ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗ್ವಾರ್‌ ಮೇಲೆ ಹರಿಪ್ರಿಯಾ ಸವಾರಿ!

Last Updated 8 ಡಿಸೆಂಬರ್ 2017, 13:18 IST
ಅಕ್ಷರ ಗಾತ್ರ

ಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆದಿರುವ ನಟಿ ಹರಿಪ್ರಿಯಾ ‘ಜಾಗ್ವಾರ್‌’ ಗುಂಗಿನಲ್ಲಿ ಮುಳುಗಿಹೋಗಿದ್ದಾರೆ. ಈಗಾಗಲೇ ‘ಜಾಗ್ವಾರ್‌’ ಸಿನಿಮಾ ಬಂದುಹೋಯ್ತಲ್ಲ... ಅದೇ ಹೆಸರಿನ ಇನ್ನೊಂದು ಸಿನಿಮಾ ಬರ್ತಿದೆಯೇ...? ಸ್ವಲ್ಪ ತಡೆಯಿರಿ, ಇದು ಸಿನಿಮಾ ಹೆಸರಲ್ಲ. ಕಾರ್‌ ಪ್ರಿಯರಿಗೆಲ್ಲ ‘ಜಾಗ್ವಾರ್‌’ ಕನಸಿನ ರಾಜಕುಮಾರ. ಡ್ರೈವಿಂಗ್‌ ಮೋಜನ್ನು ಇಷ್ಟಪಡುವವರು ಸದಾ ಹಂಬಲಿಸುವ ಕಾರ್‌ ‘ಜಾಗ್ವಾರ್‌’. ಹರಿಪ್ರಿಯ ಈಗ ‘ಜಾಗ್ವಾರ್‌’ನ ಮಾಲೀಕರಾಗಿದ್ದಾರೆ.

ಇತ್ತೀಚೆಗಷ್ಟೇ ಈ ಕಾರನ್ನು ಕೊಂಡುಕೊಂಡ ಖುಷಿಯಲ್ಲಿರುವ ಹರಿಪ್ರಿಯ, ಎಕ್ಸಲರೇಟರ್‌ ಒತ್ತಿದ್ದೇ ದಾರಿಗಳೆಲ್ಲ ಕ್ಷಣಾರ್ಧದಲ್ಲಿ ಮುಗಿದುಹೋಗುವ ರೋಮಾಂಚನದಲ್ಲಿದ್ದಾರೆ. ಈ ಸಂತಸವನ್ನುಹಂಚಿಕೊಳ್ಳುವ ಚಿತ್ರವನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.

ನಟಿಯಾಗಿ, ಭರತನಾಟ್ಯ ಕಲಾವಿದೆಯಾಗಿ ಹರಿಪ್ರಿಯಾ ಎಲ್ಲರಿಗೂ ಗೊತ್ತು. ಆದರೆ ಅವರಿಗಿರುವ ಕಾರ್‌ ಕ್ರೇಸ್‌ ಬಗ್ಗೆ ಅಭಿಮಾನಿಗಳಿಗೆ ಹೆಚ್ಚು ತಿಳಿದಿಲ್ಲ. ಕಳೆದ ಏಳೆಂಟು ವರ್ಷಗಳಿಂದ ಡ್ರೈವ್‌ ಮಾಡುತ್ತಿರುವ ಹರಿಪ್ರಿಯಾ ಅವರ ಬಳಿ ಈಗಾಗಲೇ ಎರಡು ಕಾರ್‌ಗಳು ಇವೆ.

ಸ್ಟಿಯರಿಂಗ್‌ ಹಿಡಿದು ಸರಿದುಹೋಗುವ ರಸ್ತೆಯ ನೋಡುವುದೆಂದರೆ ಅವರ ಪಾಲಿಗೆ ಚೈತನ್ಯಪೂರಣದ ಕ್ಷಣಗಳು. ಚಿತ್ರೀಕರಣದ ಸಂದರ್ಭವನ್ನು ಹೊರತುಪಡಿಸಿದರೆ ಖಾಸಗೀ ತಿರುಗಾಟಕ್ಕೆಲ್ಲ ಅವರು ಡ್ರೈವರ್‌ ಕೈಗೆ ಸ್ಟಿಯರಿಂಗ್‌ ಕೊಡುವುದೇ ಇಲ್ಲ. ಇನ್ನು ಜಾಗ್ವಾರ್‌ನ ಕೀಲಿ ಸಿಕ್ಕ ಮೇಲೆ ಈ ಬೆಡಗಿಯ ಖುಷಿ ಕೇಳಬೇಕೆ?

‘ಕಾರ್‌ ಚಾಲನೆ ಗೊತ್ತಿರುವ ಎಲ್ಲರಿಗೂ ಒಮ್ಮೆಯಾದರೂ ಜಾಗ್ವಾರ್‌ ಓಡಿಬೇಕುಎಂಬ ಕನಸು ಇದ್ದೇ ಇರುತ್ತದೆ. ಡ್ರೈವಿಂಗ್‌ನ ನಿಜವಾದ ಸಂತೋಷ ತಿಳಿಯಬೇಕು ಎಂದರೆ ಈ ಕಾರನ್ನು ಓಡಿಸಬೇಕು. ಇದರಲ್ಲಿ ಹಲವಾರು ಮೋಡ್‌ಗಳಿವೆ. ಸ್ಟೋರ್ಟ್ಸ್‌ ಮೋಡ್‌, ವಿಂಟರ್‌ ಮೋಡ್‌, ರೇನ್‌ ಮೋಡ್‌ ಹೀಗೆ ಕಾಲಕ್ಕೆ, ಸಂದರ್ಭಕ್ಕೆ ತಕ್ಕ ಮೋಡ್‌ಗಳಲ್ಲಿ 220 ಕಿ.ಮೀ. ವೇಗದಲ್ಲಿ ಸಲೀಸಾಗಿ ಓಡಿಸಬಹುದು’ ಎಂದು ಉತ್ಸಾಹದಿಂದಲೇ ಅವರು ವಿವರಣೆಗೆ ತೊಡಗುತ್ತಾರೆ.

