ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚುಕಟ್ಟಾಗಿ ಸಾಹಿತ್ಯ ಸಮ್ಮೇಳನ ನಡೆಸಿ

Last Updated 19 ನವೆಂಬರ್ 2017, 3:28 IST
ಅಕ್ಷರ ಗಾತ್ರ

ಮೈಸೂರು: ನ. 24ರಿಂದ 26ರ ವರೆಗೆ ನಗರದಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸುವಂತೆ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದರು. ಸಮ್ಮೇಳನದ 14 ಉಪ ಸಮಿತಿಗಳ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳೊಂದಿಗೆ ಅವರು ಶನಿವಾರ ಸಭೆ ನಡೆಸಿದರು.

ವಸತಿ ಹಾಗೂ ಸಾರಿಗೆ ಸೌಲಭ್ಯ ಉತ್ತಮವಾಗಿರಬೇಕು. ಮಹಿಳೆಯರು ಹಾಗೂ ವೃದ್ಧರಿಗೆ ವಿಶೇಷ ಸೌಲಭ್ಯ ಒದಗಿಸಬೇಕು. ವಸತಿ ಸೌಲಭ್ಯ ನೀಡುವಂತೆ ಖಾಸಗಿ ಸಂಸ್ಥೆಗಳಿಗೆ ಕೋರಲಾಗಿದೆ. ಇದಕ್ಕೆ ಸ್ಪಂದಿಸಿರುವ ಜೆಎಸ್‌ಎಸ್ ಮಹಾವಿದ್ಯಾಪೀಠವು 30 ಕೊಠಡಿಗಳನ್ನು ನೀಡುತ್ತಿದೆ.

ಮಹಾರಾಣಿ ಕಲಾ ಕಾಲೇಜಿನ ಹೊಸ ಕಟ್ಟಡದಲ್ಲಿ 2,000 ಮಹಿಳೆಯರಿಗೆ ವಸತಿ ಕಲ್ಪಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಹೋಟೆಲ್ ಮಾಲೀಕರ ಸಭೆ ಕರೆದು ಕಡಿಮೆ ದರದಲ್ಲಿ ಕೊಠಡಿಗಳನ್ನು ನೀಡಲು ಮನವಿ ಮಾಡುವಂತೆ ಅವರು ಸೂಚನೆ ನೀಡಿದರು.

ಪ್ರಚಾರಕ್ಕೆ ಆದ್ಯತೆ: ಸಮ್ಮೇಳನಕ್ಕೆ ಉತ್ತಮ ಪ್ರಚಾರ ನೀಡಲಾಗುತ್ತಿದೆ. ಪ್ರಚಾರ ಸಮಿತಿ ವತಿಯಿಂದ ಹೆದ್ದಾರಿಗಳಲ್ಲಿ 87 ಕಡೆ ಫಲಕ ಅಳವಡಿಸಿಕೊಳ್ಳಲಾಗಿದೆ. ಕೆಎಸ್‌ಆರ್‌ಟಿಸಿಯ 600 ಬಸ್‌, 1,500 ಆಟೊಗಳಿಗೆ ಸ್ಟಿಕ್ಕರ್‌ ಹಾಕಲಾಗುತ್ತಿದೆ ಎಂದು ಪ್ರಚಾರ ಉಪ ಸಮಿತಿಯ ಕಾರ್ಯದರ್ಶಿ ಆರ್‌.ರಾಜು ತಿಳಿಸಿದರು.

ನ. 22, 23ರಂದು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮೈಕ್‌ ಮೂಲಕ ಪ್ರಚಾರ ನೀಡಬೇಕು. ಕರಪತ್ರದ ಮೂಲಕ ಸಮ್ಮೇಳನಕ್ಕೆ ಜನರನ್ನು ಆಹ್ವಾನಿಸಬೇಕು ಎಂದು ಸಚಿವರು ಸೂಚಿಸಿದರು.

ಸಮ್ಮೇಳನದ ಹಿನ್ನೆಲೆಯಲ್ಲಿ ನ.20ರಂದು ಬೆಳಿಗ್ಗೆ 8ಕ್ಕೆ ಅರಮನೆ ಆವರಣದಲ್ಲಿ ಮಾನವ ರಚನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜನಾರ್ದನ ತಿಳಿಸಿದರು.

ನಗರದ 2,500 ವಿದ್ಯಾರ್ಥಿಗಳಿಂದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಸಾಲುಗಳು ಕಾಣುವಂತೆ ಮಕ್ಕಳು ನಿಂತು ದಾಖಲೆ ನಿರ್ಮಿಸಲಿದ್ದಾರೆ. ಮೇಲಿನಿಂದ ವೀಕ್ಷಿಸಿದರೆ (ಏರಿಯಲ್‌ ವ್ಯೂ) ಈ ಸಾಲುಗಳು ಗೋಚರಿಸುತ್ತವೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ ಮೆರುಗು: ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ನ.24ರಂದು ನಂದಿತಾ ಮತ್ತು ಹೇಮಂತ್‌ ತಂಡ ಗಾಯನ ಕಾರ್ಯಕ್ರಮ ನಡೆಸಿಕೊಡಲಿದೆ. ಅಲ್ಲದೇ, 10 ಐತಿಹಾಸಿಕ, 10 ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ.

ಶಾಸಕ ಎಂ.ಕೆ.ಸೋಮಶೇಖರ್, ಕಾಡಾ ಅಧ್ಯಕ್ಷ ಎಸ್.ನಂಜಪ್ಪ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಸಿದ್ದರಾಜು, ಜಿಲ್ಲಾಧಿಕಾರಿ ಡಿ.ರಂದೀಪ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಪ್ಪ ಭಾಗವಹಿಸಿದ್ದರು.

5 ದಿನ ದೀಪಾಲಂಕಾರ ಆಕರ್ಷಣೆ

ಸಾಹಿತ್ಯ ಸಮ್ಮೇಳನ ಅಂಗವಾಗಿ ನಗರದಲ್ಲಿ ನ.22ರಿಂದ 26ರ ವರೆಗೆ ದೀಪಾಲಂಕಾರ ಮಾಡಲಾಗುತ್ತಿದೆ. ಅರಮನೆ ಸೇರಿದಂತೆ ನಗರದ ಆಯ್ದ ವೃತ್ತಗಳಿಗೆ ದೀಪಾಲಂಕಾರ ನಡೆಯಲಿದೆ. ರೈಲು ನಿಲ್ದಾಣ, ನಗರ ಹಾಗೂ ಗ್ರಾಮಾಂತರ ಬಸ್‌ ನಿಲ್ದಾಣ, ಕೆ.ಆರ್‌.ವೃತ್ತ, ಚಾಮರಾಜ ವೃತ್ತದಲ್ಲಿ ಆಕರ್ಷಕ ದೀಪದ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ.

ಬಸ್‌ ಸೌಲಭ್ಯ: ಸಮ್ಮೇಳನಕ್ಕೆ ಬರುವ ಅತಿಥಿಗಳು ಹಾಗೂ ನೋಂದಾಯಿತ ಪ್ರತಿನಿಧಿಗಳ ಅನುಕೂಲಕ್ಕಾಗಿ 117 ಖಾಸಗಿ ಹಾಗೂ 8 ಸರ್ಕಾರಿ ಬಸ್‌ ವ್ಯವಸ್ಥೆ ಮಾಡಲಾಗಿದೆ. 47 ಬಸ್‌ಗಳು ಗಣ್ಯರಿಗೆ, 68 ಬಸ್‌ಗಳು ಸಾರ್ವಜನಿಕರಿಗೆ ಮೀಸಲಿಡಲಾಗಿದೆ. ವಿವಿಧ ಶಾಲಾ– ಕಾಲೇಜುಗಳು ಬಸ್ ಸೌಲಭ್ಯ ನೀಡಲಿವೆ.

ಸಮ್ಮೇಳನಕ್ಕೆ 2,000 ಗಣ್ಯರು ಹಾಗೂ 9,000 ನೋಂದಾಯಿತ ಪ್ರತಿನಿಧಿಗಳು ಬರುತ್ತಿದ್ದಾರೆ. ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗಣ್ಯರಿಗೆ ಇನ್ಫೊಸಿಸ್‌ನಲ್ಲಿ 500, ವಿವಿಧ ಅತಿಥಿಗೃಹಗಳಲ್ಲಿ 800, ವಿದ್ಯಾರ್ಥಿನಿಲಯಗಳಲ್ಲಿ 700 ಕೊಠಡಿಗಳನ್ನು ಮೀಸಲಿಡಲಾಗಿದೆ. ಸಾರ್ವಜನಿಕರಿಗೆ ವಿವಿಧ ಸರ್ಕಾರಿ ವಿದ್ಯಾರ್ಥಿನಿಲಯಗಳು, ಶಾಲೆಗಳು, ಛತ್ರಗಳಲ್ಲಿ ಸೌಲಭ್ಯ ಕಲ್ಪಿಸಲಾಗುತ್ತದೆ.

ಪ್ರತಿ ದಿನ ಲಕ್ಷ ಮಂದಿಗೆ ಊಟ
ಸಮ್ಮೇಳನದ ಮೂರು ದಿನಗಳ ಕಾಲ ಪ್ರತಿದಿನ 1 ಲಕ್ಷ ಮಂದಿಗೆ ಊಟದ ವ್ಯವಸ್ಥೆಗೆ ಸಿದ್ಧತೆ ನಡೆದಿದೆ. ಗಣ್ಯರಿಗೆ ವೇದಿಕೆಯ ಬಳಿ, ನೋಂದಾಯಿತ ಪ್ರತಿನಿಧಿಗಳಿಗೆ ಹಾಕಿ ಮೈದಾನದಲ್ಲಿ, ಸಾರ್ವಜನಿಕರಿಗೆ ಸ್ಕೌಟ್ಸ್ ಅಂಡ್‌ ಗೈಡ್ ಮೈದಾನದಲ್ಲಿ ವ್ಯವಸ್ಥೆ ಇರಲಿದೆ. ಎಲ್ಲರಿಗೂ ಒಂದೇ ಮಾದರಿಯ ತಿಂಡಿ ಹಾಗೂ ಊಟ ಇರಲಿದೆ.

ಕನ್ನಡ ತೇರಿಗೆ ಚಾಲನೆ
ನಗರದ ಶಾಲಾ– ಕಾಲೇಜುಗಳಿಗೆ ತೆರಳಿ ಕನ್ನಡ ಗಾಯನ ಕಾರ್ಯಕ್ರಮ ನಡೆಸಿಕೊಡಲಿರುವ ಕನ್ನಡ ತೇರಿಗೆ ಸಚಿವ ಮಹದೇವಪ್ಪ ಚಾಲನೆ ನೀಡಿದರು. ಒಟ್ಟು 21 ಕಲಾವಿದರು 9 ತಂಡಗಳಲ್ಲಿ ಗಾಯನ ನಡೆಸಿಕೊಡಲಿದ್ದಾರೆ. ದಿನವೊಂದಕ್ಕೆ 3 ಕಲಾವಿದರು ಹಾಡಲಿದ್ದಾರೆ ಎಂದು ತೇರಿನ ಸಂಚಾಲಕ ಸುಮಂತ್‌ ವಸಿಷ್ಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT