ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದನೇ ಸ್ಥಾನಕ್ಕೇರಿದ ಕೊಹ್ಲಿ

Last Updated 21 ನವೆಂಬರ್ 2017, 20:13 IST
ಅಕ್ಷರ ಗಾತ್ರ

ದುಬೈ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮಂಗಳವಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದ ವಿರಾಟ್‌, ಈ ಮೂಲಕ ಒಂದು ಸ್ಥಾನ ಬಡ್ತಿ ಹೊಂದಿದ್ದಾರೆ. ಏಕದಿನ ಮತ್ತು ಟಿ–20 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ನಾಲ್ಕನೇ ಸ್ಥಾನ ಹೊಂದಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್‌ ಮೊದಲ ಸ್ಥಾನ ಹೊಂದಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ 28ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಎರಡು ಸ್ಥಾನ ಮೇಲೇರಿದ್ದಾರೆ. ಶ್ರೀಲಂಕಾದ ನಿರೋಷನ್‌ ಡಿಕ್ವೆಲ್ಲಾ ಪಟ್ಟಿಯಲ್ಲಿ 37ನೇ ಸ್ಥಾನ ಗಳಿಸಿದ್ದಾರೆ.

ಕುಸಿದ ಜಡೇಜ: ಬೌಲರ್‌ಗಳ ಕ್ರಮಾಂಕ ಪಟ್ಟಿಯಲ್ಲಿ ಸ್ಪಿನ್ನರ್‌ ರವೀಂದ್ರ ಜಡೇಜ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಲಂಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್‌ ಪಡೆಯಲು ವಿಫಲರಾಗಿದ್ದ ಅವರು ಒಂದು ಸ್ಥಾನ ಕುಸಿದಿದ್ದಾರೆ. ಆಲ್‌ರೌಂಡರ್‌ಗಳ ವಿಭಾಗದಲ್ಲಿ ಜಡೇಜ 20 ಪಾಯಿಂಟ್ಸ್‌ ಕಳೆದುಕೊಂಡಿದ್ದಾರೆ.

ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ 29ನೇ ಸ್ಥಾನಕ್ಕೆ ಪ್ರಗತಿ ಕಂಡಿದ್ದಾರೆ. ಇದು ಅವರ ವೃತ್ತಿ ಬದುಕಿನ ಶ್ರೇಷ್ಠ ಸಾಧನೆ ಎನಿಸಿದೆ. ‘ಭುವಿ’ ಮೊದಲು 37ನೇ ಸ್ಥಾನದಲ್ಲಿದ್ದರು. ಮಹಮ್ಮದ್‌ ಶಮಿ 19ರಿಂದ 18ನೇ ಸ್ಥಾನಕ್ಕೆ ಏರಿದ್ದಾರೆ.

ಶ್ರೀಲಂಕಾದ ದಿಲ್ರುವಾನ ಪೆರೇರಾ 22ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಟೆಸ್ಟ್‌ ತಂಡಗಳ ಕ್ರಮಾಂಕ ಪಟ್ಟಿಯಲ್ಲಿ ಭಾರತ  ಅಗ್ರಸ್ಥಾನ ಕಾಪಾಡಿಕೊಂಡಿದೆ. ವಿರಾಟ್‌ ಬಳಗದ ಖಾತೆಯಲ್ಲಿ 125 ಪಾಯಿಂಟ್ಸ್‌ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT