ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಸಾಹಿತ್ಯ ಬಾಲಿಶವಲ್ಲ’

Last Updated 1 ಡಿಸೆಂಬರ್ 2017, 4:32 IST
ಅಕ್ಷರ ಗಾತ್ರ

ಮೂಡುಬಿದಿರೆ: ಕವಿ ಪರಂಪರೆಯನ್ನು ನೆನಪಿಸಿ, ಉಳಿಸಿ, ಬೆಳೆಸುವ ಪ್ರಯತ್ನ ಕವಿಗೋಷ್ಠಿಗಳದ್ದು. ಇಂಥದ್ದೇ ಒಂದು ಪ್ರಯತ್ನ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ನಡೆಯಿತು.

ಸಾಮಾನ್ಯವಾಗಿ ಪ್ರಬುದ್ಧ ಕವಿಗಳು, ಅನುಭವಿಗಳು, ಜನ ಮನ್ನಣೆಗಳಿಸಿ ಪ್ರಚಲಿತದಲ್ಲಿರುವವರು ಕವಿಗೋಷ್ಠಿಗಳಲ್ಲಿ ಭಾಗವಹಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲಿನ ವಿಶೇಷತೆಯೆಂದರೆ ಈ ಕವಿಗೋಷ್ಠಿಯಲ್ಲಿ ಪಾಲ್ಗೊಂಡವರೆಲ್ಲರೂ ಶಾಲಾ– ಕಾಲೇಜಿನ ವಿದ್ಯಾರ್ಥಿಗಳು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ನುಡಿಸಿರಿ’ ಅಂಗವಾಗಿ ಕೈಗೊಂಡ ವಿದ್ಯಾರ್ಥಿ ಸಿರಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕವಿಗೋಷ್ಠಿ ಆಯೋಜಿಸಿತ್ತು. ಕರಾವಳಿಯ ಹತ್ತು ಹಲವು ಶಾಲಾ– ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿ ಕವಿವರ್ಯರು, ಸ್ವರಚಿತ ಕಾವ್ಯಗಳನ್ನು ವಾಚಿಸಿ ಸಾಹಿತ್ಯಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.

ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸನ್ನಿಧಿ ಟಿ. ರೈ ಪೆರ್ಲ, ಕಾಸರಗೋಡಿನ ಚಿನ್ಮಯ ವಿದ್ಯಾಲಯದಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ. ತಮ್ಮ ಮಾತುಗಳು ಹಾಗೂ ಕಾವ್ಯದಿಂದ ನೆರೆದ ಸಮಸ್ತರನ್ನೂ ನಿಬ್ಬೆರಗಾಗಿಸಿದರು. ಮಕ್ಕಳ ಸಾಹಿತ್ಯದ ಕುರಿತು ವಿಶೇಷ ನಿಲುವುಗಳನ್ನು ಹೊಂದಿರುವ ಸನ್ನಿಧಿ, ಕನ್ನಡ ಕಾವ್ಯಲೋಕಕ್ಕೊಂದು ಆಶಾಕಿರಣ ಎನ್ನುವ ಮಾತುಗಳು ಕೇಳಿ ಬಂದವು.

‘ಮಕ್ಕಳ ಸಾಹಿತ್ಯ ಎಂದರೆ ಬರೀ ಶಿಶುಗೀತೆಗಳೆಂದೋ ಅಥವಾ ಬಾಲಿಶ ಎನ್ನುವ ನಂಬಿಕೆಯೊಂದಿದೆ. ಮಕ್ಕಳ ಸಾಹಿತ್ಯವೇ ಬೇರೆ. ಮಕ್ಕಳಿಗಾಗಿ ರಚಿತವಾದ ಸಾಹಿತ್ಯವೇ ಬೇರೆ. ಮಕ್ಕಳ ಸಾಹಿತ್ಯವನ್ನು ಬಾಲಿಶ ಎಂದು ಅಲ್ಲಗಳೆದರೆ, ಅಂತಹ ಮೌಢ್ಯತೆ ಮತ್ತೊಂದಿಲ್ಲ’ ಎಂದು ದೃಢವಾಗಿ ಹೇಳಿದ್ದು, ಸಭಿಕರ ಕರತಾಡನಕ್ಕೆ ಪಾತ್ರವಾಯಿತು.

ಝೇಂಕಾರ ಕವನ ಸಂಕಲನದ ಕರ್ತೃ ಜಿತಿನ್ ಜೋನಿ, ತಮ್ಮ ‘ಬೆಳಕು’ ಕವಿತೆಯ ಮೂಲಕ ಅಪ್ರತಿಮ ಕಾವ್ಯಾತ್ಮಕ ಶಕ್ತಿಯನ್ನು ಸಾದರಪಡಿಸಿದರೆ, ‘ಇರುವೆ’ ಕವನ ಸಂಕಲನದ ರೂವಾರಿ ಅರ್ಜುನ್ ಎಸ್. ಎಂ., ‘ಪೂರ್ಣ ಚಂದ್ರ ತೇಜಸ್ವಿ’ ಕವನದ ಮೂಲಕ ನೆಚ್ಚಿನ ಕವಿಗೆ ಕಾವ್ಯನಮನ ಸಲ್ಲಿಸಿದರು.

ಸುರವಿ ಎಸ್.ಯು., ‘ನಾ ಕಾಣೆ ದೇವರನ್ನ’ ಕವಿತೆಯ ಮೂಲಕ ತನ್ನ ನಾಸ್ತಿಕ ನಿಲುವನ್ನು ಮಂಡಿಸಿದರೆ, ಆರ್. ಕೆ. ಅನುಪ್ರಿಯ ‘ಮಾತೆಯ ಮಡಿಲಲ್ಲಿ’ ಕಾವ್ಯದ ಮೂಲಕ ದೇಶಭಕ್ತಿಯ ರಸಸ್ವಾದದ ಅನುಭವ ಮಾಡಿಕೊಟ್ಟರು. ಚೈತ್ರರ ‘ಜಲ’, ಪ್ರಜ್ಞಾ ಎಂ. ಆರ್. ಅವರ ‘ಪ್ರಕೃತಿ ಮಡಿಲು’ ಹಾಗೂ ‘ಸೋಲುತಿರುವೆ-ಸಾಯುತಿರುವೆ’, ಜೀವಿತ ಅವರ ‘ಸಾಹಿತ್ಯ ಸಮ್ಮೇಳನದ ಪರಿಸರ’ ಕವನಗಳು ಸಭಿಕರನ್ನು ಕಾವ್ಯಮಯ ಲೋಕಕ್ಕೆ ಎಳೆದೊಯ್ದವು. ವಿದ್ಯಾರ್ಥಿಗಳಿಗೆ ಸಾಹಿತ್ಯ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಜರುಗಿದ ಈ ಕವಿಗೋಷ್ಠಿಯು, ನೆರೆದಿದ್ದ ಸಾಹಿತ್ಯಾಭಿಮಾನಿಗಳನ್ನು ರಸದಕಡಲಿನಲ್ಲಿ ತೇಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT