ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಟ್ಯೂಬ್‌ನ ಪುಟ್ಟ ಬಾಣಸಿಗರು

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಮಕ್ಕಳು ಊಟ ಎಂದರೆ ಮಾರುದ್ದ ಓಡುತ್ತಾರೆ. ಆಟ, ಪಾಠದಲ್ಲಿಯೇ ಕಳೆದುಹೋಗುತ್ತಾರೆ. ಆದರೆ ಈ ಮಕ್ಕಳಿಗೆ ಭಿನ್ನ ಬಗೆಯ ಅಡುಗೆ ತಯಾರಿಸುವುದೇ ಹವ್ಯಾಸ. ತಮ್ಮ ಪ್ರತಿಭೆಯ ಪ್ರದರ್ಶನಕ್ಕಾಗಿ ಇವರು ಯೂಟ್ಯೂಬ್‌ ಚಾನೆಲ್ ಬಳಸಿಕೊಂಡಿದ್ದಾರೆ.

ಬೆಂಗಳೂರಿನ ಈ ಪುಟ್ಟ ಬಾಣಸಿಗರ ಹೆಸರು ಯಶ್‌ ವಿಹಾನ್‌ ಮತ್ತು ಅಥರ್ವ್‌. ವಿಹಾನ್‌ ಮಾರತ್ತಹಳ್ಳಿಯ ವಿಐಬಿಜಿವೈಒಆರ್‌ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿ. ಕೆಲ ಮಕ್ಕಳು ಅಡುಗೆ ಮಾಡಲು ಆಸಕ್ತಿ ತೋರಿಸಿದರೂ, ಪೋಷಕರು ‘ಇವೆಲ್ಲ ನಿನ್ನ ವಯಸಿಗಲ್ಲ, ಹೋಗಿ ಓದು’ ಎಂದುಬಿಡುತ್ತಾರೆ. ಆದರೆ ಇವರ ಪೋಷಕರು ಮಕ್ಕಳ ಆಸಕ್ತಿಗೆ ಪ್ರೋತ್ಸಾಹ ನೀಡುತ್ತಿರುವುದು ವಿಶೇಷ.ತಾನು ಮಾಡಿದ ಆಹಾರಗಳ ವಿವರವನ್ನು ಅಚ್ಚುಕಟ್ಟಾಗಿ ಒಪ್ಪಿಸುವ ಈ ಯುವಕನ ಜಾಣ್ಮೆ ಸೋಜಿಗ ಎನಿಸುತ್ತದೆ. ಈ ಮಕ್ಕಳ ತಾಯಿ ಪದ್ಮಾ ವಿನೋದ್‌ ಸಹ ಪಾಕ ಪ್ರವೀಣೆ. ಅಡುಗೆ ಕಲಿಸಲು ಇವರದೇ ಯೂಟ್ಯೂಬ್‌ ಚಾನೆಲ್‌ ಇದೆ. ತಾಯಿಯ ಈ ಆಸಕ್ತಿ ಮಕ್ಕಳಿಗೂ ರವಾನೆಯಾಗಿದೆ. ರುಚಿಯಾದ ಅಡುಗೆ ತಯಾರಿಸುವ ಜೊತೆಗೆ ಅದರ ಅಲಂಕಾರಕ್ಕೂ ಇವರು ವಿಶೇಷ ಗಮನ ನೀಡುತ್ತಾರೆ.

‘ನಾನು ಮೊದಲು ಅಡುಗೆ ಮಾಡಲು ಪ್ರಾರಂಭಿಸಿದ್ದು, 4ನೇ ವರ್ಷದವನಿದ್ದಾಗ. ಅಮ್ಮನಿಗೆ ಆಲೂಗೆಡ್ಡೆ, ಮೊಟ್ಟೆ ಸಿಪ್ಪೆ ತೆಗೆಯಲು ಸಹಾಯ ಮಾಡುತ್ತಿದ್ದೆ. ನಂತರ ಇದರಲ್ಲಿ ಇನ್ನಷ್ಟು ಆಸಕ್ತಿ ಬೆಳೆದು, ನಾನೇ ಅಡುಗೆಯಲ್ಲಿ ಹೊಸ ಪ್ರಯೋಗ ಮಾಡಲು ಮುಂದಾದೆ. ಅಡುಗೆ ಮಾಡುವುದರಲ್ಲಿ ಪಳಗುತ್ತಿದ್ದಂತೆ ಅಮ್ಮನ ಬಳಿ ನನಗೂ ಒಂದು ಯೂಟ್ಯೂಬ್‌ ಚಾನೆಲ್‌ ಮಾಡಿ ಕೊಡಿ, ನಾನು ತಯಾರಿಸಿದ ಅಡುಗೆಗಳನ್ನು ಅದರಲ್ಲಿ ಹಾಕಿಕೊಳ್ಳುವೆ ಎಂದೆ. ಸ್ವಲ್ವ ದಿನ ಯೋಚಿಸಿದ ಅಮ್ಮ ನಂತರ ಅದಕ್ಕೆ ಒಪ್ಪಿದರು’ ಎನ್ನುತ್ತಾನೆ ಈ ಪೋರ.

ಮಿಲ್ಕ್‌ ಪೋಹಾ, ಚಿಕನ್‌ ಫ್ರೈಡ್‌ ರೈಸ್‌ ಚಾಕೊಲೆಟ್‌ ಮಡ್‌ಕೇಕ್‌, ಮ್ಯಾಕ್ರೋನಿ ಸಲಾಡ್‌, ಎಗ್‌ ಜೀಸ್‌ ದೋಸೆ, ಪಿಜ್ಜಾ ಸೇರಿದಂತೆ ಹಲವು ಬಗೆಯ ತಿನಿಸುಗಳನ್ನು ಈ ಮಕ್ಕಳು ತಯಾರಿಸುತ್ತಾರೆ.  ‘ನಾನು ತಯಾರಿಸುವ ಚಾಕೊಲೆಟ್‌ ಫಡ್ಜ್‌ ಎಂದರೆ ನನ್ನ ಸ್ನೇಹಿತರಿಗೆ ತುಂಬಾ ಇಷ್ಟ’ ಎಂದು ಹೆಮ್ಮೆಯಿಂದ ಹೇಳುತ್ತಾನೆ ವಿಹಾನ್‌.

‘ವಿಹಾನ್‌ ನಾನು ಅಡುಗೆ ಮಾಡುತ್ತಿದ್ದಾಗ ತುಂಬಾ ಆಸಕ್ತಿ ತೋರುತ್ತಿದ್ದ. ಅವನ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗುತ್ತಿತ್ತು. ಕ್ರಮೇಣ ಇವನು ಅಡುಗೆಯಲ್ಲಿ ಆಸಕ್ತಿ ಕಳೆದುಕೊಳ್ಳಬಹುದು ಎಂದುಕೊಂಡಿದ್ದೆ. ಬದಲಾಗಿ ಇನ್ನಷ್ಟು ಹೆಚ್ಚು ಆಸಕ್ತಿ ತೋರಿದ. ಯೂಟ್ಯೂಬ್‌ ಮೂಲಕ ಅವನು ಬಗೆಬಗೆ ಆಹಾರದ ಮಾಹಿತಿ ಪಡೆದುಕೊಳ್ಳುತ್ತಾನೆ’ ಎನ್ನುತ್ತಾರೆ ತಾಯಿ ಪದ್ಮಾ.

ವಿಹಾನ್‌ ತಮ್ಮ ಅಥರ್ವನಿಗೆ ಈಗ ಐದು ವರ್ಷ. ಮನೆಯಲ್ಲಿ ಅಮ್ಮ, ಅಣ್ಣ ಇಬ್ಬರೂ ಅಡುಗೆಯಲ್ಲಿ ಕೈಚಳಕ ತೋರುವಾಗ ತಮ್ಮ ಸುಮ್ಮನಿರುತ್ತಾನೆಯೇ? ಅವನು ಇವರಿಬ್ಬರ ಹಾದಿಯನ್ನೇ ತುಳಿದಿದ್ದಾನೆ. ಅಣ್ಣ ತಯಾರಿಸಿದ ಅಡುಗೆಗೆ ಅಲಂಕಾರಿಕ

ಸ್ಪರ್ಶ ನೀಡುವುದರ ಜೊತೆಗೆ ತಾನು ಸಹಾಯ ಮಾಡುತ್ತಾನೆ.

ಯುಟ್ಯೂಬ್‌ ಚಾನೆಲ್‌: yummy Treats with yash

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT