ಸ್ವಾಧ್ಯಾಯ

ಸೂರ್ಯ–ಚಂದ್ರರೇ ದಿಕ್ಸೂಚಿಗಳು

ಸೂರ್ಯ–ಚಂದ್ರರು ನಿರಂತರವಾಗಿ ಸುತ್ತುತ್ತಲೇ ಇರುತ್ತಾರೆ; ಅವರ ಈ ಪರಿಭ್ರಮಣಕ್ಕೆ ಯಾವುದು ಕೂಡ ಅಡ್ಡಿಯಾಗದು. ಅಂತೆಯೇ ನಮ್ಮ ಜೀವನವೂ ಕೂಡ ನಿರಂತರ ಗತಿಶೀಲವಾಗಿರತಕ್ಕದ್ದು ಎಂಬುದು ವೇದದ ಆಶಯ.

ನಮ್ಮ ಜೀವನಪ್ರಯಾಣ ಹೇಗಿರಬೇಕು?
ಋಗ್ವೇದದ ಸೊಲ್ಲೊಂದು ಇದನ್ನು ಅತ್ಯಂತ ಮಾರ್ಮಿಕವಾಗಿ ಹೇಳಿದೆ:
ಸ್ವಸ್ತಿಪಂಥಾಮನುಚರೇಮ
ಸೂರ್ಯಾಚಂದ್ರಮಸಾವಿವ |

‘ಸೂರ್ಯಚಂದ್ರರಂತೆ ಅತ್ಯಂತ ಕ್ಷೇಮದಿಂದ ದಾರಿಯಲ್ಲಿ ನಡೆಯೋಣ.’

ಸೂರ್ಯ–ಚಂದ್ರರು ನಿರಂತರವಾಗಿ ಸುತ್ತುತ್ತಲೇ ಇರುತ್ತಾರೆ; ಅವರ ಈ ಪರಿಭ್ರಮಣಕ್ಕೆ ಯಾವುದು ಕೂಡ ಅಡ್ಡಿಯಾಗದು. ಅಂತೆಯೇ ನಮ್ಮ ಜೀವನವೂ ಕೂಡ ನಿರಂತರ ಗತಿಶೀಲವಾಗಿರತಕ್ಕದ್ದು ಎಂಬುದು ವೇದದ ಆಶಯ. ಸೋಲು–ಗೆಲುವು, ಹೊಗಳಿಕೆ–ತೆಗಳಿಕೆ, ಸುಖ–ದುಃಖ, ಹಗಲು–ರಾತ್ರಿ, ಒಳಿತು–ಕೆಡುಕು – ಯಾವುದೂ ಕೂಡ ನಮ್ಮ ಜೀವನಪ್ರಯಾಣವನ್ನು ನಿಲ್ಲಿಸುವ ಅಡ್ಡಿ–ಆತಂಕಗಳು ಆಗಬಾರದು. ಇದು ವೇದ ನಮಗೆ ನೀಡುತ್ತಿರುವ ಉಪದೇಶ. ವೇದದಲ್ಲಿ ಇಂಥ ಸಾವಿರಾರು ಸಂದೇಶಗಳು ನಮ್ಮ ಬದುಕಿಗೆ ಒದಗುವಂತಿವೆ.

ನಮ್ಮ ಜೀವನವನ್ನು ಉದ್ಧರಿಸಬಲ್ಲ ವೇದವನ್ನು ಕುರಿತು ಪರಂಪರೆ ಹೇಗೆ ಕಂಡಿದೆ? ಒಂದೆರಡು ಮಾತುಗಳನ್ನು ನೋಡಬಹುದು:

ಅಸ್ಯ ಮಹತೋ ಭೂತಸ್ಯ ನಿಃಶ್ವಸಿತಮೇತದ್ಯದೃಗ್ವೇದಃ
ಇದು ಬೃಹದಾರಣ್ಯಕೋಪನಿಷತ್ತಿನ ಮಾತು. ‘ಪರಮಾತ್ಮನ ನಿಃಶ್ವಾದಂತೆ ಋಗ್ವೇದ ಮೊದಲಾದವುಗಳು ಇವೆ’ ಎನ್ನುವುದು ಈ ಮಾತಿನ ಸಾರಾಂಶ.

ಋಚಸ್ಸಾಮಾನಿ ಯಜೂಗ್‌ಂಷಿ | ಸಾಹಿ ಶ್ರೀರಮೃತಾ ಸತಾಮ್‌ |
ಇದು ತೈತ್ತಿರೀಯ–ಬ್ರಾಹ್ಮಣದ ಮಾತು. ‘ಋಗ್ವೇದ, ಸಾಮವೇದ ಮತ್ತು ಯಜುರ್ವೇದಗಳೇ ಸತ್ಪುರುಷರ ಸಂಪತ್ತು’. ಇದು ಈ ಮಾತಿನ ತಾತ್ಪರ್ಯ.

ಇನ್ನು ‘ವೇದ’ ಎನ್ನುವುದಕ್ಕೆ ಏನು ಅರ್ಥ – ಎನ್ನುವುದನ್ನು ನೋಡಬಹುದು.
‘ವಿದ್‌’ ಎನ್ನುವ ಧಾತುವಿನಿಂದ ‘ವೇದ’ ಎಂಬ ಶಬ್ದ ಸಿದ್ಧವಾಗುತ್ತದೆ. ಇದಕ್ಕೆ ನಾಲ್ಕು ಪ್ರಧಾನ ಅರ್ಥಗಳನ್ನು ಕಾಣಿಸಲಾಗಿದೆ:

1. ಇರುವುದು; ಸ್ಥಿತಿ.
2. ತಿಳಿಯುವುದು.
3. ವಿಚಾರ ಮಾಡುವುದು.
4. ಪಡೆದುಕೊಳ್ಳುವುದು.
1. ಶಾಶ್ವತವಾಗಿರುವ ಅರಿವನ್ನು ಒದಗಿಸುವುದೇ ವೇದ.
2. ಪ್ರತ್ಯಕ್ಷ ಮತ್ತು ಅನುಮಾನಗಳಿಂದ ಯಾವ ಅರಿವನ್ನು ಪಡೆಯಲು ಸಾಧ್ಯವಾಗುವುದಿಲ್ಲವೋ ಅಂಥ ಅರಿವನ್ನು ತಿಳಿಯುವುದು.
3. ಅರಿವಿನ ನೆಲೆ–ಬೆಲೆಗಳನ್ನು ಕುರಿತು ವಿಚಾರ ಮಾಡುವುದು.
4. ಪಡೆದುಕೊಳ್ಳುವುದು – ಎಂದರೆ ಪುರುಷಾರ್ಥಗಳನ್ನು ಪಡೆದುಕೊಳ್ಳುವುದು ಎಂದು ಅರ್ಥ.
ವೇದಗಳಿಗೆ ಭಾಷ್ಯವನ್ನು ಬರೆದ ಸಾಯಣಾಚಾರ್ಯರು ವೇದವನ್ನು ಕುರಿತು ನೀಡಿರುವ ವ್ಯಾಖ್ಯೆ ಮೇಲಿನ ಎಲ್ಲ ಅರ್ಥಗಳನ್ನೂ ಒಳಗೊಂಡಂತಿದೆ:

ಇಷ್ಟಪ್ರಾಪ್ತ್ಯನಿಷ್ಟಪರಿಹಾರಯೋಃ ಅಲೌಕಿಕಂ ಉಪಾಯಂ ಯೋ ಗ್ರಂಥೋ ವೇದಯತಿ ಸ ವೇದಃ |

‘ಬಯಸಿದ್ದನ್ನು ಪಡೆಯುವುದು ಮತ್ತು ಕೇಡಾಗುವುದನ್ನು ತಪ್ಪಿಸಿಕೊಳ್ಳುವುದು – ಈ ವಿಷಯದಲ್ಲಿ ಲೋಕದಿಂದ ಗೊತ್ತಾಗದ ಉಪಾಯವನ್ನು ತಿಳಿಸುವ ಗ್ರಂಥವೇ ವೇದ’.

