ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟೇಲ್‌ ಸಮುದಾಯಕ್ಕೆ ಮೀಸಲಾತಿ ನೀಡಲು ಕಾಂಗ್ರೆಸ್ ಭರವಸೆ; ನಾನು ಯಾವುದೇ ಪಕ್ಷ ಸೇರುತ್ತಿಲ್ಲ: ಹಾರ್ದಿಕ್‌ ಪಟೇಲ್‌

Last Updated 22 ನವೆಂಬರ್ 2017, 6:46 IST
ಅಕ್ಷರ ಗಾತ್ರ

ಅಹಮದಾಬಾದ್‌: ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಪಟೇಲ್‌ ಸಮುದಾಯಕ್ಕೆ ಮೀಸಲಾತಿ ನೀಡುವ ಭರವಸೆ ದೊರೆತಿರುವುದಾಗಿ ಪಟೇಲ್‌ ಸಮುದಾಯದ ಯುವ ಮುಖಂಡ ಹಾರ್ದಿಕ್‌ ಪಟೇಲ್‌ ಬುಧವಾರ ಬಹಿರಂಗ ಪಡಿಸಿದರು.

‘ಪಟೇಲ್‌ ಸಮುದಾಯಕ್ಕೆ ಮೀಸಲಾತಿ ನೀಡಲು ಕಾಂಗ್ರೆಸ್‌ ಸಮ್ಮತಿಸಿದೆ. ಪ್ರಸ್ತುತ ಅನುಸರಿಸುತ್ತಿರುವ ಶೇ 49ರಷ್ಟು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲಾತಿಗೆ ಇದರಿಂದ ಯಾವುದೇ ತೊಂದರೆ ಇಲ್ಲ’ ಎಂದರು.

ಗುಜರಾತ್‌ನಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠವಾಗಿರುವ ಪಟೇಲ್‌ ಸಮುದಾಯದ ಒಟ್ಟು ಜನಸಂಖ್ಯೆಯಲ್ಲಿ ಶೇ 12–14ರಷ್ಟಿದೆ. 182 ವಿಧಾನಸಭಾ ಕ್ಷೇತ್ರಗಳ ಪೈಕಿ 60ರಲ್ಲಿ ಈ ಸಮುದಾಯ ನಿರ್ಣಾಯಕ ಪಾತ್ರವಹಿಸಲಿದೆ.

ಮೀಸಲಾತಿಗೆ ಸಂಬಂಧಿಸಿ ಕಾಂಗ್ರೆಸ್‌ ಜತೆಗಿನ ಒಪ್ಪಂದ ಅಂತಿಮವಾಗಿದ್ದು, ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮೀಸಲಾತಿ ಸೂತ್ರವನ್ನು ಸೇರಿಸಿಕೊಳ್ಳಲಿದೆ. ಆದರೆ, ಚುನಾವಣಾ ಟಿಕೆಟ್‌ ಹಂಚಿಕೆ ಸಂಬಂಧ ಯಾವುದೇ ಒಪ್ಪಂದವಿಲ್ಲ, ಪಟೇಲ್‌ ಸಮುದಾಯಕ್ಕೆ ಮೀಸಲಾತಿಗಾಗಿ ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿ (ಪಾಸ್‌) ಹೋರಾಟ ಮುಂದುವರಿಸಲಿದೆ ಎಂದರು.

‘ನಾನು ಯಾವುದೇ ರಾಜಕೀಯ ಪಕ್ಷ ಸೇರುತ್ತಿಲ್ಲ’ ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು. ಆಡಳಿತ ಬಿಜೆಪಿ ಪಟೇಲ್‌ ಸಮುದಾಯದ ಸ್ವತಂತ್ರ ಅಭ್ಯರ್ಥಿಗಳಿಗೆ ಹಣ ಒದಗಿಸುವ ಮೂಲಕ ಮತಗಳನ್ನು ಒಡೆದು ಗೆಲ್ಲುವ ಪ್ರಯತ್ನದಲ್ಲಿದೆ ಎಂದು ಆರೋಪಿಸಿದರು.

ಇತರ ಹಿಂದುಳಿದ ವರ್ಗಗಳ ಯುವ ನಾಯಕ ಅಲ್ಪೇಶ್‌ ಠಾಕೊರ್‌ ಹಾಗೂ ದಲಿತ ಯುವ ಮುಖಂಡ ಜಿಗ್ನೇಶ್‌ ಮೆವಾನಿ ಈಗಾಗಲೇ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT