ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರಿನ ಘಟಕಗಳ ನಿರ್ವಹಣೆ; ಯಾರು ಹೊಣೆ?

Last Updated 19 ನವೆಂಬರ್ 2017, 6:52 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ವಿವಿಧೆಡೆ ಸ್ಥಾಪಿಸಿರುವ ಶುದ್ಧ ನೀರಿನ ಘಟಕಗಳ ನಿರ್ವಹಣೆಯು ಜಿಲ್ಲಾ ಪಂಚಾಯಿತಿಗೆ ಸವಾಲಾಗಿ ಪರಿಣಮಿಸಿದೆ. ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ದೂರುಗಳು ಮೇಲಿಂದ ಮೇಲೆ ಕೇಳಿ ಬರುತ್ತಿವೆ. ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನೆ ಸಭೆಗಳಲ್ಲಿ ಹಾಗೂ ಸಾಮಾನ್ಯ ಸಭೆಗಳಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಸರ್ವೇ ಸಾಮಾನ್ಯವಾಗಿ ಈ ಕುರಿತು ಪ್ರಶ್ನಿಸುತ್ತಿದ್ದಾರೆ. ನಿಯಮಾನುಸಾರ, ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲು ಅನುಮತಿ ಪಡೆದಿರುವ ಏಜೆನ್ಸಿಯೆ ಅದನ್ನು ಐದು ವರ್ಷಗಳವರೆಗೆ ನಿರ್ವಹಣೆ ಮಾಡಬೇಕು. ಆದರೆ ಏಜೆನ್ಸಿಗಳು ಮುತೂವರ್ಜಿಯಿಂದ ದುರಸ್ತಿ ಮಾಡುತ್ತಿಲ್ಲ. ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ಸಮಜಾಯಿಸಿ ನೀಡುತ್ತಾ ಬರುತ್ತಿದ್ದಾರೆ.

ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎನ್ನುವ ಕಾರಣದಿಂದ ಎರಡು ಡೊಶಿನ್‌ ಹಾಗೂ ಸ್ಮಾಟ್‌ ಇಂಡಿಯಾ ಎನ್ನುವ ಎರಡು ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಅಧಿಕಾರಿಗಳು ಸೇರಿಸಿದ್ದಾರೆ. ಈ ಕಂಪೆನಿಗಳಿಗೆ ನೀಡಬೇಕಿದ್ದ ಮೊತ್ತವನ್ನು ತಡೆಹಿಡಿದಿದ್ದಾರೆ. ಇದರಿಂದ ಶುದ್ಧ ನೀರಿನ ಘಟಕಗಳ ನಿರ್ವಹಣೆ ಸಮಸ್ಯೆ ಮತ್ತಷ್ಟು ಹೆಚ್ಚಿದಂತಾಗಿದೆ. ಕಪ್ಪುಪಟ್ಟಿಗೆ ಸೇರಿದ ಏಜೆನ್ಸಿಗಳು ಪಡೆದಿದ್ದ 200 ಶುದ್ಧ ನೀರಿನ ಘಟಕಗಳನ್ನು ಯಾರು ನಿರ್ವಹಿಸಬೇಕು ಎನ್ನುವ ಪ್ರಶ್ನೆ ಈಗ ಎದುರಾಗಿದೆ.

ನಿಯಮ ಉಲ್ಲಂಘನೆ: ಒಟ್ಟು ಎಂಟು ಏಜೆನ್ಸಿಗಳಿಗೆ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲು ಗುತ್ತಿಗೆ ನೀಡಲಾಗಿತ್ತು. ಹೈದರಾಬಾದ್‌ನ ಸ್ಮಾಟ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ಗೆ 118, ಡೊಶಿನ್‌ಗೆ 82, ಪ್ಯಾನ್‌ ಏಶಿಯಾಗೆ 19, ಮೆಂಬ್ರೆನ್‌ ಫಿಲ್ಟರ್ಸ್‌ಗೆ 12, ರೈಟ್‌ ವಾಟರ್‌ ನಾಗಪುರಗೆ 131, ಎಂಎಸ್‌ ಸೈಂಟಿಫಿಕ್‌ಗೆ 72, ರಾಯಚೂರಿನ ಸಹಕಾರ ಸಂಘ ಸಂಸ್ಥೆಗೆ 30, ಕೆಆರ್‌ಐಡಿಎಲ್‌ಗೆ 9 ಶುದ್ಧ ನೀರಿನ ಘಟಕಗಳ ಸ್ಥಾಪನೆಗೆ ಪರವಾನಿಗೆ ನೀಡಲಾಗಿತ್ತು. ಈಗ ಕಪ್ಪು ಪಟ್ಟಿಗೆ ಸೇರಿರುವ ಡೊಶಿನ್‌ ಹಾಗೂ ಸ್ಮಾಟ್‌ ಇಂಡಿಯಾ ಕಂಪೆನಿಗಳು ಕೋರ್ಟ್‌ ಮೊರೆ ಹೋಗಿವೆ.

‘ಶುದ್ಧ ನೀರಿನ ಘಟಕಗಳಲ್ಲಿ ಏನಾದರೊಂದು ಸಮಸ್ಯೆ ಬರುತ್ತದೆ. ಕೆಲವೊಂದನ್ನು ಕೂಡಲೇ ಪರಿಹರಿಸಬಹುದು. ಸಮಸ್ಯೆಯನ್ನು ಸಮರ್ಪಕವಾಗಿ ನೋಡುವುದಕ್ಕೆ ಹಾಗೂ ಆರ್‌ಒ ಘಟಕ ನಿರ್ವಹಿಸಲು ಏಜೆನ್ಸಿಗಳು ಸರಿಯಾದ ವ್ಯಕ್ತಿಯನ್ನು ಅಲ್ಲಿ ನೇಮಿಸಿಕೊಳ್ಳಬೇಕು. ಇದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಶುದ್ಧ ನೀರಿನ ಘಟಕಗಳ ನಿರ್ವಹಣೆಗೆ ಸಂಬಂಧಿಸಿದಂತೆ ಏಜೆನ್ಸಿಗಳನ್ನು ನಿರಂತರ ಸಂಪರ್ಕಿಸಿ ಕೆಲಸ ಪಡೆಯುತ್ತಿದ್ದೇನೆ. ನೀರಿನ ಘಟಕಗಳ ಕಾರ್ಯಾಚರಣೆ ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆಯನ್ನು ಸಿಇಒ ಅವರು ಈಗ ಸೂಚಿಸಿದ್ದಾರೆ. ಇದರಿಂದ ಎಲ್ಲಿ ಸಮಸ್ಯೆ ಆಗಿದೆ ಎಂಬುದು ಕೂಡಲೇ ಗೊತ್ತಾಗುತ್ತದೆ. ಅದಕ್ಕೆ ಸ್ಪಂದಿಸಿ ಕೆಲಸ ಮಾಡಲು ಅಧಿಕಾರಿಗಳಿಗೂ ನೆರವಾಗುತ್ತದೆ’ ಎಂದು ಗ್ರಾಮೀಣ ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಗಣಪತಿ ಸಾಕ್ರೆ ಅವರು ಹೇಳಿದರು.

473 ಘಟಕಗಳಿವೆ
ಜಿಲ್ಲೆಯ ವಿವಿಧೆಡೆ 473 ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸುವುದಕ್ಕೆ ಎಂಟು ಎಜೆನ್ಸಿಗಳಿಗೆ ಗುತ್ತಿಗೆ ವಹಿಸಲಾಗಿತ್ತು. ಅದರಲ್ಲಿ 400 ಘಟಕಗಳು ಸ್ಥಾಪನೆಯಾಗಿದ್ದು, 358 ಘಟಕಗಳು ಕಾರ್ಯಾರಂಭ ಮಾಡಿವೆ. ಆದರೆ ಎಷ್ಟು ಶುದ್ಧ ನೀರಿನ ಘಟಕಗಳು ಕಾರ್ಯಾಚರಣೆ ಮಾಡುತ್ತಿವೆ ಎನ್ನುವ ಅಂಕಿ–ಅಂಶವು ಪ್ರತಿದಿನವೂ ಬದಲಾಗುತ್ತದೆ. ಒಂದಿಲ್ಲ ಒಂದು ಕಡೆಗೆ ಘಟಕಗಳು ತುರ್ತು ದುರಸ್ತಿಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸುತ್ತವೆ.

72 ಹೊಸ ಘಟಕಗಳು
2017–18ನೇ ಸಾಲಿನಲ್ಲಿ ಜಿಲ್ಲೆಯ ವಿವಿಧೆಡೆ ಮತ್ತೆ 72 ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದ್ದು, ಇದಕ್ಕಾಗಿ ರಾಜ್ಯಮಟ್ಟದಲ್ಲೆ ಟೆಂಡರ್‌ ಆಹ್ವಾನಿಸಲಾಗಿದೆ. ಆದರೆ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜಿನಿಯರುಗಳು ನೀಡುವ ಮಾಹಿತಿ ಪ್ರಕಾರ, ಟೆಂಡರ್‌ನಲ್ಲಿ ಯಾರೂ ಭಾಗವಹಿಸಿಲ್ಲ. ವಿಶೇಷವೆಂದರೆ, ಈ ಬಾರಿ ಘಟಕಗಳನ್ನು ಮೀಸಲಾತಿ ಆಧಾರದಲ್ಲಿ ವಿಂಗಡಿಸಿರುವುದು. ಎಸ್‌ಸಿಪಿ, ಟಿಎಸ್‌ಪಿ ಹಾಗೂ ಇತರೆ ಎಂದು ಪ್ರತ್ಯೇಕಿಸಲಾಗಿದೆ. ಪರಿಶಿಷ್ಟರು ಇರುವ ಕಡೆಗಳಲ್ಲಿ ಪ್ರತ್ಯೇಕ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

*  * 

ಶುದ್ಧ ನೀರಿನ ಘಟಕಗಳ ಕಾರ್ಯಾಚರಣೆ ಹೇಗಿದೆ ಎಂಬುದರ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ್ರತಿದಿನ ಬೆಳಿಗ್ಗೆ ಇ–ಮೇಲ್‌ ಮೂಲಕ ಮಾಹಿತಿ ಹಾಕುವ ಕ್ರಮ ಆರಂಭಿಸಬೇಕಿದೆ.
ಅಭಿರಾಂ ಜಿ.ಶಂಕರ
ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT