ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಚ್ಚು

Last Updated 25 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಭಟ್ಟರ ಮನೆಯಲ್ಲಿ ಅಸಹನೀಯ ಮೌನವೊಂದು ಹೆಪ್ಪುಗಟ್ಟಿತ್ತು. ಆದರೂ ಆ ನಿರ್ವಾತವನ್ನು ಭೇದಿಸಿ ಆಗಾಗ ಅಲ್ಲಲ್ಲಿ ಸಣ್ಣ ದನಿಯಲ್ಲಿ ಆಳುವ, ಗುಸು ಗುಸು ಮಾತಾಡುವ ಸದ್ದು ತೂರಿ ಬರುತ್ತಿತ್ತು. ನೆರೆದವರಲ್ಲಿ ಕೆಲವರು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅವಸರವಸರವಾಗಿ ಓಡಾಡುತ್ತಿದ್ದರೆ ಇನ್ನು ಕೆಲವರು ಆ ಉಸಿರುಗಟ್ಟಿಸುವ ವಾತಾವರಣದಿಂದ ಹೊರಬಿದ್ದು ಅಂಗಳದಂಚಿನ ಹೇಡಿಗೆಯ ಮೇಲೆ ಕುಳಿತು ಕವಳ ಜಗಿಯುತ್ತಲೋ, ಬೀಡಿ ಸೇದುತ್ತಲೋ, ಕುಂಡೆ ತುರಿಸುತ್ತಲೋ ಕಾಲಹರಣ ಮಾಡುತ್ತಿದ್ದರು. ಜಗುಲಿಯಲ್ಲಿ ಮನೆಯ ಮಗ ಆನಂದ ಹೆಣವಾಗಿ ಮಲಗಿದ್ದ, ಮೂಗಿಗೆ ಹತ್ತಿಯ ಚೂರು, ಮುಚ್ಚಿದ ಕಣ್ಣುಗಳು. ಪ್ರಾಣ ಕಣ್ಣಿನಲ್ಲಿ ಹೋಗಿದೆ ಅಂತ ಯಾರೋ ಹಿರಿಯರು ಹೇಳಿದರು. ಅಷ್ಟರಲ್ಲಿ ಕುಪ್ಪಾ ಜೋಯಿಸರು ಮನೆಯೊಳಗೆ ಕಾಲಿಟ್ಟರು.

‘ಭಾಸ್ಕರಾ, ಎಲ್ಲಾ ಸಾಮಾನು ರೆಡಿ ಆಯ್ಥನೋ?’ ಎಂದು ಪ್ರಶ್ನಿಸಿದಾಗ ಆತ ಹೌದೆಂದು ತಲೆಯಲ್ಲಾಡಿಸಿದ. ಆದಾಗಲೇ ಸ್ನಾನ ಪೂರೈಸಿದ್ದ ಆತ ಒದ್ದೆ ಮೈಯಲ್ಲೇ ತೊಟ್ಟಿಕ್ಕುತ್ತಿದ್ದ ಪಂಚೆಯನ್ನು ಒದರಿಕೊಂಡು ಹೆಣದ ಬಳಿ ಬಂದು ಕೂತು, ಹೆಣ ನೋಡಿ ಹೊಂಟರೆ ಸಾಕು ಎನ್ನುವವರು ಹಲವರಾದರೆ ತಮ್ಮ ಆತ್ಮೀಯನನ್ನು ಕಳೆದುಕೊಂಡ ಸಂಕಟ ಇನ್ನು ಕೆಲವರಿಗೆ. ‘ಸಂಸ್ಕರ್ತಾ ಸ್ನಾತ್ವಾ ಆರ್ದ್ರವಾಸಾಃ ಊರ್ಧ್ವಪುಂಡ್ರಂ ಧೃತ್ವಾ! ಆಚಮ್ಯ ಪಾಣಾ ನಾಯಮ್ಯ’ – ’ಮಮ ಹೇಳು’ ಜೋಯಿಸರು ಭಾಸ್ಕರನಿಗೆ ನಿರ್ದೇಶನ ನೀಡುತ್ತ ಏಕದರ್ಭೆಯನ್ನು ಉಂಗುರದ ಬೆರಳಿಗೆ ತೊಡಲು ಹೇಳಿದರು. ನಂತರ ‘ಈಗ ಶವಕ್ಕೆ ಪ್ರೇತವನ್ನು ಆಹಾವನೆ ಮಾಡಬೇಕು’ ಅಂದರು. ಹೊಸ ಬಟ್ಟೆಯ ಹರಿದ ಅಂಚಿಗೆ ಎಳ್ಳು, ದಕ್ಷಿಣೆ, ಅಕ್ಕಿ, ಮರದ ತುಂಡನ್ನು ತುದಿಗೆ ಕಟ್ಟಿ ಜನಿವಾರದ ರೀತಿಯಲ್ಲಿ ಧರಿಸುವಂತೆ ಮಾಡಿದರು.

‘ತಂಚುದೇವಿ ನಮಸ್ತುಭ್ಯಂ ಆಯ ಸೇನ’ ಮಂತ್ರೋಚ್ಛಾರಣೆ ಮುಂದುವರೆಯಿತು. ‘ಸ್ಮಶಾನಕ್ಕೆ ಬರದೇ ಇರೋರು ಇಲ್ಲಿ ಅಕ್ಕಿ ಹಾಕಿಬಿಡಿ’ ಎಂದು ಎಲ್ಲರಿಗೂ ಕೇಳಿಸುವಂತೆ ಜೋಯಿಸರು ಹೇಳಿದರು. ಅಷ್ಟರಲ್ಲಿ ವಿಮಲಾ ಗೋಳೋ ಅಂತ ಅಳುತ್ತಾ ಶವದ ಕಾಲನ್ನು ಹಿಡಿದು ಜಗ್ಗಲಾರಂಭಿಸಿದಳು. ನಿಂತವರಲ್ಲೊಬ್ಬರು ಅವಳನ್ನು ತಬ್ಬಿ ಹಿಡಿದು ಬಲವಂತವಾಗಿ ಮನೆ ಒಳಗೆ ಕರೆದೊಯ್ದರು. ಅನತಿ ದೂರದಲ್ಲಿ ಸೀರೆಯ ಸೆರಗನ್ನು ಬಾಯಿಯಲ್ಲಿ ತುರುಕಿ, ಉಕ್ಕಿ ಬರುತ್ತಿದ್ದ ಅಳುವನ್ನು ತಡೆಯಲು ಹರಸಾಹಸ ಪಡುತ್ತಲೇ ಹೆಣದ ಬಳಿ ದುಡುದುಡು ಓಡಿ ಬಂದ ಹೆಂಗಸೊಬ್ಬಳನ್ನು ಬಂದವರಲ್ಲಿ ಒಬ್ಬರು ದರದರನೆ ಹಿಡಿದೆಳೆದು ಪಕ್ಕದ ಮನೆ ದಣಪೆಯ ಬಳಿ ಬಿಟ್ಟು ಬಂದರು. ಅಲ್ಲಿ ನೆರೆದವರ ಕಂಗಳಲ್ಲಿ ಅಚ್ಚರಿಯ ಸೆಳಕು. ಇತ್ತ ಹೆಣದ ಮೆರವಣಿಗೆ ಅಂಗಳ ದಾಟುವಷ್ಟರಲ್ಲಿಯೇ ಒಂದಿಬ್ಬರು ಹೆಂಗಸರು ಮನೆಯನ್ನು ಗುಡಿಸಿ, ಸಾರಿಸಿ ಅನ್ನಕ್ಕೆ ಎಸರಿಟ್ಟರು. ‘ಊಟಕ್ಕೂ ಮೊದಲು ಎಲ್ಲರಿಗೂ ಚಾ ಅವಲಕ್ಕಿ ಸಿಕ್ಕಿದ್ರೆ ಚಲೋ ಆಗ್ತಿತ್ತು’ ಅಂತ ಕಡೆ ಮನೆ ಭಾಗ್ವತಣ್ಣ ಹೆಂಗಸರಿಗೆ ಸಲಹೆ ನೀಡಿ ‘ಕವಳಕ್ಕೆ ವೀಳ್ಯದೆಲೆ ಕೊಯ್ಕಂಡು ಬರ್ತೆ’ ಅಂತ ದೊಡ್ಡದಾಗಿ ಹೇಳಿ ತೋಟಕ್ಕಿಳಿದ.

***

ಸಣ್ಣ ಭಟ್ಟರ ಮಗ ಆನಂದನ ಸಾವಿಗೆ ಸೇರಗಾರ ಲಕ್ಷ್ಮಿ ಆ ಪಾಟಿ ಗೋಳೋ ಎಂದು ಮರುಗುತ್ತ ಹೆಣದ ಬಳಿ ದುಡುದುಡು ಬಂದು ಎಲ್ಲರನ್ನೂ ದಂಗು ಬಡಿಸಿದ್ದು ಒಂದು ಪ್ರಹಸನವೋ ಅಥವಾ ಹೃದಯಾಂತರಾಳದಿಂದ ಬಂದ ಸಂಕಟವೋ ಎನ್ನುವುದು ಬಹಳ ಮಂದಿಗೆ ಕಗ್ಗಂಟಾಗಿಯೇ ಉಳಿಯಿತು. ಇದರ ಕುರಿತಾಗಿ ಅನೇಕಾನೇಕ ಅಡ–ಪಡ ಸುದ್ದಿಗಳು, ಹೇಳಿಕೆಗಳು ಹಾರಾಡಿದವು. ಅಚ್ಚರಿಯ ವಿಷಯವೆಂದರೆ ಈ ವಿಷಯದಲ್ಲಿ ಭಟ್ಟರ ಮನೆ ಮಂದಿ ಯಾರೂ ತುಟಿ–ಪಿಟಿಕ್ಕೆನ್ನಲಿಲ್ಲ. ‘ಅಶಿಯಾದರೆ ಆಶಿ ತಶಿಯಾದರೆ ತಶಿ (ಹೇಗೆಂದರೆ ಹಾಗೆ)’ ಅನ್ನುವಂತೆ ಅವರ ಮೌನವೇ ಎಲ್ಲದಕ್ಕೂ ಉತ್ತರವಾಯಿತು. ಆದರೆ ಒಂದು ಗಂಡು–ಹೆಣ್ಣಿನ ಸಂಬಂಧ ಸಮಾಜದಲ್ಲಿ ಪರಿಪರಿಯಾದ ಊಹೆ, ತರ್ಕ–ಕುತರ್ಕಗಳಿಗೆ ಗ್ರಾಸ ಮಾಡಿ ಕೊಡುತ್ತದೆ. ಕೆಲವರಿಗಂತೂ ಇಂತಹ ವಿಷಯಗಳನ್ನು ತಲಸ್ಪರ್ಶಿ ಅಧ್ಯಯನ ಮಾಡಿ ತೀರ್ಪು ಕೊಡುವ ಹುಕಿ ಬರುವುದುಂಟು. ಅಂತಹವರಲ್ಲಿ ಭಾಗ್ವತಣ್ಣನೂ ಒಬ್ಬ.

ಭಾಗ್ವತಣ್ಣನಿಗೆ ವೀಳ್ಯದೆಲೆ ಕೊಯ್ಯುವುದು ಕೇವಲ ಒಂದು ಸಬೂಬಾಗಿತ್ತು. ತೋಟದಲ್ಲಿ ಭಟ್ಟರ ಖಾಯಂ ಆಳು ಮಾದೇವ ಅಡಿಕೆ ಸಸಿ ನೆಡಲು ಗುಂಡಿಯನ್ನು ತೋಡುತ್ತಿದ್ದ, ‘ಏನೋ ಮಾದೇವ, ಕೆಲಸ ಅಯ್ತನಾ?’ ಅನ್ನುತ್ತ ಭಾಗ್ವತಣ್ಣ ಕಿಸೆಯಿಂದ ಒಂದು ಬೀಡಿ–ಬೆಂಕಿ ಪೊಟ್ಟಣ ತೆಗೆದು ಅವನ ಕೈಗೆ ರವಾನಿಸಿದ. ಮಾದೇವನ ಮೋರೆ ಮೊರದಗಲವಾಯಿತು. ಗುದ್ದಲಿಯನ್ನು ಪಕ್ಕದಲ್ಲಿ ಬಿಸಾಡಿದವನೇ ಅಲ್ಲೇ ಹುಲ್ಲುಜಡ್ಡಿನ ಮೇಲೆ ಚಕ್ಕಳುಬಕ್ಕಳು ಹಾಕಿ ಕುಳಿತು, ತಲೆಗೆ ಸುತ್ತಿದ ಪಂಚೆಯನ್ನು ಬಿಚ್ಚಿ ಕತ್ತು– ಮೋರೆಯ ಬೆವರನ್ನು ಒರೆಸಿಕೊಂಡವನೇ ಬಾಯಲ್ಲಿಟ್ಟ ಬೀಡಿಗೆ ಬೆಂಕಿ ಹಚ್ಚಿದ. ‘ಪಾಪ, ಆನಂದಪ್ನೋರು ಹೋಗಿ ಬಿಟ್ರು. ಸಾಯಬಾರದ ವಯಸ್ಸು. ಆದ್ರೆ ಯಂತಾ ಮಾಡೂದು ಹೇಳಿ, ಮಾಡಬಾರದ್ದನ್ನ ಮಾಡಿದ್ರೆ ಆಗಬಾರದ್ದು ಆಗ್ತದೆ ಅಂತವ್ರೆ’ ಅಂತ ವಟಗುಟ್ಟಿದ. ‘ಅಂದ್ರೆ?’ ಭಾಗ್ವತಣ್ಣ ಆತನ ಹತ್ತಿರವೇ ಕುಕ್ಕರುಗಾಲಿನಲ್ಲಿ ಕುಳಿತು ‘ತಮಾ, ನಂಗೂ ಸೊಲ್ಪ, ವಿಷಯ ಗೊತ್ತದೆ, ರತಿಯಂತಾ ಹೆಂಡತೀನ ಮನೇಲಿಟ್ಕಂಡು ಊರ ಹೆಂಗಸ್ರನ್ನೆಲ್ಲಾ ಬಾಚೂಕೆ ಹೋದ್ರೆ ಇನ್ನೆಂತಾಗ್ತದೆ ಹೇಳು?’ ಅಂತ ನಾಂದಿ ಪದ ಹಾಡಿದ.

ಬಲವಾದೊಂದು ದಮ್ ಎಳೆದ ಮಾದೇವ ಮುಗುಳ್ನಕ್ಕು ಮುಂದುವರಿದ. ‘ಅವರು ಒಡೆದಿರು, ದೊಡ್ಡೋರು. ನಾವೆಲ್ಲಾ ಹಾಗೆ ಆಡ್ಕೊಂಬೋದು ತಪ್ಪು, ಆದ್ರೆ ಯಾವ್ದಕ್ಖೂ ಒಂದು ಮಿತಿ ಬೇಕು, ಅಲ್ಲವೇನ್ರಾ? ಅವರು ಹೆಂಗಸರ ಪ್ರಾಯ, ರೂಪ, ಜಾತಿ, ಸ್ಥಾನ–ಮಾನ ಒಂದೂ ನೋಡಲಿಲ್ರಾ ನನ್ನೊಡೆಯಾ. ಸೀರೆ ಸೆರಗು ಹಾರೂದು ಕಂಡ್ರೆ ಸಾಕು ಆವ್ರಿಗೆ ಅದೆಂತಾ ಉಮೇದೋ ಹುಚ್ಚೋ ಆ ಭಗವಂತನೇ ಬಲ್ಲ. ಅದೇ ಅವರನ್ನ ಬಲಿ ತೆಗೆದುಕೊಂಡು ಬಿಡ್ತು ನೋಡಿ!’

‘ಆ ಸೇರೆಗಾರ ಲಕ್ಷ್ಮೀನೂ ಆನಂದನ ಗಿರಾಕಿ ಅಲ್ವೇನೋ?’ ಭಾಗ್ವತಣ್ಣ ಹಗುರಾಗಿ ಬಾಲ ಬಿಚ್ಚಿದ. ‘ಅಲ್ರಾ ಒಡೆಯಾ, ನೀವೂ ಒಳ್ಳೆ ತಮಾಶೆ ಮಾಡ್ತ್ರಿ ಬಿಡಿ. ಊರೆಲ್ಲಾ ಮೇಯೋರು ಪಕ್ಕದ್ಮನೆ ಬಿಡ್ತಾರೇನ್ರಾ?’ ಅಂತ ಕವಳ ಜಗಿದು ಕಪ್ಪಾಗಿ ಕೆರೆ ಹಿಡಿದ ತನ್ನ ಅಳಿದುಳಿದ ಹಲ್ಲುಗಳನ್ನೆಲ್ಲಾ ಪ್ರದರ್ಶಿಸಿದ. ಭಾಗ್ವತಣ್ಣ ಬಂದ ಕೆಲಸವಾಯಿತೆಂದು ಮರಳಿದ.

ಆನಂದನ ಸಾವಿನಿಂದ ಭಟ್ಟರ ಮನೆಯವರಿಗೆ ಆಘಾತವಾಗಿರಲಿಲ್ಲವಷ್ಟೇ ಅಲ್ಲ, ಅದು ಒಳಗಿಂದೊಳಗೆ ಅಪೇಕ್ಷಣೀಯವೂ ಆಗಿತ್ತು ಅನ್ನುವುದು ಬಲ್ಲವರ ಲೆಕ್ಕಾಚಾರ. ಗಂಡು ಹೆಣ್ಣಿನ ಸಹವಾಸಕ್ಕೆ ಬೀಳುವರು ಅಪರೂಪದ ಘಟನೆಯಲ್ಲವಾದರೂ ತನ್ನ ಮಾನ ಪ್ರಾಣವನ್ನು ಬಲಿಕೊಟ್ಟಾದರೂ ರತಿ ಸುಖವನ್ನು ಪಡೆಯಲೇಬೇಕು ಅನ್ನುವ ವಾಂಛೆ ಉಂಟಲ್ಲ ಅದು ಬಹುಶಃ ಎಲ್ಲರಿಗೂ ಬರಲಾರದು. ಭಟ್ಟರ ಸಾಮ–ದಾನ–ಭೇದ–ದಂಡೋಪಾಯಗಳೆಲ್ಲವೂ ನೀರಿನಲ್ಲಿ ಮಾಡಿದ ಹೋಮವಾದಾಗ ಮನೆ ಜನರಿಗೆಲ್ಲ ಆತನ ಭಯಾನಕ ಭವಿಷ್ಯವನ್ನು ಭಟ್ಟರು ಎಂದೋ ಹೇಳಿ ಮುಗಿಸಿದ್ದರು. ಅವರ ಪಾಲಿಗೆ ಆನಂದ ಯಾವಾಗಲೋ ಸತ್ತು ಹೋಗಿದ್ದ. ಆತನನ್ನು ಬೂದಿ ಮಾಡಿದ್ದು ಮಾತ್ರ ಮೊನ್ನೆ– ಅಷ್ಟೆ, ಅಂತೆಯೇ ಭಟ್ಟರು ಎಲ್ಲವನ್ನೂ ನೀಲಕಂಠರಾಗಿ ಜೀರ್ಣಿಸಿಕೊಂಡಿದ್ದರು.

***

ವಾಸು ಹಂಡಗಂಬಳಿಗೆ ಕರೆ ಕಟ್ಟುವ ಕೆಲಸವನ್ನು ಕ್ಷಣಕಾಲ ಕೈದು ಮಾಡಿ ಕತ್ತನ್ನು ಸುತ್ತಲೂ ಆಡಿಸಿದಾಗ ಕೊಂಚ ಆರಾಮವೆನಿಸಿತು. ಸೊಂಟ ಬೇರೆ ನೋಯುತ್ತಿತ್ತು. ‘ಥತ್ತೇರಿ’ ಅಂದವನೇ ನಿಧಾನವಾಗಿ ಎದ್ದು ನಿಂತು ಹಕ್ಕಿಚಿಟ್ಟೆ ಮೇಲಿದ್ದ ಕವಳದ ಸಂಚಿಯ ಗಂಟು ಬಿಚ್ಚಿದ. ಅಡಿಕೆಯೊಂದನ್ನು ಹೊರದೆಗೆದು ಕತ್ತರಿಯ ಮಧ್ಯೆ ಇಟ್ಟು ಕಚಕ್–ಕಚಕ್ ಎಂದು ಜಗಿದ. ವೀಳ್ಯದೆಲೆಯಿಂದ ನಾರು ತೆಗೆದು ಅದರ ಬೆನ್ನಿಗೆ ಸುಣ್ಣ ಸವರಿ ಮಡಚಿ ಹದ ಮಾಡಿಟ್ಟ ಹೊಗೆಸೊಪ್ಪಿನ ತುಂಡೊಂದನ್ನು ಉಂಡೆ ಮಾಡಿ ಒಟ್ಟಿಗೇ ಬಾಯಿಗೆಸೆದಾಗ ನಿರುಂಬಳವೆನಿಸಿತು. ಹೊತ್ತು ಕಂತುವ ಸಮಯವಾಗಿತ್ತು. ಇನ್ನು ಕತ್ತಲಾಗುವುದರ ಒಳಗೆ ತುಳಸಿ ಕಟ್ಟೆಗೆ, ನಾಗಬನಕ್ಕೆ ದೀಪ ಹಚ್ಚಬೇಕು, ಹಾಗೆ ಮಾಡಬೇಕಾದವಳು ಎಲ್ಲೋ ಊರು ಸುತ್ತಲಿಕ್ಕೆ ಹೋಗಿದ್ದಾಳೆ, ಹಡಬೆ ರಂಡೆ. ಬರಲಿ ಮನೆಗೆ, ಇದೆ ಮಾರಿಪೂಜೆ ಅಂತ ಆತ ಅಂದುಕೊಳ್ಳುವಷ್ಟರಲ್ಲಿ ದೂರದಲ್ಲಿ ಯಾರೋ ಬರುವುದನ್ನು ಕಂಡು ದಣಪೆ ಹತ್ತಿರವಿದ್ದ ನಾಯಿ ಬೊಗಳಿತು. ‘ಥತ್ ನಿನ್ನವ್ವನ, ಮುಚ್ಚುಬಾಯಿ’ ಅಂತ ರೋಪ್ ಹಾಕಿದ. ಅಷ್ಟರಲ್ಲಿ ಲಕ್ಷ್ಮಿ ಅಂಗಳಕ್ಕೆ ಕಾಲಿಟ್ಟಳು. ಮಧ್ಯ ವಯಸ್ಸು ದಾಟುತ್ತಿದ್ದರೂ ಇನ್ನೂ ಹೆಣ್ಣುತನವೆನ್ನುವುದು ಅವಳ ಅಡಿಯಿಂದ ಮುಡಿಯವರೆಗೂ ಲಕಲಕಿಸುತ್ತಿತ್ತು.

ಹಾಗಾಗಿ ಆಕೆಯನ್ನು ಒಮ್ಮೆ ನೋಡಿದವರು ಮತ್ತೊಮ್ಮೆ ತಿರುಗಿ ನೋಡುವ ಚಪಲಕ್ಕೀಡಾಗುತ್ತಿದ್ದರು. ಮದುವೆಯಾದ ಮಗ, ಪ್ರಾಯಕ್ಕೆ ಬಂದ ಇಬ್ಬರು ಹೆಣ್ಣು ಮಕ್ಕಳ ತಾಯಿ ಅವಳು ಅಂದರೆ ಯಾರೆಂದರೆ ಯಾರೂ ನಂಬುವಂತಿರಲಿಲ್ಲ. ತನ್ನ ಬಿಗುವು, ಬಿಸುಪನ್ನು ಈಗಲೂ ಕೂಡಾ ಆಕೆ ಹಾಗೇ ಉಳಿಸಿಕೊಂಡಿದ್ದಳು. ‘ಯಾವ ಮಿಂಡನ ಮನೆಗೆ ಹೋಗಿದ್ದೇ ಭೋಸುಡಿ?’ ಅಂತ ವಾಸು ತನ್ನ ಎರಡೂ ಕೈಗಳನ್ನು ಸೊಂಟದ ಮೇಲಿಟ್ಟುಕೊಂಡು, ಕಂಗಳಲ್ಲಿ ಬೆಂಕಿ ಉಗುಳುತ್ತ ಹೆಂಡತಿಗೆ ಅಡ್ಡವಾಗಿ ನಿಂತು ಅಬ್ಬರಿಸಿದ. ‘ಅದನ್ನ ಕೇಳೂಕೆ ನೀ ಯಾರು? ಅಂತಾ ಯೋಗ್ಯತೆ ನಿಂಗೆಲ್ಲಿ?’ ಅಂತ ಆಕೆ ಉತ್ತರಿಸುವುದರ ಒಳಗೇ ವಾಸು ಫಟಾರ್ ಅಂತ ಕಪಾಳಕ್ಕೆರಡು ಬಿಟ್ಟು, ಅವಳ ಕುಂಡೆಗೆ ಕಾಲಿನಿಂದ ಸಮಾ ಒದೆ ಕೊಟ್ಟ ರಭಸಕ್ಕೆ ಆಕೆ ಹದಾರನೆ ಬಿದ್ದು ‘ಅಯ್ಯಯ್ಯೋ ಸತ್ತೇನಲ್ರೋ’ ಅಂತ ಬೊಬ್ಬೆ ಹೊಡೆಯುತ್ತಲೇ ‘ನಿನ್ನ ವಂಸ ನಿರ್ವಂಸ ಆಗೋಗ್ಲಿ’ ಅಂತ ಗಂಡನಿಗೆ ಹಿಡಿ ಶಾಪ ಹಾಕಿ ಸೇಡು ತೀರಿಸಿಕೊಂಡಳು. ವಾಸು ಧಡ ಧಡ ಮನೆಯೊಳಗೆ ನುಗ್ಗಿದವನೇ ಮಾಡಗುಳಿಯಲ್ಲಿಟ್ಟ ಅರ್ಧ ಕೊಟ್ಟ ಸಾರಾಯಿಯನ್ನು ಗಟಗಟನೆ ಕುಡಿದು ಖಾಲಿ ಮಾಡಿ ಜಗುಲಿಗೆ ಬಂದು ಹಾಸಿಗೆ ಸುರುಳಿಗೆ ಅಡ್ಡಾದ.

***

ಶಾಲ್ಮಲಾ ನದಿಯ ದಂಡೆಯಲ್ಲಿದ್ದ ನಂದಿಹಳ್ಳಿಗೆ ಅದರದ್ದೇ ಆದ ಇತಿಹಾಸವಿದೆ. ಒಂದೆಡೆ ವಿಶಾಲವಾದ ಗದ್ದೆಬೈಲನ್ನು ಆವರಿಸಿಕೊಂಡಿದ್ದ ಅಡಿಕೆ–ತೆಂಗಿನ ತೋಟಗಳು, ಅವುಗಳಿಗೆ ಒತ್ತಾಸೆಯಾಗಿ ನಿಂತಿದ್ದ ಬ್ರಾಹ್ಮಣ, ಕ್ರಿಶ್ಚಿಯನ್ ಹಾಗೂ ಇತರೇ ಜಾತಿಯವರ ಹದಿನೈದಿಪ್ಪತ್ತು ಮನೆಗಳು, ಪಕ್ಕದಲ್ಲಿಯೇ ಹಾಲಕ್ಕಿ ಗೌಡರ ಕೇರಿ, ಊರಿನ ರಕ್ಷಣೆಗೇ ಅಣಿಯಾಗಿ ಇದ್ದಂತಹ ಹಿಂಬದಿಯ ಕಡಿದಾದ ಗುಡ್ಡಗಳು, ಇವುಗಳ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ – ನಂದಿಹಳ್ಳಿಗೊಂದು ಅದರದ್ದೇ ಆದ ಸೊಬಗನ್ನು ತಂದುಕೊಟ್ಟಿತ್ತು. ಸತ್ಯನಾರಾಯಣ ಭಟ್ಟರ ತಂದೆ ಮಹಾಬಲ ಭಟ್ಟರು ಇದೀಗ ಸುಮಾರು ಏಳೆಂಟು ದಶಕಗಳ ಹಿಂದೆ ಘಟ್ಟದ ಮೇಲಿಂದ ನಂದಿಹಳ್ಳಿಗೆ ಬಂದು ಒಂದೂವರೆ ಎಕರೆ ಬರಡು ಜಮೀನನ್ನು ಖರೀದಿಸಿದ್ದರು. ಹತ್ತಾರು ವರ್ಷಗಳ ಸತತ ಪರಿಶ್ರಮದಿಂದ ಒಂದು ಎಕರೆಯಷ್ಟು ಜಮೀನನ್ನು ಸಮತಟ್ಟಾಗಿ ಮಾಡಿ ಕೆಂಪು ಮಣ್ಣು, ಫಾರಮ್ ಗೊಬ್ಬರವನ್ನು ಎತ್ತಿನ ಗಾಡಿಯಲ್ಲಿ ತರಿಸಿ ಹಾಕಿ ಅಡಿಕೆ–ತೆಂಗಿನ ಸಸಿಗಳನ್ನು ನೆಟ್ಟು, ಬಾವಿಗೆ ಜೋಡಿಸಿದ ಪಂಪ್ ಸೆಟ್‌ನಿಂದ ಕಾಲ ಕಾಲಕ್ಕೆ ನೀರುಣಿಸಿ ಅಹೋರಾತ್ರಿ ಸಾಗುವಳಿ ಮಾಡಿ ಭೂಮಿಯನ್ನು ಬಂಗಾರವನ್ನಾಗಿ ಮಾಡಿದ್ದರು.

ಕುಂದಾಪುರದ ಕಡೆಯಿಂದ ಕೆಲಸವನ್ನು ಅರಸಿಕೊಂಡು ಬಂದು ವಾಸು, ಭಟ್ಟರ ತೋಟದಲ್ಲಿ ಅನ್ನವನ್ನು ಕಂಡು ದಿನಗಳೆದಂತೆ ಆತನ ನೀತಿ–ನಿಯತ್ತು, ಕೆಲಸದಲ್ಲಿಯ ಶ್ರದ್ಧೆ, ಚಾಕಚಕ್ಯತೆ ನೋಡಿ ಆನಂದ ತುಂದಿಲರಾದ ಭಟ್ಟರು ತಮ್ಮದೇ ಹಿತ್ತಲಿನ ಅಂಚಿನಲ್ಲಿ ಒಂದೂವರೆ ಗುಂಟೆಯಷ್ಟು ಜಾಗ ನೀಡಿ, ಬಿಡಾರ ಕಟ್ಟಲು ಕೂಡಾ ಸಹಾಯಹಸ್ತ ನೀಡಿದರು. ಮರುವರ್ಷವೇ ವಾಸು ತನ್ನ ಕುಟುಂಬವನ್ನು ಕರೆತಂದು ಬಿಡಾರದಲ್ಲಿ ಪ್ರತಿಷ್ಠಾಪಿಸಿದ. ಜೊತೆ–ಜೊತೆಗೆ ಹತ್ತಾರು ಬಾಳೆ, ಅಡಿಕೆ, ತೆಂಗಿನ ಗಿಡಗಳನ್ನು ನೆಟ್ಟು ನೀರುಣಿಸಿದ. ವಾಸುವಿನ ಹೆಂಡತಿ ಲಕ್ಷ್ಮಿ ತುಂಬ ಲಕ್ಷಣವಾದ ಹೆಂಗಸು. ಮೇಲ್ಜಾತಿಯ ಮಂದಿ ‘ಕೂಲಿ ಕೆಲಸದವರಲ್ಲೂ ಇಷ್ಟು ಚೆಂದದ ಹೆಂಗಸರು ಇರ್ತಾರಾ ಅಂತ ಅರ್ಧ ಅಚ್ಚರಿ ಅರ್ಧ ಅಸೂಯೆ ವ್ಯಕ್ತಪಡಿಸಿದ್ದರು. ಆಕೆ ತನ್ನ ಮನೆ ಕೆಲಸ ಪೂರೈಸಿಕೊಂಡು ತಮ್ಮ ಮನೆಗೆಲಸದಲ್ಲಿಯೂ ನೆರವಾದಾಗ ಭಟ್ಟರಿಗೆ ಮಹದಾನಂದವಾಯಿತು. ಮಹಾಬಲ ಭಟ್ಟರು ಕಾಲವಾದ ನಂತರ ಮಗ ಸತ್ಯನಾರಾಯಣ ಕುಟುಂಬದ ಸಾರಥ್ಯ ವಹಿಸಿಕೊಂಡ. ತಮ್ಮ ಧರ್ಮ, ಕರ್ಮ, ಸಂಪ್ರದಾಯ, ನಡಾವಳಿಗಳಿಂದ ಸಣ್ಣಭಟ್ಟರೆಂದೇ ಹೆಸರು ಗಳಿಸಿದ ಅವರು ವಾಸುವಿನ ಕುಟುಂಬದ ಪ್ರೀತಿ, ಗೌರವಕ್ಕೂ ಪಾತ್ರರಾಗಿದ್ದರು. ಹಬ್ಬ–ಹುಣ್ಣಿಮೆ, ತಿಥಿ, ಸತ್ಯನಾರಾಯಣ ಪೂಜೆ ಮೊದಲಾದ ವಿಶೇಷ ದಿನಗಳಲ್ಲಿ ವಾಸು ಕುಟುಂಬಕ್ಕೂ ಆಹ್ವಾನ ನೀಡುತ್ತಿದ್ದರು.

ತಮ್ಮ ಮನೆಯ ಅಂಗಳದಲ್ಲಿ ಬಾಳೆ ಎಲೆ ಹಾಕಿಸಿ ಅವರಿಗೆಲ್ಲ ತಾವೇ ಮುಂದೆ ನಿಂತು ಉಪಚಾರ ಮಾಡಿ ಬಡಿಸುತ್ತಿದ್ದರು. ಇತ್ತ ವಾಸುವಿನ ಮನೆಯಲ್ಲಿ ಕಾರ್ತಿಕ ಮಾಸದಲ್ಲಿ ಆಚರಿಸುವ ತುಳಸಿ ಪೂಜೆ ವಿಶೇಷವಾದದ್ದು. ಅದಕ್ಕೆ ಭಟ್ಟರ (ವಡ್ ದೀರ) ಮನೆಯವರೆಲ್ಲರೂ ಬರಲೇಬೇಕು. ಇದು ವಾಸುವಿನ ಹಕ್ಕೊತ್ತಾಯ. ಪೂಜೆ ಆರಂಭವಾಗುವುದರ ಒಳಗೇ ಅಂದರೆ ಸಂಜೆಗತ್ತಲಾಗುತ್ತಿದ್ದಂತೆ ಮನೆಯ ಹಕ್ಕೆ ಚಿಟ್ಟೆಯಲ್ಲಿ ಹಾಸಿದ ಕಂಬಳಿಯ ಮೇಲೆ ಅವರೆಲ್ಲರೂ ಆಸೀನರಾಗಬೇಕು. ವಾಸು ಮಹಾ ದೈವಭಕ್ತ. ಈ ವಿಶೇಷ ಪೂಜೆಗೆ ಅವನ ಚಿಗಪ್ಪ, ಶಂಕ್ರು ಹಾಗೂ ಭಾವನೆಂಟ ಗೋಪಾಲ ಸಕುಟುಂಬ ಸಪರಿವಾರ ಸಮೇತರಾಗಿ ಹಾಜರಿರಲೇಬೇಕು. ಅಂದು ಸಂಜೆ ವಾಸು ಮಿಂದು ಶುಭ್ರವಾದ ಬಟ್ಟೆಯನ್ನುಟ್ಟು ತುಳಸಿ ಪೂಜೆ ಆರಂಭಿಸುತ್ತಾನೆ. ಪತ್ನಿ ಲಕ್ಷ್ಮಿ ಮೊದಲೇ ಮಿಂದು ಶುಚಿರ್ಭೂತಳಾಗಿ ಪೂಜಾ ಪರಿಕರಗಳನ್ನೆಲ್ಲ ಅಣಿಗೊಳಿಸಿಟ್ಟಿರುತ್ತಾಳೆ. ಮಹಾಮಂಗಳಾರತಿ ಮಾಡುವಾಗ ವಾಸು ‘ಏಳು ಗಿರಿ, ಹನ್ನೊಂದು ಗಿರಿ, ಎಪ್ಪತ್ತೊಂದು ಗಿರಿ, ತಿಮ್ಮಪ್ಪ ಗಿರಿ, ಗೋವಿಂದಾ ಗೋ.....ವಿಂದಾ’ ಎಂದು ಆವೇಶ ಭರಿತನಾಗಿ ನಾಲ್ಕಾರು ಬಾರಿ ಹೇಳುತ್ತಿರುವಂತೆಯೇ ಆತನ ಮೈದುಂಬುತ್ತದೆ. ಶಂಕ್ರು ಹಾಗೂ ಗೋಪಾಲ ಇವನ ಒಂದೊಂದು ರಟ್ಟೆಯನ್ನು ಹಿಡಿದು ಆತನ ಹೂಂಕಾರವನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ತೊಡಗುತ್ತಾರೆ.

‘ಸ್ವಾಮೀ, ಸಾವಕಾಶ ಬರಬೇಕು, ಯಜಮಾನ್ರಿಗೆ ವಯಸ್ಸಾಯ್ತು, ತ್ರಾಸಾಗ್ತದೆ ಸ್ವಾಮೀ’ ಅಂತ ಲಕ್ಷ್ಮಿ ಭಯ ಭಕ್ತಿಯಿಂದ ಪ್ರಾರ್ಥಿಸುತ್ತಾಳೆ. ಮನೆಮಂದಿಯೆಲ್ಲ ತಮ್ಮಲ್ಲಿಯ ತಾಪತ್ರಯಗಳನ್ನು ಹೇಳಿಕೊಳ್ಳುವುದೂ ಈತ ಪರಿಹಾರವನ್ನು ಸೂಚಿಸುವುದೂ ನಡೆಯುತ್ತದೆ. ಹೀಗೇ ಹದಿನೈದಿಪ್ಪತ್ತು ನಿಮಿಷಗಳ ಪೂಜೆ ಮುಗಿದ ನಂತರ ವಾಸು ನಿತ್ರಾಣಗೊಂಡು ತುಳಸಿಕಟ್ಟೆಯ ಎದುರಲ್ಲಿಯೇ ಕುಸಿಯುತ್ತಾನೆ. ಶಂಕ್ರು, ಗೋಪಾಲ ವಾಸುವನ್ನು ಉಪಚರಿಸುತ್ತಿರುವಂತೆಯೇ ಲಕ್ಷ್ಮಿ ವಡೆದಿರಿಗೆ ಕಾಯಿಕಡಿ, ಪ್ರಸಾದ, ಖರ್ಜೂರ, ಬಾಳೆಹಣ್ಣು ನೀಡಿ ನಮಸ್ಕರಿಸುತ್ತಾಳೆ.

ಇಂತಿರ್ಪ ನಂದಿಹಳ್ಳಿಗೆ ಆರಕ್ಕೆ ಹೆಚ್ಚಿಲ್ಲ ಮೂರಕ್ಕೆ ಕುಂದಿಲ್ಲ ಅನ್ನುತ್ತಿರುವಂತೆಯೇ ಭೂಸುಧಾರಣೆ ಕಾಯಿದೆ ಜಾರಿಯಲ್ಲಿ ಬಂದು ಉಳುವವನೇ ಭೂಮಿಯ ಒಡೆಯ ಎಂದು ಸಾರಿದಾಗ ಹಳ್ಳಿಯ ವಾತಾವರಣ ಬಿಸಿಯಾಗತೊಡಗಿತು. ರೈತಾಪಿ ಜನ ಸರ್ಕಾರ ತಮ್ಮ ಬಲಕ್ಕಿದೆ ಎಂದು ಅರಿತೊಡನೆಯೇ ಅನೇಕಾನೇಕ ವರ್ಷಗಳಿಂದ ತಾವು ಗೆಯ್ಮೆ ಮಾಡುತ್ತಿದ್ದ ಭೂಮಾಲೀಕರ ಹೊಲ, ಜಾಗಕ್ಕೆ ಡಿಕ್ಲೇರೇಷನ್ ಫಾರ್ಮ್ ತುಂಬಿ ತಾವೇ ಜಮೀನಿನ ಒಡೆಯರೆಸಿನಿಕೊಂಡು ಬೀಗಿದರು. ಸಂತಸಪಟ್ಟರು, ಹಾಗೆ ಎದೆಯುಬ್ಬಿಸಿ, ತನ್ನದೇ ಆದ ಗತ್ತಿನಲ್ಲಿ ನಡೆದವರಲ್ಲಿ ವಾಸುವೂ ಒಬ್ಬ.

***

ಊರಿನ ತಲಾಟಿ ನಂದಿಹಳ್ಳಿಯವರು ಒಂದು ದಿನ ಆಂಜನೇಯ ದೇವಸ್ಥಾನದ ಬಳಿ ಭಟ್ಟರನ್ನು ಭೇಟಿಯಾಗಿ ವಾಸು ತಾನಿದ್ದ ಜಾಗಕ್ಕೆ ಡಿಕ್ಲೇರೇಶನ್ ತುಂಬಿದ ಬಗ್ಗೆ ಮಾಹಿತಿ ನೀಡಿದಾಗ ಅವರು ಜಮದಗ್ನಿಯ ಅಪರಾವತಾರವಾಗಿಬಿಟ್ಟರು. ಕ್ಷಣಕಾಲ ಅವರಿಗೆ ಅಕಾಶವೇ... ತಲೆಯ ಮೇಲೆ ಹರಿದು ಬಿದ್ದಂತಹ ಅನುಭವ. ತನ್ನ ಅನ್ನವನ್ನು ತಿಂದು ತನಗೇ ದ್ರೋಹ ಎಸಗಿದವನ ನೀರು ಇಳಿಸಬೇಕೆಂದು ಚಪ್ಪಲಿ ಮೆಟ್ಟಿ ಸರಸರನೇ ವಾಸು ಮನೆ ದಣಪೆ ಹತ್ತಿರ ನಿಂತು ‘ವಾಸೂ, ಬಾರೋ ಇಲ್ಲಿ’ ಅಂತ ಆವಾಜ್‌ ಹಾಕಿದರು. ಕರೇಬಣ್ಣದ ಲುಂಗಿಯ ಮೇಲೆ ಹಳತಾದ ಬಿಳೇ ಪೈರಾಣ ತೊಟ್ಟುಕೊಳ್ಳುತ್ತಲೇ ಹೊರಬಂದ ವಾಸು ‘ಎಂಥದು ಮಾರಾಯ್ರೆ’ ಅಂತ ಒಂಥರಾ ತಾತ್ಸಾರದ ದನಿಯಲ್ಲಿ ಕೇಳಿದಾಗ ಭಟ್ಟರ ಮೈಯೆಲ್ಲಾ ಉರಿದುಹೋಯ್ತು. ‘ಉಂಡ ಮನೆಗೇ ಕನ್ನ ಹಾಕ್ತಿಯೇನೋ ಭೋಸಡೀ ಮಗನೇ? ಈ ಜಾಗ ನಿನ್ನಪ್ಪಂದೇನೋ? ಯಾರನ್ನ ಕೇಳಿ ನೀ ಡಿಕ್ಲೇರೇಶನ್‌ ಹಾಕಿದ್ದು? ಬೊಗಳು’ ಭಟ್ಟರು ಕ್ರೋಧದಿಂದ ತತ್ತರಿಸುತ್ತಿದ್ದರು.

‘ಅಲ್ಲ, ನೀವ್‌ ಹೀಂಗೆ ಬಾಯಿಗೆ ಬಂದಾಂಗ್‌ ಮಾತಾಡೂದೆಂತದು? ನಂಗೂ ಕಾಯ್ದೆ–ಕಾನೂನು ಗೊತ್ತುಂಟು, ಮಾರ್ರೆ. ಡಿಕ್ಲೇರೇಶನ್‌ ಹಾಕಿದ್ದು ನಾನೇ. ಈ ಜಾಗ ಈಗ ನಂದು. ಏನೀಗ?’

‘ಹೌದಾ? ಹಾಗಾದ್ರೆ ನೋಡ್ತಿರು, ನಾಳೆ ಬೆಳಗಾಗೋದ್ರಲ್ಲಿ ನಿನ್ನನ್ನ, ನಿನ್ನ ಸಂಸಾರವನ್ನ ಇಲ್ಲಿಂದ ಗುಡಚಾಸೆ ಕಟ್ಟಿಸ್ತೇನೆ’ ಅಂತೆಲ್ಲ ಭಟ್ಟರು ರೇಗಾಡುತ್ತಿರುವಂತೆಯೇ ವಾಸುವಿನ ಮಗ ಭದ್ರ ಕೈಯಲ್ಲಿ ಕುಡುಗೋಲನ್ನು ಹಿಡಿದು ಅಪ್ಪನ ಪಕ್ಕದಲ್ಲಿ ಬಂದು ನಿಂತ. ಭಟ್ಟರು ಏನೋ ಗೊಣಗುತ್ತಲೇ ಮನೆಗೆ ವಾಪಸಾದರು.

ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ನಾಗಪಂಚಮಿ ಹಬ್ಬ ಬಂತು. ಪ್ರತಿ ವರ್ಷದಂತೆ ಭಟ್ಟರು ಹಿತ್ತಲಲ್ಲಿದ್ದ ನಾಗಬನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ನಾಗದೇವತೆಗೆ ಪೂಜೆ ಸಲ್ಲಿಸಲು ಉದ್ಯುಕ್ತರಾದರು. ಆದರೆ ಈಗ ಆ ನಾಗಬನ ವಾಸುವಿನ ಜಾಗದಲ್ಲಿತ್ತು. ಆದರೂ ಭಟ್ಟರ ಕುಟುಂಬದವರು ಅದಕ್ಕೆಲ್ಲ ಕ್ಯಾರೆ ಅನ್ನದೆ ಹಬ್ಬದ ದಿನದಂದು ಮಿಂದು ಮಡಿಯುಟ್ಟು ಪೂಜಾ ಸಾಮಗ್ರಿಗಳೊಂದಿಗೆ ನಾಗಬನದತ್ತ ನಡೆದರು. ಅಷ್ಟರಲ್ಲಿಯೇ ವಾಸುವಿನ ಮನೆಯವರೂ ವಾಡಿಕೆಯಂತೆ ಹೂವು, ಹಣ್ಣು, ತೆಂಗಿನಕಾಯಿ, ಅರಿಶಿಣ–ಕುಂಕುಮ, ಊದುಬತ್ತಿ, ಭತ್ತದ ಹೊದ್ಲು ಮೊದಲಾದ ಪರಿಕರಗಳೊಂದಿಗೆ ಅಲ್ಲಿ ಹಾಜರಾಗಿದ್ದರು. ಭಟ್ಟರಿಗೆ ಅವರನ್ನೆಲ್ಲ ನೋಡಿ ಪಿತ್ತ ನೆತ್ತಿಗೇರಿತು. ‘ಇದು ನಮ್ಮ ಮನೆ ಪೂಜೆ, ಬೇರೆಯವರು ಇಲ್ಲಿ ಮೂಗು ತೂರಿಸೋ ಅವಶ್ಯಕತೆಯಿಲ್ಲ. ವಿಮಲಾ, ಅವರಿಟ್ಟ ಸಾಮಾನುಗಳನ್ನೆಲ್ಲಾ ಆ ಕಡೆ ತೆಗೆದು ಬಿಸಾಡು’ ಎಂದು ಸೊಸೆಗೆ ಆಜ್ಞಾಪಿಸಿದರು.

‘ಭಟ್ರೇ’ ಅನತಿ ದೂರದಲ್ಲಿದ್ದ ವಾಸು ದನಿಯೇರಿಸಿಯೇ ಹೇಳಿದ. ‘ಇದು ನಾವೂ ಪೂಜಿಸೋ ದೇವತೆ, ದೇವರೆಲ್ಲಾ ಒಂದೇ. ಸುಮ್ಮನೇ ಪೂಜೆ ಮಾಡಿ, ಆಯ್ತಾ?’ ‘ನೀ ಯಾರೋ ನಂಗೇ ಉಪದೇಶ ಮಾಡುವವ? ನಿನ್ನ ಕೇಳಿ ನಾ ಪೂಜೆ ಮಾಡ್ತೇನೆ ಅಂದ್ಕೊಂಡೆಯೇನೋ ಬಿಕನಾಸಿ? ಇದು ನಮ್ಮ ದೇವರು, ತಿಳೀತೇನೋ?’ ಅಂತ ಭಟ್ಟರು ಗುಡುಗಿದಾಗ ವಿಮಲಾ ಮಾವನ ಹತ್ತಿರ ಬಂದು ಕಿವಿಯಲ್ಲಿ ಏನೋ ಉಸುರಿದಳು. ಪೂಜೆ ಏನೋ ಸಾಂಗವಾಗಿ ನಡೆಯಿತು. ಭಟ್ಟರ ಮನೆಯವರು ಮರಳಿ ಬರುವಾಗ ಅಲ್ಲೇ ನಿಂತಿದ್ದ ಭದ್ರ ಬಾಯ್ಬಿಟ್ಟ. ‘ಭಟ್ರೇ, ಮುಂದಿನ ವರ್ಷ ಇದೇ ಥರಾ ನೀವು ಪೂಜೆಗೆ ಪಿರಿಪಿರಿ ಮಾಡಿದ್ರೆ, ನೀವು ಇಲ್ಲಿಂದ ಹೇಗೆ ವಾಪಸ್‌ ಹೋಗ್ತೀರಿ ಅಂತ ನಾನೂ ಕಾಣ್ತೆ.’ ಭಟ್ಟರು ಅವನನ್ನು ಒಮ್ಮೆ ಕೆಕ್ಕರಿಸಿ ನೋಡಿ ಮನೆಯತ್ತ ಧಪ–ಧಪ ಹೆಜ್ಜೆ ಹಾಕಿದರು.

***

ಡಿಕ್ಲೇರೇಶನ್‌ ಝಟಾಪಟಿಯಿಂದಾಗಿ ಸಣ್ಣ ಭಟ್ಟರು ಪೂರ್ತಿ ಅಲುಗಾಡಿ ಹೋದರು. ತಮಗಾದ ನೋವು, ಸಂಕಟ, ಅವಮಾನವನ್ನು ಅವರಿಗೆ ಸಹಿಸಲಾಗಲಿಲ್ಲ. ವಾಸು ತಮ್ಮ ವಿಶ್ವಾಸಕ್ಕೆ ಕೊಳ್ಳಿಯಿಟ್ಟ, ಮನೆ ಮಗನಂತೆ ನೋಡಿಕೊಂಡವರಿಗೆ ವಿಷ ಉಣಿಸಿಬಿಟ್ಟ ಅಂತೆಲ್ಲ ಅವರು ಊರೆಲ್ಲ ಹೇಳಿಕೊಂಡು ಬರುತ್ತಿದ್ದರೆ, ನಾ ಮಾಡಿದ್ದು ಕಾಯದೆ ಪ್ರಕಾರ ಸರಿಯುಂಟು, ಮತ್ತೆ ಇವರೇನು ಕಿಸಿಯಲಿಕ್ಕುಂಟು ಅಂತ ವಾಸು ಪ್ರತ್ಯುತ್ತರವನ್ನು ರವಾನಿಸಿದ್ದ. ಇದರಿಂದಾಗಿ ಭಟ್ಟರು ಇನ್ನಷ್ಟು ತೇಜೋವಧೆಗೆ ಪಕ್ಕಾದರು. ಪರಿಣಾಮ– ಮಾಜಿ ಭೂಮಾಲೀಕರೆಂದೆನಿಸಿಕೊಂಡ ಊರಿನ ಕೆಲವರು ಭಟ್ಟರ ಪರವಾಗಿ ವಕಾಲತು ವಹಿಸಿದರೆ ಇನ್ನುಳಿದವರು ವಾಸುವಿನೊಂದಿಗೆ ಗುರುತಿಸಿಕೊಂಡರು. ಹೀಗಾಗಿ ನಂದಿಹಳ್ಳಿ ರಣಕ್ಷೇತ್ರ–ಕುರುಕ್ಷೇತ್ರಕ್ಕೆ ರಂಗಸಜ್ಜಿಕೆಯಾಗುವ ಆತಂಕಕಾರೀ ಹಂತಕ್ಕೆ ಬಂದು ತಲುಪಿತು.

ನಂದಿಹಳ್ಳಿಯಲ್ಲಿ ಕೇಶವಾಚಾರಿಗೆ ದೊಡ್ಡ ಹೆಸರಿದೆ. ಮೂರೂವರೆ ಎಕರೆ ಫಲವತ್ತಾದ ಅಡಿಕೆ–ತೆಂಗಿನ ತೋಟವಿದೆ. ಹಿರಿಯರು ಕಟ್ಟಿಸಿದ್ದ ಮಜಬೂತಾದ ಒಂಭತ್ತು ಅಂಕಣದ ಮನೆಯಿದೆ. ರಾಜಕೀಯದವರ ಕೈ ಇದೆ, ಅವನ ತಂದೆ ನಾರಾಯಣಾಚಾರಿಯೂ ಪಾಳೆಗಾರನಂತೆ ಬದುಕಿದವ. ಅದೊಂದು ದಿನ ಅಡಿಕೆ ಮಂಡಿಯಲ್ಲಿ ಆಚಾರಿಯನ್ನು ಭೇಟಿಯಾದ ಭಟ್ಟರು ವಾಸುವಿನ ಪ್ರವರವನ್ನು ಹೇಳಿ ಆತನ ಸಹಾಯಹಸ್ತವನ್ನು ಕೋರಿದರು. ದೊಡ್ಡದಾಗಿ ನನ್ನ ಆಚಾರಿ ‘ಅವನನ್ನ ಮನೆಯಿಂದ ಖಾಲಿ ಮಾಡಿಸೋ ಜವಾಬ್ದಾರಿ ನಂಗೆ ಬಿಡಿ. ಇವತ್ತು ಸಾವಿರ ಮಡಗಿ’ ಅಂತ ಹೇಳಿ ‘ಭಟ್ರೇ ಆ ಮರೀಗೌಡನನ್ನ ಹದ ಹಾಕಲಿಕ್ಕೆ ಇದೊಳ್ಳೆ ಸಮಯ. ಆ ನನ್‌ಮಗ ವಾಸು ದೋಸ್ತಿ ಮಾಡ್ತಿದಾನೆ’ ಅಂತ ಹೇಳಿ ಹೊರಟುಹೋದ. ಮರೀಗೌಡ ಕೇಶವಾಚಾರಿ ಹಾವು–ಮುಂಗುಸಿಗಳಂತೆ ಅಂತ ಭಟ್ಟರಿಗೆ ಗೊತ್ತು. ಅವರಿಬ್ರು ಬಡಿದಾಡಿಕೊಂಡು ಸಾಯ್ಲಿ ತನ್ನ ಕೆಲಸ ಆದ್ರೆ ಸಾಕು. ಅಂದುಕೊಂಡು ಸಮಾಧಾನಪಟ್ಟುಕೊಂಡರು.

ಅಂದು ರಾತ್ರಿ ನಂದಿಹಳ್ಳಿ ಕನ್ನಡ ಶಾಲೆಯ ಆವಾರದಲ್ಲಿ ಇಡಗುಂಜಿ ಮೇಳದವರಿಂದ ಯಕ್ಷಗಾನ ಪ್ರದರ್ಶನ. ಪ್ರಸಂಗ ‘ಗದಾಯುದ್ಧ’, ಶಂಭು ಹೆಗಡೆಯವರ ದುರ್ಯೋಧನ, ಮಹಾಬಲ ಹೆಗಡೆಯವರ ಕೃಷ್ಣನನ್ನು ನೋಡಿ ಕಣ್ತುಂಬಿಕೊಳ್ಳಲು ಊರಿಗೆ ಊರೇ ಕಿತ್ತೆದ್ದು ಬಂದಿತ್ತು. ಸಣ್ಣ ಭಟ್ಟರು ರಾತ್ರಿ ಒಂಭತ್ತು ಗಂಟೆಗೇ ಊಟ ಪೂರೈಸಿ ಬಿಳೆಮುಂಡು, ಫುಲ್‌ ಶರ್ಟ್‌, ಮೇಲೊಂದು ಸ್ವೆಟರ್‌, ಕಿವಿಗೊಂದು ಮಫ್ಲಾರ್‌ ಸುತ್ತಿ ಚಪ್ಪಲ್‌ ಮೆಟ್ಟಿ ರಂಗಸ್ಥಳದ ಎದುರಿನ ಸಾಲಿನ ಆರಾಮ ಖುರ್ಚಿಯಲ್ಲಿ ಉಪಸ್ಥಿತರಾಗಿದ್ದರು. ಚೌಕಿಯಲ್ಲಿ ‘ಗಜಮುಖದವಗೆ ಗಣಪಗೆ’ ಎನ್ನುವ ಪದ್ಯ ಹಾಡಿ ಗಣಪತಿ ಪೂಜೆ ಪೂರೈಸಿದ ಹಿಮ್ಮೇಳದ ಮುಖ್ಯ ಭಾಗವತರಾದ ನೆಬ್ಬೂರು ರಂಗಸ್ಥಳವನ್ನು ಪ್ರವೇಶಿಸಿದಾಗ ರಾತ್ರಿ ಹನ್ನೊಂದು ಗಂಟೆ ಸಮೀಪಿಸುತ್ತಿತ್ತು. ಕಿಕ್ಕಿರಿದ ಪ್ರೇಕ್ಷಕವರ್ಗ. ಅರ್ಧಚಂದ್ರಾಕೃತಿಯ ರಂಗಮಂಟಪ ಟ್ಯೂಬ್‌ಲೈಟ್‌ ಬೆಳಕಿನಿಂದ ಝಗಝಗಿಸುತ್ತಿತ್ತು. ‘ವಿಘ್ನೇಶಾಯ ಸರಸ್ವರ್ತ್ತೈ ಪಾರ್ವರ್ತ್ತೈ ಗುರವೇ ನಮಃ ದಕ್ಷಿಣಾಮೂರ್ತಿ’ ಅನ್ನುವ ಪದ್ಯದೊಂದಿಗೆ ಆಖ್ಯಾನ ಆರಂಭವಾಯಿತು. ‘ಕುರುರಾಯ ಇದನ್ನೆಲ್ಲ ಕಂಡು ಸಂತಾಪದಿ, ಮರುಗಿ ಎನ್ನದು ಭಾಗ್ಯವೆನುತ’ ಎನ್ನುತ್ತ ದುರ್ಯೋಧನನ ಪಾತ್ರಧಾರಿ ಶಂಭು ಹೆಗಡೆಯವರು ಭಾರವಾದ ಹೆಜ್ಜೆಯನ್ನಿಡುತ್ತ ಮ್ಲಾನವದನರಾಗಿ ರಂಗಪ್ರವೇಶ ಮಾಡುವ ಸಂದರ್ಭದಲ್ಲಿಯೇ ಭಟ್ಟರಿಗೆ ತಮ್ಮ ಹೆಗಲನ್ನು ಯಾರೋ ತಟ್ಟಿದಂತಾಗಿ ತಿರುಗಿ ನೋಡಿದರು. ಮೊಮ್ಮಗಳು ಸುಗುಣ, ಕಂಗಲಳಲ್ಲಿ ಗಂಗಾಭವಾನಿ, ಆತಂಕಗೊಂಡ ಭಟ್ಟರು ಲಗುಬಗೆಯಿಂದ ಎದ್ದು ಹೊರಗೆ ಬಂದಾಗ ಆಕೆ ಬಾಯಿಬಿಟ್ಟಳು– ‘ಅಜ್ಜಾ, ವಾಸುವಿನ ಮನೆಗೆ ಯಾರೋ ಬೆಂಕಿ ಹಚ್ಚಿದ್ದೊ. ನೀ ಬೇಗ ಹೊರಡು.’

ಭಟ್ಟರು ಕ್ಷಣಕಾಲ ಸ್ತಂಭೀಭೂತರಾದರು. ಏನು, ಎತ್ತ ಎಂತೆಲ್ಲಾ ವಿಚಾರ ಮಾಡುತ್ತಲೇ ಮೊಮ್ಮಗಳ ಜೊತೆ ಓಡುವ ನಡಿಗೆಯಲ್ಲಿ ವಾಸುವಿನ ಮನೆ ಎದುರಿಗೆ ಬಂದು ನಿಂತಾಗ ಕಂಡದ್ದೇನು? ವಾಸುವಿನ ಸೋಗೆಮನೆ ಧಗಧಗ ಉರಿಯುತ್ತಿತ್ತು. ಅಜಮಾಸ್‌ ನಲವತ್ತೈವತ್ತು ಮಂದಿ ಆಗಲೇ ಅಲ್ಲಿ ಜಮಾಯಿಸಿದ್ದರು. ಇವರು ಇದೀಗ ಎಲ್ಲರ ದೃಷ್ಟಿಯೂ ತಮ್ಮ ಮೇಲೆ ನೆಟ್ಟಿದ್ದು ನೋಡಿ ಕಸಿವಿಸಿಗೊಂಡರು. ‘ನಮ್ಮ ಸರ್ವನಾಸ ಮಾಡಿ ತೆಗೆದ್ರಲ್ಲೋ, ನಮ್ಮ ಮನೆಗೆ ಕೊಳ್ಳಿ ಇಟ್ಟೋರ ಕೈ ಕೊಳೆತು ಹೋಗಾ, ಅವರ ವಂಸ ನಿರ್ವಂಸ ಆಗ್‌ ಹೋಗಾ, ಅವರ ಹೆಂಡ್ರು ಮುಂಡೇರಾಗಿ ಹೋಗಾ, ಹೇ ದೇವ್ರೇ’ ಅಂತ ಲಕ್ಷ್ಮೀ ಎದೆ ಬಡಿದುಕೊಂಡು ಗೋಳಾಡುತ್ತಿದ್ದಳು. ವಾಸು, ಭದ್ರ, ಹೆಣ್ಣುಮಕ್ಕಳು ಮೌನದೇವತೆಗಳಾಗಿದ್ದರೆ ಬಂದವರಲ್ಲಿ ಆರೆಂಟು ಜನ ತಂಬಿಗೆ, ಬಕೆಟ್‌ಗಳಲ್ಲಿ ನೀರನ್ನು ತುಂಬಿಕೊಂಡು ಬೆಂಕಿಯನ್ನು ಆರಿಸುವ ಕಾಯಕದಲ್ಲಿ ತೊಡಗಿದ್ದರು. ಅಷ್ಟರಲ್ಲಿ ಯಾರೋ ಒಬ್ಬರು ಪೋಲೀಸರಿಗೆ ಮಾಹಿತಿ ನೀಡಲು ಸೈಕಲ್ಲನ್ನೇರಿ ಪೇಟೆಯತ್ತ ತೆರಳಿದರು. ಕ್ಷಣಗಳು ಗತಿಸಿದಂತೆ ಜನರ ಗುಂಪು ನಿಧಾನವಾಗಿ ಕರಗತೊಡಗಿತು.

***

ಮರುದಿನ ರಾತ್ರಿ ಕೇಶವಾಚಾರಿ ಹಾಗೂ ಮರಿಗೌಡ ಕಾರಿನಿಂದಿಳಿದು ‘ಅಮೃತಾ ಬಾರ್‌’ ಹೊಕ್ಕಾಗ ಒಂಭತ್ತು ಗಂಟೆ, ಟೇಬಲ್‌ ಮೇಲಿದ್ದ ದೈನಿಕವೊಂದರೆ ತಲೆಬರೆಹ ಅವರನ್ನು ಆಕರ್ಷಿಸಿತು. ‘ನಂದಿಹಳ್ಳಿಯಲ್ಲಿ ನಿನ್ನೆ ರಾತ್ರಿ ಮನೆಯೊಂದು ಬೆಂಕಿಗೆ ಆಹುತಿಯಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಪೋಲಿಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ.’ ಅದನ್ನೋದಿಕೊಂಡ ಇಬ್ಬರೂ ಜೋರಾಗಿ ನಕ್ಕು ‘ಚಿಯರ್ಸ್‌’ ಅಂತ ಹೇಳಿ ಮದ್ಯದ ಗ್ಲಾಸುಗಳನ್ನು ಪರಸ್ಪರ ಟಿಂಕಿಣಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT