ಚಿತ್ರದುರ್ಗ

‘ಹೀರೊ ಡ್ಯುಯೆಟ್’ ಕಂಡು ಅಂಗವಿಕಲರು ಪುಳಕ

‘ಹೊಲದ ಕೆಲಸಕ್ಕೆ ನಡೆದುಕೊಂಡು ಹೋಗಲು ನನಗೆ ಕಷ್ಟವಾಗುತ್ತಿತ್ತು. ವಾಹನ ನೀಡಿರುವ ಕಾರಣ ಇನ್ನು ಮುಂದೆ ಸುಲಭವಾಗಲಿದೆ. ಚಿಕ್ಕಪುಟ್ಟ ವ್ಯವಹಾರಕ್ಕೆ ಬಳಸಿಕೊಂಡು ಆರ್ಥಿಕ ಸಬಲತೆ ಕಾಣಲು ಪ್ರಯತ್ನಿಸುತ್ತೇವೆ’

ಅಂಗವಿಕಲ ಫಲಾನುಭವಿಗಳಿಗಾಗಿ ವಿತರಿಸಲು ನಿಲ್ಲಿಸಲಾಗಿದ್ದ 48 ಹೀರೊ ಡ್ಯುಯೆಟ್ ಮೊಪೆಡ್‌ ತ್ರಿಚಕ್ರ ವಾಹನ ಕಾಣಿಸಿದ್ದು ಹೀಗೆ

ಚಿತ್ರದುರ್ಗ: ವಾಹನ ಏರುತ್ತಿದ್ದ ಅವರ ಮುಖದಲ್ಲಿ ಮಂದಹಾಸ ಮೂಡಿತು. ಪರಸ್ಪರರ ಮುಖ ನೋಡುತ್ತ ಮುಗುಳ್ನಕ್ಕರು. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ 2016–17ನೇ ಸಾಲಿನಲ್ಲಿ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆಯ ಫಲಾನುಭವಿಗಳು ಭಾನುವಾರ ಸಂಭ್ರಮಿಸಿದ್ದು ಹೀಗೆ.

ಸ್ವಂತ ವಾಹನದಲ್ಲಿ ಸಂಚರಿಸಬೇಕು ಎಂದರೆ ಯಾರಿಗಾದರೂ ಖುಷಿಯೇ. ಅಂಗವಿಕಲರು ನೂತನ ಹೀರೊ ಡ್ಯುಯೆಟ್‌ ವಾಹನ ಕಂಡು ಪುಳಕಿತರಾದರು. ‘ಕೃಷಿ, ದಿನಸಿ ಅಂಗಡಿ, ತರಕಾರಿ, ಸೊಪ್ಪು ವ್ಯಾಪಾರ, ಕುರಿ ಸಾಕಾಣೆ ಹೀಗೆ ಒಂದಿಲ್ಲೊಂದು ಕೆಲಸಕ್ಕೆ ಮೊಪೆಡ್‌ ತ್ರಿಚಕ್ರ ವಾಹನ ಖಂಡಿತವಾಗಿಯೂ ನಮಗೆ ಅನುಕೂಲವಾಗಲಿದೆ’ ಎಂದು ವಾಹನ ಪಡೆದ ಕೆಲ ಅಂಗವಿಕಲರು ಸಂತಸ ಹಂಚಿಕೊಂಡರು.

‘ಇಲಾಖೆಯಿಂದ ನಮಗೆ ವಾಹನ ದೊರೆತಿರುವುದು ಎಲ್ಲಿಲ್ಲದ ಖುಷಿ ಕೊಟ್ಟಿದೆ. ಇದರಿಂದ ನಮ್ಮ ದೈನಂದಿನ ಕೆಲಸಗಳಿಗೆ ಅನುಕೂಲವಾಗಲಿದೆ. ನಾವೂ ಕೂಡ ಬೇರೆಯವರಂತೆ ದುಡಿದು ಬದುಕುತ್ತಿದ್ದೇವೆ. ನಮ್ಮಂಥ ಅನೇಕ ಬಡ ಅಂಗವಿಕಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರ ಇನ್ನೂ ಅನೇಕ ಸೌಲಭ್ಯಗಳನ್ನು ನೀಡಲಿ’ ಎಂದು ‘ಪ್ರಜಾವಾಣಿ’ಗೆ ಕೆಲ ಅಂಗವಿಕಲರು ಪ್ರತಿಕ್ರಿಯಿಸಿದರು.

‘ಹೊಲದ ಕೆಲಸಕ್ಕೆ ನಡೆದು ಕೊಂಡು ಹೋಗಲು ನನಗೆ ಕಷ್ಟವಾಗುತ್ತಿತ್ತು. ವಾಹನ ನೀಡಿರುವ ಕಾರಣ ಇನ್ನು ಮುಂದೆ ಸುಲಭವಾಗಲಿದೆ. ಚಿಕ್ಕಪುಟ್ಟ ವ್ಯವಹಾರಕ್ಕೆ ಬಳಸಿಕೊಂಡು ಆರ್ಥಿಕ ಸಬಲತೆ ಕಾಣಲು ಪ್ರಯತ್ನಿಸುತ್ತೇವೆ’ ಎನ್ನುತ್ತಾರೆ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದ ಐ.ಜಿ.ಲೋಕೇಶ್ವರಯ್ಯ, ಲಕ್ಷ್ಮಣ.

‘ತಾಲ್ಲೂಕಿನ ವಡ್ಡರಸಿದ್ದವ್ವನ ಹಳ್ಳಿಯಲ್ಲಿ ನನ್ನದೊಂದು ಕಿರಾಣಿ ಅಂಗಡಿ ಇದೆ. ಇದರಿಂದಲೇ ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದೇನೆ. ವ್ಯಾಪಾರ ಮಾಡಲು ಆಹಾರ ಧಾನ್ಯ ಸೇರಿದಂತೆ ಅಗತ್ಯ ಸಾಮಗ್ರಿ ತರಲು ಗ್ರಾಮದಿಂದ ದಿನನಿತ್ಯ ಹತ್ತು ಕಿಲೋ ಮೀಟರ್ ದೂರದ ಸಿರಿಗೆರೆ ಹೋಗುತ್ತಿದ್ದೆ. ಸದ್ಯ ವಾಹನ ಬಂದಿರುವ ಕಾರಣ ಸಂಚಾರಕ್ಕೆ ಇನ್ನು ತೊಂದರೆ ಉಂಟಾಗದು’ ಎನ್ನುತ್ತಾರೆ ಫಲಾನುಭವಿ ಮಂಜುನಾಥ್.

ಮಹಾಂತೇಶ್, ಶಿವಕುಮಾರ್, ಮಲ್ಲಿಕಾರ್ಜುನ್, ಚಿದಾನಂದಪ್ಪ ಹೀಗೆ ಕೆಲ ಫಲಾನುಭವಿಗಳು ತಮಗೆ ಮುಂದಿನ ದಿನಗಳಲ್ಲಿ ವಾಹನದಿಂದಾಗುವ ಅನುಕೂಲಗಳ ಬಗ್ಗೆ ವಿವರಿಸಿದರು.

ಆಯ್ಕೆ ಹೇಗೆ: ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಸಂಬಂಧಪಟ್ಟ ಇಲಾಖೆ ಉಪ ನಿರ್ದೇಶಕರು, ಡಿಡಿಡಬ್ಲ್ಯೂಯು, ಎನ್‌ಜಿಒ, ಎಂಆರ್‌ಡಬ್ಲ್ಯೂ ಈ ಎಲ್ಲರನ್ನೊಳಗೊಂಡ ಸಮಿತಿಯಿಂದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ ತಿಳಿಸಿದರು.

2016–17ನೇ ಸಾಲಿನಲ್ಲಿ 250 ಮಂದಿ ಅರ್ಜಿ ಸಲ್ಲಿಸಿದ್ದು, 160 ಮಂದಿ ಅರ್ಹರನ್ನು ಆಯ್ಕೆ ಮಾಡಿ, ಅದರಲ್ಲಿ 48 ಮಂದಿಗೆ ವಾಹನ ನೀಡಲಾಗುತ್ತಿದೆ. ಉಳಿದವರಿಗೂ ವಾಹನ ನೀಡಲು ಕ್ರಿಯಾಯೋಜನೆ ತಯಾರಿಸಿ ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಈ ಹಿಂದೆ ತಮ್ಮ ಅನುದಾನದಡಿ ಚಿತ್ರದುರ್ಗ ಕ್ಷೇತ್ರಕ್ಕೆ ಸಂಸದ ಚಂದ್ರಪ್ಪ 50 ವಾಹನ ನೀಡಿದ್ದಾರೆ. ಆ ನಂತರ ಹಿರಿಯೂರು ಶಾಸಕ ಡಿ.ಸುಧಾಕರ 23, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ 17, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ 15, ಮೊಳಕಾಲ್ಮುರು ಶಾಸಕ ಎಸ್.ತಿಪ್ಪೇಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯೆ ಜಯ್ಯಮ್ಮ ಬಾಲರಾಜ್ ತಲಾ 9, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಮ್ಮ ಹೊಳಲ್ಕೆರೆ ಕ್ಷೇತ್ರಕ್ಕೆ 5 ವಾಹನ ನೀಡಿದ್ದಾರೆ.

ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಜಿ.ಎಚ್.ತಿಪ್ಪಾರೆಡ್ಡಿ, ಮಾಜಿ ಸಂಸದ ಜನಾರ್ದನ ಸ್ವಾಮಿ ತಲಾ 2 ವಾಹನ ನೀಡಿದ್ದಾರೆ 2014–15ನೇ ಸಾಲಿನಲ್ಲಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 30, 2015–16ರಲ್ಲಿ 20, ಜಿಲ್ಲಾ ಪಂಚಾಯ್ತಿ ಶೇ 3ರ ಅನುದಾನದಡಿ 34, ಹೊಳಲ್ಕೆರೆ ತಾಲ್ಲೂಕು ಪಂಚಾಯ್ತಿಯ ಶೇ 3ರ ಅನುದಾನದಲ್ಲಿ 19, 2016–17ನೇ ಸಾಲಿನಲ್ಲಿ ಭಾನುವಾರ ಇಲಾಖೆಯೂ 48 ಮಂದಿ ಅಂಗವಿಕಲರಿಗೆ ಮೊಪೆಡ್ ತ್ರಿಚಕ್ರ ವಾಹನ ಸೌಲಭ್ಯ ನೀಡಿದೆ. ಇದುವರೆಗೂ 285 ವಾಹನಗಳನ್ನು ಅಂಗವಿಕಲರಿಗೆ ನೀಡಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾಹಿತಿ ನೀಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಹೊಳಲ್ಕೆರೆ
ಹೊಳಲ್ಕೆರೆ: ಬಿಜೆಪಿ ಬಂಡಾಯ ಅಭ್ಯರ್ಥಿ ಕಣಕ್ಕೆ!

ಬಿಜೆಪಿ ಬಂಡಾಯ ಅಭ್ಯರ್ಥಿ ಹೊಳಲ್ಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಖಚಿತ ಎಂದು ಮಾಜಿ ಶಾಸಕ ಪಿ.ರಮೇಶ್ ತಿಳಿಸಿದರು.

18 Apr, 2018
ಎಲ್ಲ ವರ್ಗದವರನ್ನೂ ಒಳಗೊಳ್ಳುತ್ತಿದ್ದ ಬಸವಣ್ಣ

ಚಿತ್ರದುರ್ಗ
ಎಲ್ಲ ವರ್ಗದವರನ್ನೂ ಒಳಗೊಳ್ಳುತ್ತಿದ್ದ ಬಸವಣ್ಣ

18 Apr, 2018

ಮೊಳಕಾಲ್ಮುರು
ಚುರುಕುಗೊಂಡ ರಾಜಕೀಯ ಬೆಳವಣಿಗೆ

ಎಲ್ಲಾ ಪಕ್ಷಗಳ ಟಿಕೆಟ್‌ ಹಂಚಿಕೆ ಅಂತಿಮಗೊಂಡ ನಂತರ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು ವ್ಯಾಪಕವಾಗಿ ಗರಿಗೆದರಿವೆ.

18 Apr, 2018

ಹಿರಿಯೂರು
ಒಣಗಿದ ತೋಟಗಳು ನಿರ್ಲಕ್ಷ್ಯಕ್ಕೆ ನಿದರ್ಶನ

ಜನರ ತೆರಿಗೆ ಹಣದಲ್ಲಿ ಒಂದೆರಡು ಭಾಗ್ಯಗಳನ್ನು ಕಲ್ಪಿಸಿ, ಅದೇ ದೊಡ್ಡ ಸಾಧನೆ ಎಂಬಂತೆ ಬೀಗುತ್ತಿರುವ ಕಾಂಗ್ರೆಸ್ ಮುಖಂಡರು ಒಮ್ಮೆ ಹಳ್ಳಿಗಳನ್ನು ತಿರುಗಬೇಕು. ತೆಂಗು, ಅಡಿಕೆ...

18 Apr, 2018

ಹೊಸದುರ್ಗ
ಕಾಂಗ್ರೆಸ್‌ಗೆ ಗೊಲ್ಲರಹಟ್ಟಿಗೆ ಹೋಗುವ ನೈತಿಕತೆ ಇಲ್ಲ

ರಾಜ್ಯದ 224 ವಿಧಾನಸಭೆ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿಯೂ ಯಾದವರಿಗೆ ಟಿಕೆಟ್‌ ಕೊಡದಿರುವ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಗೊಲ್ಲರಹಟ್ಟಿಗೆ ಹೋಗಿ ವೋಟ್‌ ಕೇಳುವ ನೈತಿಕತೆ ಇಲ್ಲ...

18 Apr, 2018