ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಕೇಂದ್ರಿತ ಯೋಚನೆ ಬಹುತ್ವಕ್ಕೆ ವಿರುದ್ಧದ ಚಿಂತನೆಗೆ ನಾಂದಿ: ಸಿ.ಎನ್.ರಾಮಚಂದ್ರನ್

Last Updated 1 ಡಿಸೆಂಬರ್ 2017, 5:51 IST
ಅಕ್ಷರ ಗಾತ್ರ

ಮೂಡುಬಿದಿರೆ: ಸಾಹಿತ್ಯದ ಮೇಲಿನ ದಾಳಿ. ಕೃತಿಗಳ ನಿಷೇಧ ಇಂತಹುದಕ್ಕೆಲ್ಲವೂ ಅಸ್ಮಿತೆ ಮತ್ತು ಅಧಿಕಾರದ ಸಮಸ್ಯೆಯೇ ಕಾರಣ ಎಂದು ನುಡಿಸಿರಿ ಉದ್ಘಾಟನಾ ಭಾಷಣ ಮಾಡಿದ ಹಿರಿಯ ಸಾಹಿತಿ ಪ್ರೊ.ಸಿ.ಎನ್.ರಾಮಚಂದ್ರನ್ ಅಭಿಪ್ರಾಯಪಟ್ಟರು.

ಇಲ್ಲಿನ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಆಳ್ವಾಸ್ ನುಡಿಸಿರಿ-2017 ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ನಾಗತಿಹಳ್ಳಿ ಚಂದ್ರಶೇಖರ್ ವಹಿಸಿದ್ದಾರೆ.

‘ಅಸ್ಮಿತೆಯನ್ನು ಸೂಕ್ಷ್ಮಗೊಳಿಸಿದಷ್ಟೂ ಹೆಚ್ಚಿನ ಸಂಖ್ಯೆಯ ಅನ್ಯರು ಸೃಷ್ಟಿಯಾಗುತ್ತಾರೆ. ಅಧಿಕಾರದ ಬಯಕೆ ಕೂಡ ಬಹುತ್ವ ವಿರೋಧಿ. ಗಟ್ಟಿಯಾದ ನೆಲೆಯ ಅಸ್ಮಿತೆ ಇದ್ದರೂ ಅಧಿಕಾರ ಕೇಂದ್ರಿತ ಯೋಚನೆ ಬಹುತ್ವಕ್ಕೆ ವಿರುದ್ಧವಾದ ಚಿಂತನೆಗೆ ನಾಂದಿ ಹಾಡುತ್ತದೆ’ ಎಂದು ಸಿ.ಎನ್.ರಾಮಚಂದ್ರನ್ ಹೇಳಿದರು.

‘ಅನ್ಯರಿಲ್ಲದೇ ಅನನ್ಯತೆ ಇಲ್ಲ. ಅನ್ಯರನ್ನು ಕಾಣುತ್ತಲೇ ವೈಯಕ್ತಿಕ ಅಸ್ಮಿತೆಗೆ ಹಂಬಲಿಸಲಾಗುತ್ತಿದೆ. ತಮ್ಮ ಸಮುದಾಯದ ಕಲ್ಪಿತ ಗತದ ಬಗ್ಗೆ ಕೊಂಚ ವಿರೋಧ ಇದ್ದಂತೆ ಕಂಡರೂ ದಾಳಿಗಳು ಆರಂಭವಾಗುತ್ತವೆ’ ಎಂದು ಅವರು ಹೇಳಿದರು.

‘ಬಹುಸಂಖ್ಯಾತರು ಸದಾ ಕಾಲ ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಅಸ್ಮಿತೆಯ ಬಗ್ಗೆ ಚಿಂತಿಸುತ್ತಾ ಇರುತ್ತಾರೆ. ಅಲ್ಪಸಂಖ್ಯಾತರು ಸದಾ ಕಾಲವೂ ಅಧಿಕಾರಕ್ಕೆ‌ ಬರುವುದಕ್ಕಾಗಿ ಅಸ್ಮಿತೆಯ ಚಿಂತೆಯಲ್ಲಿ ಇರುತ್ತಾರೆ. ಇದರಿಂದಾಗಿ ಯಾವಾಗಲೂ ತಮ್ಮ ಧರ್ಮ, ಮತ, ಪಂಥಗಳಿಗೆ ಕಿಂಚಿತ್ತೂ ತೊಂದರೆಯಾದರೆ ಇಡೀ ಸಮುದಾಯಕ್ಕೆ ಆದಂತಹ ಅವಮಾನ ಎಂದು ಬಿಂಬಿಸಲಾಗುತ್ತದೆ. ಇದುವೇ ಭಾರತ ಈಗ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ' ಎಂದು ರಾಮಚಂದ್ರನ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸೇರಿದಂತೆ ಹಲವರ ಉಪಸ್ಥಿತರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT