ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲ್ಯಾಪ್‌ಟಾಪ್ ಖರೀದಿಯಲ್ಲಿ ಆಗುತ್ತಿರುವ ನಷ್ಟ ತಪ್ಪಿಸಿ’

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲು ನಾಲ್ಕು ಪ್ರತ್ಯೇಕ ಪ್ಯಾಕೇಜ್‌ಗಳಲ್ಲಿ ಟೆಂಡರ್ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಲಿದ್ದು, ಅದನ್ನು ತಪ್ಪಿಸಬೇಕು’ ಎಂದು ಈ ಹಿಂದೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಎಂ.ಎನ್. ಅಜಯ್ ನಾಗಭೂಷಣ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಖುಂಟಿಅ ಅವರಿಗೆ ಪತ್ರ ಬರೆದಿದ್ದಾರೆ.

ಅಜಯ್ ನಾಗಭೂಷಣ್ ಅವರನ್ನು ಕಳೆದ ಅ.17ರಂದು ಕಾಲೇಜು ಶಿಕ್ಷಣ  ಇಲಾಖೆ ಆಯುಕ್ತರ ಹುದ್ದೆಯಿಂದ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿತ್ತು. ಇಲಾಖೆಯಲ್ಲಿನ ಕ್ರಮಬದ್ಧವಲ್ಲದ ಮತ್ತು ನಿಯಮಗಳಿಗೆ ವಿರುದ್ಧವಾದ ಕ್ರಿಯೆಗಳ ಬಗ್ಗೆ ಪತ್ರದಲ್ಲಿ ವಿವರಿಸಿದ್ದಾರೆ.

‘2017–18ನೇ ಸಾಲಿಗೆ 1.5 ಲಕ್ಷ ಲ್ಯಾಪ್‌ಟಾಪ್ ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಗುಣಮಟ್ಟದ ಕಂಪೆನಿಗೆ ನೀಡಬೇಕು ಮತ್ತು ಒಂದೇ ಟೆಂಡರ್ ನೀಡಬೇಕು ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದೆ. ಆದರೆ, ನಾಲ್ಕು ಪ್ಯಾಕೇಜ್‌ಗಳನ್ನು ಮಾಡಿರುವುದರಿಂದ ಪ್ರತ್ಯೆಕ ದರ ಮತ್ತು ಗುಣಮಟ್ಟದ ಉಪಕರಣಗಳು ಪೂರೈಕೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುವ ಸಂಭವ ಇದೆ’ ಎಂದು ಹೇಳಿದ್ದಾರೆ.

‘ಸರ್ಕಾರಿ ವ್ಯವಸ್ಥೆಯಲ್ಲಿ ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಹಾಗೂ ಶಾಖಾಧಿಕಾರಿ ಇರುತ್ತಾರೆ. ಅವರು ಸರ್ಕಾರದ ನಿರ್ದೇಶನಗಳನ್ನು ರವಾನಿಸುತ್ತಾರೆ. ಲ್ಯಾಪ್‌ಟಾಪ್ ಖರೀದಿಗೆ ಒಂದೇ ಟೆಂಡರ್ ಕರೆಯಬೇಕು ಎಂದು ನಾನು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ಆದರೆ, ಅದಕ್ಕೆ ಉತ್ತರವನ್ನು ಇಲಾಖೆಯಲ್ಲಿ ಮಾಹಿತಿ ತಂತ್ರಜ್ಞಾನ ಸಂಯೋಜಕ ಆಗಿರುವ ಭಾಗ್ಯವಾನ್ ಮುದಿಗೌಡರ ಸರ್ಕಾರದ ನಿರ್ದೇಶನಗಳನ್ನು ರವಾನಿಸುತ್ತಾರೆ. ಇದು ಇಲಾಖೆಯಲ್ಲಿ ಸರಿಯಾದ ಮಾರ್ಗವಲ್ಲ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ವೆಚ್ಚ ಏರಿಕೆ ಸಾಧ್ಯತೆ

‘ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ ಕಟ್ಟಡ ನಿರ್ಮಾಣಕ್ಕಾಗಿ ಸಚಿವ ಸಂಪುಟ ಅನುಮೋದನೆ ಇಲ್ಲದೆ ₹ 90 ಕೋಟಿಯಿಂದ ₹ 190 ಕೋಟಿಗೆ ಏರಿಕೆ ಮಾಡಲಾಗಿದೆ. ಬರುವ ವರ್ಷದಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದೂ ಗಮನಕ್ಕೆ ತಂದಿದ್ದಾರೆ.

ಕಳೆದ ಆ.23ರಂದು ನಡೆದ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಆಡಳಿತ ಮಂಡಳಿ ಸಭೆಯಲ್ಲಿ ಕಟ್ಟಡದ ವಿಷಯವೇ ಪ್ರಸ್ತಾಪ ಆಗಿರಲಿಲ್ಲ. ಈ ವಿಷಯ ಸಭೆಯ ಕಾರ್ಯಸೂಚಿಯಲ್ಲೂ ಇರಲಿಲ್ಲ. ಆದರೆ, ಇದೇ ಸಭೆಯಲ್ಲಿ ಕಟ್ಟಡ ನಿರ್ಮಾಣ ಸಂಬಂಧ ₹ 192 ಕೋಟಿ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆದಿರುವುದಾಗಿ ಕರ್ನಾಟಕ ಗೃಹ ಮಂಡಳಿ ಎಂಜಿನಿಯರ್‌ಗಳು ತಿಳಿಸಿದ್ದಾರೆ. ಯೋಜನೆಯ ಪೂರ್ಣ ವರದಿ (ಡಿಪಿಆರ್) ಮತ್ತು ಅಂದಾಜು ವೆಚ್ಚ ವರದಿ ನೀಡುವಂತೆ ಕೇಳಿದರೂ ನೀಡಿಲ್ಲ. ಅಲ್ಲದೆ, ಇದು ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ’ ಎಂದು ತಿಳಿಸಿದ್ದಾರೆ ಎಂಬ ಮಾಹಿತಿಯನ್ನು ಪತ್ರದಲ್ಲಿ ತಿಳಿಸಿದ್ದಾರೆ.

ಅಭಿಪ್ರಾಯ ಪಡೆಯದೆ ನೇಮಕಾತಿ ಆದೇಶ

‘ಕಾಲೇಜು ಶಿಕ್ಷಣ ಇಲಾಖೆಗೆ 2,034 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಲಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾರ್ಗಸೂಚಿ ಅನ್ವಯ ವಿದ್ಯಾರ್ಹತೆ ಹೊಂದಿರುವವರಿಗೆ ಮಾತ್ರ ನೇಮಕಾತಿ ಆದೇಶ ನೀಡಬೇಕು. ಕೆಲವೊಂದು ನೇಮಕಾತಿಗಳಿಗೆ ಸಂಬಂಧಿಸಿದಂತೆ ಆದೇಶ ನೀಡುವ ಮುನ್ನ ಸರ್ಕಾರಿ ವಕೀಲರ ಅಭಿಪ್ರಾಯ ಪಡೆಯಬೇಕು ಎಂದು ಅಡ್ವೊಕೇಟ್ ಜನರಲ್ ಅವರು ತಿಳಿಸಿದ್ದರೂ, ಅದನ್ನು ಮೀರಿ ಆದೇಶ ನೀಡಲಾಗಿದೆ’ ಎಂದು ಅಜಯ್‌ ನಾಗಭೂಷಣ್ ಗಮನಕ್ಕೆ ತಂದಿದ್ದಾರೆ.

₹ 70 ಕೋಟಿ ವೆಚ್ಚದಲ್ಲಿ ಧಾರವಾಡದಲ್ಲಿ ನಿರ್ಮಿಸುತ್ತಿರುವ ಅಧ್ಯಾಪಕ ಅಕಾಡೆಮಿ ಕಟ್ಟಡದ ಟೆಂಡರ್‌ನ್ನು ಆಯುಕ್ತರ ಒಪ್ಪಿಗೆ ಇಲ್ಲದೆ ನೇರವಾಗಿ ಕರೆಯಲಾಗಿದ್ದು, ಈಗದು ಪರಿಶೀಲನಾ ಹಂತದಲ್ಲಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ವಸೂಲಾತಿಗೆ ಸೂಚಿಸಿದ ಬಳಿಕ ವರ್ಗಾವಣೆ

ಇಲಾಖೆಯಲ್ಲಿನ ಹಲವಾರು ಪ್ರಕರಣಗಳ ಕುರಿತು ಮಹಾಲೆಕ್ಕ ಪರಿಶೋಧಕರು (ಸಿಎಜಿ) ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು. ಅದರಂತೆ ಬೋಧಕರಿಗೆ ಈ ಹಿಂದೆ ನೀಡಲಾಗಿದ್ದ ಕೆಲವು ಭತ್ಯೆಗಳನ್ನು ಮರಳಿ ಪಡೆಯಲು ಆದೇಶಿಸಲಾಗಿತ್ತು.

‘ಈ ಬಗ್ಗೆ ಮೂರು–ನಾಲ್ಕು ತಿಂಗಳಿಂದ ನನ್ನ ಮೇಲೆ ಹಲವರಿಂದ ಒತ್ತಡವೂ ಇತ್ತು. ಆದರೂ ಇಲಾಖೆ ಹಾಗೂ ಸಾರ್ವಜನಿಕ ಹಿತದೃಷ್ಟಿಯನ್ನು ಬಿಟ್ಟುಕೊಡಲು ಆಗುವುದಿಲ್ಲ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅ.14ರಂದು ವಾಟ್ಸ್‌ಆ್ಯಪ್ ಸಂದೇಶ ಕಳಿಸಿದ್ದೆ. ಇದಾದ ಬಳಿಕ ಏಕಾಏಕಿ ನನ್ನ ವರ್ಗಾವಣೆ ಆಗಿದೆ’ ಎಂದು ಅಜಯ್ ನಾಗಭೂಷಣ್ ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT