ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ

Last Updated 19 ನವೆಂಬರ್ 2017, 5:08 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ನೆಪದಲ್ಲಿ ರಸ್ತೆಯೊಂದನ್ನು ಹಾಳು ಮಾಡಿರುವ ಸ್ಥಳೀಯ ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಗರಸಭೆ ಸದಸ್ಯ ಬಿ.ಕಾಂತರಾಜ್ ಪೌರಾಯುಕ್ತರನ್ನು ಒತ್ತಾಯಿಸಿದರು. ಇಲ್ಲಿ ಶನಿವಾರ ನಡೆದ ನಗರಸಭೆಯ ಸಾಮಾನ್ಯಸಭೆಯಲ್ಲಿ ಶಾಸಕರಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಾಲ್ಕೈದು ಸದಸ್ಯರು ಧ್ವನಿಗೂಡಿಸಿದರು.

ಪೌರಾಯುಕ್ತ ಚಂದ್ರಪ್ಪ ಪ್ರತಿಕ್ರಿಯಿಸಿ, ‘ಶಾಸಕರ ಮೇಲೆ ಪ್ರಕರಣ ದಾಖಲಿಸುವ ಅಧಿಕಾರ ನನಗಿಲ್ಲ. ಈ ವಿಷಯವನ್ನು ನಮ್ಮ ಮೇಲಿನ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಉತ್ತರಿಸಿದರು.

ಇದಕ್ಕೆ ಅಸಮಧಾನಗೊಂಡ ಸದಸ್ಯ ಕಾಂತರಾಜ್, ‘ನಗರದ ಅನೇಕ ರಸ್ತೆಗಳು ಸಂಚರಿಸಲು ಯೋಗ್ಯವಿಲ್ಲ ಎಂದು ನಾಗರಿಕರೂ ನಗರಸಭೆಯನ್ನು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಹೀಗಿರುವಾಗ ಯೋಗ್ಯವಾಗಿದ್ದ ರಸ್ತೆಯೊಂದನ್ನು ಹಾಳು ಮಾಡಲಾಗಿದೆ.  ಸಾರ್ವಜನಿಕರಿಗೆ ತೊಂದರೆಯಾದರೆ ಅದಕ್ಕೆ ಯಾರು
ಹೊಣೆ? ಇದಕ್ಕೆ ಮೊದಲು ಪೌರಾಯುಕ್ತರು ಉತ್ತರಿಸಬೇಕು’ ಎಂದರು.

‘ಮನೆಯ ನಲ್ಲಿ ದುರಸ್ತಿ ಪಡಿಸಲು ಸಾಮಾನ್ಯ ನಾಗರಿಕರು ನಗರಸಭೆ ಅನುಮತಿ ಇಲ್ಲದೆ, ರಸ್ತೆಯ ಗುಂಡಿ ತೆಗೆಸಿದರೆ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೀರಿ. ಶಾಸಕರ ಮೇಲೇಕೆ ದಾಖಲಿಸಲು ಹಿಂದೇಟು ಹಾಕುತ್ತಿದ್ದೀರಿ. ಕಾನೂನಿನಲ್ಲಿ ದೊಡ್ಡವರಿ
ಗೊಂದು, ಸಣ್ಣವರಿಗೊಂದು ತಾರತಮ್ಯ ಏಕೆ’ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಶಾಸಕರಾಗಲಿ, ಸಚಿವರಾಗಲಿ ನಗರ ವ್ಯಾಪ್ತಿಯ ಯಾವುದೇ ಕೆಲಸ ಮಾಡುವ ಮುನ್ನ ನಗರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇದರ ವಿರುದ್ಧ ಯಾರೇ ನಡೆದುಕೊಂಡರೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

‘ಪೌರಾಯುಕ್ತರು ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡದಿದ್ದಾಗ ಇನ್ನು ಮುಂದೆ ಯಾರೇ ರಸ್ತೆ ಗುಂಡಿ ತೋಡಿದರೂ ಪ್ರಕರಣ ದಾಖಲಿಸುವಂತಿಲ್ಲ. ಹಾಗೇನಾ
ದರೂ ದಾಖಲಿಸಿದ್ದೇ ಆದರೆ, ಅಂದೇ ಸರಿಯಾದ ಉತ್ತರ ನೀಡುತ್ತೇನೆ’ ಎಂದು ಕಾಂತರಾಜ್ ಹೇಳಿದರು.

ಪೌರಾಯುಕ್ತರ ವರ್ಗಾವಣೆ ಪ್ರಸ್ತಾಪ: ಪೌರಾಯುಕ್ತರ ವರ್ಗಾವಣೆಯನ್ನು ಸಾಮಾನ್ಯಸಭೆ ವಿಷಯದಲ್ಲಿ ತಂದಿಲ್ಲ. ಸದಸ್ಯರ ಮಾತಿಗೆ, ಪತ್ರಕ್ಕೆ ಇಲ್ಲಿ ಬೆಲೆ ಇಲ್ಲದಂತಾಗಿದೆ ಎಂದು ಸದಸ್ಯ ಮಲ್ಲಿಕಾರ್ಜುನ್ ಅಧ್ಯಕ್ಷರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಸದಸ್ಯ ಖಾದರ್‌ ಖಾನ್, ‘ನೀವು ಪತ್ರ ಬರೆದ 10 ದಿನಗಳ ಒಳಗೆ ಅಧ್ಯಕ್ಷರು ವಿಶೇಷ ಸಭೆ ಕರೆಯಬೇಕಿತ್ತು. ಇಲ್ಲದಿದ್ದಾಗ ಉಪಾಧ್ಯಕ್ಷರ ಗಮನಕ್ಕೆ ತರಬೇಕಿತ್ತು. ಈ ಪತ್ರಕ್ಕೆ ಈಗ ಬೆಲೆ ಇಲ್ಲದಂತಾಗಿದೆ. ಆದ್ದರಿಂದ ಮತ್ತೊಂದು ಸಭೆ ಕರೆದು ಚರ್ಚಿಸೋಣ’ ಎಂದು ಹೇಳಿದರು.

ಸದಸ್ಯ ಸರ್ದಾರ್ ಅಹಮದ್ ಮಹಮದ್ ಪಾಷಾ ಮಾತನಾಡಿ, ‘ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಅವುಗಳ ಕುರಿತು ಸಭೆಯಲ್ಲಿ ತೀರ್ಮಾನವಾಗಲಿ’ ಎಂದು ಮನವಿ ಮಾಡಿದರು.

‘ಕಾನೂನು ಅರಿವಿನ ತೊಡಕಿನಿಂದಾಗಿ ಎರಡು ಬಾರಿ ಪೌರಾಯುಕ್ತರ ವರ್ಗಾವಣೆ ವಿಷಯ ರದ್ದಾಗಿದೆ. ಅವರ ಆಡಳಿತ ವೈಖರಿ ಬಗ್ಗೆ ಈಗಲೂ ನಮಗೆ ಬೇಸರವಿದೆ. ಸದಸ್ಯರಾಗಲಿ, ಅಧ್ಯಕ್ಷರಾಗಲಿ, ಯಾರ ಮಾತಿಗೂ ಅಧಿಕಾರಿ ವರ್ಗ ಬೆಲೆ ಕೊಡುತ್ತಿಲ್ಲ. ಶಾಸಕರು, ಸಚಿವರು ಹೇಳಿದ ಕೂಡಲೇ ಕೆಲಸಗಳಾಗುತ್ತವೆ. ನಿಮ್ಮನ್ನು ಗೊಂಬೆ ರೀತಿಯಲ್ಲಿ ಕುಣಿಸುತ್ತಿದ್ದಾರೆ’ ಎಂದು ಅಧ್ಯಕ್ಷ ಬಗ್ಗೆ ಕಾಂತರಾಜ್ ಅಸಮಾಧಾನ ವ್ಯಕ್ತಪಡಿಸಿದರು.

‘ಪೌರಾಯುಕ್ತರ ವರ್ಗಾವಣೆ ವಿಚಾರ ಪ್ರಸ್ತಾಪಿಲು ಇನ್ನೊಂದು ದಿನ ವಿಶೇಷ ಸಾಮಾನ್ಯ ಸಭೆ ಕರೆಯೋಣ. ಅಂದು ಸದಸ್ಯರು ತೀರ್ಮಾನಿಸಿದ್ದನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಅಧ್ಯಕ್ಷ ಮಂಜುನಾಥ ಗೊಪ್ಪೆ ತಿಳಿಸಿದರು.

ಸ್ವಚ್ಛತೆಯಲ್ಲಿ ವಿಫಲ: ಸ್ವಚ್ಛತೆ ಕೇವಲ ಭಾಷಣಕ್ಕಷ್ಟೇ ಸೀಮಿತವೇ? ಚರಂಡಿಗಳಿಗೆ ಸಿಂಪಡಿಸಲು ಪೌಡರ್ ತರಿಸಲಾಗಿದೆ. ಅದನ್ನು ಯಾರಿಗೆ ಕೊಟ್ಟಿದ್ದೀರಿ? ಅದನ್ನೇನು ಮುಖಕ್ಕೆ ಬಳಸಲೇ?’ ಎಂದು 13ನೇ ವಾರ್ಡ್‌ನ ಮಹಿಳಾ ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

‘ಒಂದು ತಿಂಗಳಾಯ್ತು ನಮ್ಮ ವಾರ್ಡ್‌ನಲ್ಲಿ ಕಸ ವಿಲೇ ಮಾಡಿಲ್ಲ. ಸದಸ್ಯೆಯರೆಂದರೆ ನಿರ್ಲಕ್ಷವೇ? ನಮ್ಮ ಮಾತುಗಳಿಗೆ ಇಲ್ಲಿ ಬೆಲೆಯೇ ಇಲ್ಲವೇ’ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು. ಇದಕ್ಕೆ ಮತ್ತೊಬ್ಬ ಸದಸ್ಯ ಭೀಮರಾಜ್ ದನಿಗೂಡಿಸಿ, ‘ನಮ್ಮ ವಾರ್ಡ್‌ಗೆ ಕಸ ಸಂಗ್ರಹಿಸುವ ವಾಹನ ಬರದೇ ತಿಂಗಳ ಮೇಲಾಯ್ತು. ಜನರು ಕಸವನ್ನು ಎಲ್ಲಿ ಹಾಕಬೇಕು’ ಎಂದು ಕೇಳಿದರು.

‘ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಕ್ರಮ ಏಕೆ ಕೈಗೊಂಡಿಲ್ಲ? ಕೂಡಲೇ ತೆರವಿಗೆ ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದರು. ಎಲ್ಲ ವಾರ್ಡ್‌ಗಳಿಗೂ ದಿನನಿತ್ಯ ಕಸ ಸಂಗ್ರಹಿಸುವ ವಾಹನಗಳು ಹೋಗಬೇಕು. ಅಗತ್ಯಕ್ಕೆ ತಕ್ಕಂತೆ ಪೌಡರ್ ಪೂರೈಸುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಪ್ರಕರಣ ದಾಖಲಿಸಲು ಅವಕಾಶವಿದೆ’
ಶಾಸಕರ ವಿರುದ್ಧ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ. ಕೂಡಲೇ ಈ ಕುರಿತು ಸಭಾಪತಿ ಅವರಿಗೆ ಪತ್ರ ಬರೆದು ಅಲ್ಲಿಂದ ಅನುಮತಿ ಪಡೆದುಕೊಳ್ಳಬೇಕು. ನಂತರ ಪ್ರಕರಣ ದಾಖಲಿಸಬಹುದು ಎಂದು ಸದಸ್ಯ ಖಾದರ್‌ಖಾನ್ ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT