‘ಮಂಥರೆ ಹಟ’ದಿಂದ ಲಾಭವೇ ಆಗಿದೆ

‘ಇದು ಅಥವಾ ಅದು, ನಡುವೆ ಬೇರೇನಿಲ್ಲ’ ಎಂಬ ಮನಸ್ಥಿತಿಯೇ ಬಲಗೊಳ್ಳುತ್ತಿರುವ ಇಂದಿನ ಸನ್ನಿವೇಶದಲ್ಲಿ, ಅತಿ ಸಂಕೀರ್ಣವಾದ ವೈದ್ಯವೃತ್ತಿಯ ಬಗೆಗಿನ ಚರ್ಚೆಯೂ ‘ಅದು ಅಥವಾ ಇದು’ ಎಂಬಲ್ಲಿಗೆ ಬಂತು

ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಕೆಪಿಎಂಇ ಕಾಯ್ದೆ ತಿದ್ದುಪಡಿ ಮಸೂದೆಯನ್ನು ವಿಧಾನಮಂಡಲ ಅನುಮೋದಿಸಿದೆ. ಏಪ್ರಿಲ್ 28ರಂದು ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಸಮಿತಿ ಮಾಡಿದ್ದ ಯಾವೆಲ್ಲ ಶಿಫಾರಸುಗಳನ್ನು ಆರೋಗ್ಯ ಸಚಿವರು ಕಡೆಗಣಿಸಿದ್ದರೋ, ಅವುಗಳ ಪೈಕಿ ‘ಸರ್ಕಾರಿ ಆಸ್ಪತ್ರೆಗಳನ್ನು ಕಾಯ್ದೆಯಡಿ ತರಬೇಕು’ ಎನ್ನುವುದನ್ನು ಬಿಟ್ಟು ಇತರೆಲ್ಲಾ ಶಿಫಾರಸುಗಳು ಕೊನೆಗೂ ಮನ್ನಣೆ ಪಡೆದಿವೆ.

ಇದನ್ನು ಸಾಧಿಸಲು ಜೂನ್ 16ಕ್ಕೆ ರಾಜ್ಯದ 12 ಸಾವಿರ ವೈದ್ಯರಿಂದ ಬೆಂಗಳೂರು ಚಲೊ, ನವೆಂಬರ್ 3ರಂದು ರಾಜ್ಯವ್ಯಾಪಿ ಮುಷ್ಕರ, ನವೆಂಬರ್ 13ಕ್ಕೆ 30 ಸಾವಿರಕ್ಕೂ ಹೆಚ್ಚು ವೈದ್ಯರಿಂದ ಬೆಳಗಾವಿ ಚಲೊ, ನಂತರ ಸರದಿ ಉಪವಾಸ ಹಾಗೂ ಹಲವು ಜಿಲ್ಲೆಗಳಲ್ಲಿ ವೃತ್ತಿಸ್ಥಗಿತ ಎಲ್ಲವನ್ನೂ ಮಾಡಬೇಕಾಯಿತು. ಏಪ್ರಿಲ್ 28ರಂದು ನ್ಯಾಯಮೂರ್ತಿ ಸೇನ್, ಆರೋಗ್ಯ ಸಚಿವರು ಹಾಗೂ ಇಲಾಖೆಯ ಮುಖ್ಯ ಕಾರ್ಯದರ್ಶಿಯವರು ಒಟ್ಟಿಗೇ ಮಾಡಿದ್ದ ಘೋಷಣೆಗಳನ್ನು ಪಾಲಿಸಿದ್ದರೆ ಈ ಸತ್ಯಾಗ್ರಹಗಳ ಅಗತ್ಯವೇ ಇರಲಿಲ್ಲ.

ಈ ಮಸೂದೆಯ ಬಗ್ಗೆ ಬಹಳಷ್ಟು ಚರ್ಚೆಯೂ ಆಯಿತು. ಜೂನ್ 16ರಿಂದ ಜೋರಾಯಿತು. ನವೆಂಬರ್3ರ ಬಳಿಕ ತಾರಕಕ್ಕೇರಿತು. ಮಸೂದೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ವೃತ್ತಿನಿರತ ವೈದ್ಯರು ತಾವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೋಟಿಗಟ್ಟಲೆ ತೊಡಗಿಸಿದ ಕಾರ್ಪೊರೇಟ್ ಆಸ್ಪತ್ರೆಗಳವರು ಅಲ್ಪಸಂಖ್ಯೆಯಲ್ಲಿದ್ದರು.

ಮಸೂದೆಯ ಪರವಾಗಿಯೂ ಹಲಬಗೆಯ ಅಭಿಪ್ರಾಯ ಉಳ್ಳವರಿದ್ದರು: ‘ಖಾಸಗಿ ವೈದ್ಯರೆಲ್ಲರೂ ಒಂದೇ ಲಾಬಿಯವರು, ಅವರೆಲ್ಲರನ್ನೂ ಒಂದೇ ರೀತಿ ಕಟ್ಟಿಹಾಕಬೇಕು’ ಎಂದು ಕೆಲವು ಚಳವಳಿಗಾರರು ವಾದಿಸಿದರು. ‘ಬಹುತೇಕ ವೈದ್ಯರು ಒಳ್ಳೆಯವರು, ಆದರೆ ಕೆಟ್ಟವರನ್ನು ಸರ್ಕಾರ ನಿಯಂತ್ರಿಸಲೇಬೇಕು’ ಎಂಬುದು ಇನ್ನು ಹಲವರ ವಾದ. ಈ ಕಾನೂನು ಬಂದರೆ ಆರೋಗ್ಯ ಸೇವೆಗಳು ತುಸು ಅಗ್ಗವಗಬಹುದೆಂದು ಆಸೆ ಹೊತ್ತ ಜನಸಾಮಾನ್ಯರೂ ಇದ್ದರು.ಹೀಗೆ ಈ ಎರಡೂ ಕಡೆಗಳಲ್ಲಿ ಬಗೆಬಗೆಯ ಅಭಿಪ್ರಾಯಗಳಿದ್ದವು. ಪರ-ವಿರೋಧಗಳಿಗೆ ಬೇರೆ ಬೇರೆ ಕಾರಣಗಳಿದ್ದವು.

ಆದರೆ ‘ಇದು ಅಥವಾ ಅದು, ನಡುವೆ ಬೇರೇನಿಲ್ಲ’ ಎಂಬ ಮನಸ್ಥಿತಿಯೇ ಬಲಗೊಳ್ಳುತ್ತಿರುವ ಇಂದಿನ ಸನ್ನಿವೇಶದಲ್ಲಿ, ಅತಿ ಸಂಕೀರ್ಣವಾದ ವೈದ್ಯವೃತ್ತಿಯ ಬಗೆಗಿನ ಚರ್ಚೆಯೂ ‘ಅದು ಅಥವಾ ಇದು’ ಎಂಬಲ್ಲಿಗೆ ಬಂತು. ತಮ್ಮ ವೃತ್ತಿಸ್ವಾತಂತ್ರ್ಯದ ರಕ್ಷಣೆಗಾಗಿ ಈ ತಿದ್ದುಪಡಿಗಳ ವಿರುದ್ಧ ಸೆಟೆದೆದ್ದ ವೈದ್ಯರೆಲ್ಲರನ್ನೂ ‘ಕಾರ್ಪೊರೇಟ್ ಸಂಸ್ಥೆಗಳ ದಲ್ಲಾಳಿಗಳೆಂದೂ, ಧನದಾಹಿಗಳೆಂದೂ, ರಕ್ತ ಹೀರುವವರೆಂದೂ’ ಜರೆಯಲಾಯಿತು. ಅಲ್ಲಿ ಇಲ್ಲಿ ನಡೆದ ಪ್ರಕರಣಗಳನ್ನೇ ಹಿಗ್ಗಿಸಿ, ಸುಳ್ಳುಗಳನ್ನೂ, ಅರ್ಧ ಸತ್ಯಗಳನ್ನೂ ಬೆರೆಸಿ ಆರೋಪಗಳ ಸುರಿಮಳೆಗೈಯುತ್ತಿದ್ದ ಕೆಲವರು, ತಾವಷ್ಟೇ ಆರು ಕೋಟಿ ಕನ್ನಡಿಗರ ಹಿತರಕ್ಷಕರು ಎಂಬಂತೆ ಹಟ ಹಿಡಿದರು. ತಮಗೆ ಗೊತ್ತಿರುವುದೇ ಪರಮ ಸತ್ಯ, ಅದನ್ನೊಪ್ಪದವರೆಲ್ಲರೂ ದ್ರೋಹಿಗಳು ಎಂದು ನೇರವಾಗಿ ವ್ಯಕ್ತಿನಿಂದನೆಗೇ ಇಳಿಯುವ ಭೀಕರ ರೋಗವೂ ಕೆಪಿಎಂಇ ಚರ್ಚೆಯೊಳಗೆ ನುಸುಳಿತು.

ಕೆಪಿಎಂಇ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ಚರ್ಚೆ ಮೂರು ತಿಂಗಳಿನದಲ್ಲ, 2016ರ ಜುಲೈ ಕೊನೆಗೆ ನ್ಯಾಯಮೂರ್ತಿ ಸೇನ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದಾಗಲೇ ಅದು ಆರಂಭವಾಗಿತ್ತು. ರಾಜ್ಯದ ಎಲ್ಲಾ ವೈದ್ಯರು ಬರೆಯುವ ಎಲ್ಲಾ (ದಿನಕ್ಕೆ ಲಕ್ಷಗಟ್ಟಲೆ) ಚೀಟಿಗಳನ್ನು ಔಷಧ ನಿಯಂತ್ರಕರಿಂದ ತನಿಖೆಗೊಳಪಡಿಸಬೇಕು, ಚೀಟಿಯಲ್ಲಿ ಹೆಚ್ಚು ಔಷಧ ಬರೆದವರನ್ನು ಐಪಿಸಿ 420 ಕಲಂ ಅಡಿ ಶಿಕ್ಷಿಸಬೇಕು ಎಂಬ ಬಾಲಿಶ, ನ್ಯಾಯಬಾಹಿರ ಬೇಡಿಕೆಯು ಮೊದಲ ಸಭೆಯಲ್ಲಿ ಪ್ರಸ್ತಾಪವಾದಾಗಲೇ ಈ ತಿದ್ದುಪಡಿಗಳ ಗತಿಯೇನಾಗಲಿದೆ ಎನ್ನುವುದು ವೈದ್ಯರಾದ ನಮಗೆ ತಿಳಿದುಹೋಗಿತ್ತು. ಆದ್ದರಿಂದಲೇ ನಮ್ಮೆಲ್ಲ ಅಹವಾಲುಗಳನ್ನು ಸವಿವರವಾಗಿ, ಸಾಧಾರವಾಗಿ ಬರೆದೇ ಕೊಟ್ಟಿದ್ದೆವು.

ಆಧಾರರಹಿತ ಆರೋಪಗಳ ಮೂಲಕ ಸಮಿತಿಯನ್ನು ತಪ್ಪು ದಾರಿಗೆಳೆಯಲು ನಡೆಸಿದ ಪ್ರಯತ್ನಗಳನ್ನು ಅಲ್ಲಿಂದಲ್ಲಿಗೇ ಎತ್ತಿ ತೋರಿಸಿದ್ದೆವು. ಸಾರ್ವಜನಿಕ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಿದ್ದೇವೆ ಎಂದವರ ಅಧ್ಯಯನಗಳ ಮಟ್ಟವೇನು ಎನ್ನುವುದನ್ನೂ ಸಾಬೀತುಪಡಿಸಿದ್ದೆವು. ಕೇಂದ್ರ ಸರ್ಕಾರ ರೂಪಿಸಿರುವ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯನ್ನು, ಅದನ್ನು ಅನುಸರಿಸಿರುವ ಕೇರಳವೂ ಸೇರಿದಂತೆ ಇತರ 11 ರಾಜ್ಯಗಳ ಮಾದರಿಯನ್ನು ಇಲ್ಲೂ ಅನುಸರಿಸುವಂತೆ ನಾವು ಮಾಡಿದ ಮನವಿಗಳನ್ನು ಪರಿಗಣಿಸದೆ, ಪಶ್ಚಿಮ ಬಂಗಾಳದ ವೈದ್ಯ ವಿರೋಧಿ ಕಾಯ್ದೆಯ ಮಾದರಿಯನ್ನು ಮುಂದಿಟ್ಟಾಗ ಬಲವಾಗಿ ವಿರೋಧಿಸಿದ್ದೆವು.

ನಮ್ಮ ಸಂವಿಧಾನ, ವಿವಿಧ ಕಾನೂನುಗಳು, ನಮ್ಮ ವೃತ್ತಿ ಸಂಹಿತೆ ಹಾಗೂ ನಿಯಮಗಳು, ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳು ಇತ್ಯಾದಿಯಾಗಿ ನಾವು ಮಂಡಿಸಿದ ಆಧಾರಗಳನ್ನು ಯಾರೊಬ್ಬರೂ ಪ್ರಶ್ನಿಸಲಿಲ್ಲ, ವಿರೋಧಿಸಲೂ ಇಲ್ಲ. ತಿದ್ದುಪಡಿಗಳ ಪರವಾಗಿ ಮಾತನಾಡಿದವರು ಭಾವನಾತ್ಮಕವಾಗಿ ವಾದಿಸಿದರೇ ಹೊರತು, ಅವಕ್ಕೆ ಸೂಕ್ತ ಆಧಾರಗಳನ್ನು ಒದಗಿಸಲಿಲ್ಲ. ‘ವೈದ್ಯವಿರೋಧಿ ತಿದ್ದುಪಡಿಗಳು ಜನಪರ ಹೇಗಾಗುತ್ತವೆ, ಮಸೂದೆಯು ಜನಪರ ಎಂದಾದರೆ ನ್ಯಾಯಮೂರ್ತಿ ಸೇನ್ ಸಮಿತಿಯ ವರದಿಯು ಜನವಿರೋಧಿಯಾಗಿತ್ತೇ’ ಎಂಬ ಪ್ರಶ್ನೆಗಳಿಗೂ ಉತ್ತರ ದೊರೆಯಲಿಲ್ಲ.

ಕಾನೂನು ರಚನೆಯ ಪ್ರಕ್ರಿಯೆ ವಸ್ತುನಿಷ್ಠವಾಗಿರಬೇಕು, ಸಂವಿಧಾನಬದ್ಧವಾಗಿರಬೇಕು. ಜನರಿಗಷ್ಟೇ ಅಲ್ಲ, ಅತ್ಯಂತ ಕ್ಲಿಷ್ಟಕರವಾದ ವೃತ್ತಿಯಲ್ಲಿರುವ ವೈದ್ಯರಿಗೂ ನ್ಯಾಯ ಒದಗಬೇಕು ಎಂಬ ಮೂಲ ಆಶಯಗಳೆಲ್ಲ ಬದಿಗೆ ಸರಿದು, ಬೀದಿ ರಂಪದಿಂದಲೇ ಕಾನೂನನ್ನು ಹೇರಬಹುದೆನ್ನುವ ಪ್ರವೃತ್ತಿಯು ಮೊದಲಿಂದ ಕೊನೆಯವರೆಗೆ ನಿಚ್ಚಳವಾಗಿ ಕಂಡು ಬಂತು. ರಾಜ್ಯದ 40 ಸಾವಿರದಷ್ಟು ವೈದ್ಯರು ಪ್ರತಿಭಟನೆಗಳಲ್ಲಿ ನೇರವಾಗಿ ಭಾಗಿಯಾದುದು ಹಾಗೂ ಇನ್ನುಳಿದವರು ವೃತ್ತಿಯಿಂದ ದೂರ ಉಳಿದುದು ವೈದ್ಯರಲ್ಲಿದ್ದ ಆತಂಕವನ್ನು ಎತ್ತಿ ತೋರಿಸಿತು. ಪಕ್ಷಭೇದವಿಲ್ಲದೆ ಹೆಚ್ಚಿನ ನಾಯಕರು ವೈದ್ಯರ ಬೇಡಿಕೆಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದರು.

ಹೆಚ್ಚಿನ ಪತ್ರಿಕೆಗಳೂ, ಟಿ.ವಿ. ವಾಹಿನಿಗಳೂ ಸರ್ಕಾರದ ನಿಲುವನ್ನು ಪ್ರಶ್ನಿಸಿದವು. ಸರ್ಕಾರಿ ಆಸ್ಪತ್ರೆಗಳನ್ನು ಕಾಯ್ದೆಯಡಿ ತರಬೇಕೆನ್ನುವ ನಮ್ಮ ಬೇಡಿಕೆಗೂ ವ್ಯಾಪಕ ಬೆಂಬಲ ದೊರೆಯಿತು. ತನ್ನ ಮನೆಯನ್ನೇ ಸರಿಯಾಗಿಡದ ಸರ್ಕಾರವು ಖಾಸಗಿ ವೈದ್ಯರನ್ನು ನಿಯಂತ್ರಿಸುವುದರ ಔಚಿತ್ಯವನ್ನು ಹಲವರು ಪ್ರಶ್ನಿಸಿದರು. ಇವನ್ನೆಲ್ಲ ಪರಿಗಣಿಸಿ, ಮುಖ್ಯಮಂತ್ರಿ ಮುತುವರ್ಜಿ ವಹಿಸಿದರು. ಜನರಿಗೂ ನ್ಯಾಯವೊದಗುವ, ವೈದ್ಯರಿಗೂ ಅನ್ಯಾಯವಾಗದ ಮಸೂದೆಯನ್ನು ಅನುಮೋದಿಸಲಾಯಿತು. ಇದನ್ನು ಖಾಸಗಿ ಹಿತಾಸಕ್ತಿಗಳಿಗೆ ಶರಣಾಗತಿ ಎನ್ನುವುದು ಆತ್ಮವಂಚನೆ ಅಷ್ಟೇ.

‘ಅನೇಕರು ಮಂಥರೆ ತರಹ ಹುಳಿ ಹಿಂಡಿದ್ದಾರೆ’ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ನಾವು ವೈದ್ಯರೇ ಮಂಥರೆಯರು ಎಂದಾದರೆ ಹೆಮ್ಮೆಯಿಂದಲೇ ಅದನ್ನು ಒಪ್ಪಿಕೊಳ್ಳುತ್ತೇವೆ. ಮಂಥರೆಯ ಹಟದಿಂದ ದಶರಥನ ಮಾತು ಉಳಿಯಿತು, ಜೀವವುಳಿಸಿದ ಕೈಕೇಯಿಗೆ ಅನ್ಯಾಯವಾಗುವುದು ತಪ್ಪಿತು, ಭರತನಿಗೆ ಅಧಿಕಾರವೂ ಸಿಕ್ಕಿತು. ನಮ್ಮ ಪ್ರತಿಭಟನೆಯಿಂದ ಸರ್ಕಾರದ ಮಾತೂ ಉಳಿಯಿತು, ಸೇನ್ ವರದಿ ಜಾರಿಯಾಯಿತು, ಜೀವ ಉಳಿಸುವ ವೈದ್ಯರಿಗೆ ಅನ್ಯಾಯವಾಗುವುದೂ ತಪ್ಪಿತು, ಜನರಿಗೆ ದೂರು ಸಲ್ಲಿಸಲು ಅಧಿಕಾರವೂ ಸುಲಭವಾಯಿತು.

Comments
ಈ ವಿಭಾಗದಿಂದ ಇನ್ನಷ್ಟು

ಸಂಗತ
ವಚನ: ಹೊಸಧರ್ಮದ ತಳಹದಿಯಾಗಬಲ್ಲುದೇ?

ವೀರಶೈವದಿಂದ ಪ್ರತ್ಯೇಕಗೊಂಡು ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಡುತ್ತಿರುವವರ ಪರವಾಗಿ ಸಂಪುಟ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ವಚನಗಳೇ ಲಿಂಗಾಯತ ಧರ್ಮ ಪ್ರಮಾಣ ಗ್ರಂಥವೆಂದು ಸಚಿವರೊಬ್ಬರು...

22 Mar, 2018

ಸಾಂವಿಧಾನಿಕ ಆಶಯ
ಮೌಲ್ಯ... ಜನತಂತ್ರದ ಅಂತಃಸತ್ವ

ಮತದಾನ ಕೆಳಗಿನಿಂದ ಮೇಲ್ಮುಖವಾಗಿ ಚಲಿಸುವ ಪ್ರಕ್ರಿಯೆ. ಮತದಾರರು ತಮ್ಮ ಮತಗಳನ್ನು ಬೆಂಬಲವಾಗಿ ಅಥವಾ ಪ್ರತಿರೋಧದ ಅಸ್ತ್ರಗಳಾಗಿ ಚಲಾಯಿಸುವ ಸ್ವಾಯತ್ತತೆಯನ್ನು ಪಡೆದಿರುತ್ತಾರೆ. ಈ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ...

21 Mar, 2018
ಪ್ರಣಾಳಿಕೆಯಲ್ಲಿರಲಿ ಕಾಡಿನ ಹಿತ

ಸಂಗತ
ಪ್ರಣಾಳಿಕೆಯಲ್ಲಿರಲಿ ಕಾಡಿನ ಹಿತ

20 Mar, 2018

ಸಂಗತ
ಮೈತ್ರಿ ರಾಜಕೀಯದ ಹೊಸ ಹಾದಿ

ಇದೀಗ ಹಲವು ರಾಜಕೀಯ ಪಕ್ಷಗಳ ‘ಕಾಮನಬಿಲ್ಲು ಒಕ್ಕೂಟ’ ಮಾಡಲೆತ್ನಿಸುತ್ತಿರುವ ಕಾಂಗ್ರೆಸ್, ತನ್ನ ಅಖಿಲ ಭಾರತೀಯ ಪಾರ್ಟಿಯ ಹಮ್ಮು ಬಿಟ್ಟು ಬಾಗಿದರೆ ಮಾತ್ರ ಮುಂಬರುವ ಮಹಾಚುನಾವಣೆಯಲ್ಲಿ...

16 Mar, 2018

ಸಂಗತ
ಡಿಜಿಟಲ್ ಮಾರುಕಟ್ಟೆ ಗ್ರಾಹಕಸ್ನೇಹಿಯೇ?

ಇಂದು ಅಂತರರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ. ‘ಡಿಜಿಟಲ್ ಮಾರುಕಟ್ಟೆಯನ್ನು ನ್ಯಾಯಸಮ್ಮತವಾಗಿಸುವುದು’ ಈ ವರ್ಷದ ಘೋಷವಾಕ್ಯ

15 Mar, 2018