ಶಂಕರಾಚಾರ್ಯರು ಕೂಡ ಇಂಥದೇ ಮಾತನ್ನು ಹೇಳಿದ್ದಾರೆ: ‘ಪ್ರತ್ಯಕ್ಷ ಮತ್ತು ಅನುಮಾನಗಳಿಂದ ಗೊತ್ತಾಗದ ಇಷ್ಟಪ್ರಾಪ್ತಿ ಮತ್ತು ಅನಿಷ್ಟಪರಿಹಾರಗಳನ್ನು ತಿಳಿಸಿಕೊಡಲು ಹೊರಟಿರುವುದೇ ವೇದ’ ಎನ್ನುವುದು ಅವರ ಮಾತು. (ಇಲ್ಲಿ ‘ಅನುಮಾನ’ ಎಂದರೆ Doubt ಎಂದಲ್ಲ; Inference - ಊಹೆ ಎಂದು.)

ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001 email: arivu@prajavani.co.in.

Comments
ಈ ವಿಭಾಗದಿಂದ ಇನ್ನಷ್ಟು

ವೈಶಾಖದ ಹುಣ್ಣಿಮೆ
ಬಾಲರು ಯಾರು?

ಶಿವರಾತ್ರಿಯಂದು ನಾವು ಜಾಗರಣೆ ಮಾಡುತ್ತೇವೆ, ಅಲ್ಲವೆ? ರಾತ್ರಿ ಮುಂದುವರೆದಂತೆ ನಮಗೆ ನಿದ್ರೆಯ ಸೆಳೆತ ಹೆಚ್ಚುತ್ತಹೋಗುವುದು ಸಹಜ. ಆಗ ‘ಈ ರಾತ್ರಿ ಇನ್ನೂ ಮುಗಿಯುತ್ತಲೇ ಇಲ್ಲ!...

20 Jan, 2018
ಗಾಯನಕ್ಕೆ ಸಿದ್ಧವಾದ ರಾಮಕಥೆ

ರಾಮಾಯಣ ರಸಯಾನ
ಗಾಯನಕ್ಕೆ ಸಿದ್ಧವಾದ ರಾಮಕಥೆ

20 Jan, 2018
’ನಮಗೆ ಕಾವೇರಿ ನೀರೇ ಬೇಡ! ’

ವಿಡಂಬನೆ
’ನಮಗೆ ಕಾವೇರಿ ನೀರೇ ಬೇಡ! ’

13 Jan, 2018

ಅಧ್ಯಯನ
ಸೂರ್ಯ: ಜಗತ್ತಿನ ಕಣ್ಣು

ಸೂರ್ಯನು ಹುಟ್ಟಿದ ಕೂಡಲೇ ಕತ್ತಲು ಸರಿಯುತ್ತದೆ; ಎಲ್ಲರ ಕಣ್ಣಿಗೂ ಕಾಣುವಂಥವನು ಅವನು; ಅವನ ಹುಟ್ಟಿಗೂ ಜಗತ್ತಿನ ಆಗುಹೋಗುಗಳಿಗೂ ನೇರ ಸಂಬಂಧವಿದೆ. ಇವೆಲ್ಲವೂ ಸೂರ್ಯನ ಭೌತಿಕ ವಿವರಗಳು. ...

13 Jan, 2018
ಕಲೆಗಾಗಿ ಕಲೆ ಅಲ್ಲ!

ರಾಮಾಯಣ ರಸಾಯನ 22
ಕಲೆಗಾಗಿ ಕಲೆ ಅಲ್ಲ!

13 Jan, 2018