ಧಾರವಾಡ

ಯೋಗೀಶ ಗೌಡ ಹತ್ಯೆ; ಸಚಿವರಿಂದ ಸಾಕ್ಷಿ ನಾಶ ಯತ್ನ

‘ಅ.23ರಂದು ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಇತ್ತು. ಅಂದು ಪೊಲೀಸರು ಎಂದು ಹೇಳಿಕೊಂಡ ಕೆಲವರು ಯೋಗೀಶಗೌಡರ ಪತ್ನಿ ಮಲ್ಲಮ್ಮ ಅವರನ್ನು ಖಾಸಗಿ ವಾಹನದಲ್ಲಿ ಕರೆದೊಯ್ದಿದ್ದರು.

ಧಾರವಾಡ: ‘ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದ ಸಾಕ್ಷಿ ನಾಶ ಯತ್ನ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಮ್ಮ ಕುಟುಂಬದ ಮೇಲೆ ಒತ್ತಡ ಹೇರಿದ್ದಾರೆ. ಇಡೀ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ಪಾತ್ರ ಇದೆ’ ಎಂದು ಯೋಗೀಶ ಗೌಡರ ಸಹೋದರ ಗುರುನಾಥ ಗೌಡ ಆರೋಪಿಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರೊಂದಿಗೆ ರಾಜಿ ಮಾಡಿಕೊಳ್ಳಬೇಕು ಎಂದು ಬೆಳಗಾವಿ ಐಜಿಪಿ ಕಚೇರಿಯ ಡಿವೈಎಸ್‌ಪಿ ತುಳಜಪ್ಪ ಸುಲ್ಫಿ ನನ್ನ ಮೇಲೆ ಒತ್ತಡ ಹೇರಿದ್ದಾರೆ. 2017ರ ಅ.23, ನ.10 ಹಾಗೂ 17ರಂದು ತಾಲ್ಲೂಕಿನ ಗೋವನಕೊಪ್ಪ ಗ್ರಾಮದಲ್ಲಿರುವ ತೋಟದ ಮನೆಗೆ ಬಂದಿದ್ದರು. ಖಾಸಗಿ ಕಾರಿನಲ್ಲಿ ಒಬ್ಬರೇ ಬಂದ ಅವರು ಸಂಧಾನ ಮಾಡಿಕೊಳ್ಳುವಂತೆ ಒತ್ತಡ ಹೇರಿದರು’ ಎಂದು ಆರೋಪ ಮಾಡಿದ್ದಾರೆ.

ಈ ಕುರಿತಂತೆ ಗುರುನಾಥ ಗೌಡರು ತಮ್ಮ ಜಮೀನಿಗೆ ತುಳಜಪ್ಪ ಹಲವು ಬಾರಿ ಬಂದು ಹೋಗಿರುವ ದೃಶ್ಯ ಹಾಗೂ ಕೆಲವರೊಂದಿಗೆ ನಡೆಸಿದ ಸಂಭಾಷಣೆಯ ವಿಡಿಯೊ ದೃಶ್ಯಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

‘ಅ.23ರಂದು ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಇತ್ತು. ಅಂದು ಪೊಲೀಸರು ಎಂದು ಹೇಳಿಕೊಂಡ ಕೆಲವರು ಯೋಗೀಶಗೌಡರ ಪತ್ನಿ ಮಲ್ಲಮ್ಮ ಅವರನ್ನು ಖಾಸಗಿ ವಾಹನದಲ್ಲಿ ಕರೆದೊಯ್ದಿದ್ದರು. ‘ಕೊಲೆ ಪ್ರಕರಣದಲ್ಲಿ ತನಗೆ ಏನೂ ಗೊತ್ತಿಲ್ಲ’ ಎಂದು ಹೇಳಿಕೆ ನೀಡುವಂತೆ ಒತ್ತಡ ಹೇರಿದ್ದರು’ ಎಂದು ಅವರು ದೂರಿದ್ದಾರೆ.

‘ನ.10ರಂದು ಸಾಕ್ಷಿ ವಿಚಾರಣೆ ಇದ್ದ ಸಂದರ್ಭದಲ್ಲೂ ಮನೆಗೆ ಬಂದಿದ್ದ ತುಳಜಪ್ಪ ಸುಲ್ಫಿ, ಪ್ರಕರಣ ಮುಗಿಸಿಕೊಂಡು ಬಿಡಿ ಎಂದು ಒತ್ತಡ ಹೇರಿದರು. ಹೋಟೆಲ್ ಉದ್ಯಮಿಯೊಬ್ಬರ ಮನೆಗೆ ಬರುವಂತೆ ಹೇಳಿದ್ದರು. ಅಲ್ಲಿ ಸಚಿವ ವಿನಯ ಕುಲಕರ್ಣಿ ಇದ್ದರು. ಬಸವರಾಜ ಮುತ್ತಗಿ ಹಾಗೂ ನೀವು ಪ್ರಕರಣವನ್ನು ಹೊಂದಾಣಿಕೆ ಮಾಡಿಕೊಂಡು ಮುಗಿಸಿಬಿಡಿ ಎಂದಿದ್ದರು. ಈ ವಿಷಯ ನ್ಯಾಯಾಲಯದಲ್ಲಿದ್ದು ನೀವು ಇದರಲ್ಲಿ ಬರಬೇಡಿ ಎಂದು ನಾನು ಹೇಳಿದ್ದೆ’ ಎಂದು ಗುರುನಾಥಗೌಡ ಹೇಳಿದ್ದಾರೆ.

ಇದೇ ವೇಳೆ ಪ್ರತಿಕ್ರಿಯೆ ನೀಡಿದ ಯೋಗೀಶಗೌಡರ ಸಹೋದರಿ ಅಕ್ಕಮಹಾದೇವಿ, ‘ಯೋಗೀಶ ಗೌಡನ ಮಗನನ್ನು ಮಫ್ತಿಯಲ್ಲಿದ್ದ ಪೊಲೀಸರು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ನ್ಯಾಯಾಲಯದ ವಿಚಾರಣೆ ನಂತರ ಬಿಟ್ಟು ಹೋಗಿದ್ದಾರೆ. ಇದು ಇಡೀ ಕುಟುಂಬದವರನ್ನು ಭಯಭೀತರನ್ನಾಗಿ ಮಾಡಿದೆ’ ಎಂದು ಹೇಳಿದ್ದಾರೆ.

ಯೋಗೀಶಗೌಡರ ಪತ್ನಿ ಮಲ್ಲಮ್ಮ ಮಾತನಾಡಿ, ‘ಕೊಲೆ ನಡೆಯುವ ಮೊದಲು ಮನೆಗೆ ಬಂದಿದ್ದ ಬೆದರಿಕೆ ಪತ್ರದಿಂದ ಪತಿ ಹೆದರಿದ್ದರು. ಇದಾದ ಕೆಲವೇ ದಿನಗಳಲ್ಲಿ ಕೊಲೆ ನಡೆಯಿತು. ಇದರಲ್ಲಿ ವಿನಯ ಕುಲಕರ್ಣಿ ಅವರ ಕೈವಾಡ ಇದೆ ಎಂದು ಆಗಿನಿಂದಲೂ ನಾನು ಆರೋಪ ಮಾಡುತ್ತಿದ್ದೇನೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದೆ. ಆದರೆ, ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆಯಲಿಲ್ಲ' ಎಂದರು.

‘ನ್ಯಾಯಾಲಯದಲ್ಲಿ ನನ್ನ ಹೇಳಿಕೆಯನ್ನು ಸರಿಯಾಗಿ ದಾಖಲಿಸುತ್ತಿಲ್ಲ ಎಂದು ನನಗನಿಸುತ್ತಿದೆ. ಇದನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಪ್ರಕರಣವನ್ನು ಬೇರೆಡೆ ವರ್ಗಾಯಿಸುವಂತೆ ಕೋರಿದ್ದೇನೆ. ನಮ್ಮ ಕಾನೂನು ಹೋರಾಟ ಮುಂದುವರಿಯಲಿದೆ’ ಎಂದೂ ಮಲ್ಲಮ್ಮ ಸ್ಪಷ್ಟಪಡಿಸಿದರು.

ಪ್ರಕರಣದ ಹಿನ್ನೆಲೆ
2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಜಿಮ್‌ನಲ್ಲಿ ಯೋಗೇಶಗೌಡ ಕೊಲೆ ನಡೆದಿತ್ತು. ಈ ಸಂಬಂಧ ಬಸವರಾಜ ಮುತ್ತಗಿ ಸೇರಿ 6 ಜನರನ್ನು ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿ ಮುತ್ತಗಿ ಅನಾರೋಗ್ಯ ಕಾರಣದಿಂದ ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದರೆ, ಉಳಿದ ಐವರು ಧಾರವಾಡ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಕೊಲೆ ಪ್ರಕರಣದ ಸಾಕ್ಷಿ ಹಾಗೂ ಆರೋಪಿಗಳ ವಿಚಾರಣೆ ಧಾರವಾಡ ನ್ಯಾಯಾಲಯದಲ್ಲಿ ನಡೆಯುತ್ತಿದೆ.

* * 

ಹತ್ಯೆಯಲ್ಲಿ ನನ್ನ ಪಾತ್ರವಿಲ್ಲ. ಯೋಗೀಶಗೌಡ ಅವರನ್ನು ಹತ್ಯೆ ಮಾಡಿದವರು ಜೈಲಿನಲ್ಲಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದೆ. ವಿನಾಕಾರಣ ಬಿಜೆಪಿಯವರು ಇದರಲ್ಲಿ ನನ್ನ ಹೆಸರು ಎಳೆದು ತರುತ್ತಿದ್ದಾರೆ
ವಿನಯ ಕುಲಕರ್ಣಿ
ಗಣಿ ಮತ್ತು ಭೂವಿಜ್ಞಾನ ಸಚಿವ

Comments
ಈ ವಿಭಾಗದಿಂದ ಇನ್ನಷ್ಟು
ರಥೋತ್ಸವ ಸಂಭ್ರಮ: ಭಕ್ತರ ಹರ್ಷೋದ್ಗಾರ

ಧಾರವಾಡ
ರಥೋತ್ಸವ ಸಂಭ್ರಮ: ಭಕ್ತರ ಹರ್ಷೋದ್ಗಾರ

23 Jan, 2018
ನವಲೂರು ಸೇತುವೆ; ಸಂಚಾರಕ್ಕೆ ಅಡಚಣೆ

ಧಾರವಾಡ
ನವಲೂರು ಸೇತುವೆ; ಸಂಚಾರಕ್ಕೆ ಅಡಚಣೆ

22 Jan, 2018

ಧಾರವಾಡ
ಅಂಬಿಗರ ಚೌಡಯ್ಯ ಪೀಠಕ್ಕೆ ₹ 32 ಕೋಟಿ ಬಿಡುಗಡೆ

‘ಜಯಂತಿಗಳ ಆಚರಣೆಯಿಂದ ಅವರ ಸಾಧನೆಗಳನ್ನು ನೆನಪಿಸಿಕೊಳ್ಳಬಹುದಾಗಿದೆ. ಅಂಬಿಗರ ಚೌಡಯ್ಯ ಅ‌ವರು ಸಮಾಜಕ್ಕೆ ಹತ್ತಿರವಾದ ವಚನಗಳನ್ನು ರಚಿಸಿದ್ದಾರೆ.

22 Jan, 2018
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಧಾರವಾಡ
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

22 Jan, 2018
ಕೈಬರಹದ ಮೂಲಕ ಹಿರಿಯರ ನೆನಪು!

ಧಾರವಾಡ
ಕೈಬರಹದ ಮೂಲಕ ಹಿರಿಯರ ನೆನಪು!

20 Jan, 2018