ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೆ ಶಾಲೆ ಅಭಿವೃದ್ಧಿಗೆ ಎಳ್ಳು ನೀರು!

Last Updated 19 ನವೆಂಬರ್ 2017, 7:16 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಗಡಿಗ್ರಾಮ ಮದ್ದೆ. ಇಲ್ಲಿನ ಸರ್ಕಾರಿ ಕನ್ನಡ ಶಾಲೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ದುಸ್ಥಿತಿ ತಲುಪಿದೆ. ಶಾಲೆ ಆವರಣಕ್ಕೆ ಕಾಲಿಟ್ಟ ತಕ್ಷಣ ಬಿರುಕು ಬಿಟ್ಟ ಗೋಡೆಗಳು, ಕಿಟಕಿ, ಬಾಗಿಲುಗಳಿಲ್ಲದ ಕಟ್ಟಡ, ಮುರಿದು ಬೀಳುವಂತಿರುವ ಚಾವಣಿ ಕಣ್ಣಿಗೆ ರಾಚುತ್ತವೆ. 1 ರಿಂದ 7 ನೇ ತರಗತಿವರೆಗೆ 85 ಮಂದಿ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಗಡಿಭಾಗವಾದ ಇಲ್ಲಿ ಮನೆ ಮತ್ತು ಮಾತೃಭಾಷೆಯೇ ತೆಲುಗು. ಗ್ರಾಮಕ್ಕೆ ಕೂಗಳತೆ ದೂರದಲ್ಲಿ ಆಂಧ್ರ ಗಡಿ ಇದೆ.ಇಂತಹ ಸ್ಥಿತಿಯಲ್ಲಿಯೂ ಶಾಲೆಗೆ ಮಕ್ಕಳು ದಾಖಲಾಗುತ್ತಿದ್ದಾರೆ.  

7 ತರಗತಿಗಳನ್ನು ಕೇವಲ 2 ಕೊಠಡಿಗಳಲ್ಲಿ ನಿರ್ವಹಿಸಲಾಗುತ್ತಿದೆ. ಜತೆಗೆ ಶಿಕ್ಷಕರ ಕೊರತೆಯೂ ಇದ್ದು ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ. ಶಾಲೆ ಆವರಣದಲ್ಲಿ ಹಲವು ದಶಕಗಳ ಹಿಂದೆ ನಿರ್ಮಿಸಿರುವ 7 ಕೊಠಡಿಗಳು ಬೀಳುವ ಹಂತದಲ್ಲಿವೆ. ಶಿಥಿಲವಾಗಿರುವ ಕೊಠಡಿಗಳನ್ನು ದುಷ್ಕರ್ಮಿಗಳು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

ಕೊಠಡಿಯೊಂದರಲ್ಲಿ ನೀರು ಶೇಖರಿಸಲು ನೆಲ ಮಟ್ಟದದಲ್ಲಿ ತೊಟ್ಟಿ ನಿರ್ಮಿಸಲಾಗಿದೆ. ಆದರೆ ಅದಕ್ಕೆ ಮುಚ್ಚಳ ಅಳವಡಿಸದ ಕಾರಣ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಕೊಠಡಿಗಳು ಯಾವಾಗ ಬೀಳುತ್ತವೆಯೋ? ಯಾರ ಮೇಲೆ ಬೀಳುತ್ತವೆಯೋ? ಎಂಬ ಆತಂಕದಲ್ಲಿಯೇ ಪೋಷಕರು ಮಕ್ಕಳನ್ನು ಶಾಲೆಗ ಕಳುಹಿಸುತ್ತಿದ್ದಾರೆ. ಇಲ್ಲಿ ಶೌಚಾಲಯಗಳು ನೆಪ ಮಾತ್ರಕ್ಕೆ ಇವೆ. ಸಮರ್ಪಕ ನಿರ್ವಹಣೆ ಇಲ್ಲ. ಸಿಬ್ಬಂದಿ, ಮಕ್ಕಳು ಶೌಚಾಲಯಕ್ಕೆ ಗ್ರಾಮದ ಹೊರ ವಲಯಕ್ಕೆ ಹೋಗಬೇಕು.

‘ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳು ಭಾಷೆಯನ್ನು ಉಳಿಸುವ ರಕ್ಷಣಾ ಕೇಂದ್ರಗಳು ಎಂಬ ಮಾತು ಪ್ರತಿ ಕನ್ನಡ ಕಾರ್ಯಕ್ರಮಗಳಲ್ಲಿ ಕೇಳಿ ಬರುತ್ತದೆ. ಆದರೆ ಗಡಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಅಭಿವೃದ್ಧಿ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಲವು ಬಾರಿ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಬದಲಾವಣೆಯಗಿಲ್ಲ. ಇದೇ ಸ್ಥಿತಿ ಮುಂದುವರಿದರೆ ಶಾಲೆಯ ಮಕ್ಕಳು ಆಂಧ್ರ ಶಾಲೆಗೆ ದಾಖಲಾಗುವುದರಲ್ಲಿ ಅನುಮಾನವಿಲ್ಲ’ ಎಂದು ಗ್ರಾಮದ ಚೇತನ್ ಕುಮಾರ್, ಶಶಿ ತಿಳಿಸಿದರು.

* * 

ಆಂಧ್ರ ಪ್ರದೇಶದ ಜತೆ ಗಡಿ ಹಂಚಿಕೊಂಡಿರುವ ಗ್ರಾಮದ ಕನ್ನಡ ಶಾಲೆ ಅಭಿವೃದ್ಧಿ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿದಿಗಳು ಆದ್ಯತೆ ನೀಡಬೇಕು.
ಮಹೇಶ್, ಗ್ರಾಮಸ್ಥ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT