ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟನಾಶಕ ಬಳಕೆಗೆ ಕಡಿವಾಣ ಹಾಕಿ

Last Updated 21 ನವೆಂಬರ್ 2017, 7:21 IST
ಅಕ್ಷರ ಗಾತ್ರ

ಹೊಸದುರ್ಗ: ರೈತರು ಅತಿಯಾದ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಗೆ ಕಡಿವಾಣ ಹಾಕಿ ಕೃಷಿಭೂಮಿಯ ಫಲವತ್ತತೆ ಕಾಪಾಡಬೇಕು ಎಂದು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್‌.ರವೀಂದ್ರ ಹೇಳಿದರು.\ ತಾಲ್ಲೂಕಿನ ಮತ್ತೋಡು ಹೋಬಳಿ ಹೊತ್ತರಗೊಂಡನಹಳ್ಳಿಯಲ್ಲಿ ಈಚೆಗೆ ನಡೆದ ಸಾವಯವ ಸಿರಿಧಾನ್ಯ ಬೆಳೆಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.

‘ಕೃಷಿಯಲ್ಲಿ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದರ ಫಲವಾಗಿ ದೇಶದಲ್ಲಿ ಹಸಿರು ಕ್ರಾಂತಿ ಸಾಧ್ಯವಾಯಿತು. ಆದರೆ ಹೆಚ್ಚಿನ ರಸಗೊಬ್ಬರ, ಕೀಟನಾಶಕಗಳನ್ನು ಬಳಸಿದ್ದರಿಂದ ಭೂಮಿಯಲ್ಲಿ ಸಾರ ಕಡಿಮೆಯಾಗಿ ಬೆಳೆಯ ಉತ್ಪಾದನೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರೈತರು ಕೃಷಿಯಲ್ಲಿ ದೊರೆಯುವ ಎಲ್ಲಾ ಸಸ್ಯಜನ್ಯ ಹಾಗೂ ಪ್ರಾಣಿ ಮೂಲದ ಪದಾರ್ಥಗಳಾದ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಕಾಂಪೋಸ್ಟ್, ವಿವಿಧ ಬಗೆಯ ಹಿಂಡಿಗಳನ್ನು ಸಾವಯವ ಗೊಬ್ಬರವನ್ನಾಗಿ ಬಳಸುವುದರಿಂದ ಮಣ್ಣಿನ ಗುಣಮಟ್ಟ ಹೆಚ್ಚಾಗುತ್ತದೆ’ ಎಂದು ಸಲಹೆ ನೀಡಿದರು.

‘ಕೂಲಿ ಕಾರ್ಮಿಕರ ಸಮಸ್ಯೆ ನಿವಾರಿಸಲು ಸರ್ಕಾರ ಕೃಷಿಯಲ್ಲಿ ತಾಂತ್ರಿಕತೆಯನ್ನು ಪ್ರೋತ್ಸಾಸುತ್ತಿದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಬೆಳೆ ಬೆಳೆಯುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಮುಂದಾಗಬೇಕು’ ಎಂದು ತಿಳಿಸಿದರು.

‘ಹಳ್ಳಿಗಳಲ್ಲಿ ಉತ್ತಮ ಆರೋಗ್ಯಕರ ಸಮಾಜ ಹಾಗೂ ಪರಿಸರ ನಿರ್ಮಾಣ ಮಾಡಲು ಪ್ರತಿಯೊಂದು ಮನೆಯಲ್ಲಿಯೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಸ್ವಚ್ಛ ಭಾರತ್ ಅಭಿಯಾನದ ಯಶಸ್ವಿಗೆ ಸಹಕರಿಸಬೇಕು’ ಎಂದು ರೈತರಿಗೆ ಮನವಿ ಮಾಡಿದರು.

ನವಣೆ ಬೆಳೆಯನ್ನು ಯಂತ್ರದಿಂದ ಕಟಾವು ಮಾಡುವ ಪ್ರಾತ್ಯಕ್ಷಿಕೆಗೆ ಭೇಟಿ ನೀಡಿ ಕೃಷಿಯಂತ್ರ ಧಾರೆ ಕಾರ್ಯಕ್ರಮದಿಂದ ರೈತರಿಗಾಗುತ್ತಿರುವ ಅನುಕೂಲಗಳ ರವೀಂದ್ರ ಅವರು ರೈತರೊಂದಿಗೆ ಚರ್ಚಿಸಿದರು.

ಇಒ ಮಹಾಂತೇಶ್, ಸಹಾಯಕ ಕೃಷಿ ನಿರ್ದೇಶಕ ಎ.ಸಿ.ಮಂಜು, ಕೃಷಿ ಅಧಿಕಾರಿ ಸಿ.ಎಸ್.ಈಶ, ರೈತ ಮುಖಂಡ ಸೋಮೇನಹಳ್ಲಿ ಸ್ವಾಮಿ, ಸಂಪನ್ಮೂಲ ವ್ಯಕ್ತಿ ಕಾಚಾಪುರ ರಂಗಪ್ಪ, ಸಾವಯವ ಕ್ಷೇತ್ರಾಧಿಕಾರಿ ಗಿರೀಶ್, ಮಹಾಂತೇಶ್, ನಾಗರಾಜು, ಭೀಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT