ಹನುಮ ಜಯಂತಿಯಲ್ಲಿ ಗಲಾಟೆ; ಲಾಠಿ ಪ್ರಹಾರ

ಹನುಮ ಜಯಂತಿ ರಥಯಾತ್ರೆಯ ಮಾರ್ಗ ಬದಲಾವಣೆಗೆ ಮುಂದಾದ ಸಂಘ ಪರಿವಾರದ ಕಾರ್ಯಕರ್ತರ ಪ್ರಯತ್ನವನ್ನು ತಡೆದ ಪರಿಣಾಮ, ಪೊಲೀಸರು ಹಾಗೂ ಹನುಮಭಕ್ತರ ನಡುವೆ ಭಾನುವಾರ ಘರ್ಷಣೆ ಉಂಟಾಗಿದೆ. ಇದರಿಂದ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಹನುಮ ಜಯಂತಿ ಅಂಗವಾಗಿ ಹುಣಸೂರು ಪಟ್ಟಣದಲ್ಲಿ ಭಾನುವಾರ ಸಂಘ ಪರಿವಾರದ ಕಾರ್ಯಕರ್ತರು ಕೇಸರಿ ಧ್ವಜ ಹಿಡಿದು ಮೆರವಣಿಗೆಗೆ ಸಜ್ಜಾಗಿದ್ದರು

ಹುಣಸೂರು (ಮೈಸೂರು ಜಿಲ್ಲೆ): ಹನುಮ ಜಯಂತಿ ರಥಯಾತ್ರೆಯ ಮಾರ್ಗ ಬದಲಾವಣೆಗೆ ಮುಂದಾದ ಸಂಘ ಪರಿವಾರದ ಕಾರ್ಯಕರ್ತರ ಪ್ರಯತ್ನವನ್ನು ತಡೆದ ಪರಿಣಾಮ, ಪೊಲೀಸರು ಹಾಗೂ ಹನುಮಭಕ್ತರ ನಡುವೆ ಭಾನುವಾರ ಘರ್ಷಣೆ ಉಂಟಾಗಿದೆ. ಇದರಿಂದ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಪೊಲೀಸರ ವಿರುದ್ಧ ಆಕ್ರೋಶಗೊಂಡ ಸಂಘ ಪರಿವಾರದ ಕಾರ್ಯಕರ್ತರು ಕಲ್ಲುತೂರಾಟ ನಡೆಸಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಮೂರು ಬಸ್ಸುಗಳ ಗಾಜು ಪುಡಿಯಾಗಿದ್ದು, ಹಲವರಿಗೆ ಗಾಯಗಳಾಗಿವೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಸಂಸದ ಪ್ರತಾಪಸಿಂಹ ಅವರನ್ನು ಬಂಧಿಸಲಾಗಿದೆ. ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ಆರೋಪದ ಮೇರೆಗೆ 300ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿಗದಿತ ಕಾಲಮಿತಿಯೊಳಗೆ ಕಾರ್ಯಕ್ರಮ ನಡೆಸದ ಪರಿಣಾಮ ಹನುಮ ಜಯಂತಿ ರಥಯಾತ್ರೆಗೆ ಅವಕಾಶ ನಿರಾಕರಿಸಲಾಗಿದೆ. ಪೊಲೀಸರ ಕ್ರಮವನ್ನು ಖಂಡಿಸಿ ಡಿ.4ರಂದು (ಸೋಮವಾರ) ಹುಣಸೂರು ಬಂದ್‌ಗೆ ಬಿಜೆಪಿ ಕರೆ ನೀಡಿದೆ.

ಈದ್ ಮಿಲಾದ್ ಹಾಗೂ ಹನುಮ ಜಯಂತಿ ಒಟ್ಟಿಗೆ ಬಂದಿದ್ದರಿಂದ ಮೆರವಣಿಗೆ ಸಾಗುವ ಮಾರ್ಗಗಳನ್ನು ಹೊರತುಪಡಿಸಿ ಪಟ್ಟಣದಲ್ಲಿ ಡಿ.2ರಿಂದ ಡಿ.4ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮಂಜುನಾಥ ಬಡಾವಣೆಯ ಹನುಮ ದೇಗುಲದಿಂದ ನಗರಸಭೆಯವರೆಗೆ ರಥಯಾತ್ರೆ ನಡೆಸಲು ತಾಲ್ಲೂಕು ಆಡಳಿತ ಅವಕಾಶ ನೀಡಿತ್ತು. ಆದರೆ, ಸಂಘ ಪರಿವಾರದ ಕಾರ್ಯಕರ್ತರು ರಂಗನಾಥ ಬಡಾವಣೆಯಿಂದ ಮೆರವಣಿಗೆ ನಡೆಸಲು ಮುಂದಾದರು. ಇದನ್ನು ತಡೆದ ಪೊಲೀಸರೊಂದಿಗೆ ವಾಗ್ವಾದವೂ ನಡೆಯಿತು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು, ಸ್ಥಳದಲ್ಲಿದ್ದ 50ಕ್ಕೂ ಹೆಚ್ಚು ಜನರನ್ನು ಬಂಧಿಸಿದರು. ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಮೈಸೂರಿನಿಂದ ತೆರಳುತ್ತಿದ್ದ ಸಂಸದ ಪ್ರತಾಪಸಿಂಹ ಅವರನ್ನು ಪಟ್ಟಣದ ಹೊರಭಾಗದಲ್ಲಿ ಪೊಲೀಸರು ವಶಕ್ಕೆ ಪಡೆದರು.

ಇದರಿಂದ ಕೆರಳಿದ ಸಂಘ ಪರಿವಾರದ ಕಾರ್ಯಕರ್ತರು ದೇಗುಲದ ಎದುರು ಜಮಾಯಿಸಿ ಧರಣಿ ಕುಳಿತರು. ಸಂಸದರನ್ನು ಬಿಡುಗಡೆ ಮಾಡುವವರೆಗೂ ಮೆರವಣಿಗೆ ನಡೆಸುವುದಿಲ್ಲವೆಂದು ಪಟ್ಟು ಹಿಡಿದರು. ಪ್ರತಿಭಟನಾಕಾರರ ಮನವೊಲಿಸಲು ಸ್ಥಳಕ್ಕೆ ಧಾವಿಸಿದ ಉಪವಿಭಾಗಾಧಿಕಾರಿ ಕೆ.ನಿತೀಶ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಕಾರಿನ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದರು.

ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಕೈಗೆ ಸಿಕ್ಕರವನ್ನು ಬಂಧಿಸಿ ಸಾರಿಗೆ ಬಸ್ಸಿಗೆ ತುಂಬಿದರು. ಪೊಲೀಸರ ಲಾಠಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕೆಲವರು ಕಲ್ಯಾಣಿಗೆ ಬಿದ್ದು ಗಾಯಗೊಂಡರು. ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ತೂರಿದ್ದರಿಂದ ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ. ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪಟ್ಟಣಕ್ಕೆ ಭೇಟಿ ನೀಡಿ ಸಂಸದರ ಬಂಧನವನ್ನು ಖಂಡಿಸಿದರು.

ಪ್ರಜಾಪ್ರಭುತ್ವದ ಕಗ್ಗೊಲೆ: ಆಕ್ರೋಶ
ಹುಣಸೂರು: ಸಂಸದ ಪ್ರತಾಪಸಿಂಹ ಅವರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.

‘ಜನಪ್ರತಿನಿಧಿಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಸಾಮಾನ್ಯಜ್ಞಾನವೂ ರಾಜ್ಯ ಸರ್ಕಾರಕ್ಕೆ ಇಲ್ಲ. ದಮನಕಾರಿ ನೀತಿಯನ್ನು ಅನುಸರಿಸಿ ಹಿಂದೂ ಧರ್ಮದ ಆಚರಣೆಗಳನ್ನು ಹತ್ತಿಕ್ಕಲು ಪ್ರಯತ್ನಸುತ್ತಿದೆ. ಗಲಭೆಯ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ’ ಎಂದು ಆರೋಪಿಸಿದರು.

‘ಜನರ ಧಾರ್ಮಿಕ ಭಾವನೆಗಳನ್ನು ಸರ್ಕಾರವೇ ಕೆರಳಿಸುತ್ತಿದೆ. ಶಾಂತ ರೀತಿಯಲ್ಲಿ ಮೆರವಣಿಗೆ ನಡೆಸಲು ಅವಕಾಶ ನೀಡಬೇಕಿತ್ತು. ಲಾಠಿ ಬೀಸುವ ಅನಿವಾರ್ಯತೆ ಇರಲಿಲ್ಲ’ ಎಂದರು.

ಪ್ರತಾಪಸಿಂಹ ವಿರುದ್ಧ ಪ್ರಕರಣ
ಮೈಸೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ನಿರ್ಲಕ್ಷ್ಯತನದ ವಾಹನ ಚಾಲನೆ ಆರೋಪದ ಮೇರೆಗೆ ಸಂಸದ ಪ್ರತಾಪಸಿಂಹ ಅವರ ವಿರುದ್ಧ ಹುಣಸೂರು ತಾಲ್ಲೂಕಿನ ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಹನುಮ ಜಯಂತಿಯಲ್ಲಿ ಪಾಲ್ಗೊಳ್ಳಲು ಸಂಸದರು, ಮೈಸೂರಿನಿಂದ ಹುಣಸೂರಿಗೆ ಹೊರಟಿದ್ದರು. ಬಿಳಿಕೆರೆ ಠಾಣಾ ವ್ಯಾಪ್ತಿಯಲ್ಲಿ ಅವರ ಕಾರು ತಡೆದ ಪೊಲೀಸರು ಮುನ್ನೆಚ್ಚರಿಕೆಯ ಕ್ರಮವಾಗಿ ವಶಕ್ಕೆ ಪಡೆಯಲು ಮುಂದಾದರು. ಇದರಿಂದ ಆಕ್ರೋಶಗೊಂಡ ಪ್ರತಾಪಸಿಂಹ, ಪೊಲೀಸರ ವಿರುದ್ಧ ಹರಿಹಾಯ್ದರು.

ಪೊಲೀಸರ ಸೂಚನೆಯನ್ನು ಪಾಲಿಸದೆ ತಾವೇ ಕಾರು ಚಲಾಯಿಸಿಕೊಂಡು ಹುಣಸೂರಿನತ್ತ ಹೊರಟಿದ್ದರು. ಈ ವೇಳೆ ಅವರ ಕಾರು ರಸ್ತೆಯಲ್ಲಿದ್ದ ಬ್ಯಾರಿಕೇಡ್‌ಗೆ ಗುದ್ದಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಚಾರಕ್ಕೆ ಇಳಿದ ಎಸ್‌ಡಿಪಿಐ ಅಭ್ಯರ್ಥಿ

ಮೈಸೂರು
ಪ್ರಚಾರಕ್ಕೆ ಇಳಿದ ಎಸ್‌ಡಿಪಿಐ ಅಭ್ಯರ್ಥಿ

16 Jan, 2018

ಹುಣಸೂರು
ಬಂದೋಬಸ್ತ್, ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲು

ಇಲಾಖೆ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ರಥೋತ್ಸವಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ

16 Jan, 2018
‘ರಾಜಕಾರಣದಲ್ಲಿ ವ್ಯಾಪಾರಿ ಮನೋಭಾವ’

ಸುತ್ತೂರು
‘ರಾಜಕಾರಣದಲ್ಲಿ ವ್ಯಾಪಾರಿ ಮನೋಭಾವ’

15 Jan, 2018

ನಂಜನಗೂಡು
ಹಣ ದುರ್ಬಳಕೆ; ಮೂವರು ಅಮಾನತು

ತುಲಾಭಾರ ಸೇವೆ ವಿಭಾಗದ ಮೇಲ್ವಿಚಾರಕ ಅಭಿಷೇಕ್, ಗುಮಾಸ್ತೆ ಸುಭಾಷಿಣಿ ಹಾಗೂ ನಿವೃತ್ತ ಗುಮಾಸ್ತ ಶ್ರೀಕಂಠಸ್ವಾಮಿ ಅವರಿಗೆ ನೋಟಿಸ್ ನೀಡಲಾಗಿದೆ.

15 Jan, 2018
ಹೊಸ ಬಸ್ ನಿಲ್ದಾಣ; ನಿರೀಕ್ಷೆ ಹಲವು

ಮೂಲಸೌಕರ್ಯ
ಹೊಸ ಬಸ್ ನಿಲ್ದಾಣ; ನಿರೀಕ್ಷೆ ಹಲವು

15 Jan, 2018