ಪೂರ್ವಯೋಜನೆಯ ಪ್ರಕಾರ ದೀಪಾವಳಿಗೇ ಅವರು ಜಾಗ್ವಾರ್‌ ಒಡತಿಯಾಗಬೇಕಾಗಿತ್ತು. ಆದರೆ ತೆಲುಗು ಮತ್ತು ಕನ್ನಡಗಳಲ್ಲಿ ನಿರಂತರವಾಗಿ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಅವರಿಗೆ ಕಾರ್‌ನತ್ತ ದೃಷ್ಟಿಹಾಯಿಸಲೂ ಸಮಯ ಸಿಕ್ಕಿರಲಿಲ್ಲ. ಕಳೆದ ನಾಲ್ಕು ದಿನಗಳ ಹಿಂದೆ ಬೆಂಗಳೂರಿಗೆ ಬಂದ ಅವರು ಷೋರೂಂಗೆ ಸಹ ಹೋಗದೆ ಮನೆಗೇ ತರಿಸಿಕೊಂಡು ಟೆಸ್ಟ್‌ ಡ್ರೈವ್‌ ಮಾಡಿ ಖರಿದೀಸಿಯೇ ಬಿಟ್ಟಿದ್ದಾರೆ.

ಈಗಾಗಲೇ ಬೆಂಗಳೂರಿನಲ್ಲಿ ಜಾಗ್ವಾರ್‌ ಮಡಿಲಲ್ಲಿ ಕುಳಿತುಕೊಂಡು ಮನದಣಿಯೆ ಸುತ್ತಿರುವ ಹರಿಪ್ರಿಯಾ, ಹೊಸವರ್ಷ ಆಚರಣೆಯ ಸಂದರ್ಭದಲ್ಲಿ ಲಾಂಗ್‌ ಡ್ರೈವ್‌ ಹೋಗುವ ಕನಸು ಕಾಣುತ್ತಿದ್ದಾರೆ. ಆದರೆ ಸದ್ಯಕ್ಕೆ ‘ಲೈಫ್‌ ಜತೆ ಒಂದ್‌ ಸೆಲ್ಫೀ’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಚಿಕ್ಕಮಗಳೂರಿಗೆ ಹೋಗಲೇಬೇಕಾದ ಅನಿವಾರ್ಯುತೆಯೂ ಅವರಿಗಿದೆ.

‘ಲೈಫ್‌ ಜತೆ ಒಂದ್‌ ಸೆಲ್ಫಿ ಚಿತ್ರದ ಚಿತ್ರೀಕರಣ ಶೇ. 80ರಷ್ಟು ಮುಗಿದಿದೆ.  ಇನ್ನೊಂದು ಶೆಡ್ಯೂಲಿನಲ್ಲಿ ನನ್ನ ಭಾಗದ ಚಿತ್ರೀಕರಣ ಮುಗಿಯುತ್ತದೆ. ಹಾಗೆಯೇ ‘ಸೂಜಿದಾರ’ ಚಿತ್ರೀಕರಣವೂ ಮುಗಿದಿದ್ದು ಡಬ್ಬಿಂಗ್‌ ಮಾತ್ರ ಬಾಕಿ ಇದೆ. ತೆಲುಗಿನಲ್ಲಿ ನಾನು ನಟಿಸಿರುವ ’ಜಯಸಿಂಹ’ ಜ. 12ಕ್ಕೆ ತೆರೆಗೆ ಬರುತ್ತಿದೆ. ಇದರ ಜತೆಗೆ  ಇನ್ನೊಂದಿಷ್ಟು ಕಥೆಗಳು ಬರುತ್ತಿವೆ. ಚರ್ಚೆ ನಡೆಯುತ್ತಿದೆ’ ಎಂದು ಚಿತ್ರಬದುಕಿನ ಕುರಿತೂ ಮಾಹಿತಿ ನೀಡುತ್ತಾರೆ.

ಸದ್ಯಕ್ಕೆ ಒಲ್ಲದ ಮನಸ್ಸಿನಿಂದಲೇ ಅವರು ಜಾಗ್ವಾರ್‌ನನ್ನು ಬಿಟ್ಟು ಚಿತ್ರೀಕರಣಕ್ಕೆ ತೆರಳುತ್ತಿದ್ದಾರೆ. ಮರಳಿ ಮನೆಗೆ ಬರುವವರೆಗೆ ಮಿರಿಮಿರಿ ಮಿಂಚುತ್ತ ತನಗಾಗಿ ಅವನು ಕಾಯುತ್ತಿರುತ್ತಾನೆ ಎಂಬುದು ಅವರ ಉತ್ಸಾಹವನ್ನು ಇಮ್ಮಡಿಗೊಳಿಸಿದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT