ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾರೋಪಿಗಳನ್ನು ಬಾಲಮಂದಿರಕ್ಕೆ ಕಳಿಸಿ: ಗೃಹಸಚಿವ ರಾಜನಾಥ್‌ ಸಿಂಗ್‌

Last Updated 18 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕಲ್ಲುತೂರಾಟ ಹಾಗೂ ಇತರ ಕಾನೂನುಬಾಹಿರ ಕೃತ್ಯಗಳಡಿ ಬಂಧಿತರಾಗಿ ಜೈಲಿನಲ್ಲಿರುವ ಬಾಲಾರೋಪಿಗಳನ್ನು ಬಾಲಮಂದಿರಗಳಿಗೆ (ಸುಧಾರಣಾ ಕೇಂದ್ರ) ಕಳುಹಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ತಿಳಿಸಿದ್ದಾರೆ; ಜೊತೆಗೆ ಅವರ ಮೇಲಿರುವ ಪ್ರಕರಣಗಳನ್ನು ಮಾನವೀಯ ನೆಲೆಯಲ್ಲಿ ಪರಿಶೀಲನೆ ಮಾಡಲು ಕೂಡ ಅವರು ಕೋರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರ ವಿವಾದದ ಬಗ್ಗೆ ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಲು ವಿಶೇಷ ಪ್ರತಿನಿಧಿಯಾಗಿ ದಿನೇಶ್ವರ್‌ ಶರ್ಮಾ ಅವರನ್ನು ಕೇಂದ್ರ ನಿಯೋಜಿಸಿದ ನಂತರದಲ್ಲಿ, ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.

ಕಾಶ್ಮೀರ ವಿವಾದದ ಬಗ್ಗೆ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌, ಗೃಹ ಹಾಗೂ ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳು, ಗುಪ್ತಚರ ಇಲಾಖೆಯ ಮುಖ್ಯಸ್ಥರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

‘ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕೇಂದ್ರದ ಈ ನಿರ್ಧಾರದ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಿದೆ’ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ಸಂಬಂಧಪಟ್ಟವರ ಜೊತೆ ಕಳೆದ ವಾರ ನಡೆಸಿದ ಮೊದಲ ಸುತ್ತಿನ ಮಾತುಕತೆಯ ವಿವರಗಳನ್ನು ಸಚಿವರು ಮತ್ತು ಇತರ ಅಧಿಕಾರಿಗಳೊಂದಿಗೆ ಶರ್ಮಾ ಸಭೆಯಲ್ಲಿ ಚರ್ಚಿಸಿದರು.

ಮಾತುಕತೆ ಪ್ರಕ್ರಿಯೆ ಮುಂದುವರಿಸಲು ಶರ್ಮಾ ಅವರು ಶೀಘ್ರವೇ ಮತ್ತೆ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT