕಳೆದವನು; ರಾಜಕೀಯರಂಗದ ತೆವಲು, ವಶೀಲಿಬಾಜಿತನವೂ ಇತ್ತು; ಕೋರಿಶೆಟ್ಟಿಯಂತೆ ಬಾಳುತ್ತ, ಬದುಕಿನುದ್ದಕ್ಕೂ ಮುಖವಾಡದ ಹಿಂದೆ ಅಡಗಿಕೊಂಡಿದ್ದ ಊಸರವಳ್ಳಿ. ಕೂಟೋಪಾಯಗಳಿಂದಲೆ ಕುಟಿಲ ಕೋವಿದನಾಗಿ ರಾಜಕೀಯ ಮಾಡಿದ ನಾಯಿಡಿಂಗರ (ನೀಚ)’ ಎನ್ನುತ್ತಾ ಶಾಂತಮುನಿಯವರ ಹೆಸರಿಗೆ ಕಳಂಕ ಹಚ್ಚುವ ಮಾತುಗಳನ್ನಾಡಿದ. ಕಂಡಕಂಡವರಲ್ಲಿ ದ್ವಂದ್ವಾರ್ಥ ಕೊಡುವ ಪದಬಳಕೆ ಮಾಡಿದ. ಹದಿರು ನುಡಿ, ವ್ಯಂಗ್ಯೋಕ್ತಿಗಳನ್ನು ಯಥೇಚ್ಛವಾಗಿ ಬಳಸಿದ. ಅಲ್ಲಲ್ಲಿ ಶಾಂತಮುನಿಯವರನ್ನು ಅಪಹಾಸ್ಯಕ್ಕೀಡು ಮಾಡುತ್ತಿದ್ದ. ಅಕ್ರಮ ಆಲೋಚನೆಗಳಿಗೆ ಲಗ್ಗೆ ಹಾಕುತ್ತಾ ಭಾಷಣ ಮಾಡುವಾಗ ತನ್ನ ಶಾರೀರಿಕ ಚಲನವಲನಗಳಿಂದ ಶಾಂತಮುನಿ ಮೋಸದ ನಡತೆಯವನಾಗಿದ್ದನೆಂದು ನಿರ್ಗಂಟಿಕನಾಗಿ ನಿರೂಪಿಸಿದ.

ದಿವಂಗತ ಶಾಂತಮುನಿಯ ಕುರಿತ ಅವಹೇಳನಕಾರಿ, ಅನಾದರ ಮತ್ತು ಅಪಮಾನಕರ ಮಾತನಾಡುವಾಗಲೆಲ್ಲ, ‘ಅಂತಹ ಹೇಯ ವ್ಯಕ್ತಿಯ ಮುಂದುವರಿಕೆಯೇ ನನ್ನ ಎದುರಾಳಿ ಜೀಯಪ್ಪ; ಅವನನ್ನು ಅವನಪ್ಪ ಎಂದೂ ಜೊತೆ ಮಾಡಿಕೊಂಡು ರಾಜಕೀಯ ಧುರೀಣರ ಸಹವಾಸ ಮಾಡಲಿಲ್ಲ. ಅವನ ಯೋಗ್ಯತೆಯ ಅರಿವಿದ್ದುದರಿಂದ ರಾಜಕೀಯವಾಗಿ ಅವನನ್ನು ಬೆಳೆಸುವ ಮನಸ್ಸು ಮಾಡಲಿಲ್ಲ. ಮಗ ಸಮಾಜ ಸೇವೆಗೆ ಅನರ್ಹನೆಂದು ಶಾಂತಮುನಿಯೇ ತೀರ್ಮಾನಿಸಿದ್ದ. ವೋಟುದಾರರಿಗೆ ಇದು ಮುಖ್ಯವಾಗಬೇಕು’ ಎಂದು ಒತ್ತಿಒತ್ತಿ ತಿಳಿಸುತ್ತಿದ್ದ.

ಬದುಕಿನ ದುಷ್ಟತನಗಳ ಪ್ರಜ್ಞೆಯಿರದ ಜೀಯಪ್ಪನನ್ನು, ಮರಟಯ್ಯನ ವರ್ತನೆ ಅಲ್ಲಾಡಿಸಿಬಿಟ್ಟಿತು. ‘ನನ್ನ ತಂದೆ ಮಾನಹಾನಿಗೀಡಾಗುತ್ತಿದ್ದಾರಲ್ಲಾ ಎಂಬ ನೋವುಗಳಿಂದ ಯಾತನೆಗೀಡಾದನು. ಇದ್ದಕ್ಕಿದ್ದಂತೆ ವಕ್ಕರಿಸಿದ ಈ ಸಂದರ್ಭಗಳಿಂದ ಅವನಂತೆ ದಿವಂಗತ ಶಾಂತಮುನಿಯ ಹಿಂಬಾಲಕರು, ಹಿತೈಷಿಗಳು, ಗೆಳೆಯರು ಮತ್ತು ಬಂಧುಗಳೂ ಸಂಕಟಕ್ಕೀಡಾದರು.

ಶಾಂತಮುನಿಯ ಪಾಳೆಯದ ಮುಖ್ಯಸ್ಥರು, ಕೃತಘ್ನ ಮರಟಯ್ಯನ ಜಗಭಂಡತನಕ್ಕೆ ಕಡಿವಾಣ ಹಾಕಲು ತೀರ್ಮಾನಿಸಿ ನನ್ನೊಂದಿಗೆ ಚರ್ಚಿಸಲು ಬಂದರು. ಅವರೆಲ್ಲರದ್ದೂ ಒಂದೇ ಪ್ರಶ್ನೆಯಾಗಿತ್ತು, ‘ದಿವಂಗತ ಶಾಂತಮುನಿಯವರನ್ನು ಕುರಿತು ವೇದಿಕೆಗಳಲ್ಲಿ ಅವಹೇಳನಕಾರಿ ಮಾತುಗಳನ್ನು ಆಡುತ್ತಿರುವ ಮರಟಯ್ಯನ ವಿರುದ್ಧ ಕಾನೂನು ಕ್ರಮ ಜರುಗಿಸಬಹುದೇ’ ಎಂಬುದು.

ಅವರಿಗೆ ಉತ್ತರಿಸುತ್ತಾ, ‘ನೀವು ಹೇಳಿದಂತೆ ದಿವಂಗತ ಶಾಂತಮುನಿಯ ವಿರುದ್ಧ ಆಡಿರುವ ಮಾತುಗಳನ್ನು ಆಧರಿಸಿ ಈ ಕೂಡಲೇ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಬಹುದು; ಅದಾದ ನಂತರ ಮಾಧ್ಯಮಗಳಲ್ಲಿ ಅದಕ್ಕೆ ಹೆಚ್ಚಿನ ಪ್ರಚಾರ ಸಿಕ್ಕುವಂತೆಯೂ ನೋಡಿಕೊಂಡಾಗ ಅವನ ಬಾಯಿ ಮುಚ್ಚಿಸಬಹುದು’ ಎಂದು ತಿಳಿಸಿದೆ. ಅವರಲ್ಲಿ ಕೆಲವರು ನನ್ನ ಉತ್ತರಕ್ಕೆ ಅವಾಕ್ಕಾದರು. ‘ದಿವಂಗತ ಶಾಂತಮುನಿಗೆ ಅವಮಾನವಾಗಿದೆ ಎಂದು ಹೇಳಲು ಹೇಗೆ ಸಾಧ್ಯ, ಅದು ಬದುಕಿರುವ ವ್ಯಕ್ತಿಗಳಿಗೆ ಮಾತ್ರ ಅನ್ವಯವಾಗುವುದಲ್ಲವೇ, ದಿವಂಗತರಿಗೂ ಮಾನ-ಮರ್ಯಾದೆ ಎಂಬುದು ಅಂಟಿಕೊಂಡಿರುತ್ತದೆಯೇ’ ಎಂದೆಲ್ಲಾ ಪ್ರಶ್ನಿಸಿದರು. ಅವರ ಸಾಮಾನ್ಯ ತಿಳಿವಳಿಕೆಯಲ್ಲಿ ಮಾನನಷ್ಟವೆಂಬುದು ಜೀವಿತರಿಗೆ ಮಾತ್ರ ಅನ್ವಯಿಸುವುದೆಂದಾಗಿತ್ತು. ಮುಂದುವರೆದು, ದಿವಂಗತ ಶಾಂತಮುನಿಯು ಮಾನಹಾನಿಗೂ, ತೇಜೋವಧೆಗೂ ಒಳಗಾಗಿರುವುದನ್ನು ಸೋದಾಹರಣವಾಗಿ ವಿವರಿಸಿದೆ. ‘fame is a food that dead men eat’ (ಖ್ಯಾತಿಯೆಂಬುದು ಸತ್ತವರ ಆಹಾರ) ಎಂಬ ಹೆನ್ರಿ ಆಸ್ಟಿನ್ ಡಾಬ್ಸನ್‍ನ ಮಾತಿನ ಹಿಂದಿನ ಮರ್ಮವನ್ನು ಅರ್ಥಮಾಡಿಕೊಂಡರು.

ಭಾರತೀಯ ದಂಡ ಸಂಹಿತೆಯ ಕಲಂ 499 ತನ್ನ ಹೃದಯಭಾಗದಲ್ಲಿ, ಮೃತವ್ಯಕ್ತಿಗೆ ಸಂಬಂಧಿಸಿದಂತೆ ಯಾವುದೇ ಆರೋಪಣೆ ಮಾಡುವುದು, ಅಂತಹ ಆರೋಪಣೆಯು ಆ ವ್ಯಕ್ತಿಯು ಜೀವಿತವಾಗಿದ್ದರೆ; ಆ ವ್ಯಕ್ತಿಯ ಖ್ಯಾತಿಗೆ ಹಾನಿಯುಂಟು ಮಾಡಬಹುದಾಗಿದ್ದರೆ ಮತ್ತು ಅವನ ಕುಟುಂಬದ ಅಥವಾ ಹತ್ತಿರದ ಇತರ ಸಂಬಂಧಿಗಳ ಭಾವನೆಗಳಿಗೆ ನೋವುಂಟುಮಾಡಲು ಉದ್ದೇಶಿಸಿದ್ದರೆ ಅದು ಮಾನಹಾನಿ ಎನಿಸುತ್ತದೆ. ದಿವಂಗತ ಶಾಂತಮುನಿಯ ಸಂಬಂಧದಲ್ಲಿ ಮರಟಯ್ಯ ಮಾಡಿದ ಆರೋಪಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇತರರ ಅಭಿಪ್ರಾಯದಲ್ಲಿ ಆ ವ್ಯಕ್ತಿಯ ನೈತಿಕ ಅಥವಾ ಭೌತಿಕ ಚಾರಿತ್ರ್ಯವನ್ನೂ, ಗೌರವವನ್ನೂ ತಗ್ಗಿಸುವ; ಅಪಮಾನಕರವೆಂದು ತಿಳಿಯಲಾಗುವ ಸ್ಥಿತಿಯಲ್ಲಿದೆಯೆಂದು ನಂಬುವಂತೆ ಮಾಡುತ್ತವೆ. ಯಾವುದೇ ಆರೋಪಣೆ ಅಥವಾ ಅಪಮಾನಕರ ಹೇಳಿಕೆ ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಿರುವ ಸತ್ಯಾರೋಪಣೆಯಾಗಿ ಕಾಣುವುದಿಲ್ಲ. ಯಾವನೇ ವ್ಯಕ್ತಿಗೆ ಸಂಬಂಧಿಸಿದ ಯಾವುದೇ ಸತ್ಯಸಂಗತಿಯನ್ನು ಆರೋಪಿಸುವುದು ಅಥವಾ ಪ್ರಕಟಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅವಶ್ಯಕವಾಗಿದ್ದರೆ, ಹಾಗೆ ಪ್ರಕಟಿಸುವುದು ಮಾನಹಾನಿ ಎನಿಸುವುದಿಲ್ಲ.

ಒಬ್ಬ ವ್ಯಕ್ತಿಯು ತನ್ನ ಅಥವಾ ಇತರರ ಹಿತಾಸಕ್ತಿಯ ರಕ್ಷಣೆಗಾಗಿ ಸದ್ಭಾವನೆಯಿಂದ ಮಾಡಿದ ಆರೋಪ ಇನ್ನೊಬ್ಬ ವ್ಯಕ್ತಿಯ ಚಾರಿತ್ರ್ಯಕ್ಕೆ ಸಂಬಂಧಿಸಿ ಮಾಡಲಾದ ಆರೋಪವು ಅದನ್ನು ಮಾಡುವ ವ್ಯಕ್ತಿಯ ಅಥವಾ ಯಾವನೇ ಇತರ ವ್ಯಕ್ತಿಯ ಹಿತಾಸಕ್ತಿಯ ರಕ್ಷಣೆಗಾಗಿ ಅಥವಾ ಸಾರ್ವಜನಿಕ ಹಿತಕ್ಕಾಗಿ ಮಾಡಲಾಗಿದ್ದರೆ ಅದು ಮಾನಹಾನಿಯಾಗಿರುವುದಿಲ್ಲ. ಯಾರಿಗೆ ಎಚ್ಚರಿಕೆ ಕೊಡಲಾಗಿದೆಯೋ ಅವನ ಒಳಿತಿಗಾಗಿ ಅಥವಾ ಸಾರ್ವಜನಿಕ ಹಿತಕ್ಕೆಂದು ಉದ್ದೇಶಿಸಲಾದ ಎಚ್ಚರಿಕೆ; ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಸದ್ಭಾವನೆಯಿಂದ ಎಚ್ಚರಿಕೆ ಕೊಡುವುದು ಮಾನಹಾನಿ ಎನಿಸುವುದಿಲ್ಲ. ಆದರೆ ಹಾಗೆ ಯಾರಿಗೆ ಎಚ್ಚರಿಕೆ ಕೊಡಲಾಯಿತೋ, ಆ ವ್ಯಕ್ತಿಯ ಹಿತವಾಗಲೀ ಅಥವಾ ಯಾರಲ್ಲಿ ಆ ವ್ಯಕ್ತಿಗೆ ಹಿತಾಸಕ್ತಿ ಇರುವುದೋ ಅವನ ಹಿತವಾಗಲೀ ಅಥವಾ ಸಾರ್ವಜನಿಕ ಹಿತವಾಗಲೀ ಅಂಥ ಎಚ್ಚರಿಕೆಯ ಉದ್ದೇಶವಾಗಿರಬೇಕು. ಮರಟಯ್ಯ ಆಡಿರುವ ಮಾನಹಾನಿಕರ ಮಾತುಗಳಲ್ಲಿ ದಿವಂಗತರನ್ನು ಕುರಿತಾದ ಸದ್ಭಾವನೆಯಿಲ್ಲ; ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಿರುವುದಿಲ್ಲ; ಇತರರ ಒಳಿತಿಗಾಗಿ ಅಥವಾ ಸಾರ್ವಜನಿಕ ಹಿತಕ್ಕೆಂದು ಉದ್ದೇಶಿಸಿರುವ ಎಚ್ಚರಿಕೆಯಿಲ್ಲ. ಇವುಗಳ ಕೊರತೆ ಇದ್ದರೆ ಮಾನಹಾನಿ ಮೊಕದ್ದಮೆಯನ್ನು ಕಾನೂನು ವ್ಯವಹರಣೆಗಳಲ್ಲಿ ಊರ್ಜಿತಗೊಳಿಸಬಹುದು ಎಂಬ ಕಾನೂನು ಸಂಬಂಧಿತ ವಿಷಯಗಳನ್ನು ಪರಿಚಯಿಸಿದೆ. ಇದರಿಂದ ಅವರಿಗೆ ಅಪಾರ ಸಂತೋಷವಾಯಿತು.

ನಿರೀಕ್ಷಣೆಯಂತೆ ಮರಟಯ್ಯನ ವಿರುದ್ಧ ಜೀಯಪ್ಪನ ಪರವಾಗಿ ಕ್ರಿಮಿನಲ್ ನ್ಯಾಯಾಲಯದಲ್ಲಿ ನಾನೇ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕಾಗಿ ಬಂತು. ಕೆಲವೇ ದಿನಗಳಲ್ಲಿ ನ್ಯಾಯಿಕ ಪ್ರಕ್ರಿಯೆಗಳು ಜರುಗಿ ಮರಟಯ್ಯನ ವಿರುದ್ಧ ನಿಗದಿತ ದಿನದಂದು ನ್ಯಾಯಾಲಯದಲ್ಲಿ ಹಾಜರಾಗಲು ಸಮನ್ಸ್ ಹೊರಡಿಸಲಾಯಿತು. ದಿವಂಗತ ಶಾಂತಮುನಿಯ ಉಪಕೃತರು ಎಲ್ಲದಿನಪತ್ರಿಕೆಗಳಲ್ಲಿ ಈ ವಿಚಾರ ಪ್ರಕಟವಾಗುವಂತೆ ಆಸ್ಥೆ ವಹಿಸಿದರು.

ಕ್ರಿಮಿನಲ್ ನ್ಯಾಯಾಲಯವು ಮರಟಯ್ಯನ ವಿರುದ್ಧ ಆದೇಶ ಹೊರಡಿಸಿದ ಮಾರನೆಯ ದಿನವೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮನೆಮಾತಾಯಿತು. ಈ ಸುದ್ದಿಯಿಂದ ಜನ ಸಂಭ್ರಮಿಸಿದರು. ಸಮಾಜದ ಸಾತ್ವಿಕ ಶಕ್ತಿಯ ನಿಷ್ಕ್ರಿಯತೆಯಿಂದ ಕೆಟ್ಟವರು ವಿಜೃಂಭಿಸುವುದುಂಟು. ಅಪರೂಪಕ್ಕೆಂಬಂತೆ ದಿವಂಗತ ಶಾಂತಮುನಿಯ ಪ್ರಕರಣದಲ್ಲಿ ಅವರು ಬಿಟ್ಟು ಹೋದ ಜನರು, ತಾವು ಒಳ್ಳೆಯವರಾಗಿರುವುದರಿಂದ ತಮ್ಮ ಕರ್ತವ್ಯ ಮುಗಿಯುವುದಿಲ್ಲ, ಅದರ ಜೊತೆಗೆ ದುಷ್ಟರನ್ನು ಬೆಳೆಯ ಬಿಡದೇ ಇರುವುದೂ ಸರಿಸಮಾನವಾದ ಕರ್ತವ್ಯವೇ ಆಗಿದೆ ಎಂದು ಭಾವಿಸುವುದರ ಜೊತೆಗೆ ಅದನ್ನು ಕಾರ್ಯಗತಗೊಳಿಸಲೂ ಮುಂದಾದರು.

ಕಾಕತಾಳೀಯವೆಂಬಂತೆ ಮರಟಯ್ಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಹಾಜರಾಗಬೇಕಿದ್ದ ದಿನವೇ ಚುನಾವಣೆಯ ಫಲಿತಾಂಶದ ದಿನವೂ ಆಗಿತ್ತು. ಆ ದಿನದ ಸಂಜೆ ಫಲಿತಾಂಶ ಹೊರಬಿದ್ದಾಗ ಮರಟಯ್ಯ ಠೇವಣಿ ಕಳೆದುಕೊಂಡು ಸೋತಿದ್ದ. ನಂತರದ ಎಷ್ಟೋ ದಿನಗಳವರೆಗೆ ಮರಟಯ್ಯ ಮತ್ತು ಅವನ ಬೆಂಬಲಿಗರು ಜನರಿಂದ ತಲೆತಪ್ಪಿಸಿಕೊಂಡು ಓಡಾಡಿದ್ದುಂಟು.

(ಹೆಸರುಗಳನ್ನು ಬದಲಾಯಿಸಲಾಗಿದೆ)

(ಸಿ.ಎಚ್‌.ಹನುಮಂತರಾಯ ಲೇಖಕ ಹೈಕೋರ್ಟ್‌ ವಕೀಲ)

Comments
ಈ ವಿಭಾಗದಿಂದ ಇನ್ನಷ್ಟು
ಫುಟ್‌ಬಾಲ್ ಅಂಗಳದ ಮಿನುಗುತಾರೆ

ವ್ಯಕ್ತಿ
ಫುಟ್‌ಬಾಲ್ ಅಂಗಳದ ಮಿನುಗುತಾರೆ

18 Mar, 2018
 ‘ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಯಲಿ’

ವಾರದ ಸಂದರ್ಶನ
‘ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಯಲಿ’

18 Mar, 2018
ಬುದ್ಧನ ಕಥೆಗೆ ಬಗ್ಗಿದ ವೈದ್ಯ!

ಕಟಕಟೆ–110
ಬುದ್ಧನ ಕಥೆಗೆ ಬಗ್ಗಿದ ವೈದ್ಯ!

18 Mar, 2018

ವಿಜಯಪುರ
‘ನೀನೇನು ಎಲೆಕ್ಷನ್‌ಗೆ ನಿಲ್ತಿಯೇನಪ್ಪಾ..!’

‘ನೋಡಪ್ಪಾ ನೀ ಎಲೆಕ್ಷನ್‌ಗೆ ನಿಲ್ಲೋದಿದ್ರೇ ಹೇಳು. ಸುಮ್ನೇ ಯಾಕ ಕಾರ್ಪೊರೇಟರ್ ಆಗಾಕ ಬಡಿದಾಡ್ತಿ. ನಮ್‌ ಸದಸ್ಯರನ್ನೆಲ್ಲಾ ಒಪ್ಸಿ, ನಿನ್ನೇ ಸಿಟಿಗೆ ಎಂಎಲ್‌ಎ ಎಲೆಕ್ಷನ್‌ಗೆ ನಿಲ್ಲಸ್ತೀನಿ...’ ...

18 Mar, 2018

ಈ ಭಾನುವಾರ
ಬಟ್ಟೆ ಧರಿಸದಿದ್ದರೆ ಮಾನ ಹೋಗೋದು!

‘ಬೆಂಗಳೂರಿನ ಮಾನ ಹೋದ ಮೇಲೆ ಇನ್ನೊಂದು ವರದಿ ಕೊಟ್ಟರೆ ಜನರು ನಂಬ್ತಾರಾ’ ಎಂದು ಪತ್ರಕರ್ತರು ಮರು ಪ್ರಶ್ನಿಸಿದಾಗ, ‘ಅಯ್ಯೊ ಮಾನ ಹೇಗೆ ಹೋಗುತ್ತೆ. ನಾವು...

18 Mar, 2018