ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನದಲ್ಲಿ ಸಿನಿಮಾರಂಗ ಯಾಕಿಲ್ಲ?: ಯೋಗರಾಜ್ ಭಟ್ ವಿಶ್ಲೇಷಣೆ

Last Updated 24 ನವೆಂಬರ್ 2017, 9:23 IST
ಅಕ್ಷರ ಗಾತ್ರ

ಮೈಸೂರು: 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ, ಮಹಾರಾಜ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ನುಡಿ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಲಿದ್ದು ಅಕ್ಷರ ತೋರಣ ಕಟ್ಟಲು ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೂರು ದಿನಗಳ ಕಾಲ ನಡೆಯುವ ನುಡಿಜಾತ್ರೆಯಲ್ಲಿ ಒಟ್ಟು 22 ಗೋಷ್ಠಿಗಳು  ನಡೆಯಲಿವೆ. ಈ ಗೋಷ್ಠಿಗಳಲ್ಲಿ ರಾಜ್ಯದ ವಿವಿಧ ಭಾಗಗಳ ಸಾಹಿತಿಗಳು, ಕವಿಗಳು, ಚಿಂತಕರು ಮತ್ತು ವಿಮರ್ಶಕರು ಭಾಗವಹಿಸಲಿದ್ದಾರೆ. ಆದರೆ ಸಿನಿಮಾರಂಗದ ಯಾವುದೇ ವ್ಯಕ್ತಿಗಳು ಇಲ್ಲಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಸಿನಿಮಾರಂಗ ಯಾಕೆ ಇಲ್ಲ ಎಂಬುದರ ಬಗ್ಗೆ ಯೋಗರಾಜ್ ಭಟ್ ವಿಶ್ಲೇಷಣೆ ಇಲ್ಲಿದೆ.

ನಮಸ್ತೆ,
ಸಿನೆಮಾದವರಿಗೆ ಸಾಹಿತಿಗಳು ಮತ್ತು ಸಾಹಿತ್ಯ ಕೃತಿಗಳು ಸುಲಭಕ್ಕೆ ತಲೆಗೆ ಹೋಗಲ್ಲ... ಸಾಹಿತಿಗಳಿಗೆ ಸಿನಿಮಾದವರ ಪಾಪ್ಯುಲಾರಿಟಿ ಮತ್ತು ಸಿನಿಮಾ ಕತೆ- ಕಾವ್ಯಗಳು ಸುಲಭಕ್ಕೆ ಇಷ್ಟ ಆಗುವುದಿಲ್ಲ.
ಯಾವುದೇ ಜ್ಞಾನ ಮತ್ತು ಯಾವುದೇ ಅಜ್ಞಾನದ ಮಧ್ಯೆ ಎರಡನ್ನೂ ಬೆಸೆಯುವ ವಿಜ್ಞಾನದ ಒಂದು ಹಗ್ಗದ ಸೇತುವೆಯನ್ನು ಯಾರಾದರೂ ಒಂದಿಷ್ಟು ಮಂದಿ ಕಟ್ಟಬೇಕು. ಕಟ್ಟಲು  ಎರಡೂ ದಂಡೆಗಳನ್ನು ಇಷ್ಟಪಡುವ ವಿಜ್ಞಾನಿಗಳು ಬೇಕು. ಅವರದೊಂದಿಷ್ಟು  ಹಗ್ಗ ಇವರದೊಂದಿಷ್ಟು ಹಗ್ಗ ಆಚೀಚೆ ಎಸೆದು ಎದುರೆದುರೇ ಎಳೆದು ಕಟ್ಟಿದಲ್ಲಿ ಸೇತುವೆ ಎದ್ದೀತು. ಆದರೆ ಈ ಸೇತುವೆ ಬೇಕಾಗೇ ಇಲ್ಲ ಎಂಬ ಮನೋಭಾವ ಸಾಕಷ್ಟು ಜನರಲ್ಲಿ ಮೊದಲಿನಿಂದ ಇದ್ದಂತಿದೆ. ಆದ್ದರಿಂದ ಪರಸ್ಪರ ಹಗ್ಗ ಎಸೀತಾರೋ  ಬಿಡ್ತಾರೋ , ಸೇತುವೆ ಆಗ್ತದೋ ಬಿಡ್ತದೋ ಯಾರಿಗೂ ಗೊತ್ತಿಲ್ಲ. ಇಂಥ ಒಂದು ಸುಸಂದರ್ಭದಲ್ಲಿ  ಅತ್ಯಂತ ವರ್ಕೌ ಔಟ್ ಆಗುವ ಅಸಂಬದ್ಧ ಎನ್ನಿಸಿದಷ್ಟೂ ಸುಸಂಬದ್ಧವಾಗಿಯೇ ಕಾಣಬಹುದಾದ ಉಚಿತ ಸಲಹೆಯೊಂದನ್ನು ನೀಡಬಹುದು.

ಅದೇನೆಂದರೆ ಯಾರು ಯಾವುದೇ ದಂಡೆಯಲ್ಲಿ ನಿಂತಿರಲಿ, ಅಕಸ್ಮಾತ್ ಅವರವರ ಎದುರಿನ ದಂಡೆ ಇಷ್ಟವಾದಲ್ಲಿ ಅವರು ತಮ್ಮ ಕಡೆ ಇರುವ ಯಾವುದಾದರೂ ಒಂದು ಒಳ್ಳೆಯ ಹಗ್ಗ ಎಸೆದು ಎದುರಿನ ದಂಡೆಯವರಿಗೆ ಹಿಡಕೊಳ್ಳಲು ವಿನಂತಿಸಿ. ಸಿಂಗಲ್ ಹಗ್ಗದ ಮೇಲೆ ಬ್ಯಾಲೆನ್ಸಿಗೊಂದು ದೊಣ್ಣೆ ಹಿಡ್ಕೊಂಡು  ಸುಮ್ಮನೆ ನಡ್ಕೊಂಡು  ಹೋಗುವುದು ಒಳ್ಳೆಯದು. ಮಧ್ಯೆ ಬಿದ್ದಲ್ಲಿ ಯಾವುದೋ ಈಜುಬಲ್ಲ ಪ್ರೇಕ್ಷಕ ಅಥವಾ ಓದುಗ ಉಳಿಸುತ್ತಾನೆ. ಹಾಗೆಯೇ ಬೀಳದೇ ಮುಂದುವರಿದಲ್ಲಿ ಇನ್ನೊಂದು ದಂಡೆ ಸಿಗ್ತದೆ. ಆ ದಂಡೆಯಲ್ಲಿ ವಿಶೇಷ ಏನಾದರೂ ಕಂಡಲ್ಲಿ ಮಜ ತಗೊಳ್ಳುವುದು..ಏನೂ ಸಿಕ್ಕದಿದ್ದಲ್ಲಿ ವಾಪಸು ಹೋದ್ರೆ ಆಯ್ತಪ್ಪ.

ಕೊನೇಪಕ್ಷ ಈ ಪ್ರಯತ್ನಕ್ಕಿಳಿವ ಎರಡೂ ಕಡೆ ಮಂದಿಯಿಂದ ಏನಾಗಲಿಲ್ಲವೆಂದರೂ ಒಂದಿಷ್ಟು ಹಗ್ಗಗಳಾದರೂ ಸೇತುವೆ ರೂಪದಲ್ಲಿ ಎಳೆಯಲ್ಪಡುತ್ತವೆ. ಅಷ್ಟರಲ್ಲಿ ಆ 'ಜ್ಞಾನದ ಹೊಳೆ'  ಕನ್ನಡದ ಬರಗಾಲ ಪರಿಸ್ಥಿತಿಯಿಂದ ಬತ್ತಿ ಹೋದಲ್ಲಿ, ಆ ಹೊಳೆಯ ಜಾಗದಲ್ಲಿ ಮೈದಾನ ಎದ್ದೇಳ್ತದೆ. ಆಗ ಎರಡೂ ದಂಡೆಗಳಲ್ಲಿ ಎಳೆದು ಉಳಿದ ಕೆಲವಾರು ಹಗ್ಗಗಳನ್ನೇ ಪರಸ್ಪರ ಎಳೆದಾಡುತ್ತ, ಆ ಮೈದಾನದಲ್ಲಿ ಕೊನೇಪಕ್ಷ ಹಗ್ಗ ಜಗ್ಗಾಟ ಆಡಿಕೊಂಡಾದ್ರೂ ಇಬ್ಬರೂ ಆರಾಮವಾಗಿ ಇರಬಹುದು...!
ಜೈ ಕರ್ನಾಟಕ ಮಾತೆ
ಯೋಗರಾಜ್ ಭಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT