ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಿಯ ಸೆಳೆವ ಆಭರಣ ಲೋಕ

Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೆಲವರಿಗೆ ಕೆಲಸ, ಉತ್ತಮ ಸಂಬಳದ ಚಿಂತೆ. ಕೆಲವರಿಗೆ ಒಂದು ಕ್ಷಣವನ್ನೂ ಹಾಳುಮಾಡದೆ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಆದರೆ ಅದು ಮನಸ್ಸು ಬಯಸಿದ, ತೃಪ್ತಿ ನೀಡುವ ಕೆಲಸವಾಗಬೇಕು ಎಂಬ ಆಸೆ. ಈ ದಾರಿಯಲ್ಲಿ ಸಾಗುತ್ತಿರುವವರು ಸ್ವಾತಿ ಮಂಜುನಾಥ.

ಬೆಂಗಳೂರಿನವರೇ ಆದ ಸ್ವಾತಿ ಬಾಲ್ಯದಿಂದಲೂ ಬಗೆಬಗೆ ಕಲೆಗಳ ಬಗೆಗೆ ಪ್ರೀತಿ ಹೊಂದಿದ್ದರು. ಪೇಂಟಿಂಗ್‌, ಸ್ಕೆಚಿಂಗ್‌, ಪೋರ್ಟ್ರೇಟ್‌ಗಳ ಬಗೆಗೆ ಅವರಿಗೆ ಒಲವು. ಅವರ ಈ ಪ್ರೀತಿ ಗಮನಿಸಿ ಅಪ್ಪ–ಅಮ್ಮ ಡ್ರಾಯಿಂಗ್‌ ತರಬೇತಿಯನ್ನೂ ನೀಡಿಸಿದ್ದರು.

ಶಾಲೆಯಲ್ಲಿ ಜೀವಶಾಸ್ತ್ರ ಅವರ ನೆಚ್ಚಿನ ವಿಷಯವಾಗುವುದಕ್ಕೂ ಚಿತ್ರಗಳನ್ನು ರಚಿಸಲು ಅವಕಾಶವಿದೆ ಎಂಬುದು ಕಾರಣವಾಯಿತು. ತನ್ನೊಳಗಿನ ಈ ಕಲಾ ಪ್ರೀತಿಯನ್ನು ನಿರಂತರವಾಗಿ ಪೋಷಿಸುತ್ತ ಬಂದ ಸ್ವಾತಿ ಬಿಎನ್‌ಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್‌ ಮುಗಿಸಿದ್ದಾರೆ. ದೂರಶಿಕ್ಷಣದಲ್ಲಿ ಎಂಬಿಎ ಕೂಡ ಮಾಡಿದ್ದಾರೆ. ಕೆಲ ಪ್ರತಿಷ್ಠಿತ ಕಂಪೆನಿಗಳಲ್ಲಿಯೂ ಕೆಲಸ ಮಾಡಿದ್ದಾರೆ.

ಮಷಿನ್‌, ಎಂಜಿನಿಯರಿಂಗ್‌ ಕೆಲಸಕ್ಕಿಂತ ತನಗೆ ಹೆಚ್ಚು ಸರಿ ಹೊಂದುವುದು ಮಾರ್ಕೆಟಿಂಗ್‌ ಎನ್ನುವ ಕಾರಣಕ್ಕೆ ಅಂಥದ್ದೇ ಕೆಲಸ ಗಿಟ್ಟಿಸಿಕೊಂಡರು. ಸದ್ಯ ಕೆಲಸ ಬಿಟ್ಟು ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ಗೆ ಸೇರಿಕೊಂಡಿದ್ದಾರೆ. ಇವೆಲ್ಲವುಗಳ ನಡುವೆ ನಾಲ್ಕು ವರ್ಷದಿಂದ ಅವರ ಮನಸ್ಸನ್ನು ಮುದಗೊಳಿಸುತ್ತಿರುವುದು ಆಭರಣ ವಿನ್ಯಾಸ.

ಟೆರ್‍ರಾಕೋಟ ಆಭರಣಗಳ ಸೌಂದರ್ಯ ಕಂಡು ಅದನ್ನು ಮಾಡಲಾರಂಭಿಸಿದರು. ಅಂತರ್ಜಾಲ ಅವರ ಗುರುವಾಯಿತು. ಪ್ರಯತ್ನದ ಹಾದಿಯಲ್ಲೇ ಟೆರ್‍ರಾಕೋಟ ಆಭರಣ ಮಾಡುವ ಕಲೆಯನ್ನು ಸಿದ್ಧಿಸಿಕೊಂಡು ತನಗಾಗಿ ಆಭರಣ ಮಾಡಿಕೊಂಡರು. ಅವುಗಳ ಚೆಲುವು ಕಂಡು ಸ್ನೇಹಿತೆಯರು ಬೇಡಿಕೆ ಇಟ್ಟರು. ಸದ್ಯ ದೇಶದ ಮೂಲೆಮೂಲೆಗಳಿಂದ ಇವರ ವಿನ್ಯಾಸಗಳಿಗೆ ಬೇಡಿಕೆ ವ್ಯಕ್ತವಾಗಿದೆ. ದಿರಿಸಿಗೆ ಮ್ಯಾಚಿಂಗ್‌ ಆಭರಣಗಳನ್ನೂ ಮಾಡಿಕೊಡುತ್ತಾರೆ.

‘ಟೆರ್‍ರಾಕೋಟ ಆಭರಣಗಳನ್ನು ಸಾಂಪ್ರದಾಯಿಕ ದಿರಿಸಿಗೆ ಮ್ಯಾಚ್‌ ಮಾಡುವುದು ಹೆಚ್ಚು. ಕೆಲವರು ಪಾಶ್ಚಾತ್ಯ ದಿರಿಸಿಗೆ ಕಿವಿಯೋಲೆ ಮಾಡಿಕೊಡುವಂತೆ ಕೇಳಿಕೊಂಡರು. ಆಗ ಹೊಸದೇನನ್ನಾದರೂ ಪ್ರಯತ್ನಿಸಬೇಕು ಎಂದು ಮ್ಯಾಕ್ರೆಮೆ ವಿನ್ಯಾಸಕ್ಕೆ ತೆರೆದುಕೊಂಡೆ. ಈಗ ಪಾಲಿಮಾರ್‌ ಕ್ಲೇಯಿಂದಲೂ ಆಭರಣಗಳನ್ನು ಮಾಡುತ್ತೇನೆ’ ಎನ್ನುತ್ತಾರೆ ಸ್ವಾತಿ.

‘ಮನಸ್ಸಿದ್ದರೆ ಕಲಿಯುವುದಕ್ಕೆ ಸಾಕಷ್ಟು ಅವಕಾಶಗಳಿವೆ’ ಎನ್ನುವ ಅವರಿಗೆ ವಿವಿಧ ಆಭರಣ ವಿನ್ಯಾಸಕ್ಕೆ ಅವಶ್ಯವಾದ ಮೆಟೀರಿಯಲ್‌ಗಳನ್ನು ಹೊಂದಿಸಿಕೊಳ್ಳುವುದು ಬಹಳ ಕಷ್ಟವಾಯಿತಂತೆ. ಕೊನೆಗೆ ಆನ್‌ಲೈನ್‌ ಮೂಲಕ ಪೂರೈಕೆದಾರರ ಮೊರೆ ಹೋದರು ಸ್ವಾತಿ.

ಅಂದಹಾಗೆ ಇವರ ಇನ್ನೊಂದು ಇಷ್ಟದ ಹವ್ಯಾಸ ಎಂದರೆ ಬಾಟಲ್‌ ಆರ್ಟ್‌. ಮನೆಯ ಅಲಂಕಾರಕ್ಕೆ ಅವಶ್ಯವಾದ ವಸ್ತುಗಳನ್ನೂ ಅವರು ಮಾಡುತ್ತಾರೆ. ಕಲೆಗೆ ಸಂಬಂಧಿಸಿದ ಸಂಪೂರ್ಣ ಕೆಲಸವನ್ನು ತಾನೇ ಮಾಡಬೇಕು ಎಂದು ಡ್ರಿಲ್ಲಿಂಗ್ ಮಷಿನ್ ತಂದಿಟ್ಟುಕೊಂಡಿದ್ದಾರೆ.

‘ಮನಸ್ಸಿಗೆ ಖುಷಿ ನೀಡುವ ಕೆಲಸ ಮಾಡುವಾಗ ದುಡ್ಡಿನ ಮುಖ ನೋಡಬಾರದು. ಅವಶ್ಯಕತೆ ಇದ್ದಷ್ಟು ಹಣ ಹೂಡಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಬೇಕು. ಒಂದೆಲ್ಲಾ ಒಂದು ದಿನ ನಮ್ಮ ಪ್ರಯತ್ನಕ್ಕೆ ಬೆಲೆ ಸಿಕ್ಕೇ ಸಿಗುತ್ತದೆ’ ಎನ್ನುವುದು ಸ್ವಾತಿಯ ದೃಢ ನಂಬಿಕೆ.

ಬಸವೇಶ್ವರನಗರದಲ್ಲಿರುವ ಸ್ವಾತಿ ತಮ್ಮ ಕಲೆಯನ್ನು ಜನರಿಗೆ ಪರಿಚಯಿಸುವ ಸಲುವಾಗಿ ‘ಕ್ಷಿತಿ’ ಎನ್ನುವ ಫೇಸ್‌ಬುಕ್‌ ಪುಟವನ್ನೂ ಆರಂಭಿಸಿದ್ದಾರೆ. ತಾವು ಮಾಡಿಕೊಡುವ ಆಭರಣಗಳಿಗೆ ಅವುಗಳ ಕೆಲಸಕ್ಕೆ ಅನುಗುಣವಾಗಿ ₹75ರಿಂದ ₹3000 ವರೆಗೆ ದರ ನಿಗದಿ ಮಾಡುತ್ತಾರೆ.

ಮುತ್ತು–ಹರಳುಗಳನ್ನು ಬಳಸಿ ಪಾಲಿಮಾರ್‌ ಕ್ಲೇಯಲ್ಲಿ ಪೆಂಡೆಂಟ್‌, ಕಿವಿಯೋಲೆ ತಯಾರಿಸುತ್ತಾರೆ. ಇದರ ಜೊತೆಗೆ ವೈರ್‌ವ್ರಾಪ್‌ ಆಭರಣ, ಕಪ್ಪೆಚಿಪ್ಪು ಆಭರಣಗಳನ್ನೂ ಮಾಡಿಕೊಡುತ್ತಾರೆ. ಪೋರ್ಟ್ರೇಟ್‌ ರಚಿಸುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರು ಗಾಯಕ ರಘು ದೀಕ್ಷಿತ್‌ ಚಿತ್ರ ರಚಿಸಿ ಅವರಿಂದ ಮೆಚ್ಚುಗೆಯನ್ನೂ ಗಳಿಸಿದ್ದರು.

ಹವ್ಯಾಸಗಳು ನಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುವ ಅತ್ಯುತ್ತಮ ಔಷಧ ಎಂದು ನಂಬಿರುವ ಸ್ವಾತಿ ‘ಆಸಕ್ತಿ ಇದ್ದರೆ ನಿಮ್ಮಿಷ್ಟದ ಕಲೆಯನ್ನು ಪ್ರಯತ್ನಿಸಿ. ಪ್ರಯತ್ನ ಪಡೆದ ನಾವು ಯಾವುದರಲ್ಲಿ ಬೆಸ್ಟ್‌, ಯಾವುದು ತೃಪ್ತಿ ಕೊಡಬಲ್ಲುದು ಎಂದು ತಿಳಿಯುವುದೇ ಇಲ್ಲ. ಇರುವ ಒಂದು ಬದುಕಿನಲ್ಲಿ ನಿಮ್ಮ ಸಂತೋಷಕ್ಕೆ, ನಿಮ್ಮ ಆಸಕ್ತಿಗಳಿಗೆ ಹೆಚ್ಚು ಪ್ರಾಧಾನ್ಯ ಕೊಡಿ’ ಎನ್ನುತ್ತಾರೆ.

ಕ್ರಿಯಾಶೀಲ ಕೆಲಸಗಳ ಬಗೆಗೆ ಸದಾ ತೆರೆದುಕೊಳ್ಳುವ ಸ್ವಾತಿ ಮೊದಲು ಗ್ರಾಹಕರಿಂದ ಯಾವ ಬಗೆಯ ವಿನ್ಯಾಸ ಬೇಕು ಎಂಬುದನ್ನು ತಿಳಿದುಕೊಳ್ಳುತ್ತಾರೆ. ಕ್ರಿಯಾಶೀಲತೆ ಬಳಸಿ ವಿನ್ಯಾಸ ಮಾಡುವುದಾದರೆ ಮೊದಲು ಮನಸ್ಸಿನಲ್ಲಿ ಮೂಡಿದ ಚಿತ್ರವನ್ನು ಹಾಳೆಯ ಮೇಲೆ ಮೂಡಿಸುತ್ತಾರೆ. ಅದನ್ನು ಗ್ರಾಹಕರಿಗೆ ತೋರಿಸಿ ಅವರು ಮೆಚ್ಚಿದರೆ ಮಾಡಿಕೊಡುತ್ತಾರೆ. ‘ಮ್ಯಾಚಿಂಗ್‌ ಮಾಡಿಕೊಡುವುದರಿಂದ ಗ್ರಾಹಕರ ದಿರಿಸನ್ನು ನೋಡಿ ವಿನ್ಯಾಸ ನಿರ್ಧರಿಸುತ್ತೇನೆ’ ಎನ್ನುತ್ತಾರೆ.

ಸ್ವಾತಿ ಅವರ ವಿಭಿನ್ನ ಹವ್ಯಾಸಗಳಿಗೆ ಅವರ ಮನೆಯಿಂದ ಸಂಪೂರ್ಣ ಪ್ರೋತ್ಸಾಹವಿದೆ. ರಾತ್ರಿ ಎರಡು ಮೂರು ಗಂಟೆಯವರೆಗೆ ಆಭರಣ ವಿನ್ಯಾಸ ಮಾಡುತ್ತಾ ಕೂರುವ ಇವರೊಂದಿಗೆ ಅಮ್ಮ ತಂಗಿಯೂ ಬೆಂಬಲಕ್ಕೆ ನಿಲ್ಲುತ್ತಾರೆ.


ಸ್ವಾತಿ ಸಂಪರ್ಕಕ್ಕೆ– 9035463340
ಫೇಸ್‌ಬುಕ್‌ ಕೊಂಡಿ– www.facebook.com/kshitiart

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT